ಬೆಂಗಳೂರು: ಉಪ ಚುನಾವಣೆಯ ಫಲಿತಾಂಶ ಬರುವುದಕ್ಕಿಂತ ಮುಂಚೆಯೇ ಸೋಲಿನ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ತನ್ನ ಸ್ಥಾನಕ್ಕೆ ಚ್ಯುತಿ ಬರುವ ಭಾವನೆಯನ್ನು ಕಣ್ಮುಂದೆ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ನಮ್ಮ ಶಾಸಕರನ್ನು ಬಿಜೆಪಿಯವರು ಖರೀದಿಸುತ್ತಿದ್ದಾರೆ’ ಎಂಬ ಹುಸಿ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸುನೀಲ್ಕುಮಾರ್ ಅವರು ಟೀಕಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಬೆಳವಣಿಗೆಗಳು, ನಾಯಕರ ಒಳ ಸಭೆಗಳು ಮುಖ್ಯಮಂತ್ರಿಗಳ ಕುರ್ಚಿಗೆ ಆಪತ್ತು ತರುತ್ತದೆ ಎಂದು ಅನಿಸುವುದಾಗಿ ಹೇಳಿದರು. ಬೆಳಗಾವಿಯ ಅಧಿವೇಶನ ಹೊಸ ಮುಖ್ಯಮಂತ್ರಿಯೊಂದಿಗೆ ನಡೆಯಲಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಬದಲಿಸಲಿದೆ ಎಂಬಂಥ ಬೆಳವಣಿಗೆ ನಡೆಯುತ್ತಿರುವಂತಿದೆ ಎಂದರು.
ಮುಖ್ಯಮಂತ್ರಿಯವರು ಇಲ್ಲಿನತನಕ ತನ್ನ ಅಧಿಕಾರಾವಧಿಯಲ್ಲಿ ನೂರು ಸುಳ್ಳು ಹೇಳಿದ್ದು, ಇದು ನೂರ ಒಂದನೇ ಸುಳ್ಳು ಎಂದು ಅಂದುಕೊಳ್ಳುವುದಾಗಿ ತಿಳಿಸಿದರು. ಆಡಳಿತ ಪಕ್ಷವನ್ನು ಬೆದರಿಸಲು ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು ಆಡಳಿತ ಪಕ್ಷದ ಶಾಸಕರು, ಹೈಕಮಾಂಡನ್ನು ಹೆದರಿಸುವ ಪ್ರಯತ್ನ ಮುಖ್ಯಮಂತ್ರಿಯವರ ಈ ಹೇಳಿಕೆ ಹಿಂದಿದೆ ಎಂದು ಅವರು ವಿಶ್ಲೇಷಿಸಿದರು.
ಮೂಡ ಹಗರಣ, ವಾಲ್ಮೀಕಿ ಹಗರಣದಲ್ಲಿ ಶಾಸಕರ ನಡುವಿನ ದೊಡ್ಡ ಪ್ರಮಾಣದ ಅಸಮಾಧಾನಗಳು ಸ್ಫೋಟಗೊಳ್ಳುತ್ತದೆ; ತನ್ನ ಕುರ್ಚಿಗೆ ಅಪಾಯ ಇದೆ ಎಂಬುದನ್ನು ಅರ್ಥ ಮಾಡಿಕೊಂಡು, ಪರೋಕ್ಷವಾಗಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಈ ರೀತಿಯ 50 ಕೋಟಿಯ ಆಫರ್ಗಳನ್ನು ತಮ್ಮ ಶಾಸಕರ ಮೇಲೆ ಹೇಳುತ್ತಿದ್ದಾರೆ ಎಂದು ಅನಿಸುತ್ತಿದೆ. ಸರಕಾರ ಬಂದು 2 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ, ಯಾವುದೇ ಅನುದಾನವಿಲ್ಲದೆ ಅಭಿವೃದ್ಧಿಯ ಚಟುವಟಿಕೆಗಳು ಸಂಪೂರ್ಣ ನಾಶವಾಗಿರುವ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಬೇರೆ ಬೇರೆ ಗುಂಪುಗಳಲ್ಲಿ ಸಭೆ ನಡೆಸುತ್ತಿದ್ದಾರೆ ಎಂಬುದನ್ನು ಸಿಎಂ ಕಚೇರಿ ಗಮನಿಸುತ್ತಿದೆ ಎಂದು ವಿವರಿಸಿದರು.
ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು, ಅನುದಾನ ಕೊಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ತಮ್ಮ ಶಾಸಕರನ್ನೇ ಖರೀದಿ ಮಾಡಿಕೊಳ್ಳುವ ಪರೋಕ್ಷ ಸಂದೇಶವನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ನಾನು ಏನೂ ಕಡಿಮೆ ಇಲ್ಲ ಎಂದು ಉಪ ಮುಖ್ಯಮಂತ್ರಿಗಳೂ ಇದೇ ಸಂದೇಶವನ್ನು ತಮ್ಮ ಶಾಸಕರಿಗೆ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯನವರ ಹೈಕಮಾಂಡ್ ಗಡುವು ಮುಕ್ತಾಯವಾಗುತ್ತಿದೆ. ಇದೆಲ್ಲವನ್ನೂ ಅರ್ಥ ಮಾಡಿಕೊಂಡ ಮುಖ್ಯಮಂತ್ರಿಗಳು ತಮ್ಮನ್ನು ಮುಟ್ಟಲು ಬರಬೇಡಿ ಎಂಬ ಸಂದೇಶವನ್ನು ಹೈಕಮಾಂಡಿಗೂ ಕೊಡುವ ಪ್ರಯತ್ನ ಮಾಡಿದ್ದಾರೆ. ಟೀಕೆ ಬಿಜೆಪಿಯವರ ಮೇಲೆ; ಸಂದೇಶ ಶಿವಕುಮಾರ್, ಪರಮೇಶ್ವರ್, ತನ್ನ ಆಪ್ತ ಜಾರಕಿಹೊಳಿ ಮೇಲೆ, ಹೈಕಮಾಂಡಿನ ಮೇಲೆ ಹೇಳುವ ಪ್ರಯತ್ನವನ್ನು ಅವರು ಮಾಡಿರುವಂತಿದೆ ಎಂದು ವಿಶ್ಲೇಷಿಸಿದರು.
ಅವರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು 50 ಕೋಟಿಯಾದರೂ ಕೊಡಲಿ; ನೂರು ಕೋಟಿಯಾದರೂ ಕೊಡಲಿ; ಆದರೆ, ಈ ರೀತಿ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಹೊಸ ಸಂಪ್ರದಾಯಕ್ಕೆ ಮುಖ್ಯಮಂತ್ರಿಗಳು ಹೋಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ನುಡಿದರು.
ಗುತ್ತಿಗೆಯಲ್ಲಿ ಮುಸಲ್ಮಾನರಿಗೆ ಮೀಸಲಾತಿಯ ಮೂಲಕ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದೇ ಇರುವ ಪದ್ಧತಿ, ಕಾನೂನನ್ನು ಮುಖ್ಯಮಂತ್ರಿಗಳು ತರಲು ಹೊರಟಿದ್ದಾರೆ. ಇದರಿಂದ ಇಡೀ ರಾಜ್ಯದಲ್ಲಿ ಒಂದು ಸರ್ವಜನರ ಸರಕಾರ ಇದೆ ಎಂದು ಅನಿಸುವುದರ ಬದಲಾಗಿ, ಕರ್ನಾಟಕದಲ್ಲಿ ಇರುವುದು ಮುಸಲ್ಮಾನರ ಸರಕಾರ; ಮುಸಲ್ಮಾನರಿಗೆ ಮಾತ್ರ ಈ ಸರಕಾರ ಇದೆ ಎಂಬಷ್ಟರ ಮಟ್ಟಿಗೆ ಯೋಜನೆಗಳು, ಯೋಚನೆಗಳು, ಹೇಳಿಕೆಗಳು ಮುಖ್ಯಮಂತ್ರಿಗಳ ಬಾಯಿಯಿಂದ ಬರುತ್ತಿವೆ ಎಂದು ಟೀಕಿಸಿದರು.
ನಿಮ್ಮ ಆಪ್ತ ನಝೀರ್ ಅವರು ಬರೆದ ಪತ್ರ ಸುಳ್ಳೇ? ಅದನ್ನು ಬಹಿರಂಗಪಡಿಸಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಅದರ ಮೇಲೆ ಟಿಪ್ಪಣಿ ಬರೆದು ಕೆಟಿಟಿಪಿ ಕಾಯಿದೆಗೆ ತಿದ್ದುಪಡಿ ಮಾಡಲು ಟಿಪ್ಪಣಿ ಬರೆದುದು ಸುಳ್ಳೇ? ನಿಮ್ಮ ಟಿಪ್ಪಣಿಯ ಮೇಲೆ ಕಾನೂನು ಇಲಾಖೆ ಆಲೋಚಿಸುತ್ತಿರುವುದು ಸುಳ್ಳೇ ಎಂದು ಪ್ರಶ್ನಿಸಿದರು.
ಮೊದಲು ಇದೇ ಮಾದರಿಯ ಯೋಚನೆಗಳನ್ನು ಮಾಡಿ ಸದ್ದಿಲ್ಲದೇ ಆದೇಶ ಮಾಡಿದ್ದೀರಿ. ಅಂಥದ್ದೇ ಸದ್ದಿಲ್ಲದೇ ಆದೇಶ ಮಾಡುವ ಹುನ್ನಾರ ಇವತ್ತು ನಡೆಯುತ್ತಿದೆ. ಇದರಿಂದ ರಾಜ್ಯದಲ್ಲಿ ಅರಾಜಕತೆಗೆ ಮುಖ್ಯಮಂತ್ರಿಗಳೇ ನಾಂದಿ ಹಾಡುವಂತಿದೆ ಎಂದು ಆರೋಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.