ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಹೆಸರು ಭಾರತೀಯರು ಮರೆಯುವಂತಿಲ. ಅವರ ಸಾಧನೆ ಅನನ್ಯ. ಶಾಸ್ತ್ರಿ ಅವರು ಹುಟ್ಟಿದ್ದು ಉತ್ತರ ಪ್ರದೇಶದ ವಾರಣಾಸಿಯ ಮೊಗಲ್ಸಲಾಯಿಯಲ್ಲಿ. ಶಾರದಾಪ್ರಸಾದ ವರ್ಮ ಮತ್ತು ರಾಮದುಲಾರಿ ದೇವಿಯವರ ಮಗ ಲಾಲ್ ಬಹದ್ದೂರ್ ವರ್ಮನಾಗಿ ಅ.2. 1904ರಂದು ಜನಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರೀರವರ ಕುಟುಂಬ ಸ್ವಾತಂತ್ರ ಹೋರಾಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಶಾಸ್ತ್ರೀಜಿ ಅಧ್ಯಾಪಕರಾದ ನಿಶ್ಕಾಮೇಶ್ವರ ಮಿಶ್ರಾ ಅವರ ಒಡನಾಟದಿಂದ ಅವರಲ್ಲಿ ದೇಶಭಕ್ತಿ ಉದ್ದೀಪನಗೊಂಡಿತು. ಅಲ್ಲದೇ ಅವರ ಶಿಕ್ಷಣಕ್ಕೆ ಧನಸಹಾಯವನ್ನೂ ಮಿಶ್ರಾರವರೇ ಮಾಡುತ್ತಿದ್ದರು. ಮಿಶ್ರಾರವರ ಪ್ರಭಾವಕ್ಕೊಳಗಾಗಿ ಶಾಸ್ತ್ರಿ ಅವರು ಸ್ವಾಮಿ ವಿವೇಕಾನಂದ, ತಿಲಕ್, ಗಾಂಧಿ ಮತ್ತು ಅನಿಬೆಸೆಂಟ್ ಸೇರಿದಂತೆ ಇತರ ಪ್ರಮುಖ ವ್ಯಕ್ತಿಗಳ ಹಲವಾರು ಕೃತಿಗಳನ್ನು ಓದಿದರು. ಇದು ಅವರಿಗೆ ಸ್ವಾತಂತ್ಯ ಹೋರಾಟಕ್ಕೆ ಧುಮುಕುವಲ್ಲಿ ಪ್ರೇರಣೆಯಾಯಿತು.
1921ರಲ್ಲಿ ಅವರು 10ನೇ ತರಗತಿ ಅಭ್ಯಸಿಸುತ್ತಿದ್ದ ಸಂದರ್ಭ ಪರೀಕ್ಷೆಗೆ ಕೇವಲ ಮೂರು ತಿಂಗಳು ಬಾಕಿ ಇತ್ತು. ಅದೇ ಸಮಯದಲ್ಲಿ ಮಹಾತ್ಮಾ ಗಾಂಧಿ ಮತ್ತು ಮದನ್ ಮೋಹನ್ ಮಾಳವೀಯ ನೇತ್ವದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಬಹಿಷ್ಕರಿಸಲು ಕರೆ ನೀಡಲಾಯಿತು. ಆ ಪ್ರಕಾರ ಶಾಸ್ತ್ರೀಜಿ ಶಾಲಾ ತರಗತಿಗಳನ್ನು ಬಹಿಷ್ಕರಿಸಿದರಲ್ಲದೇ ಇತರರಿಗೂ ತರಗತಿ ಬಹಿಷ್ಕರಿಸುವಂತೆ ಪ್ರೇರಣೆ ನೀಡಿದರು. ಇದಕ್ಕಾಗಿ ಅವರು ಜೈಲು ಸೇರಬೇಕಾದರೂ ಅವರನ್ನು ಅಪ್ರಾಪ್ತ ರೆಂದು ಬಿಡುಗಡೆಗೊಳಿಸಲಾಯಿತು.
ಜೆ.ಬಿ.ಕೃಪಲಾನಿಯವರು ಬನಾರಸ್ ಹಿಂದೂ ಯೂನಿವರ್ಸಿಟಿಯ ನಿವೃತ ಅಧ್ಯಾಪಕರಾಗಿದ್ದರು. ಕಾಂಗ್ರೆಸ್ನ ಯುವ ಕಾರ್ಯಕರ್ತರಿಗೆ ದೇಶಭಕ್ತಿಯ ಶಿಕ್ಷಣದ ಅಗತ್ಯತೆಯನ್ನು ಮನಗಂಡ ಜೆ.ಬಿ.ಕೃಪಲಾನಿ, ಅವರ ಸ್ನೇಹಿತರಾಗಿದ್ದ ವಿ. ಎನ್. ವರ್ಮ ಮತ್ತು ಶಿವ ಪ್ರಸಾದ್ ಗುಪ್ತ ಜೊತೆಗೂಡಿ ಕಾಶಿ ಅಧ್ಯಯನ ಪೀಠವನ್ನು ಸ್ಥಾಪಿಸಿದರು. ಅಲ್ಲಿ ತತ್ವಶಾಸ್ತ್ರ ಪದವಿಯಲ್ಲಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಲಾಲ್ ಬಹದ್ದೂರ್ ವರ್ಮ ‘ಶಾಸ್ತ್ರಿ’ (ವಿದ್ವಾಂಸ) ಎಂಬ ಬಿರುದನ್ನು ಪಡೆದರು. ತದನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ಪ್ರಸಿದ್ಧಿ ಪಡೆದರು.
ರಾಜಕೀಯ ಸಾಧನೆ : ಸ್ವಾತಂತ್ರ್ಯ ನಂತರ 1947 ಗೋವಿಂದ ವಲ್ಲಭ ಪಂಥರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಶಾಸ್ತ್ರೀಜಿ ಗೃಹ ಮಂತ್ರಿಯಾಗಿದ್ದದರು. ಅಲ್ಲದೇ ಇದೇ ಸಂದರ್ಭದಲ್ಲಿ ಮೊದಲ ಮಹಿಳಾ ನಿರ್ವಾಹಕಿಯನ್ನೂ ನೇಮಿಸಿದರು. ಪ್ರತಿಭಟನೆ ಸಂಭವಿಸುವಾಗ ಪೊಲೀಸರಿಗೆ ಜನರ ಗುಂಪನ್ನು ತಹಬದಿಗೆ ತರಲು ಅಥವಾ ಚದುರಿಸಲು ಲಾಠಿಯ ಬದಲಾಗಿ ಜಲ ಫಿರಂಗಿಗಳನ್ನು ಬಳಸಲು ಸೂಚಿಸಿದರು. ತಮ್ಮ ಕಾರ್ಯಾವಧಿಯಲ್ಲಿ ಭಾರತಕ್ಕೆ ವಲಸೆ ಬರುವವರಿಗೆ ಸೂಕ್ತ ಮಾರ್ಗೋಪಾಯ ಕಲ್ಪಿಸುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್ನ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಕೇಂದ್ರ ಸಚಿವರಾಗಿ ನಂತರ ಪ್ರಧಾನ ಮಂತ್ರಿಯಾಗಿ ಸೇವೆಸಲ್ಲಿಸಿದರು.
ರಾಜಕೀಯದಲ್ಲಿನ ಪ್ರಮುಖ ಸಂದರ್ಭ : 1965ರ ಭಾರತ ಪಾಕ್ ಯುದ್ಧದ ಸಂದರ್ಭ ಶಾಸ್ತ್ರೀಜಿ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯನ್ನು ಕೂಗಿದರು. ಇದು ಭಾರತದ ಸೇನೆ ಪಾಕಿಸ್ಥಾನದ ಮೇಲೆ ಯುದ್ಧ ಗೆದ್ದಾಗ ಮಾಡಿದ ಘೋಷಣೆ. ಆ ಸಂದರ್ಭ ಆಹಾರದ ಕೊರತೆ ಕಾಡುತ್ತಿತ್ತು. ಅಮೇರಿಕ ಕಳಪೆ ಗುಣಮಟ್ಟದ ಆಹಾರವನ್ನು ಕಳಿಸುತ್ತಿತ್ತು. ಇದರಿಂದ ಕುಪಿತರಾದ ಶಾಸ್ತ್ರೀಜಿ ಅಮೇರಿಕದ ಆಹಾರದ ಸರಬರಾಜನ್ನು ನಿಲ್ಲಿಸಲು ಹೇಳಿದರಲ್ಲದೆ ದೇಶದ ನಿವಾಸಿಗಳಿಗೆ ವಾರದಲ್ಲಿ ಸೋಮವಾರದ ಊಟವನ್ನು ಬಿಡುವಂತೆ ಹೇಳಿದ್ದರು.ಇದರಿಂದ ಆಹಾರ ಸಮಸ್ಯೆ ಬಗೆಹರಿಸಿದರು. ತದನಂತರ ಪಾಕಿಸ್ಥಾನವು ಯುದ್ಧದಲ್ಲಿ ಸೋತು ತಾಷ್ಕೆಂಟ್ ಒಪ್ಪಂದಕ್ಕೆ ಬರಲಾಯಿತು. ಈ ಒಪ್ಪಂದದ ಬಳಿಕ ಅವರು ಸೋವಿಯತ್ನ ತಾಷ್ಕೆಂಟ್ನಲ್ಲಿ ಮರಣಹೊಂದಿದರು. ಆದರೆ ಅವರ ಸಾವಿನ ಸುತ್ತ ಅನುಮಾನದ ಹುತ್ತವಿದೆ.
1966 ರಲ್ಲಿ ಅವರಿಗೆ ಭಾರತದ ಅತ್ಯುನ್ನತ ನಾಗರೀಕ ಪುರಸ್ಕಾರ “ಭಾರತ ರತ್ನ” ವನ್ನು ಮರಣೋತ್ತರವಾಗಿ ನೀಡಲಾಗಿದೆ. ಸರಳ ಸಜ್ಜನಿಕೆಯ ಪ್ರಾಮಾಣಿಕ ಸಮಗೃತೆ ಮತ್ತು ನಿಸ್ವಾರ್ಥತೆಯನ್ನು ಹೊಂದಿದ ನಮ್ಮ ಎರಡನೇ ಪ್ರಧಾನಿಯಗಿದ್ದ ಶಾಸ್ತ್ರೀಜಿ ಯವರನ್ನು ನೆನೆಯುವುದೇ ಅಪರೂಪ.
‘ಜೈ ಜವಾನ್ ಜೈ ಕಿಸಾನ್’
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.