ನವದೆಹಲಿ: ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವಾಗಿ ಘೋಷಿಸಲು ಯುಎನ್ ಜನರಲ್ ಅಸೆಂಬ್ಲಿಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದೆ. ಪ್ರತಿ ವರ್ಷ ಡಿಸೆಂಬರ್ 21ನ್ನು ವಿಶ್ವ ಧ್ಯಾನ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಮೂಲಕ ಯೋಗದ ಬಳಿಕ ಭಾರತದ ಮತ್ತೊಂದು ಆಧ್ಯಾತ್ಮಿಕ ಕೊಡುಗೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ.
2014 ರ ಯುನೈಟೆಡ್ ನೇಷನ್ಸ್ ಅಸೆಂಬ್ಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಬಗ್ಗೆ ಪ್ರಸ್ತಾಪ ಮಾಡಿದರು. ಈ ಪ್ರಸ್ತಾವನೆಗೆ 177 ಸದಸ್ಯ ರಾಷ್ಟ್ರಗಳಿಂದ ಅನುಮೋದನೆ ಸಿಕ್ಕಿತು. ಆ ಬಳಿಕ 2015 ರ ಜೂನ್ 21 ರಂದು ಮೊದಲ ಬಾರಿಗೆ ಅಧಿಕೃತವಾಗಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರಧಾನಿ ಮೋದಿಯವರ ಉಪಸ್ಥಿತಿಯಲ್ಲಿ ಸರಿಸುಮಾರು 36000 ಉನ್ನತ ವ್ಯಕ್ತಿಗಳೊಂದಿಗೆ 35 ನಿಮಿಷಗಳ ಕಾಲ 21 ಯೋಗ ಆಸನಗಳನ್ನು ಪ್ರದರ್ಶಿಸಲಾಯಿತು. ಹೀಗೆ ಯಾವಾಗ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿತೋ ಅಂದಿನಿಂದ ಜಗತ್ತಿನಾದ್ಯಂತ ಜನರು ಯೋಗವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರು.
ಇದೀಗ ಜಗತ್ತಿಗೆ ಭಾರತ ಕೊಟ್ಟಿರುವ ಮತ್ತೊಂದು ಕೊಡುಗೆ ಧ್ಯಾನ ಕೂಡ ಜಾಗತಿಕ ಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಿದೆ.
ಈ ವಿಷಯದ ಕುರಿತು ಖುದ್ದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಡಿಸೆಂಬರ್ 6 ರಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಸಮಗ್ರ ಯೋಗಕ್ಷೇಮ ಮತ್ತು ಆಂತರಿಕ ರೂಪಾಂತರಕ್ಕಾಗಿ ಒಂದು ದಿನ, ಎಂಬ ಗುರಿ ಹೊಂದಿರುವ ಈ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಲು ಕೋರ್ ಗುಂಪಿನ ಇತರ ರಾಷ್ಟ್ರಗಳೊಂದಿಗೆ ಭಾರತವು ಮಾರ್ಗದರ್ಶನ ನೀಡಿರುವುದು ಸಂತೋಷವಾಗಿದೆ” ಒಟ್ಟಾರೆ ಮಾನವ ಯೋಗಕ್ಷೇಮದಲ್ಲಿ ಭಾರತದ ನಾಯಕತ್ವವು ನಮ್ಮ ನಾಗರಿಕತೆಯ ಆದೇಶವಾದ #ವಸುಧೈವ ಕುಟುಂಬಕಂ ನ ಚಿಂತನೆಯ ಮೂಲವಾಗಿದೆ ಎಂದು ಅವರು ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಕುರಿತು ರವಿಶಂಕರ್ ಗುರೂಜಿ ಕೂಡ ಹರುಷ ವ್ಯಕ್ತ ಪಡಿಸಿದ್ದು “ಡಿಸೆಂಬರ್ 21 ಅನ್ನು ವಿಶ್ವ ಧ್ಯಾನ ದಿನವೆಂದು ವಿಶ್ವಸಂಸ್ಥೆ ಘೋಷಿಸಿದ್ದು, ಸಂತೋಷ ತಂದಿದೆ. ಅಂತಿಮವಾಗಿ ಧ್ಯಾನವನ್ನು ಎಲ್ಲಾ ರಾಷ್ಟ್ರಗಳು ಗುರುತಿಸಿವೆ. ಇದು ಆತ್ಮಕ್ಕೆ ಆಹಾರವಾಗಿದೆ ಮತ್ತು ಆಧುನಿಕ ಜೀವನದ ಎಲ್ಲಾ ಸವಾಲುಗಳಿಗೆ ಉತ್ತರ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.