ಬೆಂಗಳೂರು: 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ಸಿನವರ ಆಡಳಿತದಲ್ಲಿ ದಲಿತರಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ “ಸಂವಿಧಾನ ಸನ್ಮಾನ ಅಭಿಯಾನ” ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಒಟ್ಟು 106ರಲ್ಲಿ ಕಾಂಗ್ರೆಸ್ ಅಧಿಕಾರಾವಧಿ ಕಾಲದಲ್ಲಿ 75 ಬಾರಿ ಸಂವಿಧಾನ ತಿದ್ದುಪಡಿ ಆಗಿತ್ತು. ಕಾಂಗ್ರೆಸ್ಸೇತರ ಸರಕಾರಗಳು 31 ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದವು ಎಂದು ವಿವರಿಸಿದರು.
ಕಳೆದ ಲೋಕಸಭಾ ಚುನಾವಣೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಬಹಳ ಪ್ರಮುಖವಾಗಿ ಬಿಜೆಪಿಯವರು ಸಂವಿಧಾನ ಬದಲಿಸುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು. ಬಿಜೆಪಿಯವರು ಸಂವಿಧಾನ ವಿರೋಧಿಗಳಾಗಿದ್ದಾರೆ ಎಂಬ ಅಪಪ್ರಚಾರ ಬಹಳಷ್ಟು ಕೆಲಸ ಮಾಡಿತ್ತು. ಎಸ್ಸಿ, ಎಸ್ಟಿ ಮಾತ್ರವಲ್ಲ; ಅನೇಕ ಒಬಿಸಿಯವರು ಕೂಡ ಅದನ್ನು ನಂಬಿದ್ದರು ಎಂದರು.
ನನಗೆ ಕೂಡ ನಮ್ಮ ಯುವಕರು, ವಿದ್ಯಾವಂತರು ‘ನಿಮ್ಮ ಪಕ್ಷ ಸಂವಿಧಾನ ಬದಲಿಸುತ್ತದೆಯಂತಲ್ರಿ’ ಎಂದು ಕೇಳುತ್ತಿದ್ದರು. ನಾವೆಷ್ಟೇ ಪ್ರಯತ್ನ ಮಾಡಿದರೂ ಅದು ಅವರ ತಲೆ ಒಳಗೆ ಹೋಗಲಿಲ್ಲ. ಕಾಂಗ್ರೆಸ್ಸಿನ ಅಪಪ್ರಚಾರವನ್ನು ನಾವ್ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ; ಶೇ 40 ಅಪಪ್ರಚಾರದಂತೆ ಇದು ಕೂಡ ಆಯಿತು ಎಂದು ವಿಶ್ಲೇಷಿಸಿದರು. ಪಕ್ಷದ ಪೇರೆಂಟ್ ಬಾಡಿಯು ಇಂಥ ವಿಷಯ ಬಂದಾಗ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿನಂತಿಸಿದರು.
ಇವತ್ತು ಕಾಂಗ್ರೆಸ್ಸಿನ ಅನೇಕ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆ ಅಪಪ್ರಚಾರಕ್ಕೆ ನಮ್ಮ ಕಡೆಯಿಂದ ಸಮರ್ಪಕವಾಗಿ ಉತ್ತರ ಕೊಡದೆ ಇದ್ದುದರಿಂದ ಅವರು ಹೇಳಿದ ಅನೇಕ ವಿಷಯಗಳು ದಲಿತರು ನಂಬುವಂಥ ಸ್ಥಿತಿ ಇವತ್ತಿಗೂ ಇದೆ ಎಂದು ವಿಶ್ಲೇಷಿಸಿದರು.
ಯಾರೋ ಒಬ್ಬರು ಯಾವುದೋ ಕಾಲಘಟ್ಟದಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಬಿಜೆಪಿಯವರು ಸಂವಿಧಾನ ಬದಲು ಮಾಡುತ್ತೀವಿ ಎಂದು ಹೇಳಿದ್ದಾಗಿ ಹೇಳಿದ್ದರ ಪರಿಣಾಮ ನಾವು 2018ರ ಚುನಾವಣೆಯಲ್ಲಿ ಸೋಲಬೇಕಾಯಿತು. ನಾವಿದನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದರು.
ಇದು ಕೇವಲ ಎಸ್ಸಿ, ಎಸ್ಟಿ ಜನಾಂಗದವರ ಜವಾಬ್ದಾರಿ ಅಷ್ಟೇ ಅಲ್ಲ; ನಮ್ಮ ಪಕ್ಷ ಇದನ್ನು ಸಮರ್ಥವಾಗಿ ಎದುರಿಸಬೇಕಿದೆ. ಎಸ್ಸಿ, ಎಸ್ಟಿ ವಿಷಯ ಬಂದಾಗ ಕೇವಲ ಎಸ್ಸಿ, ಎಸ್ಟಿಯವರಷ್ಟೇ ಉತ್ತರ ಕೊಡಬೇಕೆಂದು ಅಲ್ಲ; ಅದರಲ್ಲಿ ಎಲ್ಲೋ ಒಂದು ಕಡೆ ನಾವು ಹಿಂದೆ ಬಿದ್ದಿದ್ದೇವೆ ಎಂದು ಹೇಳಿದರೆ ತಪ್ಪು ತಿಳಿಯದಿರಿ ಎಂದು ಮನವಿ ಮಾಡಿದರು.
ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿದ ಡಾ. ಬಾಬಾಸಾಹೇಬ ಅಂಬೇಡ್ಕರರ ಚಿಂತನೆಗಳು 75 ವರ್ಷಗಳ ಬಳಿಕವೂ ಸಾಕಾರಗೊಂಡಿಲ್ಲ ಎಂದು ತಿಳಿಸಿದರು. ಮೀಸಲಾತಿಯ ಉದ್ದೇಶವೂ ಸಂಪೂರ್ಣವಾಗಿ ಈಡೇರಲಿಲ್ಲ ಎಂದು ನುಡಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಸಿ.ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷರಾದ ಎನ್. ಮಹೇಶ್, ಶ್ರೀಮತಿ ಮಾಳವಿಕ ಅವಿನಾಶ್, ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್, ಪಕ್ಷದ ಪ್ರಮುಖರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.