ಮೊನ್ನೆ ನಡೆದ ಗಾಂಧಿ ಜಯಂತಿಯಂದು ಸರಳ ಜೀವನದ ಬಗ್ಗೆ ಎಲ್ಲೆಡೆ ಸಾಕಷ್ಟು ಭಾಷಣಗಳು ಕೇಳಿ ಬಂದವು. ಗಾಂಧೀಜಿಯಂತೆ ಸರಳ ಬದುಕು ನಡೆಸಬೇಕೆಂದು ಅನೇಕ ಮುಖಂಡರು ಕರೆಕೊಟ್ಟರು. ನಿಮ್ಮೂರಿನಲ್ಲೂ ನೀವು ಮುಖಂಡರು ಕೊಟ್ಟ ಇಂತಹ ಕರೆಯನ್ನು ಕೇಳಿಸಿಕೊಂಡಿರಬಹುದು. ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ‘ಸರಳ ಜೀವನ ನಡೆಸುವುದು ಹೇಳಿದಷ್ಟು ಸರಳವಲ್ಲ’ ಎಂದು ಗಾಂಧಿ ಜಯಂತಿಯಂದು ಮಾರ್ಮಿಕವಾಗಿ ನುಡಿದಿದ್ದಾರೆ. ಗಾಂಧಿ ಜಯಂತಿಯ ದಿನವಾದರೂ ಅವರು ಇಂತಹ ಕಟುಸತ್ಯವನ್ನು ಹೇಳಿದ್ದಾರಲ್ಲ, ಖಂಡಿತ ಅವರನ್ನು ನಾವೆಲ್ಲರೂ ಅಭಿನಂದಿಸಲೇಬೇಕು!
ಸಿದ್ದರಾಮಯ್ಯ ಈ ಹೇಳಿಕೆ ನೀಡುವ ಕೇವಲ ಒಂದು ದಿನ ಮುಂಚೆ, ಅಂದರೆ ಅ. 1 ರಂದು ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಬೆಡ್ಶಿಟ್, ದಿಂಬಿನಕವರ್, ಟವಲ್ ಖರೀದಿಸಲು ಒಂದು ವರ್ಷದಲ್ಲಿ ಮಾಡಿದ ವೆಚ್ಚ ಬರೋಬ್ಬರಿ 14.34 ಲಕ್ಷ ರೂ. ಎಂಬ ಸುದ್ದಿ ಮುಖಪುಟದಲ್ಲಿ ಪ್ರಕಟವಾಗಿತ್ತು. ಸಿಎಂ ನಿವಾಸ ಕಾವೇರಿಗೆ ಬೆಡ್ಶಿಟ್, ಬೆಡ್ಕವರ್, ಕಂಬಳಿ ಖರೀದಿ ವೆಚ್ಚ 4.79 ಲಕ್ಷ ರೂ. ಗೃಹೋಪಯೋಗಿ ವಸ್ತುಗಳ ಖರೀದಿ ವೆಚ್ಚ 4.77 ಲಕ್ಷ ರೂ. ಹಾಗೂ ಬಾತ್ಟವಲ್, ಹ್ಯಾಂಡ್ಟವಲ್, ಫೇಸ್ಟವಲ್, ಕುಷನ್ಕವರ್ ಖರೀದಿ ವೆಚ್ಚ 4.78 ಲಕ್ಷ ರೂ. ಇತ್ಯಾದಿ ವಿವರಗಳು ಅಧಿಕೃತವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದರ ಜೊತೆಗೆ ಐವರು ಸಚಿವರು ಮನೆ ದುರಸ್ತಿ ವಿಷಯದಲ್ಲಿ ಕೋಟಿಗೂ ಹೆಚ್ಚು ಹಣ ವ್ಯಯಿಸಿರುವ ಮಾಹಿತಿಯೂ ಪ್ರಕಟವಾಗಿದೆ. ಈ ಪೈಕಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್, ಗೃಹ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಅರಣ್ಯ ಸಚಿವ ರಮಾನಾಥರೈ ಅವರ ಮನೆಗಳ ಶೌಚಾಲಯ ದುರಸ್ತಿ, ಬಣ್ಣ ಬಳಿಯಲು, ಟೈಲ್ಸ್, ಛಾವಣಿ ರಿಪೇರಿ ಹೆಸರಿನಲ್ಲಿ ಒಟ್ಟು 1.71 ಕೋಟಿ ವ್ಯಯಿಸಿದ್ದಾರೆಂಬ ವಿವರಗಳೂ ಬಹಿರಂಗವಾಗಿದೆ.
ಮನೆಗೆ ದಿಂಬು, ಕಂಬಳಿ ಖರೀದಿಗೇ 14.34 ಲಕ್ಷ ರೂ. ಖರ್ಚು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಪ್ರಧಾನಿ ಮೋದಿ 15 ಲಕ್ಷ ರೂ. ಬೆಲೆಬಾಳುವ ಸೂಟ್ ಧರಿಸಿದ್ದಕ್ಕೆ ಟೀಕೆ ಮಾಡಿದ್ದರು. ಮೋದಿ ಅಷ್ಟೊಂದು ಬೆಲೆಯ ಸೂಟ್ ನಿಜವಾಗಿಯೂ ಧರಿಸಿದ್ದರೆ? ಆ ಸೂಟನ್ನು ಹೊಲಿದವರ್ಯಾರು? ಆ ಮೊತ್ತವನ್ನು ಸ್ವತಃ ಮೋದಿ ಅವರೇ ಪಾವತಿಸಿದರೆ? ಸೂಟಿನ ಬಟ್ಟೆಯನ್ನು ಯಾವ ಅಂಗಡಿಯಿಂದ ಖರೀದಿಸಿದರು? ಅಂಗಡಿಯ ಹೆಸರೇನು? ಅವರ ಸಂಪರ್ಕ ದೂರವಾಣಿ ಸಂಖ್ಯೆ ಯಾವುದು? ಇತ್ಯಾದಿ ಪ್ರಶ್ನೆಗಳಿಗೆ ಸಿದ್ದರಾಮಯ್ಯನವರಾಗಲೀ ಅಥವಾ ಅವರ ಪಕ್ಷದ ಇತರರಾಗಲೀ ಮಾಹಿತಿ ನೀಡಬಲ್ಲರೆ? ಸಿದ್ದರಾಮಯ್ಯ ಅವರ ಮನೆಯ ದಿಂಬು, ಕಂಬಳಿ ಖರೀದಿಗೆ ಆಗಿರುವ ೧೪.೩೪ ಲಕ್ಷ ರೂ. ಖರ್ಚಿಗೆ ಮಾತ್ರ ಅಧಿಕೃತ ಮಾಹಿತಿಯೇ ಲಭ್ಯವಿದೆ. ಮರಿಲಿಂಗೇಗೌಡ ಮಾಲೀ ಪಾಟೀಲ್ ಎಂಬ ಮಾಹಿತಿ ಹಕ್ಕು ಕಾರ್ಯಕರ್ತ ಈ ಖರ್ಚಿನ ವಿವರಗಳನ್ನು ಆರ್ಟಿಐ ಕಾಯ್ದೆಯಡಿ ಪಡೆದಿದ್ದಾರೆ.
ಸಿದ್ದರಾಮಯ್ಯ ಅವರೊಬ್ಬರೇ ಅಲ್ಲ, ಅವರ ಪಕ್ಷದ ಉಪಾಧ್ಯಕ್ಷ ರಾಹುಲ್ಗಾಂಧಿ ಕೂಡ ಮೋದಿ ಧರಿಸಿದ ಸೂಟಿನ ಬಗ್ಗೆ ಪದೇ ಪದೇ ಹೋದಲ್ಲೆಲ್ಲ ಟೀಕಿಸುತ್ತಲೇ ಇರುತ್ತಾರೆ. ಆದರೆ ಈ ಟೀಕೆಗೆ ಪೂರಕವಾಗಿರುವ ಯಾವುದೇ ವಿವರಗಳನ್ನಾಗಲಿ, ಮಾಹಿತಿಗಳನ್ನಾಗಲಿ ಅವರು ನೀಡುವುದಿಲ್ಲ. ಅಷ್ಟಕ್ಕೂ ಆ ವಿವರಗಳು ಅವರ ಬಳಿ ಇದ್ದರೆ ತಾನೆ? ಜನರಿಗೂ ಈ ಟೀಕೆಯನ್ನು ಪದೇ ಪದೇ ಕೇಳಿ ತೀವ್ರ ಬೇಸರ ಉಂಟಾಗಿದೆ. ಮೋದಿಯವರನ್ನು ಹೀಗೆ ವೃಥಾ ಟೀಕಿಸುವ ರಾಹುಲ್ಗಾಂಧಿಗೆ ಅವರ ಮುತ್ತಜ್ಜ , ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ತಮ್ಮ ಒಗೆದ ಬಟ್ಟೆಗಳನ್ನು ಇಸ್ತ್ರಿ ಮಾಡಿಸಲು ಪ್ಯಾರಿಸ್ಗೆ ಕಳುಹಿಸುತ್ತಿದ್ದ ವಿಷಯ ಗೊತ್ತಿಲ್ಲವೆ? ತಮ್ಮ ತಂದೆ ರಾಜೀವ್ಗಾಂಧಿ ಹಾಗೂ ಮುತ್ತಜ್ಜ ಜವಾಹರ್ಲಾಲ್ ನೆಹರೂ ಕೂಡ ಸೂಟುಬೂಟು ಧರಿಸುತ್ತಿದ್ದರು ಎಂಬ ಸಂಗತಿ ರಾಹುಲ್ಗೆ ತಿಳಿದಿಲ್ಲವೆ? ದೇಶದ ಇತಿಹಾಸವೇ ನೆಟ್ಟಗೆ ಗೊತ್ತಿರದ ರಾಹುಲ್ಗೆ ಇನ್ನು ತನ್ನ ಕುಟುಂಬದ ಇತಿಹಾಸ ಗೊತ್ತಿರಲು ಹೇಗೆ ಸಾಧ್ಯ?
ಸರಳ ಜೀವನದ ಕುರಿತು ಗಾಂಧಿ ಜಯಂತಿಯಂದು ಮಾತ್ರ ಮಾತುಗಳು ಮೊಳಗುತ್ತವೆ. ಆದರೆ ಈ ಬಗೆಯ ಅಣಿಮುತ್ತುಗಳನ್ನು ಉದುರಿಸುವವರು ಮಾತ್ರ ಸರಳ ಜೀವನ ನಡೆಸುವುದಿಲ್ಲ ಎಂಬುದು ಹಗಲಿನಷ್ಟು ನಿಚ್ಚಳ. ಅವರ ಮಾತುಗಳು ಉಪದೇಶಕ್ಕಷ್ಟೇ ಸೀಮಿತ, ಸ್ವಂತ ಆಚರಣೆಗಲ್ಲ! ಉನ್ನತ ಹುದ್ದೆಯಲ್ಲಿದ್ದೂ ಸರಳ ಜೀವನ ನಡೆಸಿದ ಹಲವು ಮಹನೀಯರ ನಿದರ್ಶನ ನಮ್ಮ ಕಣ್ಮುಂದಿದೆ. ದೇಶದ ಎರಡನೇ ಪ್ರಧಾನಿಯಾಗಿದ್ದ ಲಾಲ್ಬಹದ್ದೂರ್ ಶಾಸ್ತ್ರಿ ಸರಳತೆಯ ಪ್ರತೀಕವಾಗಿದ್ದರು. ಅವರು ಧರಿಸುತ್ತಿದ್ದುದು ಅತ್ಯಂತ ಸರಳ ಉಡುಪು. ಅನೇಕ ಬಾರಿ ಅವರ ಶರ್ಟಿನ ಕಾಲರ್ ಹರಿದಿರುತ್ತಿತ್ತು. ಪ್ರಧಾನಿಯಾಗಿದ್ದಾಗಲೂ ಅವರು ತಮ್ಮ ಮಕ್ಕಳನ್ನು ಸರ್ಕಾರಿ ಕಾರಿನಲ್ಲಿ ಶಾಲೆಗೆ ಕಳುಹಿಸಲಿಲ್ಲ. ಸ್ವತಃ ತಾವು ಕೂಡ ಸ್ವಂತಕ್ಕೆ ಒಂದು ಕಾರನ್ನು ಖರೀದಿಸಿರಲಿಲ್ಲ. ಮನಸ್ಸು ಮಾಡಿದ್ದರೆ ಇವೆಲ್ಲ ಅವರಿಗೆ ಕಷ್ಟದ ಸಂಗತಿಯೇ ಆಗಿರಲಿಲ್ಲ. ಆದರೆ ಶಾಸ್ತ್ರಿಯವರು ಬದುಕಿನುದ್ದಕ್ಕೂ ಪ್ರಾಮಾಣಿಕ, ಸರಳ ಜೀವನವನ್ನೇ ಅಪ್ಪಿಕೊಂಡರು. ಅದರಲ್ಲೇ ಖುಷಿ ಕಂಡರು. ದೇಶದಲ್ಲಿ ಬರಗಾಲ ಬಂದಿದ್ದಾಗ ಒಂದು ಹೊತ್ತಿನ ಊಟ ತ್ಯಜಿಸುವಂತೆ ಜನರಿಗೆ ಕರೆಕೊಟ್ಟಿದ್ದು ಮಾತ್ರವಲ್ಲ, ತಾವು ಸ್ವತಃ ಅದನ್ನು ಆಚರಿಸಿದರು. ಇಂತಹ ಸರಳ ಜೀವನ ನಡೆಸುವುದು ಉಳಿದ ಪ್ರಧಾನಿಗಳಿಗೆ ಸಾಧ್ಯವಾಗಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಬನಾರಸ್ ಹಿಂದು ವಿಶ್ವ ವಿದ್ಯಾಲಯದ ಸ್ಥಾಪಕರಾಗಿದ್ದ ಪಂ. ಮದನಮೋಹನ ಮಾಳವೀಯ, ಕೇಂದ್ರ ಗೃಹಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್, ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಭೂದಾನ ಚಳವಳಿಯ ನೇತಾರ ವಿನೋಬಾ ಭಾವೆ, ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಕಡಿದಾಳ್ ಮಂಜಪ್ಪ, ತಮಿಳುನಾಡಿನ ರಾಜ್ಯಪಾಲರಾಗಿದ್ದ ಪ್ರಭುದಾಸ್ ಪಟವಾರಿ… ಇವರೆಲ್ಲ ತಮ್ಮ ಸರಳ ಹಾಗೂ ಪ್ರಾಮಾಣಿಕ ಬದುಕಿಗೆ ಹೆಸರಾಗಿದ್ದರು.
ಐಹಿಕ ಸುಖಭೋಗಗಳನ್ನು ತ್ಯಜಿಸಿ, ಸರ್ವಸಂಗ ಪರಿತ್ಯಾಗಿಯಾಗಿ, ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಸಾಧು ಸಂತರು, ಸನ್ಯಾಸಿಗಳು ಸರಳ ಬದುಕನ್ನು ನಡೆಸಬೇಕೆಂಬುದು ಅಪೇಕ್ಷೆ. ಏಕೆಂದರೆ ಅವರು ಐಹಿಕ ಭೋಗಗಳನ್ನು ತ್ಯಜಿಸಿದವರು. ತ್ಯಾಗ, ನಿಸ್ವಾರ್ಥ ಭಾವನೆಗಳನ್ನು ಜನರಲ್ಲಿ ಬಿತ್ತಬೇಕಾದವರು. ಹಿಂದಿನ ನಮ್ಮ ಋಷಿಮುನಿಗಳು ಹಾಗೆಯೇ ಇದ್ದರು. ಆದ್ದರಿಂದಲೇ ಅವರು ಇಂದಿಗೂ ಪ್ರಾತಃಸ್ಮರಣೀಯರು. ಆದರೆ ವರ್ತಮಾನದ ಕೆಲವು ಸಾಧುಸಂತರು, ಸ್ವಾಮೀಜಿಗಳ ವೈಯಕ್ತಿಕ ಬದುಕನ್ನು ಗಮನಿಸಿದರೆ ಹೇವರಿಕೆ ಉಂಟಾಗುವುದು ಸಹಜ. ತ್ಯಾಗಿಗಳಾಗಿರಬೇಕಾದವರು ಭೋಗಿಗಳಾಗಿ, ಸುಖವಿಲಾಸಗಳಲ್ಲಿ ಮೈ ಮರೆತಿರುವ ದೃಶ್ಯ ಕಳವಳಕಾರಿ. ಅಡ್ಡಪಲ್ಲಕ್ಕಿ ಉತ್ಸವ, ಕಿರೀಟ ಧಾರಣೆ, ವೈಭವದ ಮೆರವಣಿಗೆ… ಇವೆಲ್ಲ ಸ್ವಾಮೀಜಿಗಳಿಗೆ ಬೇಕೆ? ಅತ್ಯಂತ ಸರಳವಾಗಿ ಬದುಕಿ ಜನರಿಗೆ ನೈತಿಕ, ಆಧ್ಯಾತ್ಮಿಕ ಮಾರ್ಗದರ್ಶನ ಮಾಡಬೇಕಾದ ಸ್ವಾಮೀಜಿಗಳು ವೈಭೋಗದಿಂದ ಬದುಕಿದರೆ ಜನರಿಗೆ ತಲುಪುವ ಸಂದೇಶವಾದರೂ ಏನು? ಸುಮಾರು ಎರಡು ದಶಕಗಳ ಹಿಂದೆ ಸ್ವಾಮೀಜಿಯೊಬ್ಬರ ಸಂದರ್ಶನಕ್ಕಾಗಿ ಅವರ ಮಠಕ್ಕೆ ಹೋಗಿದ್ದೆ. ಅವರಾಗ ವಿಶ್ರಾಂತಿಯಲ್ಲಿದ್ದರು. ಕೆಲ ಹೊತ್ತಿನ ಬಳಿಕ ನನ್ನನ್ನು ಅವರ ಕೋಣೆಗೆ ಕರೆದರು. ಒಳಗೆ ಕಾಲಿಟ್ಟಾಗ ನನಗೆ ಆಶ್ಚರ್ಯ! ಸ್ವಾಮೀಜಿ ವಿಲಾಸಿಯೆನ್ನಬಹುದಾದ ಹಾಸಿಗೆಯ ಮೇಲೆ ಕುಳಿತಿದ್ದರು. ಪಕ್ಕದಲ್ಲೊಂದು ಟಿವಿ, ಜೊತೆಗೆ ಸಿಡಿ ಪ್ಲೇಯರ್, ಅದರ ಪಕ್ಕದಲ್ಲೊಂದು ಫ್ರಿಜ್. ಫ್ರಿಜ್ನಿಂದ ದ್ರಾಕ್ಷಿ, ಗೋಡಂಬಿಗಳನ್ನು ಹೊರತೆಗೆದು ತಿನ್ನಲು ಕೊಟ್ಟರು. ಅನಂತರ ಸಂದರ್ಶನ ಪ್ರಾರಂಭವಾಯಿತು. ಸ್ವಾಮೀಜಿಗಳು ಹೀಗೂ ಇರುತ್ತಾರಾ? ಎಂದು ನನಗೆ ಆಗ ಆಘಾತ. ಇನ್ನೊಂದು ಸಾರಿ ಮತ್ತೊಬ್ಬ ಸ್ವಾಮೀಜಿಯವರ ಸಂದರ್ಶನಕ್ಕೆ ಹೋಗಿದ್ದೆ. ಅವರ ನಿವಾಸ ನೋಡಿದಾಗಲೂ ನನಗೆ ಆಶ್ಚರ್ಯ! ಅಲ್ಲಿದ್ದುದು ಎರಡು ಹರಿದುಹೋದ ಚಾಪೆಗಳು. ಒಂದು ಚಾಪೆಯ ಮೇಲೆ ನಾನು ಕುಳಿತುಕೊಂಡೆ. ಇನ್ನೊಂದರ ಮೇಲೆ ಸ್ವಾಮೀಜಿಯವರು ಕುಳಿತುಕೊಂಡು ಸಂದರ್ಶನಕ್ಕೆ ಸಿದ್ಧರಾದರು. ಆದರೆ ಆ ಸ್ವಾಮೀಜಿ ನಿಜವಾದ ಸನ್ಯಾಸಧರ್ಮವನ್ನು ಪಾಲಿಸುತ್ತಿದ್ದರು. ಐಹಿಕ ಭೋಗಗಳಿಂದ ಗಾವುದ ದೂರ ಇದ್ದರು. ಆಧುನಿಕ, ವಿಲಾಸಿ ಎನ್ನಬಹುದಾದ ಒಂದೇ ಒಂದು ವಸ್ತು ಕೂಡ ಅವರ ಬಳಿ ಇರಲಿಲ್ಲ. ಅಸಲಿಗೆ ಸ್ನಾನ ಮಾಡಲು ಅವರಿಗೊಂದು ಬಚ್ಚಲು ಮನೆಯೇ ಅವರ ಮಠದಲ್ಲಿರಲಿಲ್ಲ. ಮಠದಲ್ಲಿರುವ ಬಾವಿಕಟ್ಟೆಯ ಬಳಿ ಕುಳಿತು ಅವರು ತಣ್ಣೀರು ಸುರಿದುಕೊಂಡು ಎಲ್ಲರೆದುರೇ ಸ್ನಾನ ಮುಗಿಸುತ್ತಿದ್ದರು. ಆ ಸ್ವಾಮೀಜಿ ಈಗಲೂ ಹಾಗೆಯೇ ಸನ್ಯಾಸಧರ್ಮವನ್ನು ಪಾಲಿಸುತ್ತಿದ್ದಾರೆ. ಸನ್ಯಸ್ತ ಬದುಕು ಹೇಗಿರಬೇಕೆಂಬುದಕ್ಕೆ ಅವರೊಂದು ಅಪರೂಪದ ಉಜ್ವಲ ಮೇಲ್ಪಂಕ್ತಿ.
ಉಳಿದ ಸ್ವಾಮೀಜಿಗಳಿಗೇಕೆ ಇಂತಹ ಸರಳ, ವಿರಕ್ತ ಬದುಕು ಸಾಧ್ಯವಾಗುತ್ತಿಲ್ಲ? ಸ್ವಾಮೀಜಿಗಳಿಗೇಕೆ ಟಚ್ಸ್ಕ್ರೀನ್ ಮೊಬೈಲ್, ಎಸಿ ಕಾರು, ವಿಮಾನದಲ್ಲಿ ಓಡಾಟ, ವೈಯಕ್ತಿಕ ವಿಮೆಯ ರಕ್ಷಣೆ, ಎತ್ತರದ ಪೀಠ? ಸಿದ್ಧಗಂಗಾದ ವಯೋವೃದ್ಧ ಸ್ವಾಮೀಜಿಯವರು ಈ ಇಳಿವಯಸ್ಸಿನಲ್ಲೂ ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಬದುಕು ನಡೆಸುತ್ತಿರುವುದನ್ನು ನೋಡಿದರೆ ಅವರ ಬಗ್ಗೆ ಗೌರವ ನೂರ್ಮಡಿ ಹೆಚ್ಚಾಗುತ್ತದೆ. ಭಕ್ತರು ಅವರ ಭೇಟಿಗಾಗಿ ಪೂರ್ವಾನುಮತಿ ತೆಗೆದುಕೊಳ್ಳಬೇಕಾದ ಅಗತ್ಯ ಈಗಲೂ ಇಲ್ಲ. ಬಯಲಿನಲ್ಲೇ ಬಂದು ಅವರು ಕುಳಿತಿರುತ್ತಾರೆ. ಯಾರು ಬೇಕಾದರೂ ಅವರ ದರ್ಶನ ಮಾಡಬಹುದು. ಆದರೆ ಉಳಿದ ಸ್ವಾಮೀಜಿಗಳನ್ನು ಇದೇ ರೀತಿ ಮುಕ್ತವಾಗಿ, ಯಾವುದೇ ನಿರ್ಬಂಧವಿಲ್ಲದೇ ಭೇಟಿ ಮಾಡಲು ಭಕ್ತರಿಗೆ ಸಾಧ್ಯವಿಲ್ಲ.
ಇದೀಗ ಸಂಸದರ ವೇತನ, ಭತ್ಯೆ ಇತರ ಸೌಲಭ್ಯಗಳ ಬಗ್ಗೆ ಶಿಫಾರಸ್ಸು ಮಾಡಲು ಕೇಂದ್ರ ಸರ್ಕಾರ ಸ್ವತಂತ್ರ ವೇತನ ಆಯೋಗದ ಪ್ರಸ್ತಾವ ಮುಂದಿಟ್ಟಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯೂ ನಡೆದಿದೆ. ಸಂಸದರಿಗೆ ಮೂಲವೇತನವಲ್ಲದೇ ವಿಮಾನ, ರೈಲು ಪ್ರಯಾಣ ಭತ್ಯೆ, ಕಲಾಪದ ದಿನ ಭತ್ಯೆ, ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಯಡಿ ಆರೋಗ್ಯ ಸೌಲಭ್ಯ, ವಿದ್ಯುತ್, ನೀರು, ದೂರವಾಣಿ, ವಾಹನ… ಹೀಗೆ ಹಲವು ಬಗೆಯ ಇನ್ನಿತರ ಸೌಲಭ್ಯಗಳೂ ಇವೆ. ಅಷ್ಟೆಲ್ಲ ಇದ್ದರೂ ಅವರು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಜನಸೇವೆ ನಿರ್ವಹಿಸಿದ್ದಾರೆ ಎನ್ನುವುದೇ ಅಂತಿಮವಾಗಿ ಉಳಿಯುವ ಪ್ರಶ್ನೆ. ಈ ಪ್ರಶ್ನೆಗೆ ಮಾತ್ರ ಸೂಕ್ತ ಉತ್ತರ ಅಷ್ಟಾಗಿ ದೊರಕುತ್ತಿಲ್ಲ ಎಂಬುದೇ ಬೇಸರದ ಸಂಗತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.