ಬೆಂಗಳೂರು: ಮಾನ್ಯ ಮುಖ್ಯಮಂತ್ರಿಗಳು ಮತ್ತು ರಾಜ್ಯದ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ರೈತವಿರೋಧಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಪ್ರಗತಿಯ ಬಜೆಟ್ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯವನ್ನು 20 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಇದು ಎಂದು ಟೀಕಿಸಿದರು. ಯುವಕರಿಗೆ ಯಾವುದೇ ಒಂದು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಘೋಷಣೆ ಮಾಡಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮತ್ತು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಇವತ್ತು ಸನ್ಮಾನ್ಯ ಸಿದ್ದರಾಮಯ್ಯನವರು ತಮ್ಮ ಸಮಯ ವ್ಯರ್ಥ ಮಾಡಿದ್ದಾರೆ ಎಂದು ತಿಳಿಸಿದರು.
ಈ ಬಜೆಟ್ನ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದಾರೆ ಎಂದು ಆಕ್ಷೇಪಿಸಿದ ಅವರು, ಮೊನ್ನೆ ದೆಹಲಿ ಚಲೋ ಮಾಡಿದ್ದರು. ದೆಹಲಿಯಲ್ಲಿ ರಾಜ್ಯ ಸರಕಾರದ ಗೌರವವನ್ನು ಹರಾಜು ಹಾಕುವ ಕೆಲಸ ಆಗಿತ್ತು. ಇವತ್ತು ಕೂಡ ಮುಖ್ಯಮಂತ್ರಿಗಳು ತಮ್ಮ ಬಜೆಟ್ನಲ್ಲಿ ಕೇಂದ್ರ ಸರಕಾರವನ್ನು ದೂರುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ಕೊಡದ ಬಜೆಟ್ ಇದಾಗಿದೆ. ಸಂಕಷ್ಟದಲ್ಲಿರುವ ರೈತರು ಬಜೆಟ್ ಮೂಲಕ ಪರಿಹಾರದ ನಿರೀಕ್ಷೆಯಲ್ಲಿದ್ದರು. ಇದರಡಿ ಮಹಿಳೆಯರಿಗೂ ಅನುಕೂಲ ಆಗುವುದಿಲ್ಲ. ಇವರು ತಮ್ಮ ಪ್ರಣಾಳಿಕೆಯಲ್ಲಿ ನೇಕಾರರ ಬಗ್ಗೆ ಮಾತನಾಡಿದ್ದರು. ನೇಕಾರರ ಪರವಾಗಿ ಯಾವುದೇ ಒಂದು ಯೋಜನೆಯನ್ನು ಘೋಷಣೆ ಮಾಡಿಲ್ಲ. ಯೋಜನೆ ಘೋಷಿಸುವುದು ಇರಲಿ; ಆ ನೇಕಾರರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ವಿಜಯೇಂದ್ರ ಅವರು ಟೀಕಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಭರವಸೆ ನೀಡಿದ್ದರು. ಅದರ ಬಗ್ಗೆಯೂ ಉಲ್ಲೇಖ ಮಾಡಿಲ್ಲ. ‘ನುಡಿದಂತೆ ನಡೆದ ಸರಕಾರ’ ಎಂದು ಕೊಚ್ಚಿಕೊಳ್ಳುತ್ತಾರೆ. ‘ನುಡಿದಂತೆ ನಡೆದ ಸರಕಾರ’ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದು, ರಾಜ್ಯದ ರೈತರು, ಬಡವರು, ದೀನದಲಿತರು, ನೇಕಾರರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿ ಎಲ್ಲ ವರ್ಗಕ್ಕೂ ನಿರಾಸೆ ಮೂಡಿಸಿದ ಬಜೆಟ್ ಇದು ಎಂದು ತಿಳಿಸಿದರು.
ಬರಗಾಲದ ಸಂದರ್ಭದಲ್ಲೂ ಕೃಷಿ ಮತ್ತು ಬೆಳೆ ಸಾಲದ ಮನ್ನಾ ಕುರಿತು ಉಲ್ಲೇಖ ಮಾಡಿಲ್ಲ. ಸರಕಾರಿ ನೌಕರರ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಇವರು ಮಾಡಿದ್ದಾರೆ. ಬರಗಾಲದ ಸಂದರ್ಭದಲ್ಲಿ ಯಾವುದೇ ರೀತಿಯ ಅನುಕೂಲ ಆಗದ ಬಜೆಟ್, ನಿಶ್ಚಿತವಾಗಿ ಇದು ಕರಾಳ ದಿನ ಎಂದರೂ ತಪ್ಪಾಗಲಾರದು ಎಂದು ನುಡಿದರು.
15ನೇ ಬಜೆಟ್ ಮಂಡಿಸುತ್ತಿರುವ ಒಬ್ಬ ಅನುಭವಿ ಮುಖ್ಯಮಂತ್ರಿ ಈ ರೀತಿ ಬಜೆಟ್ ಮಂಡಿಸಬಹುದೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ನಿಜವಾಗಲೂ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಒಂದು ದುರಂತವೇ ಸರಿ ಎಂದ ಅವರು, ರೈತರನ್ನೂ ಕಡೆಗಣಿಸಿದ್ದಾರೆ; ಮಹಿಳೆಯರನ್ನೂ ಕಡೆಗಣಿಸಿದ್ದಾರೆ; ನೇಕಾರರನ್ನೂ ಕಡೆಗಣಿಸಿದ್ದಾರೆ, ಯುವಕರನ್ನೂ ಕಡೆಗಣಿಸಿದ್ದಾರೆ, ಉತ್ತರ ಕರ್ನಾಟಕದ ಅಭಿವೃದ್ಧಿಯನ್ನೂ ಕಡೆಗಣಿಸಿದ ಸರಕಾರ ಬಹುಶಃ ರಾಜ್ಯದ ಜನರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.