ಬೆಂಗಳೂರು: ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಕೋಟಿಗಟ್ಟಲೆ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ಮಹಾಧಿವೇಶನ ಮಾಡಲು ಹೊರಟಿದೆ. ನಕಲಿ ಕಾಂಗ್ರೆಸ್ಸಿನ ಈ ನೀತಿಯ ವಿರುದ್ಧ ಹಾಗೂ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನವನ್ನು ವಿರೋಧಿಸಿ ನಾಳೆ (ಡಿ.27) ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ- ವಿಧಾನಪರಿಷತ್ತಿನ ಬಿಜೆಪಿ ಸದಸ್ಯರು ಇದರಲ್ಲಿ ಭಾಗವಹಿಸುವರು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ ಅವರನ್ನು ಹೆಚ್ಚು ಹೆಚ್ಚಾಗಿ ಸ್ಮರಿಸಿಕೊಳ್ಳುತ್ತಿದೆ. ಆದರೆ, ಹಿಂದೆ ಕಾಂಗ್ರೆಸ್ ಪಕ್ಷವು ಅವಕಾಶ ಸಿಕ್ಕಿದಾಗಲೆಲ್ಲ ಬಾಬಾಸಾಹೇಬ ಅಂಬೇಡ್ಕರರನ್ನು ನಿಂದಿಸುತ್ತ, ಅವಮಾನಿಸುತ್ತ ಬಂದಿತ್ತು ಎಂದು ಆಕ್ಷೇಪಿಸಿದರು.
ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಇವತ್ತಿನವರೆಗೂ ಈ ಕಾಂಗ್ರೆಸ್ ಪಕ್ಷದವರು ಬಾಬಾಸಾಹೇಬ ಅಂಬೇಡ್ಕರರ ಬಗ್ಗೆ ಗೌರವ ಹೊಂದಿರಲಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಹಿಂದೆ ನೆಹರೂ ಅವರು ಇದ್ದಾಗ ತಾತ್ಕಾಲಿಕ ಸರಕಾರ ರಚಿಸಿದ್ದು, ಬಾಬಾಸಾಹೇಬ ಅಂಬೇಡ್ಕರ ಅವರು ಮಂತ್ರಿಗಳಾಗಿ ಜನಮೆಚ್ಚುವ ಕೆಲಸ ಮಾಡುತ್ತಿದ್ದರು. ಅವರ ಜನಪ್ರಿಯತೆ- ಪ್ರಭಾವ ಹೆಚ್ಚಾಗುವುದನ್ನು ಗಮನಿಸಿ, ಕಾಂಗ್ರೆಸ್ ಪಕ್ಷದ ಬೇಳೆ ಬೇಯುವುದಿಲ್ಲ ಎಂದು ಹೇಳಿ ಅವರನ್ನು ನಿಂದಿಸುವ, ಹಿಂಸಿಸುವ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.
ಇವರು ಪ್ರಾಮಾಣಿಕರೇ ಇದ್ದರೆ ಬಾಬಾಸಾಹೇಬರು ಸಚಿವಸಂಪುಟದಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಯಾಕೆ ಬಂತು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದವರು ಕೊಟ್ಟ ನೋವಿನಿಂದ ಅವರು ಸಚಿವಸಂಪುಟದಿಂದ ಹೊರಕ್ಕೆ ಬರಬೇಕಾಯಿತು ಎಂದು ವಿಶ್ಲೇಷಿಸಿದರು.
ಅಂಬೇಡ್ಕರರ ಸೇವಕರಾಗಿ ಕೆಲಸ ಮಾಡುತ್ತಿದ್ದ ಕಾಜೋಳ್ಕರ್ರನ್ನು ಅಂಬೇಡ್ಕರರ ವಿರುದ್ಧ ಸ್ಪಧಿಸುವ ಲೋಕಸಭಾ ಚುನಾವಣೆಯ ಅಭ್ಯರ್ಥಿ ಮಾಡಿ ಮನೆಮುರುಕತನವನ್ನು ಅಂದಿನ ಕಾಂಗ್ರೆಸ್ ಪಕ್ಷ ಮಾಡಿತ್ತು. ಕಾಂಗ್ರೆಸ್ ಪಕ್ಷದವರು ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರರನ್ನು ಸೋಲಿಸಿದ್ದೂ ಅಲ್ಲದೆ, ಕಾಜೋಳ್ಕರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟ ಅಪಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ನುಡಿದರು.
ದೇಶ, ರಾಜ್ಯದಲ್ಲಿ ಇದೀಗ ಇರುವುದು ಅಸಲಿ ಕಾಂಗ್ರೆಸ್ ಪಕ್ಷವಲ್ಲ; ಇದು ನಕಲಿ ಕಾಂಗ್ರೆಸ್ ಪಕ್ಷ; ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಗಾಳಿಗೆ ತೂರಿದ ಪಕ್ಷ ಕಾಂಗ್ರೆಸ್ ಎಂದ ಅವರು, ಗಾಂಧೀಜಿ ಮತ್ತು ಅಂಬೇಡ್ಕರರ ಹೆಸರು ಹೇಳುವ ನೈತಿಕತೆ, ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಆಕ್ಷೇಪಿಸಿದರು.
ಇವರು ಇವತ್ತು ಬಾಬಾಸಾಹೇಬರ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದಾರೆ. ಬಾಬಾಸಾಹೇಬರ ಬಲಗೈ ಬಂಟ ಜೋಗೇಂದರ್ ನಾಥ್ ಮಂಡಲ್ ಪಶ್ಚಿಮ ಬಂಗಾಲದಲ್ಲಿ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ನಂತರ ಆ ಕ್ಷೇತ್ರವನ್ನು ಅಂಬೇಡ್ಕರರಿಗೆ ಬಿಟ್ಟುಕೊಟ್ಟು, ರಾಜ್ಯಸಭೆಗೆ ಬರುತ್ತಾರೆ. ಮುಂದೆ ಬಾಬಾಸಾಹೇಬರು ಅದೇ ಕ್ಷೇತ್ರದಿಂದ ಗೆದ್ದು, ಸಂಸತ್ ಪ್ರವೇಶಿಸಿದ್ದರು. ಬಾಬಾಸಾಹೇಬರು ಗೆದ್ದು ಬಂದ ಪಶ್ಚಿಮ ಬಂಗಾಲದ ಇದೇ ಕ್ಷೇತ್ರವನ್ನು ಭಾರತ ವಿಭಜನೆ ಆಗಿ ಪಶ್ಚಿಮ ಪಾಕಿಸ್ತಾನ ಆಗುವ ವೇಳೆ ಪಶ್ಚಿಮ ಪಾಕಿಸ್ತಾನಕ್ಕೆ ಕೊಟ್ಟಿದ್ದರು. ಇದು ಕಾಂಗ್ರೆಸ್ಸಿನ ದುಷ್ಟತನ ಎಂದು ವಿಶ್ಲೇಷಣೆ ಮಾಡಿದರು.
ಕಾಂಗ್ರೆಸ್ ಪಕ್ಷದವರಿಗೆ ಈ ದೇಶದ ಬಗ್ಗೆ, ಅಖಂಡತೆ, ಸಮಗ್ರತೆ ಬಗ್ಗೆ ಬದ್ಧತೆ ಇಲ್ಲ. ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರೇ ಮಾಡಿದ್ದಾರೆ ಎಂದು ಹೇಳಿದರು. ಬಾಬಾ ಸಾಹೇಬರಿಗೆ ಸಂಬಂಧಿಸಿದ 5 ಪ್ರಮುಖ ಸ್ಥಳಗಳನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರು ಪಂಚತೀರ್ಥಗಳನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ವಿವರಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅಂಬೇಡ್ಕರರನ್ನು ತುಚ್ಛವಾಗಿ ನೋಡಿದ್ದ ಕಾಂಗ್ರೆಸ್ ಪಕ್ಷವು 370ನೇ ವಿಧಿ ಮೂಲಕ ಅವತ್ತೇ ಓಲೈಕೆ ರಾಜಕಾರಣ ಮಾಡಿತ್ತು ಎಂದು ಟೀಕಿಸಿದರು. ಇದನ್ನು ಯೇ ದೇಶ್ ಮೇ ದೋ ಸಂವಿಧಾನ್, ದೋ ನಿಶಾನ್ ನಹಿ ಚಲೇಗಾ ಎಂದು ಆಗಲೇ ಶ್ಯಾಮಪ್ರಸಾದ ಮುಖರ್ಜಿ ಅವರು ಖಂಡಿಸಿದ್ದರು ಎಂದು ವಿವರಿಸಿದರು.
ಆಗ ಕಾಂಗ್ರೆಸ್ಸಿನ ತಪ್ಪು ನೀತಿ, ಓಲೈಕೆ ರಾಜಕೀಯದ ವಿರುದ್ಧ ಜನಸಂಘ ಪ್ರಾರಂಭವಾಗಿತ್ತು ಎಂದ ಅವರು, 370ನೇ ವಿಧಿ ತೆಗೆದಿದ್ದು ಯಾರು ಎಂದು ಪ್ರಶ್ನಿಸಿದರು. ಬಿಜೆಪಿ ಹುಟ್ಟಿದ್ದೇ ಅಂಬೇಡ್ಕರರ ಸಿದ್ಧಾಂತಗಳನ್ನು ಬೆಂಬಲಿಸುವ ಉದ್ದೇಶದಿಂದ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.