ನ್ಯೂಯಾರ್ಕ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯ ಅಪರಾಧಿ ಎಂದಿರುವ ಅವರು, ಉಭಯ ದೇಶಗಳ ನಡುವೆ ಮಾತುಕತೆ ಆರಂಭವಾಗಬೇಕಿದ್ದರೆ ಮೊದಲು ಭಯೋತ್ಪಾದನೆ ನಿಲ್ಲಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ನವಾಝ್ ಶರೀಫ್ ಅವರು ಬುಧವಾರ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣಕ್ಕೆ ಸುಷ್ಮಾ ಕಟು ತಿರುಗೇಟು ನೀಡಿದ್ದಾರೆ. ಶರೀಫ್ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಾರಲ್ಲದೇ ಶಾಂತಿ ಸ್ಥಾಪನೆಗೆ ನಾಲ್ಕು ಸೂತ್ರಗಳನ್ನು ನೀಡಿದ್ದರು.
ಇದಕ್ಕೆ ಉತ್ತರಿಸಿರುವ ಸುಷ್ಮಾ, ಶಾಂತಿ ಸ್ಥಾಪನೆಗೆ ನಾಲ್ಕು ಸೂತ್ರಗಳ ಅಗತ್ಯವಿಲ್ಲ, ಅದಕ್ಕೆ ಬೇಕಾಗಿರುವುದು ಒಂದೇ ಸೂತ್ರ ಅದು ಭಯೋತ್ಪಾದನೆಯ ನಿರ್ಮೂಲನೆ. ಅದನ್ನು ಮೊದಲು ಪಾಕಿಸ್ಥಾನ ಮಾಡಲಿ ಎಂದಿದ್ದಾರೆ.
’ನಾವು ಎದುರಿಸುತ್ತಿರುವ ದೊಡ್ಡ ಬೆದರಿಕೆ ಭಯೋತ್ಪಾದನೆಗೆ ಹೇಗೆ ನಾವು ಪ್ರತಿಕ್ರಿಯೆ ನೀಡುತ್ತೇವೆ ಎನ್ನುವುದರ ಮೇಲೆ ವಿಶ್ವ ಸಮುದಾಯದ ಭವಿಷ್ಯ ನಿಂತಿದೆ. ಭಯೋತ್ಪಾದನೆಗೆ ಸಹಾಯ ಮಾಡುವ ದೇಶಗಳು ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ’ ಎಂದು ಸುಷ್ಮಾ ಎಚ್ಚರಿಕೆ ನೀಡಿದ್ದಾರೆ.
ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ಗಳು ಸ್ವತಂತ್ರವಾಗಿ ಓಡಾಡುತ್ತಿದ್ದಾರೆ ಎಂದು ಪಾಕಿಸ್ಥಾನವನ್ನು ಹೆಸರಿಸುತ್ತಾ ಹೇಳಿದ ಅವರು, ಹೊಸ ದಾಳಿಗಳು ನಡೆಯುತ್ತಿವೆ. ಇತ್ತೀಚಿಗೆ ನಾವು ಇಬ್ಬರು ಪಾಕ್ ಉಗ್ರರನ್ನು ಜೀವಂತವಾಗಿ ಹಿಡಿದಿದ್ದೇವೆ. ಭಾರತವನ್ನು ಅಸ್ಥಿರಗೊಳಿಸುವುದು ಮತ್ತು ಕಾಶ್ಮೀರದೊಳಕ್ಕೆ ನುಗ್ಗುವುದು ಈ ಉಗ್ರರ ಗುರಿಯಾಗಿತ್ತು’ ಎಂದಿದ್ದಾರೆ.
ಅಲ್ಲದೇ ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂದ ಅವರು, ಗಂಭೀರ ಮತ್ತು ಖಚಿತತೆ ಇದ್ದರೆ ಮಾತ್ರ ಭಾರತ ಎಲ್ಲಾ ವಿಷಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.