ಬೆಂಗಳೂರು: ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ವರದಿ ಪಡೆದಿರುವುದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ. ಸರ್ಕಾರ ಬೆಂಕಿಯ ಜೊತೆ ಆಟವಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಪಕ್ಷ ಜಾತ್ಯತೀತ ಅಂತ ಕರೆಯುವ ಪಕ್ಷಕ್ಕೆ ಜಾತಿಗಳ ಮೇಲೆ ಪ್ರತಿ ಬರುತ್ತದೆ. ಚುನಾವಣೆ ಹತ್ತಿರ ಬಂದಾಗ ಜಾತಿ ಸಮಾವೇಶ, ಸುಳ್ಳು ಆಶ್ವಾಸನೆ ಕೊಡುವುದು ಮಾಡುತ್ತಾರೆ. 2017 ರಲ್ಲಿ ಸಿದ್ದರಾಮಯ್ಯ ಅವರು ಎಲ್ಲ ಜಾತಿಗಳ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಮಾಡಲು ಸೂಚಿಸಿದ್ದರು. ಅವರ ಉದ್ದೇಶ ಬೇರೆ ಇತ್ತು. ಜಾತಿ ಗಣತಿ ಮಾಡುವ ಅಧಿಕಾರದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿದೆ ಅದನ್ನು ತಪ್ಪಿಸಲು ಇವರು ಶೈಕ್ಷಣಿಕ, ಸಾಮಾಜಿಕ ಅಧ್ಯಯನ ಅಂತ ಹೇಳಿ ಉದ್ದೇಶ ಒಂದು ಆದೇಶ ಒಂದು ಆಗಿರುವುದರಿಂದ ಈ ಗೊಂದಲ ಸೃಷ್ಟಿಯಾಯಿತು. ಕಾಂತರಾಜ ವರದಿ ಸಿದ್ದವಾದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು ಆಗ ಚುನಾವಣೆ ಇದ್ದ ಕಾರಣ ವರದಿ ಸ್ವೀಕಾರ ಮಾಡಲಿಲ್ಲ. ಆಗ ವರದಿಯ ಬಗ್ಗೆ ಸಾಕಷ್ಡು ಗೊಂದಲ ಇತ್ತು. ಈಗ ಕೊಟ್ಟಿರುವ ವರದಿಯಲ್ಲಿಯೂ ಗೊಂದಲ ಇದೆ. ಇವರು 5.82 ಕೋಟಿ ಜನರನ್ನು ಸಂಪರ್ಕ ಮಾಡಿದ್ದೇವೆ ಅಂತ ಹೇಳುತ್ತಾರೆ. ಆದರೆ, ಬಹುತೇಕ ಜನರು ತಮ್ಮನ್ನು ಸಂಪರ್ಕ ಮಾಡಿಲ್ಲ ಎನ್ನುತ್ತಾರೆ. ಈಗ ಕೊಟ್ಟಿರುವ ವರದಿ ಚೌ ಚೌ ವರದಿ. ಡಾಟಾ ಕಾಂತರಾಜ ಅವರದು, ಜಯಪ್ರಕಾಶ್ ಹೆಗ್ಡೆ ಅವರು ವರದಿ ನನ್ನದು ಅಂತ ಹೇಳಿದ್ದಾರೆ. ಸಿಎಂ ಜಯಪ್ರಕಾಶ್ ಹೆಗ್ಡೆ ಅವರ ಅವಧಿ ವಿಸ್ತರಿಸಿ ರಾಜಕೀಯ ಕಾರಣಕ್ಕೆ ವರದಿ ಪಡೆದಿದ್ದಾರೆ ಎಂದು ಆರೋಪಿಸಿದರು.
ಜಾತಿ ಸಮೀಕ್ಷೆ ನಮ್ಮ ವಿರೋಧವಿಲ್ಲ. ಜಾತಿ ಸಂಖ್ಯೆಯ ಜೊತೆಗೆ ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಮೇಲೆತ್ತಬೇಕು ಎನ್ನುವ ಬದ್ದತೆ ನಮಗಿದೆ. ಅದಕ್ಕಾಗಿಯೇ ನಾವು ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈಗ ಇವರು ತೆಗೆದುಕೊಂಡ ವರದಿಯ ಬಗ್ಗೆ ಸರ್ಕಾರ ಯಾಕೆ ಮುಚ್ಚು ಮರೆ ಮಾಡುತ್ತಿದ್ದಾರೆ. ಈ ಬಗ್ಗೆ ಮುಕ್ತ ಚರ್ಚೆಯಾಗಬೇಕು. ಹಿಂದುಳಿದ ವರ್ಗದಲ್ಲಿ150 ಜಾತಿಗಳನ್ನು ಸೇರಿಸಿದ್ದಾರೆ. ಅವರಿಗೆ ಮೀಸಲಾತಿಯ ಬಗ್ಗೆ ಚರ್ಚೆಯಾಗಬೆಕು. ಹಿಂದುಳಿದವರಲ್ಲಿ ಅತಿ ಹಿಂದುಳಿದ ಕಟ್ಟ ಕಡೆಯ ಸಮುದಾಯಗಳಿಗೆ ಮೀಸಲಾತಿ ಪ್ರಯೋಜನ ಸಿಗುತ್ತಿಲ್ಲ. ಅವರಿಗೆ ಸೌಲಭ್ಯ ಸಿಗಬೇಕು. ಮುಖ್ಯಮಂತ್ರಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಅದು ಅಕ್ಷಮ್ಯ ಅಪರಾಧ ಎಂದು ಹೇಳಿದರು.
ಸರ್ಕಾರದ ನಡವಳಿಕೆಯಿಂದ ಸಮಾಜದಲ್ಲಿ ಅಶಾಂತಿ ಮೂಡುತ್ತಿದೆ. ಅವರ ಸಂಪುಟದ ಸಚಿವರೆ ಅಪಸ್ವರ ಎತ್ತಿದ್ದಾರೆ. ನಿಮ್ಮ ಸಂಪುಟದಲ್ಲಿ ಒಗ್ಗಟ್ಟಿಲ್ಲವಾ ? ಬದ್ದತೆ ಇಲ್ಲವೆ . ಜಾತಿ ಸಮೀಕ್ಷೆ ವಿಚಾರದಲ್ಲಿ ಸರ್ಕಾರ್ ಡಬಲ್ ಗೇಮ್ ಆಡುತ್ತಿದ್ದು, ಚೂಟುವವರೂ ಇವರೇ, ರಮಿಸುವವರೂ ಇವರೇ, ಬಡವರು, ತುಳಿತಕ್ಕೊಳಗಾದವರ ಜೊತೆ ಆಟ ಆಡುವುದು ಸರಿಯಲ್ಲ. ಸಮಾಜದಲ್ಲಿ ಗೊಂದಲ ಉಂಟು ಮಾಡುವ ಕೆಲಸ ಮಾಡಬೇಡಿ. ವರದಿ ಮಾಡಿದವರೊಬ್ಬರು ನೀಡುವವರೊಬ್ಬರು. ಸಿಎಂ ವರದಿ ಸ್ವೀಕಾರ ಮಾಡುತ್ರಾರೆ ಅವರ ಸಚಿವರು ಅದನ್ನು ವಿರೋದ ಮಾಡುತ್ತಾರೆ ಏನಿದು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇದೆ. ಕೋರ್ಟ್ ಆದೇಶ ಬಂದ ತಕ್ಷಣ ಕೇಂದ್ರ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಸ್ವೀಕಾರ ಮಾಡಿರುವ ವರದಿಯಲ್ಲಿ 70 ಲಕ್ಷ ಜನ ಮುಸ್ಲೀಮರಿದ್ದಾರೆ ಎಂದು ಸೋರಿಕೆಯಾದ ವರದಿಯಲ್ಲಿ ಮಾಹಿತಿ ಇದೆ. ಹಾಗಿದ್ದರೆ ಅವರು ಅಲ್ಪ ಸಂಖ್ಯಾತರು ಹೇಗೆ ಆಗುತ್ತಾರೆ ? ರಾಜ್ಯದ ಬಹು ಸಂಖ್ಯಾತ ಜಾತಿಗಳಿಗಿಂತ ಅವರೇ ಹೆಚ್ಚಿನ ಜನಸಂಖ್ಯೆ ಇದ್ದಾರೆ ಎಂದರೆ ಅವರು ಹೇಗೆ ಅಲ್ಪ ಸಂಖ್ಯಾತರಾಗುತ್ತಾರೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಪಾಕ್ ಪರ ಘೋಷಣೆ ಕೂಗಿರುವುದು ಎಫ್ ಎಸ್ ಎಲ್ ವರದಿಯಲ್ಲಿ ಸ್ಪಷ್ಟವಾಗಿದೆ ಎಂಬ ಮಾಹಿತಿ ಇದೆ. ಘೊಷಣೆ ಕೂಗಿದವರು ಭಯೋತ್ಪಾದಕರಿಗೆ ಸಹಕಾರ ನೀಡುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಗಳಿವೆ. ಸರ್ಕಾರ ಯಾವ ಕಾರಣಕ್ಕೆ ವರದಿ ಮುಚ್ಚಿಡಲು ಪ್ರಯತ್ನ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.