ಅಂದು 2019ರ ಫೆಬ್ರುವರಿ 14. ದೇಶದೆಲ್ಲೆಡೆ ಯುವ ಜನರು ಪ್ರೇಮ ನಿವೇದನೆಯ ಬೆಚ್ಚನೆಯ ಭಾವದಲ್ಲಿ ಮುಳುಗಿದ್ದಾಗ ಭಾರತದ ಗಡಿಭಾಗದ ಪುಲ್ವಾಮದಲ್ಲಿ ರಾಷ್ಟ್ರ ರಕ್ಷಣೆಯ ಮಹಾನ್ ಕಾರ್ಯದಲ್ಲಿ ತಲ್ಲೀನರಾಗಿದ್ದ 40ಕ್ಕೂ ಹೆಚ್ಚು ಜನ ಸಿ.ಆರ್. ಪಿ. ಎಫ್ ಸೈನಿಕರು ಭಯೋತ್ಪಾಧಕರ ಆತ್ಮಾಹುತಿ ದಾಳಿಗೆ ಸಿಲುಕಿ ಪ್ರಾಣಚೆಲ್ಲಿ ಹುತಾತ್ಮರಾಗಿದ್ದರು. ಸ್ವತಂತ್ರ ಭಾರತದ ಚರಿತ್ರೆಯೊಳಗೆ ದಾಖಲಾದ ಒಂದು ಕರಾಳ ಕೃತ್ಯವಾಗಿ ಮಾತ್ರವಲ್ಲ, ಆ ಹೇಯ ಕೃತ್ಯ ನಡೆದಾಗ ನಮ್ಮ ದೇಶದ ರಾಜಕಾರಣಿಗಳು, ಬುದ್ಧಿಜೀವಿಗಳು ಹಾಗೂ ಕೆಲವು ಮಾಧ್ಯಮಗಳೂ ಸೇರಿದಂತೆ ನಾವು ನಡೆದುಕೊಂಡ ರೀತಿಯೂ ಕೂಡ ಒಂದು ಮರೆಯಲಾಗದ ಘಟನೆಯೇ ಹೌದು.
ಬಹುಶಃ ಜಗತ್ತಿನ ಇನ್ನಾವ ರಾಷ್ಟ್ರದೊಳಗೂ, ಆ ರಾಷ್ಟ್ರದ ಸಾರ್ವಭೌಮತೆಯನ್ನು, ಜನರ ಮಾನ ಪ್ರಾಣವನ್ನು ಕಾಪಾಡುವುದಕ್ಕಾಗಿಯೇ ಹುತಾತ್ಮರಾಗುವ ಸೈನಿಕರನ್ನು ಅಥವಾ ಸೇನಾ ವ್ಯವಸ್ಥೆಯನ್ನು ಅವಮಾನಿಸುವ, ರಾಷ್ಟ್ರದ ಸಂಕಟ ಕಾಲದಲ್ಲೇ ಸರ್ಕಾರದ ಮುಖ್ಯಸ್ಥರ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡುತ್ತಾ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನಗಳು ನಡೆದಿರಲಿಕ್ಕಿಲ್ಲ. ಈ ಕಾರಣಕ್ಕಾಗಿಯೂ ಭಾರತೀಯರು ಪುಲ್ವಾಮ ದುರ್ಘಟನೆಯನ್ನು ಎಂದಿಗೂ ಮರೆಯಲಿಕ್ಕಿಲ್ಲ. ನೇರವಾಗಿಯೇ ಯುದ್ಧ ಭೂಮಿಯಲ್ಲಿ ಹೋರಾಡಿ ಗೆಲ್ಲಲಾಗದ ಪಾಕಿಸ್ಥಾನ ಪ್ರೇರಿತ ಭಯೋತ್ಪಾಧಕ ಸಂಘಟನೆಯು ನಡೆಸಿದ ಈ ಕೃತ್ಯವನ್ನು ಕೇವಲ ಗುಪ್ತಚರ ವ್ವವಸ್ಥೆಯ ವೈಫಲ್ಯವೆಂದು ಸರಳೀಕರಿಸಿ ನೋಡಬೇಕಾಗಿಲ್ಲ. ಒಂದು ಪ್ರಜಾತಾಂತ್ರಿಕ ವ್ಯವಸ್ಥೆಯೊಳಗೆ ಇಂತಹದ್ದೊಂದು ದುರ್ಘಟನೆ ನಡೆದಾಗ ಆಳುವವರು, ಪ್ರತಿಪಕ್ಷಗಳ ನಾಯಕರು, ಬುದ್ಧಿಜೀವಿಗಳು ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ರಾಷ್ಟ್ರದ ಭವಿಷ್ಯ ನಿರ್ಧಾರವಾಗುತ್ತದೆ.
ದುರಂತವೆಂದರೆ ಪುಲ್ವಾಮದ ಹುತಾತ್ಮ ಸೈನಿಕರ ನೆತ್ತರ ಬಿಸಿ ಆರುವುದರೊಳಗೆ ಈ ದೇಶದ ರಾಜಕಾರಣಿಗಳು ಸರ್ಕಾರವನ್ನು ನಿಂದಿಸುವ ತಮ್ಮ ಕೀಳು ಮನಸ್ಥಿತಿಯ ಪ್ರದರ್ಶನವನ್ನು ಆರಂಭಿಸಿದ್ದರು. ಈ ಮನಸ್ಥಿತಿಗೆ ಪೂರಕವಾಗಿಯೇ ಬುದ್ಧಿಜೀವಿಗಳನೇಕರು ತಮ್ಮದೇ ನರೇಟಿವ್ಗಳನ್ನು ಹುಟ್ಟುಹಾಕುವ ಪ್ರಯತ್ನದಲ್ಲಿದ್ದರು. ಮಾಧ್ಯಮಗಳ ಸ್ಟುಡಿಯೋದೊಳಗೆ ಕುಳಿತ ಕೆಲವರು ಇಂತಹ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳಿಗೆ ಧ್ವನಿ ನೀಡಲಾರಂಭಿಸಿದ್ದರು. ಅಂದು ದೇಶ ಹುತಾತ್ಮ ಸೈನಿಕರರಿಗಾಗಿ ಕಣ್ಣೀರಾಗಿತ್ತು. ಬಲಿದಾನದ ಮೂಲಕ ಅಮರರಾದ ತಮ್ಮೂರ ಸೈನಿಕರ ಅಂತಿಮ ದರ್ಶನಕ್ಕಾಗಿ ಲಕ್ಷಾಂತರ ಜನ ಸಾಲುಗಟ್ಟಿ ನಿಂತಿದ್ದರು. ಸೈನ್ಯವು ಅಂದು ತೊಟ್ಟಿಕ್ಕಿದ್ದ ಸೈನಿಕರ ಪ್ರತೀ ಹನಿ ರಕ್ತಕ್ಕೂ ಪ್ರತಿಕಾರದ ಉತ್ತರವನ್ನು ನೀಡುವ ಹುಮ್ಮಸ್ಸಿನಲ್ಲಿದ್ದಾಗ, ದೇಶದ ಪ್ರಧಾನಿ ಶತ್ರುಸಂಹಾರಕ್ಕೆ ಬೇಕಾದ ಪೂರ್ಣ ಬೆಂಬಲವನ್ನು ಸೈನ್ಯಕ್ಕೆ ಘೋಷಿಸಿದ್ದರು. ಬಾಲಾಕೋಟ್ ಮೇಲೆ ನಡೆದ ಏರ್ ಸ್ಟ್ರೈಕ್ ಭಾರತವು ನೀಡಿದ ಒಂದು ಸ್ವಾಬಿಮಾನದ ಉತ್ತರವಾಗಿತ್ತು.
ಕಾಶ್ಮೀರದ ನೆಲದಲ್ಲಿ ಹರಿದ ಹುತಾತ್ಮರ ರಕ್ತಕ್ಕೆ ಸಲ್ಲಿಸಬಹುದಾದ ಶ್ರೇಷ್ಠ ಗೌರವವೇನು? ಇದನ್ನು ದುರ್ಘಟನೆ ನಡೆದು ಐದು ವರ್ಷಗಳಾಗುತ್ತಿರುವ ಈ ದಿನ ಮತ್ತೊಮ್ಮೆ ನಾವೆಲ್ಲ ಚಿಂತನೆ ನಡೆಸಲೇಬೇಕಿದೆ. ನ್ಯಾಯಬದ್ಧವಾಗಿ ಕಾಶ್ಮೀರದ ಹಕ್ಕು ಭಾರತದ್ದಾದರೂ, ಮತ್ತೆ ಮತ್ತೆ ಅದನ್ನು ಕೆದಕ್ಕುತ್ತಲೇ, ಕಾಶ್ಮೀರದ ಜನಜೀವನವನ್ನು, ಭಾರತೀಯರ ನೆಮ್ಮದಿಯನ್ನು ಕೆಡಿಸಲೆಂದೇ ಕಾದಿರುವ ಶತ್ರುಗಳಿಗೆ ತಕ್ಕ ಉತ್ತರವನ್ನು ಭಾರತ ನೀಡಬೇಕಿರುವುದು ನ್ಯಾಯ ಮಾತ್ರವಲ್ಲ, ಧರ್ಮವೂ ಹೌದು.
ಕಳೆದ ಐದು ವರ್ಷಗಳಲ್ಲಿ ದೇಶದ ಚಿತ್ರಣ ಬದಲಾದುದು ಮಾತ್ರವಲ್ಲ, ಕಾಶ್ಮೀರದಲ್ಲಿ ನಡೆಯುತ್ತಿದ್ದ ಉಗ್ರರ ಅಟ್ಟಹಾಸಕ್ಕೂ ಅಂತ್ಯಹಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕಾಶ್ಮೀರದ ಬೀದಿಗಳಲ್ಲಿ ನಿಂತು ಸೈನಿಕರಿಗೆ ಕಲ್ಲುತೂರಾಟ ನಡೆಸುತ್ತಿದ್ದ ರಾಷ್ಟ್ರವಿರೋಧಿ ಶಕ್ತಿಗಳನ್ನು ನಿರ್ಮೂಲನಗೈಯಲಾಗಿದೆ. ಮಾನವ ಹಕ್ಕುಗಳ ನೆಪದಲ್ಲಿ ಸೈನಿಕರನ್ನೇ ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸುತ್ತಿದ್ದ ಘಟನೆಗಳೂ ಕೊನೆಯಾದಂತಿದೆ. ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಸರ್ಕಾರಿ ಆಶ್ರಯಗಳೆಲ್ಲಾ ಇಲ್ಲವಾಗಿದೆ. ಭಯೋತ್ಪಾಧಕರಿಗೆ ಸ್ವಾತಂತ್ರ್ಯ ಹೋರಾಟಗಾರರು ಎಂಬ ಸೋಗಲಾಡಿತನದ ಮುಖವಾಡ ತೊಡಿಸಿದ್ದ ವಿಚಾರವಾದಿಗಳು ಇಂದು ಗಾಢ ಮೌನಕ್ಕೆ ಶರಣಾಗಿದ್ದಾರೆ.
ಇವೆಲ್ಲ ಸಾಧ್ಯವಾದುದು ಆಕಸ್ಮಿಕವಾಗಿಯಲ್ಲ. ಪುಲ್ವಾಮದ ನೆಲದಲ್ಲಿ ಹುತಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿ ದೊರಕುವಂತಾಗಬೇಕು ಎಂದು, ಅಂದು ಚೆಲ್ಲಿದ್ದ ಪ್ರತಿ ಹನಿ ರಕ್ತಕ್ಕೂ ತಕ್ಕ ಉತ್ತರ ನೀಡುತ್ತೇವೆ ಎಂಬ ಸಂಕಲ್ಪದ ಪರಿಣಾಮವಿದು. ನಮ್ಮ ದೇಶಕ್ಕೆ ಉಗ್ರರ ದಾಳಿ ಎಷ್ಟು ಅಪಾಯಕಾರಿಯೋ ಅದಕ್ಕಿಂತ ಹೆಚ್ಚು ಅಪಾಯಕಾರಿಯಾದುದು ಉಗ್ರವಾದದ ಬಗೆಗೆ ನಾವೇ ಕಟ್ಟಿಕೊಂಡ ಉದಾರವಾದಿ ನಿಲುವುಗಳು. ಇಂತಹ ಅನರ್ಥಕಾರಿ ನಿಲುವುಗಳೇ ದಶಕಗಳ ಕಾಲ ಕಾಶ್ಮೀರದಲ್ಲಿ ನಡೆಯುತ್ತಿದ್ದ ಭಯೋತ್ಪಾಧಕ ಕೃತ್ಯಗಳನ್ನು ಸ್ವಾತಂತ್ರ್ಯ ಹೋರಾಟದೊಂದಿಗೆ ಸಮೀಕರಿಸಿ, ಉಗ್ರರನ್ನು ಹುತಾತ್ಮರೆನ್ನುವಂತೆ, ಸೈನಿಕರನ್ನು ಮಾನವ ಹಕ್ಕುಗಳ ವಿರೋಧಿಗಳು ಎಂಬಂತೆ ನರೆಟೀವ್ಗಳನ್ನು ಕಟ್ಟಿಕೊಂಡು ನಮ್ಮನ್ನು ನಾವೇ ದುರ್ಬಲಗೊಳಿಸಿಕೊಂಡೆವು. ಉಗ್ರವಾದದ ಹಿಂದಿದ್ದ ಮತೀಯ ಮೂಲಭೂತವಾದವನ್ನು ನಯವಾಗಿ ಮರೆಮಾಚಿ, ಶಿಕ್ಷಣ ವಂಚಿತ, ಬಡಜನರು ನಡೆಸುತ್ತಿರುವ ಹೋರಾಟವೆಂಬಂತೆ ಚಿತ್ರಣವನ್ನು ಕಟ್ಟಿ ಉಗ್ರವಾದವನ್ನೇ ಬೆಂಬಲಿಸಿಕೊಂಡು ಬಂದೆವು. ಇಂತಹ ಆತ್ಮವಂಚಕತನಕ್ಕೆ ದೇಶ ತೆತ್ತ ಬೆಲೆಯೇ ಪುಲ್ವಾಮದ ದಾಳಿ. ಆತ್ಮವಂಚಕ ನಡವಳಿಕೆಯಲ್ಲಿ ನಾವು ಮತ ಸಂಪಾದನೆಯ ದಾರಿಯನ್ನು ಹುಡುಕಿಕೊಂಡೆವು. ಅಧಿಕಾರದ ಗದ್ದುಗೆಗಳನ್ನು ದಶಕಗಳ ಕಾಲ ಕಾಪಾಡಿಕೊಂಡೆವು. ವೇದಿಕೆಗಳಲ್ಲಿ ಸೈನಿಕರ ಶೌರ್ಯವನ್ನು ಹೊಗುಳುತ್ತಾ, ನಮ್ಮ ಅಧಿಕಾರದ ಹಪಾಹಪಿಗಾಗಿ ಅದೇ ಸೈನಿಕರನ್ನು ಬಲಿನೀಡುತ್ತಾ ಬಂದೆವು. ಇಂತಹ ಮನಸ್ಥಿತಿಯೇ ಕಾಶ್ಮೀರವನ್ನು ಪ್ರಕ್ಷುಬ್ಧ ಗೊಳಿಸಿದ್ದು. ಹೀಗಾಗಿ ಉಗ್ರನಿಗ್ರಹ ಎನ್ನುವುದು ಸಂಕಲ್ಪವಾಗಲಿಲ್ಲ. ಬದಲಿಗೆ ಉಗ್ರರೇ ನಮ್ಮ ಅಧಿಕಾರಶಾಹಿ ವ್ಯವಸ್ಥೆಗೆ ಬಂಧುಗಳಾದರು.
ಪುಲ್ವಾಮದ ದಾಳಿಯು 40ಕ್ಕೂ ಹೆಚ್ಚು ಸೈನಿಕರ ಪ್ರಾಣವನ್ನು ಬಲಿತೆಗೆದುಕೊಂಡಾಗಲೂ ಉಗ್ರ ನಿಗ್ರಹಕ್ಕಿಂತಲೂ ಸರ್ಕಾರವನ್ನು ಕಿತ್ತೊಗೆಯುವ ಅವಕಾಶ ಎಂಬಂತೆ ರಾಜಕಾರಣಿಗಳು ಅರಚಿದ್ದು ಇದೇ ಕಾರಣಕ್ಕೆ. ಆದರೆ ದೇಶದ ಜನ ಎಚ್ಚೆತ್ತುಕೊಂಡಿದ್ದರು. ಸೈನಿಕರ ಸಾವಿಗೆ ಬಾಲಾಕೋಟ್ ಪ್ರತಿದಾಳಿಯ ಮೂಲಕ ಸೇಡು ತೀರಿಸಿಕೊಂಡಾಗಿತ್ತು. ಅದೂ ಅಂತಿಂಥ ದಾಳಿಯಲ್ಲ ಎನ್ನುವುದನ್ನು ಸೈನ್ಯಾಧಿಕಾರಿಗಳೇ ನೆನಪಿಸಿಕೊಂಡಿದ್ದರು. ಅವಕಾಶ ಕೊಟ್ಟರೆ ನಮ್ಮ ದೇಶದ ರಾಜಕಾರಣಿಗಳು ಎಂತಹ ನೀಚ ರಾಜಕಾರಣವನ್ನೂ ಮಾಡಬಲ್ಲರು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಮುಂದೆಯೇ ಇರುವಾಗ ಜನ ಎಚ್ಚೆತ್ತುಕೊಳ್ಳುವುದೊಂದೇ ಪರಿಹಾರವಾಗಿತ್ತು. ಪುಲ್ವಾಮದ ಬಳಿಕ ನಡೆದದ್ದೂ ಇದೇ. ದೇಶದ ಜನ ಯಾವ ಸುಳ್ಳು ಪ್ರಚಾರಗಳಿಗೂ ಕಿವಿಗೊಡಲಿಲ್ಲ. ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಸರ್ಕಾರದ ಜತೆಗೆ ನಿಲ್ಲುವ ಬದ್ಧತೆಯನ್ನು, ದೃಢತೆಯನ್ನು ಪ್ರದರ್ಶಿಸಿದರು.
ಹಾಗಿದ್ದರೆ ಪುಲ್ವಾಮದ ದಾಳಿಯನ್ನು ತಡೆಯಲಾಗುತ್ತಿರಲಿಲ್ಲವೇ ? ಖಂಡಿತಾ ಸಾಧ್ಯವಿತ್ತು. ಉಗ್ರರಿಗಾಗಿ ಮದ್ಯರಾತ್ರಿ ನ್ಯಾಯಾಲಯದ ಕದ ತಟ್ಟಿದ ರಾಜಕಾರಣದ ವೇಷತೊಟ್ಟ ದೇಶವಿರೋಧಿಗಳನ್ನು ಅಂದೇ ಮನೆಗೆ ಕಳುಹಿಸಿದ್ದರೆ, ಕಾಶ್ಮೀರದ ಬೀದಿಗಳಲ್ಲಿ ಪ್ರತ್ಯೇಕತೆಯ ಧ್ವನಿ ಮೊಳಗಿದಾಗಲೇ ಅದನ್ನು ಮಟ್ಟಹಾಕಿದ್ದಿದ್ದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರತ್ಯೇಕತಾವಾದಿಗಳನ್ನು ಸ್ವಾತಂತ್ರ್ಯ ಹೋರಾಟಗಾರರೆನ್ನುವ ಭ್ರಮೆಯ ವಾದಗಳನ್ನು ಮೂಲದಿಂದಲೇ ತೆಗೆದೆಸೆದಿದ್ದರೆ, ಸೈನಿಕರ ಕಾರ್ಯಾಚರಣೆಗಳನ್ನು ಮಾನವ ಹಕ್ಕುಗಳ ಹೆಸರಿನಲ್ಲಿ ಕಟ್ಟಿಹಾಕಿರದೇ ಇದ್ದಿದ್ದರೆ ಖಂಡಿತವಾಗಿಯೂ ಪುಲ್ವಾಮದ ದಾಳಿಯನ್ನು ತಡೆಯಬಹುದಾಗಿತ್ತು. ಪುಲ್ವಾಮ ಮಾತ್ರವೇನು, ದೇಶದ ಯಾವ ಮೂಲೆಯಲ್ಲೂ ಭಯೋತ್ಫಾಧಕ ಕೃತ್ಯವೇ ನಡೆಯದಂತೆ ತಡೆಯಬಹುದಾಗಿತ್ತು. ಆದರೆ, ನಾವು ಚಿವುಟಿ ಹಾಕಬೇಕಿದ್ದ ಕಳೆಗಿಡಗಳನ್ನೇ ಗೊಬ್ಬರ ಹಾಕಿ ಪೋಷಿಸಿದ್ದೆವು. ಹೀಗಾಗಿ ಅದರ ಫಲ ಉಣ್ಣಲೇ ಬೇಕಾಯಿತು.
ಬಲಿಷ್ಠವಾಗಿರುವ ನಮ್ಮ ಸೈನ್ಯವನ್ನು ಆಡಳಿತಶಾಹಿಯು ಅಧಿಕಾರದ ಆಸೆಗೆ ಕಟ್ಟಿಹಾಕಿರದೇ ಇದ್ದಿದ್ದರೆ ಭಯೋತ್ಪಾಧನೆಯ ನಿಗ್ರಹ ಸವಾಲಾಗುತ್ತಿರಲಿಲ್ಲ. ಉಗ್ರಗಾಮಿಗಳ ದಾಳಿಯನ್ನೂ, ಸೈನಿಕ ಕಾರ್ಯಾಚರಣೆಯನ್ನೂ ಕೀಳು ಅಭಿರುಚಿಯ ರಾಜಕಾರಣಕ್ಕೆ ಬಳಸಿಕೊಂಡ ಕಾರಣವೇ ಬಾರೀ ಬೆಲೆ ತೆರಬೇಕಾಯಿತು. ಉಗ್ರವಾದದ ಹಿಂದಿನ ಮಾನಸಿಕತೆಯನ್ನು ಅರಿಯದೆ, ಉಗ್ರಗಾಮಿಗಳನ್ನೇ ಅಮಾಯಕರು ಎನ್ನುವ ನಮ್ಮ ಸೋಗಲಾಡಿತನವನ್ನು ಬಿಡದಿದ್ದರೆ ಮತ್ತೆ ಮತ್ತೆ ಇಂತಹ ದಾಳಿಗಳಿಗೆ ನಮ್ಮ ವೀರ ಸೈನಿಕರು ಬಲಿಯಾಗುತ್ತಲೇ ಇರಬೇಕಾಗುತ್ತದೆ. ಹಾಗಾಗದಂತೆ ಎಚ್ಚೆತ್ತುಕೊಳ್ಳೋಣ. ಹುತಾತ್ಮ ವೀರರಿಗೆ ನಮ್ಮ ಗೌರವದ ಶ್ರದ್ಧಾಂಜಲಿಯನ್ನು ಸಲ್ಲಿಸೋಣ.
ಡಾ. ರೋಹಿಣಾಕ್ಷ ಶಿರ್ಲಾಲು
ಸಹಾಯಕ ಪ್ರಾಧ್ಯಾಪಕರು
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.