ಬೆಂಗಳೂರು: ಸಂವಿಧಾನ ಜಾಗೃತಿ ದಿನದ ಹೆಸರಿನಲ್ಲಿ ಸಂವಿಧಾನಕ್ಕೇ ಅಪಮಾನ ಮಾಡುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಗರದ ಅರಮನೆ ಮೈದಾನದಲ್ಲಿ ಸರಕಾರಿ ಖರ್ಚಿನಲ್ಲಿ ಕರ್ನಾಟಕ ಸರಕಾರದ ವತಿಯಿಂದ ಆಯೋಜಿಸಿದ್ದÀ ಸಂವಿಧಾನ ಜಾಗೃತಿ ದಿನದಲ್ಲಿ ಸಂವಿಧಾನ ಜಾಗೃತಿ ಬಗ್ಗೆ ಮಾತನಾಡಿದ್ದು ಕಡಿಮೆ. ಬದಲಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದು, ಸುಳ್ಳು ಆರೋಪ ಹೊರಿಸಿದ್ದು, ತಪ್ಪು ಭಾವನೆ ಬರುವಂತೆ ಸುಳ್ಳು ಸುದ್ದಿಯನ್ನು ಹರಡಿಸಿದ್ದು- ಇದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. 4 ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದು, 2 ಬಾರಿ ಬಹುಮತ ಪಡೆದು ಜನರಿಂದ ಆಯ್ಕೆಯಾದ ಪ್ರಧಾನಮಂತ್ರಿ. ಅವರನ್ನು ಒಂದು ಸರಕಾರದ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಟೀಕೆ ಮಾಡುವುದೇ ಸಂವಿಧಾನ ವಿರೋಧಿ ಕೃತ್ಯ ಎಂದು ತಿಳಿಸಿದರು.
ಪ್ರಧಾನಮಂತ್ರಿಯವರನ್ನು ಟೀಕಿಸಲು ನಿಮಗೆ ಬೇರೆ ವೇದಿಕೆಗಳಿವೆ. ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲ ಮುಖಂಡರು ಕೇವಲ ಪ್ರಧಾನಮಂತ್ರಿಯವರ ವಿರುದ್ಧ ಟೀಕೆ, ಅಪಪ್ರಚಾರ, ನಿಂದನೆಗೇ ಸರಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನು ದುರ್ಬಳಕೆ ಮಾಡಿಕೊಂಡದ್ದು ಖಂಡನೀಯ. ಇದಕ್ಕಾಗಿ ಆಯೋಜಕರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ವಾಸ್ತವಿಕ ನೆಲೆಯಲ್ಲಿ ಸಂವಿಧಾನ ವಿರೋಧಿಯಾಗಿ ವರ್ತನೆ ಮಾಡಿರುವುದೇ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.
ಶ್ರೀಮತಿ ಇಂದಿರಾ ಗಾಂಧಿಯವರು ಕಾಂಗ್ರೆಸ್ ಸರಕಾರದ ಪ್ರಧಾನಮಂತ್ರಿ ಆಗಿದ್ದಾಗ 1975ರಲ್ಲಿ ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ, ನಾಗರಿಕ ಹಕ್ಕುಗಳನ್ನೆಲ್ಲ ದಮನ ಮಾಡಿ, ವಿರೋಧ ಪಕ್ಷಗಳ ನಾಯಕರನ್ನೆಲ್ಲ ಜೈಲಿಗೆ ಹಾಕಿ, ಮಾಧ್ಯಮ ಸ್ವಾತಂತ್ರ್ಯ ಕಿತ್ತುಕೊಂಡು ಸರ್ವಾಧಿಕಾರ ಹೇರಿದ್ದರು ಎಂದು ಸಿ.ಟಿ.ರವಿ ಅವರು ನೆನಪಿಸಿದರು.
ಬಹುಶಃ ಅವತ್ತು ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದರು. ಇವತ್ತು ಅವರು ಸಿಎಂ ಆಗಿದ್ದಾರೆ. ಅವತ್ತು ವಿಪಕ್ಷದಲ್ಲಿದ್ದು ಇಂದಿರಾಗಾಂಧಿಯವರ ಕಟು ಟೀಕಾಕಾರರಾಗಿದ್ದರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆರ್ಟಿಕಲ್ 356 ದುರ್ಬಳಕೆ ಮಾಡಿ 41 ಬಾರಿ ಕಾಂಗ್ರೆಸ್ಸೇತರ ರಾಜ್ಯ ಸರಕಾರಗಳನ್ನು ವಜಾ ಮಾಡಿದ್ದರು. ಅದು ಸಂವಿಧಾನವಿರೋಧಿ ಕೃತ್ಯ. ನಿನ್ನೆ ಕಮ್ಯುನಿಸ್ಟ್ ಸ್ನೇಹಿತರು ಆ ವೇದಿಕೆಗೆ ಬಂದಿದ್ದರು. ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ಸಂವಿಧಾನದ ದುರ್ಬಳಕೆ ಮಾಡಿಕೊಂಡು ಕೇರಳದ ಮೊದಲ ಕಮ್ಯುನಿಸ್ಟ್ ಸರಕಾರವನ್ನು ವಜಾ ಮಾಡಿತ್ತು ಎಂದು ವಿವರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾಜವಾದ ಮತ್ತು ಜಾತ್ಯತೀತ ಎಂಬ ಎರಡು ಪದಗಳನ್ನು ಬರೆದಿರಲಿಲ್ಲ. ಚರ್ಚೆ ನಡೆಸಿ ಅದನ್ನು ಸೇರಿಸಿದ್ದೂ ಅಲ್ಲ. ತುರ್ತು ಪರಿಸ್ಥಿತಿ ಇದ್ದ ಸಂದರ್ಭದಲ್ಲಿ, ಈ ಶಬ್ದಗಳನ್ನು ತುರುಕುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಇದು ಸಂವಿಧಾನವಿರೋಧಿ ಕೃತ್ಯ ಎಂದು ವಿವರಿಸಿದರು.
ನಮ್ಮ ಸಂವಿಧಾನಕ್ಕೆ ಇದುವರೆಗೆ 106 ತಿದ್ದುಪಡಿಗಳಾಗಿವೆ. ಅದರಲ್ಲಿ 80ಕ್ಕೂ ಹೆಚ್ಚು ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ. ಅದರಲ್ಲೂ ವಿಶೇಷವಾಗಿ ತುರ್ತು ಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ, ಎಲ್ಲ ವಿರೋಧ ಪಕ್ಷಗಳ ನಾಯಕರನ್ನು ಜೈಲಿನಲ್ಲಿ ಇಟ್ಟ ಸಂದರ್ಭದಲ್ಲಿ, ನಾಗರಿಕ ಹಕ್ಕುಗಳ ದಮನ ಆದಾಗ, 1975-77ರ ತುರ್ತು ಪರಿಸ್ಥಿತಿ ಅವಧಿಯಲ್ಲೇ ಸಂವಿಧಾನದ 45 ತಿದ್ದುಪಡಿ ಮಾಡಲಾಗಿತ್ತು ಎಂದು ಸಿ.ಟಿ.ರವಿ ಅವರು ತಿಳಿಸಿದರು.
ಈಗ ಏಕಾಏಕಿ ಅವರಿಗೆ ಸಂವಿಧಾನದ ಬಗ್ಗೆ ನೆನಪಾಗಿರುವುದು ಸಂವಿಧಾನದ ಬಗ್ಗೆ ಕಾಳಜಿಯಿಂದಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರೀತಿಯಿಂದಲೂ ಅಲ್ಲ; ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು, ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರ ಸಹಾಯಕರಾಗಿದ್ದು, ಅವರನ್ನು ಸೋಲಿಸಿದ್ದ ವ್ಯಕ್ತಿಗೇ 1970ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಟ್ಟಿದ್ದಾರೆ ಎಂದು ಗಮನ ಸೆಳೆದರು. ಆಗ ಇಂದಿರಾ ಗಾಂಧಿಯವರೇ ಪ್ರಧಾನಿ ಆಗಿದ್ದರು ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.