ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಒಂದು ರಾಜ್ಯ ಸರಕಾರಕ್ಕೆ 4 ವರ್ಷಗಳ ಆಡಳಿತದ ಬಳಿಕ ಆಡಳಿತ ವಿರೋಧಿ ಅಲೆ ಸಹಜವಾಗಿ ಆರಂಭವಾಗುತ್ತದೆ. ಆದರೆ, ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಕೇವಲ 100 ದಿನಗಳು ತುಂಬುವ ಮೊದಲೇ ಆಡಳಿತ ವಿರೋಧಿ ಅಲೆ ಪ್ರಾರಂಭವಾಗಿತ್ತು ಎಂದು ತಿಳಿಸಿದರು.
ಅಭಿವೃದ್ಧಿಗೆ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲ. ರಾಜ್ಯದಲ್ಲಿ ಬರಗಾಲದ ಸ್ಥಿತಿ ಇದೆ. ಬರಗಾಲ ಸಂಬಂಧಿ ಕಾಮಗಾರಿಗಳು ನಡೆಯುತ್ತಿಲ್ಲ; ಎಲ್ಲ ಅಭಿವೃದ್ಧಿ ಚಟುವಟಿಕೆಗಳೂ ಸ್ಥಗಿತವಾಗಿದೆ ಎಂದು ಕಾಂಗ್ರೆಸ್ಸಿನ ಬಸವರಾಜ ರಾಯರೆಡ್ಡಿ ಮತ್ತಿತರರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು ಎಂದು ವಿವರಿಸಿದರು. ಬರಗಾಲದ ಕ್ರಿಯಾಯೋಜನೆ ರೂಪಿಸದೆ 10.50 ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಹಣದಲ್ಲಿ ಬರಗಾಲದ ಕಾಮಗಾರಿ ಪ್ರಾರಂಭಿಸಬೇಕೇ? ಕುಡಿಯುವ ನೀರಿನ ಯೋಜನೆ ಕೈಗೊಳ್ಳಬೇಕೇ? ಜಾನುವಾರುಗಳಿಗೆ ಮೇವಿನ ಕಿಟ್ ಕೊಡಬೇಕೇ? ಎಂಬ ಕ್ರಿಯಾಯೋಜನೆ ಮಾಡಿರಲಿಲ್ಲ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯನವರು ಕೇಂದ್ರಕ್ಕೆ 17 ಸಾವಿರ ಕೋಟಿಗೆ ಕೋರಿಕೆ ಸಲ್ಲಿಸಿದ್ದಾಗಿ ಹೇಳುತ್ತ ಕಾಲಹರಣ ಮಾಡಿದ್ದಾರೆ; ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್ಡಿಆರ್ಎಫ್) ಹಣ ಬಿಡುಗಡೆಗೆ ಕಾಯುತ್ತ ಕುಳಿತರೇ ಹೊರತು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್ಡಿಆರ್ಎಫ್) ಹಣ ಬಿಡುಗಡೆ ಮಾಡಲೇ ಇಲ್ಲ ಎಂದು ಟೀಕಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ದೊಡ್ಡ ಪ್ರಮಾಣದಲ್ಲಿ ನೆರೆ ಹಾವಳಿ ಆಗಿತ್ತು. ಅವರು ಕ್ಯಾಬಿನೆಟ್ ಕೂಡ ರಚಿಸಿರಲಿಲ್ಲ. ಒಬ್ಬರೇ ಇದ್ದರೂ ಹಾನಿಯನ್ನು ವೀಕ್ಷಿಸಿ ಮನೆ ಹಾನಿ ಆದವರಿಗೆ ಹಣವನ್ನು ಬಿಡುಗಡೆ ಮಾಡಿದ್ದರು ಎಂದು ನೆನಪಿಸಿದರು.
ನೆರೆ ಹಾವಳಿ ಮಾತ್ರವಲ್ಲದೆ ಕೋವಿಡ್ ಸಂಕಷ್ಟವನ್ನೂ ಯಡಿಯೂರಪ್ಪನವರು ಎದುರಿಸಿದ್ದರು. ಸಿದ್ದರಾಮಯ್ಯನವರು ಕೇಂದ್ರದತ್ತ ಬೆರಳು ತೋರುತ್ತಾರೆಯೇ ಹೊರತು ಎಸ್ಡಿಆರ್ಎಫ್ ಹಣ ಬಿಡುಗಡೆ ಮಾಡುವ ಬದ್ಧತೆಯನ್ನು ತೋರಿಸುತ್ತಿಲ್ಲ ಎಂದು ತಿಳಿಸಿದರು. ಇದು ರಾಜ್ಯ ಸರಕಾರದ ಜನವಿರೋಧಿ ನೀತಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರಕಾರ ಬೇಜವಾಬ್ದಾರಿಯಿಂದ ನಡೆದುಕೊಂಡಿತು. ಮುಂಗಾರು ಮಳೆ ವಿಳಂಬ, ಸಮರ್ಪಕ ಮಳೆ ಆಗದ ಕಾರಣ ಅಣೆಕಟ್ಟುಗಳಲ್ಲಿ ನೀರು ಇಲ್ಲದೆ ಇರುವುದನ್ನು ತಿಳಿಸಿ ಮನದಟ್ಟು ಮಾಡಬೇಕಿದ್ದ ರಾಜ್ಯ ಸರಕಾರವು ಕೋರ್ಟಿಗೆ ಅರ್ಜಿಯನ್ನೂ ಸಲ್ಲಿಸಲಿಲ್ಲ. ಬದಲಾಗಿ ನಿರಂತರವಾಗಿ ನೀರು ಹರಿಯಬಿಟ್ಟರು. ಮಾರ್ಚ್, ಏಪ್ರಿಲ್ನಲ್ಲಿ 5 ಟಿಎಂಸಿ ನೀರು ಬಿಡುಗಡೆಗೆ ಆದೇಶ ಮಾಡಿದರೂ ಸಹ ಇದುವರೆಗೆ ರಾಜ್ಯ ಸರಕಾರ ಈ ಆದೇಶಕ್ಕೆ ವಿರುದ್ಧವಾಗಿ ಅರ್ಜಿ ಹಾಕಿಲ್ಲ ಎಂದು ವಿವರಿಸಿದರು.
ಕರ್ನಾಟಕದ ದೌರ್ಬಲ್ಯವನ್ನು ಮನಗಂಡ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರಕಾರವು ನಿನ್ನೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂಡಿ ಒಕ್ಕೂಟ ಗೆದ್ದು ಬಂದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ತಮಿಳುನಾಡು ಸರಕಾರದ ಮುಖ್ಯಸ್ಥ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದಾರೆ. ಕಳೆದ ಆಗಸ್ಟ್ 5ರಿಂದ ಕರ್ನಾಟಕ ಸರಕಾರದ ವೈಫಲ್ಯಗಳನ್ನು ಮನಗಂಡು ಈ ರೀತಿ ಚುನಾವಣಾ ಪ್ರಣಾಳಿಕೆ ಹೊರಡಿಸಿದೆ. ಇದು ರಾಜ್ಯ ಸರಕಾರಕ್ಕೆ ಗೊತ್ತಿದೆಯೇ ಇಲ್ಲವೋ ಗೊತ್ತಿಲ್ಲ ಎಂದು ಅಶ್ವತ್ಥನಾರಾಯಣ ಅವರು ಟೀಕಿಸಿದರು.
ಕಾವೇರಿ ಐತೀರ್ಪು ಬಂದ ಬಳಿಕ ಬೆಂಗಳೂರಿನ ಕುಡಿಯುವ ನೀರು ಸಂಬಂಧ ಮತ್ತು 400 ಮೆ.ವಾ. ವಿದ್ಯುತ್ ಉತ್ಪಾದನೆಗೆ ಅವಕಾಶ ಇದೆ ಎಂದು ಗೊತ್ತಾಗಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದ ಮೇರೆಗೆ ನಮ್ಮ ಸರಕಾರ ಇದ್ದಾಗ ಒಂದು ಸಾಧ್ಯತಾ ವರದಿ (ಫೀಸಿಬಿಲಿಟಿ ರಿಪೋರ್ಟ್) ಸಲ್ಲಿಸಲು ಸೂಚಿಸಲಾಗಿತ್ತು. ಮಾನ್ಯ ಬಸವರಾಜ ಬೊಮ್ಮಾಯಿಯವರು 4-8-2018ರಲ್ಲಿ ಕೇಂದ್ರ ಜಲ ಆಯೋಗ ತಿಳಿಸಿದ ಬಳಿಕ ಸಾಧ್ಯತಾ ವರದಿ ನೀಡಿದ್ದರು. 2019ರಲ್ಲಿ ಮತ್ತೊಮ್ಮೆ 9 ಸಾವಿರ ಕೋಟಿ ವೆಚ್ಚದ ಪೂರ್ಣ ಪ್ರಮಾಣದ ಸವಿವರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು ಎಂದು ವಿವರ ನೀಡಿದರು.
ಬಿಜೆಪಿ ಸರಕಾರ ಇದ್ದಾಗ ಮೇಕೆದಾಟು ಯೋಜನೆ ಕುರಿತ ಬೆಳವಣಿಗೆ ಇದು. ಇದಾದ ಬಳಿಕ 1 ಸಾವಿರ ಕೋಟಿ ಹಣವನ್ನೂ ಬಸವರಾಜ ಬೊಮ್ಮಾಯಿಯವರು ಬಿಡುಗಡೆ ಮಾಡಿದ್ದರು. ಕೋವಿಡ್ ಸಂಕಷ್ಟ ಕಾಲದಲ್ಲಿ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಸಂಬಂಧ ‘ನನ್ನ ನೀರು ನನ್ನ ಹಕ್ಕು’ ಎಂಬ ಪಾದಯಾತ್ರೆಯನ್ನು ನಡೆಸಿದ್ದರು. ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನಿನ್ನೆಯ ಸ್ಟಾಲಿನ್ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್ ನಿಲುವೇನು ಎಂದು ತಿಳಿಸಿಲ್ಲ. ಕರ್ನಾಟಕದ ರೈತರ, ಕುಡಿಯುವ ನೀರಿನ ಪ್ರಶ್ನೆ ಇದು. ಮುಖ್ಯಮಂತ್ರಿಗಳ ನಿಲುವೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರವು ತಮಿಳುನಾಡು ಸರಕಾರ, ಸ್ಟಾಲಿನ್ ಹೇಳಿಕೆ ಕುರಿತು ತುಟಿ ಬಿಚ್ಚುತ್ತಿಲ್ಲ ಎಂದ ಅಶ್ವತ್ಥನಾರಾಯಣ ಅವರು ಸಿಎಂ, ಡಿಸಿಎಂ ನಿಲುವೇನು? ಅಥವಾ ನೀವೇನಾದರೂ ಈ ಪ್ರಣಾಳಿಕೆ ಬರೆದುಕೊಟ್ಟಿದ್ದೀರಾ? ಎಂದು ವ್ಯಂಗ್ಯವಾಗಿ ಪ್ರಶ್ನೆಯನ್ನು ಮುಂದಿಟ್ಟರು.
ರೈತರು ಮತ್ತು ಕರ್ನಾಟಕಕ್ಕೆ ದ್ರೋಹಿಗಳಾಗಿ ಸಿದ್ದರಾಮಯ್ಯನವರ ಮತ್ತು ಡಿ.ಕೆ.ಶಿವಕುಮಾರರ ನಡವಳಿಕೆಯನ್ನು ಗಮನಿಸಿದಾಗ ಇದು ಸ್ಟಾಲಿನ್ ಅವರಿಗೆ ಬಾಳೆಹಣ್ಣಿನ ಸಿಪ್ಪೆ ಸುಲಿದು ಅವರ ಬಾಯಿಗೆ ಇಟ್ಟಂತೆ ಆಗಿದೆ. ಕರ್ನಾಟಕಕ್ಕೆ ಮಾಡಿದ ದ್ರೋಹ ಇದು. ಮೇಕೆದಾಟು ಕುರಿತು ನಿಲುವನ್ನು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
ರಾಜ್ಯ ವಕ್ತಾರರಾದ ಸುರಭಿ ಹೊದಿಗೆರೆ ಮತ್ತು ವೆಂಕಟೇಶ ದೊಡ್ಡೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.