ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವತ್ತು ರಾಜ್ಯ ಸರಕಾರದ ಕ್ಯಾಬಿನೆಟ್ ಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಂಥ ಸಂದರ್ಭದಲ್ಲಿ ಬಿಜೆಪಿ ಸರಕಾರವು ಕೋವಿಡ್ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ ಮಾಡಿದೆ; ಆರೋಗ್ಯ ಸಚಿವರು ನೂರಾರು ಕೋಟಿ ಹಗರಣದಲ್ಲಿ ಭಾಗಿ ಆಗಿದ್ದಾರೆಂದು ತಿಳಿಸಿ, ಆ ಹಗರಣವನ್ನು ಎಸ್ಐಟಿ ತನಿಖೆಗೆ ಕೊಡಲು ನಿರ್ಧರಿಸಿದ್ದಾರೆ ಎಂದು ವಿವರಿಸಿದರು.
ಎಸ್ಐಟಿ ತನಿಖೆಗೆ ಕೊಡಲು ಮತ್ತು ಅದಕ್ಕೂ ಮೊದಲು ಉಪ ಸಮಿತಿ ಮಾಡಲು ನಮ್ಮ ವಿರೋಧವಿಲ್ಲ ಎಂದ ಅವರು, ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಅದು ಹೊರಗಡೆ ಬರಲಿ; ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷಕ್ಕಿಂತ ಜಾಸ್ತಿ ಆಗಿದೆ. ಇದುವರೆಗೆ ಈ ಸರಕಾರ ಏನು ಮಾಡುತ್ತಿತ್ತು? ಅದನ್ನು ಹೇಳಲು ಒಂದೂವರೆ ವರ್ಷ ಬೇಕಾಯಿತೇ? ಎಂದು ಪ್ರಶ್ನಿಸಿದರು.
ಯಾವಾಗ ಬಿಜೆಪಿ, 5 ಸಾವಿರ ಕೋಟಿ ಭ್ರಷ್ಟಾಚಾರದ ಮುಡಾ ಹಗರಣ ವಿರುದ್ಧ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡಿ ಅದನ್ನು ಹೊರಗಡೆ ಹಾಕಿದ ತಕ್ಷಣ ಇವರಿಗೆ ಕೋವಿಡ್ ನೆನಪಾಯಿತು. ಮುಡಾ ಹಗರಣ ವಿಚಾರ ಹೊರಗಡೆ ತರದೇ ಇದ್ದರೆ ಕೋವಿಡ್ ವಿಚಾರ ಹೊರಗೆ ಬರುತ್ತಿರಲಿಲ್ಲ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಆಗಿರುವ 187 ಕೋಟಿ ರೂ. ಹಣದ ಹಗರಣವನ್ನು ಬಯಲಿಗೆ ಎಳೆದಿದ್ದೇವೆ. ಈ ಹಣವನ್ನು ತೆಲಂಗಾಣ ಸೇರಿ ಬೇರೆ ರಾಜ್ಯಗಳಿಗೆ ಕಳಿಸಿದ್ದಾರೆ. ಬಳ್ಳಾರಿ ಚುನಾವಣೆಗೆ 20 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ ಎಂದು ಇ.ಡಿ. ವರದಿ ತಿಳಿಸಿದೆ ಎಂದು ಗಮನ ಸೆಳೆದರು.
ಮಹರ್ಷಿ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಇ.ಡಿ. ಮೂಲಕ ಬಹಿರಂಗವಾಗಿದೆ. ಅದಕ್ಕೆ ಪ್ರತಿಯಾಗಿ ಇವರು ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ತಿಳಿಸಿ ತನಿಖೆಗೆ ನೀಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳಿದ್ದಕ್ಕಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ನಮಗ್ಯಾವ ವಿರೋಧವೂ ಇಲ್ಲ; ನೀವು ಎಸ್ಐಟಿ ಮೂಲಕ ಒಬ್ಬ ಸಚಿವ ನಾಗೇಂದ್ರರಿಗೆ ಕ್ಲೀನ್ ಚಿಟ್ ಕೊಟ್ಟಿದ್ದೀರಿ; ಈಗ ಮತ್ತೆ ಎಸ್ಐಟಿಗೆ ಆ ಕೇಸನ್ನು ಕೊಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಚಿವರಾಗಿದ್ದ ಡಾ.ಎಸ್.ಸುಧಾಕರ್ ಅವರ ಬಗ್ಗೆ ಈ ಎಸ್ಐಟಿ ಏನು ಮಾಡುತ್ತದೆ ಎಂದು ಕಾದು ನೋಡುತ್ತೇವೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.