ಬೆಂಗಳೂರು: ಕಾಂಗ್ರೆಸ್ ಪಕ್ಷವು ಸ್ಯಾಮ್ ಪಿತ್ರೋಡಾ ರಾಜೀನಾಮೆ ಪಡೆದು ಅವರ ಹೇಳಿಕೆಗೆ ಸಮ್ಮತಿ ಸೂಚಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದೇಶದ ಜನರು ಅವಮಾನ ಪಡುವಂಥ ಘಟನೆ ಕಾಂಗ್ರೆಸ್ ಪಕ್ಷದಿಂದ, ಕಾಂಗ್ರೆಸ್ಸಿನ ಅಂತರಾಷ್ಟ್ರೀಯ ಅಧ್ಯಕ್ಷ ಸ್ಯಾಮ್ ಪಿತ್ರೋಡರಿಂದ ಆಗಿದೆ. ಸ್ಯಾಮ್ ಪಿತ್ರೋಡ ಅವರು ಕಾಂಗ್ರೆಸ್ ಪಾಲಿಗೆ ತಿಥಿ ಗಿರಾಕಿ. ದೇಶವನ್ನು ಒಡೆಯುವ, ಛಿದ್ರ ಛಿದ್ರ ಮಾಡುವ, ದೇಶದ ಜನರಲ್ಲಿ ಬಿರುಕು ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ಟೀಕಿಸಿದರು.
ದೇಶ ಒಡೆಯುವ ಹೇಳಿಕೆ ನೀಡಿದ್ದ ಡಿ.ಕೆ.ಸುರೇಶ್ ಅವರು ಇದಕ್ಕೆ ಹಿನ್ನೆಲೆ ಗಾಯಕರಾಗಿದ್ದರು. ಈಗ ಮುನ್ನೆಲೆ ಗಾಯಕ, ಕಾಂಗ್ರೆಸ್ ಭಾಗ್ಯಗಳ ತಜ್ಞ ಸ್ಯಾಮ್ ಪಿತ್ರೋಡ ಅವರು ಬಣ್ಣದ ಗ್ಯಾರಂಟಿ ಕೊಡುತ್ತಿದ್ದಾರೆ. ಹಿಂದೆ ವರ್ಣಭೇದ ನೀತಿ ವಿರುದ್ಧ ದೊಡ್ಡ ಹೋರಾಟ ನಡೆದಿತ್ತು. ಸಾವಿರಾರು ಜನರೂ ಮೃತಪಟ್ಟಿದ್ದರು ಎಂದು ವಿವರಿಸಿದರು.
ವ್ಯಕ್ತಿಗಳ ಬಣ್ಣದ ಮೇಲೆ ಯೋಗ್ಯತೆ ಅಳೆಯುವುದು ಕಾಂಗ್ರೆಸ್ ಡಿಎನ್ಎಯಲ್ಲೇ ಇದೆ ಎಂದು ಟೀಕಿಸಿದ ಅವರು, ಈ ಚಿಂತನೆ ಇದೀಗ ಜಗಜ್ಜಾಹೀರಾಗಿದೆ. ಇದೇ ಜನರು ಮಹಾತ್ಮ ಗಾಂಧಿಯವರು ಕಪ್ಪು ಬಣ್ಣದವರು ಎಂದು ಅವರನ್ನು ರೈಲಿನಿಂದ ಹೊರಕ್ಕೆ ಹಾಕಿದ್ದರು ಎಂದು ನೆನಪಿಸಿದರು. ಸ್ಯಾಮ್ ಪಿತ್ರೋಡ ಒಬ್ಬ 420 (ವಂಚಕ). ಅವರು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಕೊಟ್ಟ ತಕ್ಷಣ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.
ನಾವು ಭಾರತೀಯರು ಹೌದೇ ಅಲ್ಲವೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ದಕ್ಷಿಣ ಭಾರತದವರೆಲ್ಲ ಆಫ್ರಿಕದವರು ಎಂದಿದ್ದಾರೆ. ನಮಗೆ 5 ಸಾವಿರ ವರ್ಷಗಳ ಇತಿಹಾಸ ಇದೆ. ರಾಮಾಯಣ, ಮಹಾಭಾರತ ನಡೆದ ದೇಶ- ಸಂಸ್ಕøತಿ ನಮ್ಮದು. ಪಿತ್ರೋಡ ನಮ್ಮನ್ನು ಒಮ್ಮಿಂದೊಮ್ಮೆಲೆ ಆಫ್ರಿಕದ ಕಾಡುಗಳಲ್ಲಿ ಬಿಟ್ಟಂತಾಗಿದೆ. ಕಾಂಗ್ರೆಸ್ಸಿನವರು ಇಲ್ಲಿನ ಒಕ್ಕಲಿಗರು, ಲಿಂಗಾಯತರು, ದಲಿತರು, ಹಿಂದುಳಿದ ವರ್ಗದವರು- ಇವರಿಗೆ ಯಾವ್ಯಾವ ಬಣ್ಣ ಹಚ್ಚುತ್ತಾರೆ ಎಂದು ಪ್ರಶ್ನಿಸಿದರು.
ನಾವು ಇಟೆಲಿಯಿಂದ ಬಂದ, ಇಟೆಲಿ ಪ್ರೇಮ ಇಟ್ಟುಕೊಂಡ ಸೋನಿಯಾ ಗಾಂಧಿಯವರನ್ನು ಬಣ್ಣ ನೋಡದೆ ದೇಶದ ಸೊಸೆ ಎಂದು ಒಪ್ಪಿಕೊಂಡೆವು. ರಾಹುಲ್ ಗಾಂಧಿಯವರು ಈ ಚುನಾವಣೆಯಲ್ಲಿ ಸೋತ ಬಳಿಕ ಇಟೆಲಿಗೇ ಹೋಗಲಿದ್ದಾರೆ. ಆದರೂ ಅವರನ್ನೂ ನಾವು ಭಾರತೀಯರೆಂದು ಒಪ್ಪಿಕೊಂಡಿದ್ದೇವೆ. ಇಲ್ಲಿನವರು ಅಂದರೆ ದಕ್ಷಿಣ ಭಾರತದವರು ಅರಬರು ಎಂದಾದರೆ, ಮಹಾರಾಷ್ಟ್ರದಲ್ಲಿ ಹುಟ್ಟಿದ ಡಾ. ಅಂಬೇಡ್ಕರ್ ಯಾರು ಎಂದು ಅಶೋಕ್ ಅವರು ಪ್ರಶ್ನೆಯನ್ನು ಮುಂದಿಟ್ಟರು.
ಸೋನಿಯಾ ಗಾಂಧಿಯವರು ಇಟೆಲಿಯಿಂದ ಬಂದವರು. ಕಾಂಗ್ರೆಸ್ಸಿನವರು ಅವರನ್ನು ಭಾರತೀಯರೆಂದು ಒಪ್ಪಿಕೊಳ್ಳಲು ಬಲವಂತ ಮಾಡುತ್ತಾರೆ. ಒತ್ತಡವನ್ನೂ ಹೇರಿದ್ದಾರೆ ಎಂದು ವಿವರಿಸಿದರು. ಸೋನಿಯಾ ಗಾಂಧಿಯವರನ್ನು ಯಾರೆಂದು ‘ಈ ಪಿತ್ರೊಡೆ’ ‘ಪಿತ್ರ್ ಒಡೆ’ ಹೇಳಬೇಕಲ್ಲವೇ ಎಂದು ಕೇಳಿದರು. ಸೋನಿಯಾ ಗಾಂಧಿ ಯಾರು, ಅವರ ಬಣ್ಣ ಏನು? ಅವರು ಭಾರತೀಯರೇ, ಅಲ್ಲವೇ ಎಂದು ಹೇಳಲು ಕಾಂಗ್ರೆಸ್ಸಿನವರನ್ನು ಆಗ್ರಹಿಸಿದರು. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾಧ್ರಾ ಯಾರು? ಇವರು ಯಾವ ದೇಶದವರು ಎಂದು ತಿಳಿಸಲು ಒತ್ತಾಯಿಸಿದರು.
ಸಿದ್ದರಾಮಯ್ಯನವರು ಐದು ಗ್ಯಾರಂಟಿ ಕೊಟ್ಟಿದ್ದಾಗಿ ಹೇಳುತ್ತಿದ್ದರು. ಈಗ ಬಿಳಿ ಗ್ಯಾರಂಟಿ, ಕಪ್ಪು ಗ್ಯಾರಂಟಿ, ಚೈನೀಸ್ ಗ್ಯಾರಂಟಿ, ಆಫ್ರಿಕನ್, ಅರಬಿ ಗ್ಯಾರಂಟಿ ಎಂಬ ಐದು ಗ್ಯಾರಂಟಿಯನ್ನು ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಕೊಟ್ಟಿದ್ದಾರೆ ಎಂದರಲ್ಲದೆ, ಇನ್ನು ಮುಂದೆ ಅವರು ಈ ಗ್ಯಾರಂಟಿಗಳನ್ನೇ ಹೇಳಲಿ ಎಂದು ಆಗ್ರಹಿಸಿದರು.
ಮೋದಿಯವರು ಚುನಾಯಿತ ಪ್ರಧಾನಮಂತ್ರಿ. ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡೆಯಿರಿ ಎಂದಿರುವ ಸಚಿವ ತಂಡಗಡಿಯವರು ಪಿತ್ರೋಡಾನನ್ನು ಯಾವುದರಲ್ಲಿ ಹೊಡೆಯುತ್ತಾರೆ ಎಂದು ಕೇಳಿದರು. ಸಿಎಂ ಅವರು ಬಜೆಟ್ ಭಾಷಣದಲ್ಲಿ ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದರು. ಈಗ ನಮ್ಮನ್ನೆಲ್ಲ ಆಫ್ರಿಕ, ಅರಬಿಸ್ಥಾನ, ಚೀನಾಕ್ಕೆ ಕಳಿಸಿದ್ದೀರಲ್ಲ? ಈಗ ಶಾಂತಿ ಎಲ್ಲಿ ಹುಡುಕುತ್ತೀರಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಸಿದ್ದರಾಮಯ್ಯನವರು ಶಾಂತಿ ಕದಡಿದವರು. ಕಾಂಗ್ರೆಸ್ಸಿಗರ ಮೂಲಸ್ಥಾನ ಯಾವುದು? ಕಾಂಗ್ರೆಸ್ಸಿಗರಿಗೆ ಅರಬರ ಮೇಲೆ ವಿಶೇಷ ಒಲವು, ಕುಚುಕು ಕುಚುಕು. ಎಲ್ಲಿಗೆ ಜನರನ್ನು ಕಳಿಸ್ತೀರಿ ಎಂದರು. ಪಿತ್ರೋಡಾ ಈ ದೇಶದ ಕಾನೂನನ್ನು ಅವಮಾನ ಮಾಡಿ, ಪಿತ್ರಾರ್ಜಿತ ಆಸ್ತಿಯಲ್ಲಿ ಸ್ವಂತ ಮಕ್ಕಳಿಗೆ ಹಕ್ಕಿಲ್ಲ ಎಂದಿದ್ದರು. ಬ್ರಿಟಿಷರೂ ಅದನ್ನೇ ಹೇಳಿದ್ದರು. ಲಾರ್ಡ್ ಡಾಲ್ ಹೌಸಿಯೂ ದತ್ತು ಮಕ್ಕಳ ರಾಜ್ಯ ಕಿತ್ತುಕೊಂಡಿದ್ದರು. ರಾಣಿ ಚನ್ನಮ್ಮರ ರಾಜ್ಯ ಕಿತ್ತುಕೊಂಡಿದ್ದರು ಎಂದು ನೆನಪಿಸಿದರು. ಆಧುನಿಕ ಕಾಂಗ್ರೆಸ್ಸಿನವರು ಸ್ವಂತ ಮಕ್ಕಳಿಗೇ ಆಸ್ತಿ ಹಕ್ಕಿಲ್ಲ ಎನ್ನುತ್ತಾರೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ಸಿನವರು ಇಡೀ ದೇಶ ಲೂಟಿ ಮಾಡಿದವರು. ಸ್ವತಃ ರಮೇಶ್ಕುಮಾರ್ ಅವರೇ ಇದನ್ನು ಹೇಳಿದ್ದಾರೆ ಎಂದು ವಿವರಿಸಿದರು.
ಕರ್ನಾಟಕದ ಎಸ್ಸೆಸ್ಸೆಲ್ಸಿ ಫಲಿತಾಂಶ ಹೊರಬಿದ್ದಿದೆ. ಕೆಲವು ವಿದ್ಯಾರ್ಥಿಗಳು 625ಕ್ಕೆ 625, 624 ಅಂಕ ಪಡೆದಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲರಿಗೂ ಶುಭಾಶಯ ಕೋರಿದರು. ಅನುತ್ತೀರ್ಣರಾದವರು ಆತಂಕ ಪಡಬಾರದು. ಮತ್ತೊಮ್ಮೆ ಪ್ರಯತ್ನಿಸಿ ಎಂದು ಕಿವಿಮಾತು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.