ಉಡುಪಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಬಳಿಕ 48 ದಿನಗಳ ಕಾಲ ನಡೆದ ಮಂಡಲೋತ್ಸವ, ಶ್ರೀ ರಾಮ ದೇವರಿಗೆ ಕಲಶ ಪೂಜೆ, ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವವಹಿಸಿದ್ದ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಎಲ್ಲಾ ಕಾರ್ಯಕ್ರಮಗಳನ್ನು ವೈಭವದಿಂದ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಇದೀಗ ಅಯೋಧ್ಯೆಯಲ್ಲಿ ಸಾಕಷ್ಟು ಕೈಂಕರ್ಯ ನೆರವೇರಿಸಿ ಮಾರ್ಚ್ 17ರಂದು ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಭಕ್ತಿಪೂರ್ವಕ ಸ್ವಾಗತ ಸಮಾರಂಭ ಹಾಗೂ ಸಾರ್ವಜನಿಕ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 8.15 ಕ್ಕೆ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಶ್ರೀಯವರನ್ನು ಎಲ್ಲಾ ಗಣ್ಯರು ಸ್ವಾಗತಿಸಿ ವಾಹನಗಳ ಮೂಲಕ ಉಡುಪಿ ಪೇಜಾವರ ಮಠದವರೆಗೆ ಬೃಹತ್ ಜಾಥಾ ನಡೆಸಲಾಗುವುದು. ಮೊದಲು ಶ್ರೀ ಕೃಷ್ಣ ದೇವರ ದರ್ಶನ ಪಡೆದು ನಂತರ ಬೆಳಗ್ಗೆ 11 ರಿಂದ ಪರ್ಯಾಯ ಪೀಠಾಧೀಶರಾದ ಪುತ್ತಿಗೆ ಉಭಯ ಶ್ರೀಪಾದರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ಸುಶ್ರೀಂದ್ರ ಶ್ರೀಪಾದರ ಅಧ್ಯಕ್ಷತೆಯಲ್ಲಿ ರಾಜ್ಯಾಂಗಣದಲ್ಲಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 8.15 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಶ್ರೀಗಳನ್ನು ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ , ವಿ ಹಿಂಪ ರಾಜ್ಯಾಧ್ಯಕ್ಷ ಪ್ರೊ ಎಂ ಬಿ ಪುರಾಣಿಕ್ , ಶಾಸಕರಾದ ವೇದವ್ಯಾಸ ಕಾಮತ್ , ಹರೀಶ್ ಪೂಂಜ , ಭರತ್ ಶೆಟ್ಟಿ , ಮಂಜುನಾಥ ಭಂಡಾರಿ , ಮೇಯರ್ ಸುಧೀರ್ ಶೆಟ್ಟಿ , ಕ್ಯಾ ಬ್ರಿಜೇಶ್ ಚೌಟ , ಭಜರಂಗದಳದ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್ ಸೇರಿದಂತೆ ಅನೇಕ ಗಣ್ಯರು ಸ್ವಾಗತಿಸಲಿದ್ದಾರೆ.
ಪೇಜಾವರ ಶ್ರೀಗಳ ಮೂಲಕ ಅಯೋಧ್ಯೆಯಲ್ಲಿ ಸೇವೆಯನ್ನು ಕೊಟ್ಟಂತಹ ಮತ್ತು ದರ್ಶನ ಪಡೆದ ಎಲ್ಲಾ ಭಕ್ತರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಡುಪಿಯ ನಿಕಟಪೂರ್ವ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಅವರು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.