ಬೆಂಗಳೂರು: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯನ್ನು ಕಾಂಗ್ರೆಸ್ ಹಾಳುಮಾಡಿದೆ. ಇದನ್ನು ಟ್ಯಾಂಕರ್ ಸಿಟಿ ಮಾಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು. ಭ್ರಷ್ಟಾಚಾರದ ಕಡೆ ಕಾಂಗ್ರೆಸ್ಸಿಗರು ಗಮನ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ‘ವಿಜಯ ಸಂಕಲ್ಪ’ ಸಮಾವೇಶದಲ್ಲಿ ಅವರು ಮಾತನಾಡಿದರು. ಇಂಡಿ ಒಕ್ಕೂಟ ತಂತ್ರಜ್ಞಾನದ ವಿರೋಧಿ. ಕಾಂಗ್ರೆಸ್ ಪಕ್ಷ ಆಧಾರ್, ಜನ್ಧನ್ ಖಾತೆ ವಿರೋಧಿಸಿತ್ತು. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಲಸಿಕೆಯನ್ನೂ ವಿರೋಧಿಸಿತ್ತು ಎಂದು ನೆನಪಿಸಿದರು.
ದೇಶದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಇಲ್ಲಿ ಮೆಟ್ರೋ ವಿಸ್ತರಣೆ ನಡೆದಿದ್ದು, ಹಳದಿ ಲೈನ್ ಕೂಡ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಎಲ್ಲೆಡೆ ಚರ್ಚೆಯ ವಿಷಯವಾಗಿದೆ ಎಂದರು. ಮೋದಿ ಸೋಲಿಸುವುದೊಂದೇ ‘ಇಂಡಿ’ಯ ಧ್ಯೇಯವಾಗಿದೆ. ಕಾಂಗ್ರೆಸ್ ಪಕ್ಷ ಯುವಜನರ ವಿರೋಧಿ, ಹೂಡಿಕೆಗೆ ವಿರೋಧಿ. ಉದ್ಯಮಗಳ ವಿರೋಧಿ ಪಕ್ಷವದು ಎಂದು ಟೀಕಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ಯುವತಿಯರ ಹತ್ಯೆ ಆಗುತ್ತಿದೆ ಎಂದು ವಿವರಿಸಿದರು. ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಿ ಎಂದು ತಿಳಿಸಿದರು.
ಕರ್ನಾಟಕದ ಕಾಂಗ್ರೆಸ್ ಸರಕಾರವು ರೈತರ ವಿರೋಧಿ ಎಂದು ಆಕ್ಷೇಪಿಸಿದರು. ಕೇಂದ್ರ ಸರಕಾರವು ರೈತರ ಉತ್ಪನ್ನಗಳನ್ನು ಶೇಖರಿಸಲು ಗೋದಾಮುಗಳನ್ನು ನಿರ್ಮಿಸುತ್ತಿದೆ. ರಾಗಿಯನ್ನು ಜಗತ್ತಿನ ವಿವಿಧ ದೇಶಗಳಿಗೆ ಪರಿಚಯಿಸಿದ್ದೇವೆ. ನಿಮ್ಮ ಸಂಕಲ್ಪಗಳನ್ನು ಈಡೇರಿಸಲು ಬಿಜೆಪಿ- ಜೆಡಿಎಸ್ ಒಟ್ಟಾಗಿವೆ. ನಿಮ್ಮ ಕನಸು ನನಸಾಗಿಸುವುದೇ ನನ್ನ ಸಂಕಲ್ಪ. 24-7, 2047 ನನ್ನ ಸಂಕಲ್ಪ. ವಿಕಸಿತ ಭಾರತಕ್ಕಾಗಿ 26ರಂದು ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಗರಿಷ್ಠ ಮತದಾನ ಮಾಡಿ; ಮನೆಮನೆಗೆ ತೆರಳಿ ‘ಮೋದಿಜೀ ಬಂದಿದ್ದರು; ನಿಮಗೆ ನಮಸ್ಕಾರ ಹೇಳಿದ್ದಾರೆ’ ಎಂದು ತಿಳಿಸಲು ವಿನಂತಿಸಿದರು.
ಕರ್ನಾಟಕಕ್ಕೂ ಬುಲೆಟ್ ಟ್ರೈನ್ ಸಿಗಲಿದೆ. ಯುವಜನರಿಗೆ ಉದ್ಯೋಗಾವಕಾಶ ಸಿಗುತ್ತಿದೆ. ಹೂಡಿಕೆ ಅವಕಾಶಗಳು ಹೆಚ್ಚಾಗಿವೆ. ಡ್ರೋಣ್ ಉಪಯೋಗದ ಅವಕಾಶಗಳು ಹೆಚ್ಚಿಸಿದ್ದೇವೆ. ಡಿಜಿಟಲ್ ಇಂಡಿಯದಿಂದ ಹೊಸ ಉದ್ಯಮಗಳು ಬಂದಿವೆ ಎಂದು ಹೇಳಿದರು. ಇದೆಲ್ಲವನ್ನೂ ಕಾಂಗ್ರೆಸ್ ಮಾಡಲು ಸಾಧ್ಯವಿತ್ತೇ ಎಂದು ಪ್ರಶ್ನಿಸಿದರು. ಎಚ್ಎಎಲ್ಗೆ ಗರಿಷ್ಠ ದಾಖಲೆಯ ಲಾಭ ಸಿಕ್ಕಿದ್ದನ್ನು ತಿಳಿಸಿದರು.
ಇಂದು ಎಲ್ಲರೂ ಭಾರತದ ಸ್ನೇಹ ಬಯಸುತ್ತಾರೆ. ಹೂಡಿಕೆದಾರರು ಗರಿಷ್ಠ ಹಣ ಹೂಡುತ್ತಿದ್ದಾರೆ. ರಫ್ತಿನಲ್ಲಿ ಗಮನಾರ್ಹ ಸಾಧನೆ ನಮ್ಮದು. ವಿಶ್ವದ 11ನೇ ಆರ್ಥಿಕ ಸ್ಥಾನದಿಂದ ಇದೀಗ ನಾವು 5ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಈ ಬದಲಾವಣೆಯನ್ನು ನೀವೆಲ್ಲರೂ ನೋಡಿದ್ದೀರಿ. ಇದೆಲ್ಲವೂ 10 ವರ್ಷಗಳಲ್ಲಿ ಆಗಿದೆ ಎಂದು ವಿವರಿಸಿದರು. ಈ ಪರಿವರ್ತನೆಗೆ ಯಾರು ಕಾರಣರು ಎಂದಾಗ ‘ಮೋದಿ ಮೋದಿ’ ಎಂದು ಜನರು ಘೋಷಣೆ ಕೂಗಿದರು. ನಿಮ್ಮ ಒಂದು ಮತವು ಇದಕ್ಕೆ ಕಾರಣ ಎಂದು ಮೋದಿಜೀ ಅವರು ತಿಳಿಸಿದರು.
ಸಾಧನೆಯ ಟ್ರ್ಯಾಕ್ ರೆಕಾರ್ಡ್ ಮೂಲಕ ಮತ್ತೆ ಮತ ಕೇಳಲು ಬಂದಿದ್ದೇನೆ. ಎನ್ಡಿಎ- ಇಂಡಿ ಒಕ್ಕೂಟದ ಪ್ರಚಾರ ನೋಡಿದ್ದೀರಿ. ಕಾಂಗ್ರೆಸ್, ಇಂಡಿ ಒಕ್ಕೂಟ ಮೋದಿ ವಿರುದ್ಧ ಆರೋಪ ಮಾಡುತ್ತಾರೆ. ಆದರೆ ಮೋದಿ, 21ನೇ ಶತಮಾನದಲ್ಲಿ ಭಾರತದ ಅಭಿವೃದ್ಧಿ, ಭಾರತದ ಗ್ಲೋಬಲ್ ಇಮೇಜ್ ಕಡೆ ಗಮನ ನೀಡಿದ್ದಾರೆ ಎಂದು ತಿಳಿಸಿದರು.
ಬಡವರ ಕುಟುಂಬದಿಂದ ನಾನು ಬಂದಿದ್ದೇನೆ. ಬಡತನದ ಬಗ್ಗೆ ಅರಿವಿದೆ. ದೇಶದಲ್ಲಿ ವೇಗವಾಗಿ ನಗರೀಕರಣ ನಡೆದಿದೆ. ಜನರಿಗೆ ಉತ್ತಮ ಮೂಲಸೌಕರ್ಯ ಕೊಡಲು ನಾವು ಬದ್ಧತೆ ಪ್ರದರ್ಶಿಸಿದ್ದೇವೆ ಎಂದು ತಿಳಿಸಿದರು. 1 ಕೋಟಿ ಮನೆಗಳನ್ನು ಕೊಡಲಾಗಿದೆ. ಮಧ್ಯಮ ವರ್ಗದವರಿಗೆ ಮನೆಗಳಿಗೆ ಬಡ್ಡಿಗೆ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು. ರೇರಾ ಕಾಯ್ದೆ ತಂದಿದ್ದೇವೆ ಎಂದು ವಿವರಿಸಿದರು.
ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಫಿರ್ ಏಕ್ ಬಾರ್ ಮೋದಿ ಸರಕಾರ ಎಂಬ ಸಂದೇಶ ಇದರಿಂದ ಲಭಿಸಿದೆ ಎಂದು ತಿಳಿಸಿದರು. 2014, 2019ರಲ್ಲಿ ಎನ್ಡಿಎ ಸರಕಾರ ಆಯ್ಕೆ ಮಾಡಿದ್ದು, ಭಾರತವು ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು. ನಾವು ನುಡಿದಂತೆ ನಡೆದಿದ್ದೇವೆ. 2014ರಲ್ಲಿ ಭಾರತವು ಆರ್ಥಿಕವಾಗಿ ಹಿಂದುಳಿದ ದೇಶವಾಗಿತ್ತು ಎಂದು ನೆನಪಿಸಿದರು.
ಈಗ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಕೊಡಬೇಕಿಲ್ಲ. ಯುಪಿಎ ಇದ್ದಾಗ ಹತ್ತಾರು ತೆರಿಗೆಗಳು ಇದ್ದವು. ಜಿಎಸ್ಟಿ ಬಳಿಕ ಪರೋಕ್ಷ ತೆರಿಗೆಗಳು ಕಡಿಮೆ ಆಗಿವೆ. ಎಲ್ಇಡಿ ಬಲ್ಬ್ 400 ರೂ. ಇದ್ದುದು 40 ರೂ. ಆಗಿದೆ. ಇದರಿಂದ ವಿದ್ಯುತ್ ಬಿಲ್ ಕಡಿಮೆ ಆಗಿದೆ. ಎನ್ಡಿಎ ಈಗ ಪಿಎಂ ಸೂರ್ಯ ಘರ್ ಎಂಬ ಯೋಜನೆ ಜಾರಿ ಮಾಡಿದೆ. ಇದರಿಂದ ವಿದ್ಯುತ್ ಬಿಲ್ ಶೂನ್ಯವಾಗಲಿದೆ; ಇಲೆಕ್ಟ್ರಿಕ್ ವಾಹನಗಳಿಂದ ಚಾರ್ಜಿಂಗ್ ಕೂಡ ಮನೆಯಲ್ಲೇ ಮಾಡಬಹುದು ಎಂದು ತಿಳಿಸಿದರು.
ಬಡವರು, ಮಧ್ಯಮ ವರ್ಗದ ಆರೋಗ್ಯದ ವೆಚ್ಚ ದೊಡ್ಡದಾಗಿತ್ತು. ಆಯುಷ್ಮಾನ್ ಭಾರತ್ ಮೂಲಕ ಉಳಿತಾಯ ಸಾಧ್ಯವಾಗಿದೆ. ಬಿಜೆಪಿ ಈ ಯೋಜನೆಯನ್ನು ಇದೀಗ ಹಿರಿಯ ನಾಗರಿಕರಿಗೂ ವಿಸ್ತರಿಸಿದೆ ಎಂದು ನುಡಿದರು. ಎನ್ಡಿಎ ಸರಕಾರ ಜನೌಷಧಿ ಕೇಂದ್ರ ತೆರೆದಿದ್ದು, ಇದರಿಂದ ಶೇ 80ರಷ್ಟು ಕಡಿಮೆ ದರಕ್ಕೆ ಔಷಧಿ ಸಿಗುತ್ತಿದೆ ಎಂದರು.
ಬೆಂಗಳೂರು ಡಿಜಿಟಲ್ ಇಂಡಿಯದ ದೊಡ್ಡ ಹಬ್ ಆಗಿದೆ. ಭಾರತದಲ್ಲಿ ಮೊಬೈಲ್ ಡೇಟಾ ದರ 2014ರಲ್ಲಿ 1 ಜಿಬಿಗೆ 250 ರೂ. ಹತ್ತಿರ ಇತ್ತು. ಈಗ ಅದು 10 ರೂ. ಗಳಷ್ಟಾಗಿದೆ. ಎಷ್ಟು ಉಳಿತಾಯ ಆಗಿದೆ ಎಂದು ಯೋಚಿಸಿ ಎಂದು ತಿಳಿಸಿದರು. ಡೇಟಾ ಸೆಕ್ಯುರಿಟಿಗೆ ನಾವು ಆದ್ಯತೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದಿಂದ 28 ಎನ್ಡಿಎ ಸಂಸದರನ್ನು ಕಳಿಸಿಕೊಡಲಿದ್ದೇವೆ. ಬಿಜೆಪಿ- ಜೆಡಿಎಸ್ ಹೊಂದಾಣಿಕೆ ಆಗಿರುವುದರಿಂದ ಎಲ್ಲ 28 ಸ್ಥಾನಗಳು ಎನ್ಡಿಎ ಪರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಸ್ನೇಹಿತರು ಜನಹಿತ ಮರೆತು ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಕಳೆದ ಬಾರಿಯಷ್ಟು ಅಂದರೆ 52 ಸೀಟನ್ನಾದರೂ ಗೆದ್ದು ತೋರಿಸಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲು ಹಾಕಿದರು.
ಬೆಂಗಳೂರು ದಕ್ಷಿಣ, ಬೆಂಗಳೂರು ಮಧ್ಯ, ಬೆಂಗಳೂರು ಉತ್ತರ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಸಭೆ ಇದಾಗಿತ್ತು. ಅಭ್ಯರ್ಥಿಗಳಾದ ಡಾ.ಮಂಜುನಾಥ್, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ವಿಪಕ್ಷ ನಾಯಕ ಅಶೋಕ, ಬಿಜೆಪಿ- ಜೆಡಿಎಸ್ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.