ಬೆಂಗಳೂರು: ಪ್ರಿಯಾಂಕ್ ಖರ್ಗೆಯವರೇ, ಸಚಿನ್ ಪಾಂಚಾಳ್ ಸಾವಿಗೆ ನೀವು ಹೊಣೆ ಆಗಬಹುದಲ್ಲವೇ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಬ್ಬ ಸಾಯ್ತಾನೆ; ಸಾಯುವ ನಿರ್ಧಾರ ತೆಗೆದುಕೊಳ್ತಾನೆ ಎಂದಾದರೆ ಮನಸ್ಸನ್ನು ಎಷ್ಟು ಕಟುವಾಗಿ ಮಾಡಿ ಆ ನಿರ್ಧಾರ ತೆಗೆದುಕೊಳ್ತಾನೆ. ಈ ಸಾವಿಗೆ ಈಶ್ವರಪ್ಪನವರೇ ಹೊಣೆ. ಅವರನ್ನು ವಜಾ ಮಾಡಬೇಕೆಂದು ಪ್ರಿಯಾಂಕ್ ಖರ್ಗೆಯವರು ಹಿಂದೆ ಹೇಳಿದ್ದರು ಎಂದು ಗಮನ ಸೆಳೆದರು. ನಿಮ್ಮ ಮಾತುಗಳು ಈಗಲೂ ಯೂ ಟ್ಯೂಬಿನಲ್ಲಿ ಲಭ್ಯವಿದೆ. ತೆಗೆದು ನೋಡಿ ಎಂದು ಒತ್ತಾಯಿಸಿದರು.
ಮಾನ್ಯ ಪ್ರಿಯಾಂಕ್ ಖರ್ಗೆಯವರು ತಾನು ಉಳಿದವರಿಗೆ ಹೇಳುವುದು ತನಗೆ ಅನ್ವಯವಾಗುವುದಿಲ್ಲ ಎಂಬ ನೀತಿ ಹೊಂದಿದ್ದಾರೆ. ಪ್ರಿಯಾಂಕ್ ಖರ್ಗೆಯವರೇ, ನೀವು ಈಶ್ವರಪ್ಪನವರ ಮೇಲೆ ಆಪಾದನೆ ಬಂದಾಗ ಏನು ಮಾತನಾಡಿದ್ದೀರೆಂದು ನೆನಪಿಸಿಕೊಳ್ಳಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಆಡಳಿತದಲ್ಲಿ ಹಲವು ಬನಾನಾ ರಿಪಬ್ಲಿಕ್ಗಳನ್ನು ಮಾಡಿಕೊಂಡಿದ್ದಾರೆ. ಕಲ್ಬುರ್ಗಿ ರಿಪಬ್ಲಿಕ್, ಬೆಳಗಾವಿ ರಿಪಬ್ಲಿಕ್, ಕನಕಪುರ ರಿಪಬ್ಲಿಕ್- ಹೀಗೆ ಒಂದೊಂದು ಜಿಲ್ಲೆಯನ್ನು ಒಂದೊಂದು ರಿಪಬ್ಲಿಕ್ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು. 2025ರಲ್ಲಾದರೂ ಕೂಡ ಕಾನೂನು ಎಲ್ಲರಿಗೂ ಸಮಾನವಾಗಿರಲಿ; ಸಂವಿಧಾನ ಎಲ್ಲರಿಗೂ ಅನ್ವಯಿಸಲಿ. ಬನಾನಾ ರಿಪಬ್ಲಿಕ್ ಆಗದಂತಿರಲಿ ಎಂದು ಅವರು ಆಶಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರ್ಣಗೊಂಡಿದೆ. ಸಾಧನೆ ಏನೆಂದು ಅವಲೋಕನ ಮಾಡಿದರೆ, ಬೆಲೆ ಏರಿಕೆ, ಭ್ರಷ್ಟಾಚಾರ ಕಣ್ಮುಂದೆ ನಿಲ್ಲುತ್ತದೆ ಎಂದು ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್ ದರ, ಹಾಲು, ಆಲ್ಕೋಹಾಲ್ ಸೇರಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ಲಾನ್ ಮಂಜೂರು ಮಾಡಿಸಿಕೊಳ್ಳಲು ಪ್ರತಿ ಚದರ ಅಡಿಗೆ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಚ್ಚುವರಿಯಾಗಿ 100 ರೂ. ಕೊಡಬೇಕಾದ ದುಸ್ಥಿತಿ ಬೆಂಗಳೂರು ಮಹಾನಗರದ ಜನರದು ಎಂದು ಆಕ್ಷೇಪಿಸಿದರು.
ಮೂಡ ಹಗರಣ, ವಾಲ್ಮೀಕಿ ನಿಗಮದ ಹಗರಣ ಅಬಕಾರಿ ಇಲಾಖೆ ಹಗರಣ ನಡೆದಿದೆ. ಆರೋಗ್ಯ ಖಾತೆಗೇ ಅನಾರೋಗ್ಯ ಬಡಿದಿದೆ. ಬಾಣಂತಿಯರು, ಹಸುಗೂಸುಗಳ ಸರಣಿ ಸಾವು ನಿಂತಿಲ್ಲ; ಜೀವರಕ್ಷಕ ಔಷಧಗಳೇ ಕಳಪೆಯಾಗಿರುವುದು ಆಶ್ಚರ್ಯ ಮತ್ತು ಆಘಾತÀಕಾರಿ ವಿಷಯಗಳು ಎಂದು ತಿಳಿಸಿದರು. ಮುಖ್ಯಮಂತ್ರಿಯಾದಿಯಾಗಿ ಬಹುತೇಕ ಸಚಿವರು ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಪಿಎಸ್ಐ ಪರಶುರಾಮ್, ಲೆಕ್ಕಾಧಿಕಾರಿ ಚಂದ್ರಶೇಖರ್, ಬೆಳಗಾವಿಯಲ್ಲಿ ರುದ್ರೇಶ್ ಯಡವಣ್ಣವರ್ ಸೇರಿ ಹಲವು ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಸಚಿನ್ ಪಾಂಚಾಳ್, ಕೆಎಸ್ಡಿಎಲ್ ನೌಕರ ಅಮೃತ್ ಶಿರೂರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯವನ್ನು ಈ ಸರಕಾರ ನೀಡಿದೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.