ಧನುಷ್ಕೋಡಿಯ ಉತ್ತರಕ್ಕೆ 20 ಮೈಲುಗಳಷ್ಟು ದೂರದಲ್ಲಿ ಕಚ್ಚತೀವು ದ್ವೀಪವಿದೆ. ಕಚ್ಚತೀವು ಎಂದರೆ ತಮಿಳಿನಲ್ಲಿ ‘ಬಂಜರು ದ್ವೀಪ’ ಎಂದರ್ಥ. 14 ನೇ ಶತಮಾನದ ಜ್ವಾಲಾಮುಖಿ ಸ್ಫೋಟದಿಂದ ಉಂಟಾದ 285-ಎಕರೆ ಜನವಸತಿಯಿಲ್ಲದ ಈ ದ್ವೀಪ ಒಂದು ಕಾಲದಲ್ಲಿ ಭಾರತದ ಭಾಗವಾಗಿತ್ತು. ಆದರೆ ಇಚ್ಛಾಶಕ್ತಿ ಇಲ್ಲದ ರಾಜಕೀಯದಿಂದಾಗಿ ಈಗ ಅದು ಶ್ರೀಲಂಕಾದ ಸುಪರ್ದಿಯಲ್ಲಿದೆ.
1974 ರಲ್ಲಿ ಸಿರಿಮಾವೋ ಬಂಡಾರನಾಯಕೆ ಆಡಳಿತದ ಅಡಿಯಲ್ಲಿದ್ದ ಶ್ರೀಲಂಕಾಗೆ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರ ಆಡಳಿತವು ಕಚ್ಚಾತೀವನ್ನು ಬಿಟ್ಟುಕೊಟ್ಟಿತು. ನೆರೆ ರಾಷ್ಟ್ರದ ಜೊತೆಗೆ ಸಂಬಂಧ ವರ್ಧಿಸುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಚ್ಚತೀವು ದ್ವೀಪ ಶ್ರೀಲಂಕಾ ಪಾಲಾಯಿತು.
1983 ರಲ್ಲಿ ಲಂಕಾದ ಅಂತರ್ಯುದ್ಧ ಪ್ರಾರಂಭವಾದಾಗಿನಿಂದ, ಈ ದ್ವೀಪವು ಭಾರತೀಯ ತಮಿಳು ಮೀನುಗಾರರು ಮತ್ತು ಸಿಂಹಳ ಪ್ರಾಬಲ್ಯದ ಲಂಕಾ ನೌಕಾಪಡೆಯ ನಡುವಿನ ಸಂಘರ್ಷಗಳಿಗೆ ಯುದ್ಧಭೂಮಿಯಾಗಿ ಪರಿವರ್ತನೆಗೊಂಡಿತು, ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಕಡಲ ಗಡಿರೇಖೆ ದಾಟಿದ ಭಾರತೀಯರ ಜೀವನೋಪಾಯಗಳು, ಆಸ್ತಿಗಳು ಅಪಾರ ನಷ್ಟವನ್ನು ಅನುಭವಿಸಿವೆ ಮತ್ತು ಹಲವು ಜೀವಗಳು ಕೂಡ ಕಳೆದುಹೋಗಿವೆ. ಇನ್ನೊಂದೆಡೆ ಸಿಂಹಳೀಯ ಮೀನುಗಾರರು ದ್ವೀಪವನ್ನು ಭಾರತಕ್ಕೆ ಗುತ್ತಿಗೆ ನೀಡಲು ಶ್ರೀಲಂಕಾದ ಆಡಳಿತ ಮುಂದಾಗುತ್ತಿದೆ ಎಂಬ ಆತಂಕವನ್ನು ಹುಟ್ಟುಹಾಕಲು ಪ್ರಾರಂಭಿಸಿದ್ದಾರೆ. ಆದೇನೆಯಿದ್ದರೂ, ಕಚ್ಚತೀವು ವಿವಾದವು ವಸಾಹತುಶಾಹಿ ದಕ್ಷಿಣ ಏಷ್ಯಾದ ಭೂ-ರಾಜಕೀಯ ಪರಂಪರೆಯಲ್ಲಿ ಹುದುಗಿದ ಒಂದು ಅವಶೇಷದಂತೆಯೇ ಆಗಿದೆ. ಅದನ್ನು ಮತ್ತೆ ಭಾರತದ ವಶಕ್ಕೆ ಪಡೆದುಕೊಳ್ಳುವುದು ಕಷ್ಟಸಾಧ್ಯ.
ಕಚ್ಚತೀವು ಒಂದು ಕಾಲದಲ್ಲಿ ರಾಮನಾಡ್ ಜಮೀನ್ದಾರಿಯ ಭಾಗವಾಗಿತ್ತು. ರಾಮನಾಥಪುರಂ ಸಂಸ್ಥಾನವನ್ನು (ಅಥವಾ ರಾಮನಾಡ್) ಮಧುರೈನ ನಾಯಕ್ ರಾಜವಂಶ 1605 ರಲ್ಲಿ ಸ್ಥಾಪಿಸಿತು. ಇದು ಕಚ್ಚತೀವು ಸೇರಿದಂತೆ 69 ಕರಾವಳಿ ಗ್ರಾಮಗಳು ಮತ್ತು 11 ದ್ವೀಪಗಳನ್ನು ಒಳಗೊಂಡಿತ್ತು. 1622 ಮತ್ತು 1635 ರ ನಡುವೆ ರಾಮನಾಥಪುರಂನ ಸಾರ್ವಭೌಮನಾಗಿದ್ದ ಕೂತನ್ ಸೇತುಪತಿ ಹೊರಡಿಸಿದ ತಾಮ್ರದ ಫಲಕವು ಇಂದಿನ ಶ್ರೀಲಂಕಾದ ತಲೈಮನ್ನಾರ್ ವರೆಗೆ ವಿಸ್ತರಿಸಿರುವ ಭೂಪ್ರದೇಶದ ಭಾರತೀಯ ಮಾಲೀಕತ್ವಕ್ಕೆ ಸಾಕ್ಷಿಯಾಗಿದೆ. 1767 ರಲ್ಲಿ, ಡಚ್ ಈಸ್ಟ್ ಇಂಡಿಯಾ ಕಂಪನಿಯು ದ್ವೀಪವನ್ನು ಗುತ್ತಿಗೆಗೆ ಪಡೆಯಲು ಮುತ್ತುರಾಮಲಿಂಗ ಸೇತುಪತಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ನಂತರ, 1822 ರಲ್ಲೂ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ರಾಮಸ್ವಾಮಿ ಸೇತುಪತಿಯಿಂದ ದ್ವೀಪವನ್ನು ಗುತ್ತಿಗೆಗೆ ಪಡೆದುಕೊಂಡಿತು
ಶ್ರೀಲಂಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಡಬ್ಲ್ಯೂ ಟಿ ಜಯಸಿಂಗ್ ಅವರು ಸೂಚಿಸಿದಂತೆ, ಸಿಲೋನ್ ಗವರ್ನರ್ ಕಾಲಿನ್ ಕ್ಯಾಂಪ್ಬೆಲ್ ಅವರು 1845 ರಲ್ಲಿ ಹೊರಡಿಸಿದ ಮೂರು ಘೋಷಣೆಗಳಲ್ಲಿ ಜಾಫ್ನಾಪಟ್ಟಣಂನ ಮಿತಿಗಳನ್ನು ವಿವರಿಸಲಾಗಿದೆ, ಕಚ್ಚತೀವು ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಈ ಸತ್ಯವು ದ್ವೀಪದ ಐತಿಹಾಸಿಕ ಮಾಲೀಕತ್ವ ಭಾರತದ ಬಳಿಯೇ ಇತ್ತು ಎಂಬುದನ್ನು ಸಾರಿ ಸಾರಿ ಹೇಳುತ್ತದೆ.
1974 ರವರೆಗೆ ಭಾರತ-ಶ್ರೀಲಂಕಾ ದೇಶಗಳು ತಮ್ಮ ಕಡಲ ಗಡಿಗಳನ್ನು ಮರುಹೊಂದಿಸಲು ನಿರ್ಧರಿಸುವವರೆಗೂ ಕಚ್ಛಾತೀವು ನಿರ್ವಿವಾದವಾಗಿ ಉಳಿಯಿತು. 1974ರಲ್ಲಿ ಕಡಲ ಗಡಿಯನ್ನು ಗುರುತಿಸುವವರೆಗೂ ಮೀನುಗಾರರು ಎರಡೂ ಕಡೆ ಮೀನುಗಾರಿಕೆ ನಡೆಸುತ್ತಿದ್ದರು. ಇಂದಿರಾ ಗಾಂಧಿ ಮತ್ತು ಶ್ರೀಲಂಕಾ ಅಧ್ಯಕ್ಷ ಸಿರಿಮಾವೊ ಬಂಡಾರನಾಯಕೆ ಉತ್ತಮ ಸ್ನೇಹಿತರಾಗಿಯೂ ಇದ್ದರು.
ಉಭಯ ದೇಶಗಳ ನಡುವಿನ ಒಪ್ಪಂದದ ವಿನಿಮಯ ಪತ್ರದ ಪ್ರಕಾರ, ಕೇಪ್ ಕೊಮೊರಿನ್ (ಕನ್ಯಾಕುಮಾರಿ) ನಲ್ಲಿರುವ ವಾಡ್ಜ್ ಬ್ಯಾಂಕ್ ಅನ್ನು ಭಾರತವು ಶ್ರೀಲಂಕಾದಿಂದ ಕಚ್ಚತೀವು ಬದಲಿಗೆ ಖರೀದಿಸಿತು.
ಇಂದಿರಾ ಗಾಂಧಿಯವರು 1974 ರಲ್ಲಿ ಶ್ರೀಲಂಕಾಗೆ ದ್ವೀಪವನ್ನು ಬಿಟ್ಟುಕೊಡಲು ನಿರ್ಧರಿಸಿದರು, ಇದನ್ನು ಆಗಿನ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ವಿರೋಧಿಸಿದರು. ಮನ್ನಾರ್ ಕೊಲ್ಲಿ ಮತ್ತು ಬಂಗಾಳ ಕೊಲ್ಲಿಯ ಎರಡು ಕೌಂಟಿಗಳ ನಡುವಿನ ಕಡಲ ಗಡಿಯನ್ನು 1976 ರಲ್ಲಿ ಮರುಜೋಡಣೆ ಮಾಡಲಾಯಿತು ಮತ್ತು ವಾಡ್ಜ್ ಬ್ಯಾಂಕ್ ಅನ್ನು ಭಾರತ ತೆಗೆದುಕೊಂಡಿತು.
“ಶ್ರೀಲಂಕಾದ ಮೀನುಗಾರಿಕಾ ಹಡಗುಗಳು ಮತ್ತು ಈ ಹಡಗುಗಳಲ್ಲಿರುವ ವ್ಯಕ್ತಿಗಳು ವಾಡ್ಜ್ ಬ್ಯಾಂಕ್ನಲ್ಲಿ ಮೀನುಗಾರಿಕೆಯಲ್ಲಿ ತೊಡಗಬಾರದು. ಆದಾಗ್ಯೂ ಶ್ರೀಲಂಕಾ ಸರ್ಕಾರದ ಕೋರಿಕೆಯ ಮೇರೆಗೆ ಮತ್ತು ಸೌಹಾರ್ದತೆಯ ಸೂಚಕವಾಗಿ, ಭಾರತ ಸರ್ಕಾರದಿಂದ ಅನುಮತಿ ಪಡೆದ ಶ್ರೀಲಂಕಾ ಮೀನುಗಾರಿಕಾ ಹಡಗುಗಳಿಗೆ ವಾಡ್ಜ್ ಬ್ಯಾಂಕ್ನಲ್ಲಿ ಮೂರು ವರ್ಷಗಳ ಅವಧಿಗೆ ಮೀನುಗಾರಿಕೆಯಲ್ಲಿ ತೊಡಗಬಹುದು ಎಂದು ಭಾರತ ಸರ್ಕಾರ ಒಪ್ಪಿತು” ಎಂದು ಮಾರ್ಚ್ 23, 1976 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿನಿಮಯ ಪತ್ರ ವಿವರಿಸುತ್ತದೆ.
ಆ ನಂತರವೂ ಈ ಪ್ರದೇಶದಲ್ಲಿ ಯಾವುದೇ ಸಂಘರ್ಷ ನಡೆಯದ ಕಾರಣ ಮೀನುಗಾರರು ಎರಡೂ ಕಡೆ ಮೀನುಗಾರಿಕೆ ಮುಂದುವರಿಸಿದ್ದರು. ಇದು ಚಿಪ್ಪುಗಳು, ಸೀಗಡಿಗಳು, ಮುತ್ತಿನ ಸಿಂಪಿಗಳು ಮತ್ತು ಹವಳಗಳಿಂದ ತುಂಬಿದ ಸಮುದ್ರತಳವಾಗಿತ್ತು, . ಒಂದು ಸಮಯದಲ್ಲಿ, ವಿಜ್ಞಾನಿಗಳು ಈ ಪ್ರದೇಶವನ್ನು ತೈಲಕ್ಕಾಗಿ ಅನ್ವೇಷಿಸಬಹುದು ಎಂದು ಭಾವಿಸಿದ್ದರು. 1990 ರ ದಶಕದಲ್ಲಿ ಈ ದ್ವೀಪವು ಪ್ರಮುಖ ಕಳ್ಳಸಾಗಣೆಯ ಸ್ಥಳವಾಗಿತ್ತು. ಆದರೆ ಶ್ರೀಲಂಕಾದಲ್ಲಿ ಜನಾಂಗೀಯ ಕಲಹ ಪ್ರಾರಂಭವಾದ ನಂತರ, ದ್ವೀಪವು ಸಂಘರ್ಷದ ಸ್ಥಳವಾಯಿತು ಮತ್ತು ಶ್ರೀಲಂಕಾದ ನೌಕಾಪಡೆಯು ಈ ಪ್ರದೇಶದ ಕಾವಲುಗಾರನಾಯಿತು. ಶ್ರೀಲಂಕಾ ನೌಕಾಪಡೆಯು ಎಲ್ಟಿಟಿಇ ಸಹಾನುಭೂತಿ ಹೊಂದಿರುವವರು ಮತ್ತು ತಮಿಳು ಮೀನುಗಾರರ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದ ಕಾರಣ ತಮಿಳು ಮೀನುಗಾರರಿಗೆ ಕಚ್ಚತೀವು ಬಳಿ ಮೀನುಗಾರಿಕೆಗೆ ಹೋಗಲು ಅವಕಾಶ ನೀಡಲಿಲ್ಲ.
ಆದರೆ, ಭಾರತೀಯ ಮೀನುಗಾರರು ಟ್ರಾಲರ್ಗಳ ಬಳಕೆ ಮಾಡುವುದರಿಂದ ಸಮುದ್ರದ ತಳ ಬರಿದಾಗುತ್ತಿದೆ ಮತ್ತು ಸಮುದ್ರದ ಸಂಪನ್ಮೂಲನ ಖಾಲಿಯಾಗುತ್ತಿದೆ ಎಂದು ಶ್ರೀಲಂಕಾ ಮೀನುಗಾರರು ಆರೋಪ ಮಾಡಲಾರಂಭಿಸಿದರು. ಇದರ ಪರಿಣಾಮವಾಗಿ ಶ್ರೀಲಂಕಾ ನೌಕಾಪಡೆಯು ಅಂತರಾಷ್ಟ್ರೀಯ ಸಮುದ್ರಕ್ಕೆ ನುಗ್ಗಿದ ಭಾರತೀಯ ಮೀನುಗಾರರನ್ನು ಬಂಧಿಸಲಾರಂಭಿಸಿತು. ಈ ಸಮಸ್ಯೆ ಈಗಲೂ ಮುಂದುವರೆದಿದೆ, ಇದಕ್ಕೆ ಎರಡೂ ದೇಶಗಳು ಇನ್ನೂ ಪರಿಹಾರವನ್ನು ಕಂಡುಕೊಂಡಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.