ಬೆಂಗಳೂರು: ಈಗ ರಾಜ್ಯದಲ್ಲಿ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು ಈ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಅವುಗಳ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕರ್ನಾಟಕ ಒಬಿಸಿ ಮೋರ್ಚಾ ವತಿಯಿಂದ ವಿಶೇಷ ಸಭೆಯನ್ನು ಇಂದು ಆಯೋಜಿಸಿದ್ದು ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ವಾಲ್ಮೀಕಿ ನಿಗಮದ 187 ಕೋಟಿ ರುಪಾಯಿಗಳ ಭ್ರಷ್ಟಾಚಾರ , ಮೂಡಾದ 5000 ಕೋಟಿ ರೂ.ಗಳ ಹಗರಣ, ಯಾವ ರೀತಿ ದಲಿತರ ಕಲ್ಯಾಣಕ್ಕಾಗಿ ಇಟ್ಟಂತಹ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ನುಂಗಿ ನೀರು ಕುಡಿದಿದೆ, 14 ಸೈಟುಗಳನ್ನು ವಾಪಾಸ್ ನೀಡಿ ತಪ್ಪಿತಸ್ಥರೆಂದು ರುಜುವಾತಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಆರೋಪಿಸಿದರು.
ಒಂದೂವರೆ ವರ್ಷದಲ್ಲಿ ಸರ್ಕಾರ ಹಗರಣಗಳಲ್ಲಿ ಮುಳುಗಿ ಹೋಗಿದೆ, ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ರಾಜ್ಯದ ಯಾವ ಮೂಲೆಯಲ್ಲಿಯೂ ನಡೆಯುತ್ತಿಲ್ಲವೆಂದು ಹೇಳಿದರು. ರಾಜಿನಾಮೆ ನೀಡದೆ ತಿರುಗಾಡುತ್ತಿರುವ ಮುಖ್ಯಮಂತ್ರಿಗಳ ನಡೆಯ ಕುರಿತು ರಾಜ್ಯದ ಜನ ಹಾದಿ ಬೀದಿಗಳಲ್ಲಿ ಮಾತನಾಡುತ್ತಿದ್ದಾರೆ ಎಂದರು.
ಸಂಡೂರಿನಲ್ಲಿ ಇಲ್ಲಿಯ ತನಕ ಬಿಜೆಪಿ ಗೆದ್ದಿಲ್ಲ, ಆದರೆ ಈ ಬಾರಿ ಸಂಡೂರು ಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಎಲ್ಲಾ ರೀತಿಯ ಅನುಕೂಲಕರ ವಾತಾವರಣ ಸೃಷ್ಟಿಯಾಗಿದ್ದು, ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಈ ಕ್ಷೇತ್ರದಲ್ಲಿ ನಾವು ಹೆಚ್ಚು ಕೆಲಸ ಮಾಡಿ ಹೊಸ ಇತಿಹಾಸ ಸೃಷ್ಟಿಸಬೇಕಿದೆ. ಈ ವಿಧಾನಸಭಾ ಕ್ಷೇತ್ರವು ಎಸ್ಟಿ ಮೀಸಲು ಕ್ಷೇತ್ರವಾಗಿದ್ದು ನಮಗೆ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.
ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಅಲೆ ಇದ್ದು, ಇಂತಹ ಸಂದರ್ಭವನ್ನು ನಾವು ಸೂಕ್ಷ್ಮತೆಯಿಂದ ಅರಿತು ಚುನಾವಣೆ ಗೆಲ್ಲಬೇಕಿದೆ ಎಂದು ಎಲ್ಲರಿಗೂ ಹುರಿದುಂಬಿಸಿ ನೂತನವಾಗಿ ರಚನೆಯಾದ ತಂಡಗಳಿಗೆ ತಾಕೀತು ಮಾಡಿದರು. ಸಂದೂರಿನಲ್ಲಿ ಓಬಿಸಿ ಮತಗಳು ಎರಡನೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಎಲ್ಲಾ ಓಬಿಸಿ ಸಮುದಾಯಗಳನ್ನು, ಅವುಗಳ ಮುಖಂಡರನ್ನು ಭೇಟಿ ಮಾಡಿ, ಸಭೆಗಳನ್ನು ನಡೆಸಿ, ಈ ರಾಜ್ಯಕ್ಕೆ, ದೇಶಕ್ಕೆ ಬಿಜೆಪಿ ನೀಡಿರುವ ಕೊಡುಗೆಗಳು, ಯೋಜನೆಗಳು ಕುರಿತು ಮತದಾರರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.
ಇಂದು ಕೇಂದ್ರದ ನರೇಂದ್ರ ಮೋದಿಯವರ ಯೋಜನೆಗಳು ಮನೆಮನೆ ತಲುಪುತ್ತಿವೆ ಆದರೆ ಕಾಂಗ್ರೆಸ್ ಗ್ಯಾರೆಂಟಿಗಳು ರಾಜ್ಯದಲ್ಲಿ ನೆಲ ಕಚ್ಚಿವೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತವಾಗಿದ್ದು, ಸಂದೂರಿನಲ್ಲಿ ಈ ಬಾರಿ ಇತಿಹಾಸ ಸೃಷ್ಟಿ ಮಾಡಲಿದ್ದೇವೆ ಎಂದು ಎಲ್ಲರಲ್ಲೂ ಭರವಸೆ ಮೂಡಿಸಿದರು.
ಮುಂಬರುವ ಸಂಡೂರು, ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ತಯಾರಿಯ ಕುರಿತಾಗಿ ಎಲ್ಲಾ ರೂಪು ರೇμÉಗಳನ್ನು ಚರ್ಚಿಸಿ ವಿವಿಧ ಒಬಿಸಿ ಸಮುದಾಯಗಳಿಗೆ ಸೇರಿದ ರಾಜ್ಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ತಂಡಗಳನ್ನು ರಚನೆ ಮಾಡಲಾಯಿತು. ಆನಂತರ ಬಿಜೆಪಿ ಸದಸ್ಯತ್ವ ಅಭಿಯಾನದ ಕುರಿತಾಗಿ ಜಿಲ್ಲಾವಾರು ವರದಿಯನ್ನು ತೆಗೆದುಕೊಳ್ಳಲಾಯಿತು.
ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಶರಣು ತಲ್ಲಿಕೇರಿ, ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಅವ್ವನ್ನ ಮ್ಯಾಕೇರಿ, ರಾಜ್ಯ ಒಬಿಸಿ ಉಪಾಧ್ಯಕ್ಷರಾದ ಅಯ್ಯಾಳಿ ತಿಮ್ಮಪ್ಪ, ಗೋವಿಂದರಾಜು, ಶ್ರೀಮತಿ ಅಶ್ವಿನಿ ಶಂಕರ್ ವೇದಿಕೆಯಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.