ಬ್ರಹ್ಮಾವರ: ಇಂದು ಎಲ್ಲರೂ ರೈತರ ಸಾವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಸಾವಿಗೆ ಕಾರಣವಾದ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಿಜವಾದ ರೈತ ಪರಿಹಾರಕ್ಕೆ ಕಾಯುವ ಭಿಕ್ಷುಕನಲ್ಲ ಆತ ಸ್ವಾಭಿಮಾನಿ ಅನ್ನದಾತ ಎಂದು ಭಾರತೀಯ ವಿಕಾಸ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ. ಉಡುಪ ಹೇಳಿದರು.
ಅವರು ಶುಕ್ರವಾರ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರದಲ್ಲಿ ವಿವಿಧ ಇಲಾಖೆ, ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಕ್ಷೇತ್ರೋ ತ್ಸವ-ಕೃಷಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಾಲಿಗೆ ನಿರ್ದಿಷ್ಟ ದರ ದೊರೆಯುವುದರಿಂದ ಇಂದು ಹಾಲಿನ ಉತ್ಪಾದನೆ ಹೆಚ್ಚಿದೆ. ಅದೇ ರೀತಿ ಕೃಷಿ ಉತ್ಪನ್ನಗಳಿಗೆ ನಿರ್ದಿಷ್ಟ ದರ, ಸಮರ್ಪಕ ಮಾರುಕಟ್ಟೆ ಇಂದಿನ ಅನಿವಾರ್ಯತೆ ಎಂದರು.
ಪ್ರಶಸ್ತ ದೇಶ: ಪ್ರಪಂಚದಲ್ಲೇ ಭಾರತ ಕೃಷಿಗೆ ಪ್ರಶಸ್ತದೇಶ. ಸಂಶೋಧನೆಗಳ ಫಲ ಕೃಷಿ ಭೂಮಿಯನ್ನು ತಲುಪಬೇಕು, ಕೃಷಿಯಲ್ಲಿ ಯಾಂತ್ರೀಕರಣ ಇನ್ನಷ್ಟು ಹೆಚ್ಚಬೇಕು ಎಂದು ಹೇಳಿದರು.
ಸಮಗ್ರ ಕೃಷಿ: ಭತ್ತವೊಂದೇ ಕೃಷಿಯಲ್ಲ. ವಾಣಿಜ್ಯ ಬೆಳೆ, ಹಣ್ಣು-ತರಕಾರಿ, ಹೈನುಗಾರಿಕೆ, ಕೋಳಿ ಸಾಕಣೆ – ಹೀಗೆ ಮಿಶ್ರ ಕೃಷಿ, ಸಮಗ್ರ ಕೃಷಿ ಪದ್ಧತಿ ಅಳವಡಿಸಿದಾಗ ಮಾತ್ರ ಯಶಸ್ಸು ಸಾಧ್ಯ.ಕೃಷಿ, ತೋಟಗಾರಿಕೆ ಸಂಶೋಧನ ಕೇಂದ್ರಗಳು ಬಿಳಿ ಆನೆಗಳಲ್ಲ, ಕೃಷಿಕರ ದೇಗುಲಗಳು. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮುನ್ನಡೆಯಬೇಕು ಎಂದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿ.ವಿ. ಉಪಕುಲಪತಿ ಡಾ| ಸಿ. ವಾಸುದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ ವಸ್ತುಪ್ರದರ್ಶನ ಉದ್ಘಾಟಿಸಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿದರು. ಚಾಂತಾರು ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ನಾಯ್ಕ ಬಾಳೆ ಗಿಡ, ವಾರಂಬಳ್ಳಿ ಗ್ರಾ.ಪಂ. ಅಧ್ಯಕ್ಷ ನಿತ್ಯಾನಂದ ಬಿ.ಆರ್. ಹುಲ್ಲಿನ ಬೀಜಗಳನ್ನು ವಿತರಿಸಿದರು.
ಅತಿಥಿಗಳಾಗಿ ಜಿ.ಪಂ. ಸದಸ್ಯೆ ಗೋಪಿ ಕೆ. ನಾಯ್ಕ, ದ.ಕ. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ. ಸಂಪತ್ ಸಾಮ್ರಾಜ್ಯ, ವಿವಿಧ ಇಲಾಖಾ ಮುಖ್ಯಸ್ಥರಾದ ಸುರೇಶ್ ಹೆಗಡೆ, ಸತೀಶ್, ರಾಕೇಶ್, ಡಾ| ಪಿ. ನಾರಾಯಣ ಸ್ವಾಮಿ, ಡಾ| ಹನುಮಂತಪ್ಪ, ಡಾ| ಟಿ.ಎಚ್. ಗೌಡ, ಸದಾಶಿವ ರಾವ್ ಮೊದಲಾದವರು ಉಪಸ್ಥಿತರಿದ್ದರು. ಸಹಸಂಶೋಧನ ನಿರ್ದೇಶಕ ಡಾ| ಎಂ. ಹನುಮಂತಪ್ಪ ಸ್ವಾಗತಿಸಿ, ಡಾ| ಬಿ. ಧನಂಜಯ ವಂದಿಸಿದರು. ಸಂಜೀವ ಕ್ಯಾತಪ್ಪನವರ್ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.