ಮಂಗಳೂರು: ನರೇಂದ್ರ ಮೋದಿಜೀ ಮತ್ತೊಮ್ಮೆ ಪ್ರಧಾನಿ ಎಂಬ ವಾತಾವರಣ ಕರ್ನಾಟಕ ಮಾತ್ರವಲ್ಲ; ದೇಶದೆಲ್ಲೆಡೆ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಇಂದು ತಿಳಿಸಿದರು.
ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡದ ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು. ರಾಜ್ಯದಲ್ಲಿ ಎಲ್ಲ 28 ಕ್ಷೇತ್ರ ಗೆಲ್ಲಲು ನಾವು ಶ್ರಮಿಸಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಮತದಾರರು ಚುನಾವಣೆ ಬಗ್ಗೆ ಉತ್ಸಾಹದಿಂದಿದ್ದಾರೆ. ಕಾರ್ಯಕರ್ತರು ಕೂಡ ಮೋದಿ ಮತ್ತೊಮ್ಮೆ ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇಡೀ ದೇಶದಲ್ಲಿ ಲೋಕಸಭಾ ಚುನಾವಣೆಯನ್ನು ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ. ದೇಶ ಮಾತ್ರವಲ್ಲದೆ ಹೊರದೇಶಗಳಲ್ಲೂ ಐದಾರು ತಿಂಗಳಿನಿಂದ ಫಲಿತಾಂಶದ ಚರ್ಚೆ ನಡೆದಿದೆ ಎಂದು ವಿಶ್ಲೇಷಿಸಿದರು. ರಾಜ್ಯ ಕಾರ್ಯಕಾರಿಣಿ ಯಶಸ್ಸಿನ ಕುರಿತು ಅವರು ಮೆಚ್ಚುಗೆ ಸೂಚಿಸಿದರು.
ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಹೆಮ್ಮೆಯ ಸ್ಥಾನ ಲಭಿಸಿದೆ. ಜಗತ್ತನ್ನು ಮುನ್ನಡೆಸುವ ಶಕ್ತಿ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೆ ಎಂಬ ಮಾತು ಎಲ್ಲೆಡೆ ಕೇಳಿಸುತ್ತಿದೆ. ಅಂದು ಸ್ವಾಮಿ ವಿವೇಕಾನಂದರು ಭಾರತ ದೇಶದ ಕುರಿತು ಕಂಡ ಕನಸನ್ನು ಮೋದಿಜೀ ಅವರು ನನಸಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ನಮ್ಮ ತಪ್ಪಿನಿಂದಲೋ, ಜನರ ಕಣ್ಣಿಗೆ ಮಣ್ಣೆರಚಿದ ಪರಿಣಾಮವೋ ಎಂಬಂತೆ ಕಾಂಗ್ರೆಸ್ ಗೆಲುವು ಸಾಧಿಸಿತು. ಗ್ಯಾರಂಟಿ ಮೂಲಕ ಇತರ ರಾಜ್ಯಗಳಲ್ಲೂ ಗೆಲ್ಲುವ ಭ್ರಮೆ ಕಾಂಗ್ರೆಸ್ಸಿಗರದಾಗಿತ್ತು. ಪಂಚರಾಜ್ಯಗಳ ಚುನಾವಣೆಯಲ್ಲಿ ಇಲ್ಲಿನ ಮುಖಂಡರು ಗ್ಯಾರಂಟಿ ಬಗ್ಗೆ ಬಣ್ಣಬಣ್ಣದ ಮಾತನಾಡಿದರು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡಗಳ ಜನರು ಮೋದಿಜೀ ಗ್ಯಾರಂಟಿಯನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ಇದರ ಪರಿಣಾಮವಾಗಿ ಇಂಡಿ ಒಕ್ಕೂಟದ ಒಂದೊಂದೇ ದಳಗಳು ಉದುರಿಬೀಳುತ್ತಿವೆ. ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ನ ಎಷ್ಟು ಜನರು ಖಾಲಿ ಮಾಡುತ್ತಾರೋ ಗೊತ್ತಿಲ್ಲ ಎಂದು ತಿಳಿಸಿದರು.
ಇದೊಂದು ದೊಡ್ಡ ಜವಾಬ್ದಾರಿ. ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸು. 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವಂತೆ ಯಾವುದೇ ವಿಶ್ರಾಂತಿಯಿಲ್ಲದೆ ದುಡಿಯಬೇಕು ಎಂದು ತಂದೆಯವರಾದ ಯಡಿಯೂರಪ್ಪ ಅವರು ತಿಳಿಸಿದ್ದರು ಎಂದು ನೆನಪಿಸಿದ ಅವರು, ಯಾವ ಕ್ಷಣದಲ್ಲಾದರೂ ಲೋಕಸಭಾ ಚುನಾವಣೆ ದಿನಾಂಕ ಪ್ರಕಟ ಆಗಬಹುದು. ಮುಂದಿನ ಲೋಕಸಭಾ ಚುನಾವಣೆ ಭಾರತದ ಭವಿಷ್ಯ ನಿರ್ಧರಿಸುವ ಚುನಾವಣೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು ಜೊತೆಗೂಡಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ವಿಪಕ್ಷವನ್ನು ಹಗುರವಾಗಿ ತೆಗೆದುಕೊಳ್ಳದಿರಿ. ಕಾಂಗ್ರೆಸ್ಸಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರಿನಲ್ಲಿ ಕೆಲವರ ಮನೆಯಲ್ಲಿ 150 ಕೋಟಿ ಸಿಕ್ಕಿದೆ. ಕಾಂಗ್ರೆಸ್ನವರು ಸಿಕ್ಕಿದ್ದು ಕಪ್ಪು ಹಣ ಎನ್ನಲಿಲ್ಲ. ಲೋಕಸಭಾ ಚುನಾವಣೆ ಮುಗಿದ ಬಳಿಕ ಸಚಿವರನ್ನು ನೇಮಿಸುವುದಾದರೆ ಸ್ಕ್ಯಾರ್ ಫೀಟ್ ಸಚಿವ ಎಂಬ ಖಾತೆ ಕೊಟ್ಟರೂ ಅಚ್ಚರಿ ಇಲ್ಲ ಎಂದು ವ್ಯಂಗ್ಯವಾಗಿ ತಿಳಿಸಿದರು.
ಬಾಬಾ ಸಾಹೇಬ ಡಾ.ಅಂಬೇಡ್ಕರರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. ಬಾಬಾ ಸಾಹೇಬರಿಗೆ ನಿರಂತರ ಅವಮಾನ ಮಾಡಿದ್ದಲ್ಲದೆ, ಅವರ ಶವಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಆದರೆ, ಮೋದಿಜೀ ಅವರು, ಅಂಬೇಡ್ಕರರ ಜೀವಿಸಿದ್ದ 5 ಕ್ಷೇತ್ರಗಳನ್ನು ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಕಾಂಗ್ರೆಸ್ಸಿನವರಿಗೆ ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ತಿಳಿಸಿದರು.
ಸಂಕಷ್ಟದಲ್ಲಿರುವ ರೈತರಿಗೆ ಸರಕಾರ ಪರಿಹಾರ ಕೊಡುತ್ತಿಲ್ಲ ಎಂದು ಟೀಕಿಸಿದ ಅವರು, ಯಡಿಯೂರಪ್ಪ ಅವರ ನೇತೃತ್ವದ ಸರಕಾರ ನೆರೆ ಸಂದರ್ಭದಲ್ಲಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ನೀಡಿದೆ. ಕಾಂಗ್ರೆಸ್ ಸರಕಾರವು ಬಡವರ ಕುರಿತು ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ. ರಾಜ್ಯದಲ್ಲಿರುವ ಸರಕಾರ ಬಡವರ, ರೈತರ ಮತ್ತು ಎಲ್ಲ ವರ್ಗದ ಜನರನ್ನು ಕಡೆಗಣಿಸಿದೆ ಎಂದು ತಿಳಿಸಿದರು.
ಸತೀಶ್ ಕುಂಪಲ ಅವರು ಸಜ್ಜನ ರಾಜಕಾರಣಿ. ಅವರ ಆಯ್ಕೆ ನನಗೂ ಸಂತಸ ತಂದಿದೆ ಎಂದು ತಿಳಿಸಿದರು. ಯಡಿಯೂರಪ್ಪ ಅವರಿಗೂ ದಕ್ಷಿಣ ಕನ್ನಡಕ್ಕೂ ಅವಿನಾಭಾವ ಸಂಬಂಧವಿದೆ. ದಕ್ಷಿಣ ಕನ್ನಡಕ್ಕೆ ಬಂದರೆ ನೆಮ್ಮದಿ ಸಿಗುತ್ತದೆ. ದಕ್ಷಿಣ ಕನ್ನಡ ಎಂದರೆ ದೈವಿಭಕ್ತಿ ಇರುವ ಜನರು ಇಲ್ಲಿ ಸಿಗುತ್ತಾರೆ. ಬುದ್ಧಿವಂತರ ಜಿಲ್ಲೆ ಇದು ಎಂದು ಶ್ಲಾಘಿಸಿದರು.
ನಿಕಟಪೂರ್ವ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ಅವರು ಮಾತನಾಡಿ, ಜಿಲ್ಲಾ ಪಂಚಾಯತ್ ಸದಸ್ಯ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷನಾಗಿ ಮಾತ್ರವಲ್ಲದೆ ಹಲವು ಜವಾಬ್ದಾರಿ ವಹಿಸಿ ಇಡೀ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಸತೀಶ್ ಕುಂಪಲ ಅವರು ಕೆಲಸ ಮಾಡಿದ್ದಾರೆ ಎಂದರು. ಅಲ್ಲದೆ ಅವರನ್ನು ಅಭಿನಂದಿಸಿದರು.
ಮುಂದಿನ ಎಲ್ಲ ಚುನಾವಣೆಗಳಲ್ಲಿ ಅವರು ಬಿಜೆಪಿಯ ವಿಜಯಯಾತ್ರೆ ನೇತೃತ್ವವನ್ನು ವಹಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಅವರ ತಂಡವು ಎಲ್ಲ ಚುನಾವಣೆಗಳಲ್ಲಿ ಗೆಲುವನ್ನು ತಂದುಕೊಟ್ಟಿದೆ ಎಂದು ಅಭಿನಂದನೆ ಸಲ್ಲಿಸಿದರು.
ಇಂಡಿ ಒಕ್ಕೂಟ ಚೂರುಚೂರಾಗುತ್ತಿದೆ. ಬಿಜೆಪಿ ನೇತೃತ್ವದ ಎನ್ಡಿಎ ಅಭೂತಪೂರ್ವ ಸಾಧನೆ ಮಾಡುತ್ತಿದೆ. ಬಿಹಾರ ರಾಜ್ಯ ಮತ್ತೆ ಬಿಜೆಪಿ ತೆಕ್ಕೆಗೆ ಬಂದಿದೆ. ದೇಶಾದ್ಯಂತ ಮೋದಿ ಮತ್ತು ರಾಮನ ಹೆಸರು ಕೇಳುತ್ತಿದೆ ಎಂದು ನುಡಿದರು. ಮುಂದಿನ ಚುನಾವಣೆಯಲ್ಲಿ ಮೋದಿಜೀ ಅವರು ಮತ್ತೆ ಪ್ರಧಾನಿ ಆಗುವುದು ಶತಸ್ಸಿದ್ಧ ಎಂದು ತಿಳಿಸಿದರು.
ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಸಿದ್ದರಾಮಯ್ಯನವರಿಗೆ ಹೊಸದಾಗಿ ರಾಮನ ಕುರಿತು ಪ್ರೀತಿ ಬಂದಿದೆ. ತಮ್ಮ ಹೆಸರಿನಲ್ಲೇ ರಾಮ ಇರುವುದಾಗಿ ಹೇಳುತ್ತಿದ್ದಾರೆ. ವೀರಪ್ಪನ್ ವೀರರ ಅಪ್ಪ. ವೀರರ ಕೆಲಸ ಮಾಡಿದ್ದಾನಾ ಎಂದು ಪ್ರಶ್ನಿಸಿದರು. ನಿಮ್ಮ ಹೆಸರಿನಲ್ಲಿ ರಾಮ ಇದ್ದರೆ ಸಾಕಾಗದು. ನಿಮ್ಮ ಹೃದಯದಲ್ಲಿ ಟಿಪ್ಪು ಟಿಪ್ಪು ಎನ್ನುತ್ತಿದೆ. ಮೌಲ್ವಿಗಳ ಹೆಸರಿದೆ; ಬೇರೇನೂ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಎಂದರೆ ಕೋಮುವಾದ. ಕೋಮುವಾದ ಎಂದರೆ ಕಾಂಗ್ರೆಸ್ ಎಂಬ ಸ್ಥಿತಿ ಇದೆ ಎಂದು ತಿಳಿಸಿದರು. ಇಂಡಿ ಒಕ್ಕೂಟ ಒಡೆದ ಮನೆಯಾಗಿದೆ. ರಾಹುಲ್ ಗಾಂಧಿಯವರೇ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಎಂದು ತಿಳಿಸಿದರು. ರಾಹುಲ್ ಗಾಂಧಿಯವರು ಎಲ್ಲೆಲ್ಲಿ ಕಾಲಿಡುತ್ತಾರೋ ಅಲ್ಲೆಲ್ಲ ಬಿಜೆಪಿಗೆ ಪ್ರಯೋಜನ ಸಿಗುತ್ತದೆ ಎಂದು ವಿಶ್ಲೇಷಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಮೋದಿಜೀ ಅವರ ಸರಕಾರ ಮನೆಮನೆಗೆ ಅಡುಗೆ ಅನಿಲ ಸಿಲಿಂಡರ್ ತಲುಪಿಸಿದೆ. ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದೆ. ಭಾರತ ಮಹತ್ತರವಾಗಿ ಬದಲಾಗಿದೆ. ಭಾರತ ಸಮೃದ್ಧವಾಗುತ್ತಿದ್ದರೆ, ಸಿದ್ದರಾಮಯ್ಯನವರ ಸರಕಾರ ದುಸ್ಥಿತಿಗೆ ಇಳಿದಿದೆ ಎಂದರಲ್ಲದೆ, ಕಾಂತರಾಜ್ ವರದಿ ಅನುಷ್ಠಾನ ಮಾಡುವುದಾಗಿ ಹೇಳಲು ನೀವು ಸರಕಾರದ ವತಿಯಿಂದ ಸಮಾವೇಶ ಮಾಡಬೇಕಾಯಿತೇ ಎಂದು ಪ್ರಶ್ನಿಸಿದರು. ಇದೊಂದು ದುರಂತ ಎಂದು ತಿಳಿಸಿದರು. ಬಡವರಿಗೆ ವಂಚಿಸಲು ಆಯೋಗದ ಅವಧಿ ವಿಸ್ತರಿಸಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ನಾಯಕನಾಗಿದ್ದಾರೆ. ಹಿಂದೆ ಅವರು ಅಹಿಂದ ನಾಯಕನಾಗಿದ್ದರು. ಪರಿಶಿಷ್ಟರಿಗಾಗಿ ಮೀಸಲಿಟ್ಟ 11 ಸಾವಿರ ಕೋಟಿಯನ್ನು ಗ್ಯಾರಂಟಿಗೆ ವಿನಿಯೋಗ ಮಾಡಿದಿರಲ್ಲವೇ? ಯಾವ ನ್ಯಾಯ ನಿಮ್ಮದು ಎಂದು ಕೇಳಿದರು. ಇದೊಂದು ಕೆಟ್ಟ ಸರಕಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗೌರವಾನ್ವಿತ ದ್ರೌಪದಿ ಮುರ್ಮು ಅವರಂಥ ಬುಡಕಟ್ಟು ಜನಾಂಗದ ಮಹಿಳೆಯನ್ನು ಏಕವಚನದಲ್ಲಿ ಕರೆದಂಥ ರಾಜಕಾರಣಿ ಸಿದ್ದರಾಮಯ್ಯ ಅವರಲ್ಲವೇನು ಎಂದು ಟೀಕಿಸಿದರು.
ನೂತನ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ, ಸುದರ್ಶನ ಮೂಡಬಿದಿರೆ ಅವರ ತಂಡ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಮೆಚ್ಚುಗೆ ಸೂಚಿಸಿದರು. ನಿರಂತರವಾಗಿ ಕಾರ್ಯದರ್ಶಿಯಾಗಿಯೇ ದುಡಿದಿದ್ದು, ಈ ಬಾರಿ ಜಿಲ್ಲಾಧ್ಯಕ್ಷನಾಗಿದ್ದೇನೆ. ಎಲ್ಲರ ಸಹಕಾರ ಇರಲಿ ಎಂದು ವಿನಂತಿಸಿದರು. ನಾನು ಕಾರ್ಯಕರ್ತರ ಜೊತೆ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್, ಗಡೀಪಾರಿನಂಥ ಕಾಂಗ್ರೆಸ್ನ ದುಷ್ಟ ಮಾನಸಿಕತೆಯ ಕೆಲಸಗಳು ಈ ಜಿಲ್ಲೆಯಲ್ಲಿ ನಡೆಯುತ್ತಿವೆ. ಈ ಸವಾಲನ್ನು ಸಮರ್ಥವಾಗಿ ಎದುರಿಸೋಣ ಎಂದು ತಿಳಿಸಿದರು.
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ, ಶಾಸಕರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜಯೇಂದ್ರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.