ಬೆಂಗಳೂರು: ದರೋಡೆಕೋರ ಬೈರತಿ ಸುರೇಶ್ ಅವರು ಮೈಸೂರು ಮುಡಾದಿಂದ ಸಾವಿರಾರು ಕಡತಗಳನ್ನು ಎತ್ತಿಕೊಂಡು ಬಂದು ಅದನ್ನು ಸುಟ್ಟು ಹಾಕಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಡತಗಳನ್ನು ಸುಟ್ಟು ಹಾಕಿದ ಕುರಿತು ಮಾತನಾಡಿದ್ದಕ್ಕೆ ಅಪವಾದ ಹಾಕುವ ಹಾಗೂ ಅನವಶ್ಯಕವಾಗಿ ಆರೋಪ ಹೊರಿಸುವ ಕೆಲಸವನ್ನು ಬೈರತಿ ಸುರೇಶ್ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ದರೋಡೆಕೋರರನ್ನು ಹಿಡಿಯಲು ಹೋದಾಗ ಪೊಲೀಸರಿಗೆ ಗುಂಡು ಹೊಡೆಯುವ ದರೋಡೆಕೋರರು ಇದ್ದಾರೆ; ಅದೇ ಕೆಲಸವನ್ನು ಬೈರತಿ ಸುರೇಶ್ ಮಾಡಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರೇ ಇಂಥವರನ್ನು ಯಾಕೆ ಹತ್ತಿರ ಇಟ್ಟುಕೊಂಡಿದ್ದೀರಿ ಎಂದು ಕೇಳಿದ ಅವರು, ರಾಜಕಾರಣಿಗಳು ಮಹಾಭಾರತವನ್ನು ಓದಬೇಕು. ಕೌರವರ ಜೊತೆ ಶಕುನಿ ಯಾಕೆ ಸೇರಿಕೊಂಡಿದ್ದ? ಕೌರವರಿಂದ ಧುರ್ಯೋದನನ್ನು ಉದ್ಧಾರ ಮಾಡಲು ಅವನು ಸೇರಿಕೊಂಡಿರಲಿಲ್ಲ. ಅವರನ್ನು ಮುಗಿಸಲು ಸೇರಿಕೊಂಡಿದ್ದ. ಅಂಥ ಶಕುನಿಗಳು ಇವತ್ತಿಗೂ ರಾಜಕಾರಣದಲ್ಲಿ ದೊಡ್ಡ ಪದವಿಗೆ ಬಂದಾಗ ಮುಖ್ಯಮಂತ್ರಿಯ ಹಿಂದೆ ಮುಂದೆ ಸುತ್ತುತ್ತಿರುತ್ತಾರೆ ಎಂದು ವಿಶ್ಲೇಷಿಸಿದರು.
ಇದು ನಿಮ್ಮ ಉದ್ಧಾರಕ್ಕಲ್ಲ; ನಿಮ್ಮನ್ನು ಮುಗಿಸಲು ಎಂದು ಕಿವಿಮಾತು ಹೇಳಿದರು. ಇದನ್ನು ಇವತ್ತು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು. ಬೈರತಿ ಸುರೇಶ್ ಅವರು ಮೈಸೂರು ಮುಡಾದಿಂದ ಸಾವಿರಾರು ಕಡತಗಳನ್ನು ತಂದು ಅದನ್ನು ಸುಟ್ಟು ಹಾಕಿದ್ದು ನಿಜ. ಸತ್ಯ ಹೇಳಿದಾಗ ಸಿಟ್ಟು ಬರುತ್ತದೆ. ತಪ್ಪಿಸಿಕೊಳ್ಳುವುದು ಹೇಗೆ ಎಂಬ ಭಯ ಕಾಡುತ್ತದೆ. ಈ ಭಯದಿಂದ ಬೈರತಿ ಸುರೇಶ್ ಅವರು ಆರೋಪ ಮಾಡಿದ್ದಾರೆ ಎಂದರು.
ರಾಜಕಾರಣಿಗಳು ಕ್ಷುಲ್ಲಕ ರಾಜಕಾರಣ ಮಾಡಬಾರದು. ರಾಕೇಶ್ ಸಿದ್ದರಾಮಯ್ಯರ ಸಾವಿಗೆ ಬೈರತಿ ಸುರೇಶ್ ಕಾರಣ ಎಂದು ಜನರು ಹೇಳುತ್ತಿದ್ದಾರೆ. ಒಪ್ಪಿಕೊಳ್ಳುತ್ತೀರಾ ನೀವು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯನವರ ಆಸ್ತಿ ಹೊಡೆಯಲು, ಅವರ ದುಡ್ಡು ಹೊಡೆಯಲು, ಸಿದ್ದರಾಮಯ್ಯರ ವಾರೀಸುದಾರಿಕೆಗೆ ಬೈರತಿ ಸುರೇಶ್ ಬಂದಿದ್ದಾರೆ. ರಾಕೇಶ್ ಸಿದ್ದರಾಮಯ್ಯರನ್ನು ಮುಗಿಸಿದ್ದಾಗಿ ಜನರು ಮಾತನಾಡುತ್ತಾರೆ. ಏನು ಉತ್ತರ ಕೊಡುತ್ತೀರಿ ಎಂದು ಕು.ಶೋಭಾ ಕರಂದ್ಲಾಜೆ ಅವರು ಪ್ರಶ್ನೆ ಮಾಡಿದರು.
ರಾಜಕಾರಣವನ್ನು ರಾಜಕಾರಣವಾಗಿ ಎದುರಿಸಿ. ಹೆಣ್ಮಕ್ಕಳ ಮೇಲೆ ಅಪವಾದ ಹಾಕಿದಾಕ್ಷಣ ಓಡಿ ಹೋಗುತ್ತಾರೆ ಅಂದುಕೊಳ್ಳದಿರಿ. ನಾನು ಶೋಭಾ ಕರಂದ್ಲಾಜೆ; ತಪ್ಪು ಮಾಡಿಲ್ಲ ಎಂದು ಸವಾಲು ಹಾಕಿದರು.
ಚಾಮುಂಡೇಶ್ವರಿಯ ಮುಂದೆ ನಿಂತು ನಾನು ಕೆಲಸ ಮಾಡುತ್ತೇನೆ. ಒಳ್ಳೆಯದು ಮಾಡಿದರೆ ಒಳ್ಳೆಯದು ಮಾಡು; ಕೆಟ್ಟದು ಮಾಡಿದರೆ ಕೆಟ್ಟದು ಮಾಡೆಂದು ನನ್ನ ಕೆಲಸವನ್ನು ಅವಳಿಗೆ ಸಮರ್ಪಿಸುವೆ ಎಂದು ತಿಳಿಸಿದರು. ಓಡಿ ಹೋಗುವ, ಹೊಂದಾಣಿಕೆಯ ರಾಜಕಾರಣಿ ನಾನಲ್ಲ ಎಂದು ತಿಳಿಸಿದರು.
ನಾನು ನಿಮ್ಮದೇ ಹೆಬ್ಬಾಳದಲ್ಲಿದ್ದೇನೆ. ನಿಮ್ಮನ್ನು ಹೆಬ್ಬಾಳದಿಂದ ಓಡಿಸುವ ಜವಾಬ್ದಾರಿ ನಮ್ಮದಿದೆ. ದರೋಡೆ ನಡೆಯುತ್ತಿದೆ. ಒಂದೇ ಒಂದು ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ನೀವು ನಗರಾಭಿವೃದ್ಧಿ ಸಚಿವರು; ಬೆಂಗಳೂರು ಮುಳುಗುತ್ತಿದೆ. ಏನು ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಫೈಲ್ ಸುಟ್ಟುಹಾಕಿದ್ದನ್ನು ಹೇಳಲು ಬಂದರೆ ಆರೋಪ ಮಾಡುತ್ತೀರಾ? ಏನಂದುಕೊಂಡಿದ್ದೀರಾ? ನೀವು ವಿಧಾನಸೌಧದಲ್ಲಿ ನಗುತ್ತೀರಾ? ಎಂದು ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಲ್ಲದೆ, ಶೋಭಾ ಕರಂದ್ಲಾಜೆ ಓಡಿ ಹೋಗುವವಳಲ್ಲ ಎಂದು ಸವಾಲು ಹಾಕಿದರು. ನಾನು ಸತ್ಯಪೂರ್ವಕ, ದೇವರಪೂರ್ವಕ ರಾಜಕಾರಣ ಮಾಡುವವಳು ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯನವರು, ಸಿದ್ದರಾಮಯ್ಯನವರ ಕುಟುಂಬಕ್ಕೆ ಕಳಂಕ ತಂದವರು ನೀವೇ; ನಿಮ್ಮ ಹಿಂದೆ ಮುಂದೆ ಎಲ್ಲವೂ ಸುತ್ತುತ್ತಿದೆ. ಯಾಕೆ ಮೈಸೂರಿಂದ ಫೈಲ್ ಹೊತ್ತುಕೊಂಡು ಬಂದಿರಿ? ಫೈಲ್ ಗಾಯಬ್ ಆದ ಕುರಿತು ತನಿಖೆ ನಡೆಯಲಿ. ಬೈರತಿ ಸುರೇಶ್ ಅವರನ್ನು ಬಂಧಿಸಿದಾಗ, ಅವರನ್ನು ತನಿಖೆ ಮಾಡಿದಾಗ ಸತ್ಯ ಹೊರಬರುತ್ತದೆ ಎಂದು ಮತ್ತೆ ಮತ್ತೆ ಹೇಳುವುದಾಗಿ ತಿಳಿಸಿದರು. ಬೈರತಿಯವರದು ಕೀಳುಮಟ್ಟದ (ಚೀಪ್) ರಾಜಕಾರಣ ಎಂದು ಖಂಡಿಸಿದರು.
ನಿಮ್ಮ ಥರ ದರೋಡೆ ಮಾಡಿಲ್ಲ; ಕೊಲೆ ಮಾಡಿಲ್ಲ. ನಾಲಿಗೆ ಬಿಗಿಹಿಡಿದು ಮಾತನಾಡಿ. ರಾಜಕಾರಣವನ್ನು ರಾಜಕಾರಣವಾಗಿ ಎದುರಿಸೋಣ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಅಭಿವೃದ್ಧಿ ಮಾಡುವುದು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡದಿರಿ ಎಂದು ಎಚ್ಚರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.