ಬೆಂಗಳೂರು: ಕರ್ನಾಟಕದಲ್ಲಿ ಮುಂಬರುವ ದಿನಗಳಲ್ಲಿ ಬಹಳ ದೊಡ್ಡ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲು ಸರಕಾರವೇ ಮುಂದಾಗಿದೆ ಎಂದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ವಿನಾಶಕಾಲೇ ವಿಪರೀತ ಬುದ್ಧಿ’ ಎಂಬಂತೆ ಈ ಸರಕಾರವು ಜನತೆಯ ಭಾವನೆಯ ಜೊತೆ ಚೆಲ್ಲಾಟ ಆಡುತ್ತಿದೆ. ದತ್ತ ಪೀಠದ ಪ್ರಕರಣಗಳು ಮುಕ್ತಾಯ ಆಗಿದ್ದವು. ಅವುಗಳನ್ನು ರೀ ಓಪನ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದವರಿಗೆ ಹಿಂದೂಗಳ ಬಗ್ಗೆ ಇರುವ ದ್ವೇಷವನ್ನು ತೋರಿಸಿದ್ದಾರೆ ಎಂದು ತಿಳಿಸಿದರು.
ಯಾಕೆ ಈ ಸರಕಾರ ಹಿಂದೂಗಳನ್ನು ಗುರಿಯಾಗಿ ಇಟ್ಟುಕೊಂಡು ಅವರಿಗೆ ತೊಂದರೆ ಕೊಡುವ ನೀಚ ಮಟ್ಟಕ್ಕೆ ಇಳಿದಿದೆ ಎಂದು ಪ್ರಶ್ನಿಸಿದರು. ಜನವರಿ 22ರ ಅಯೋಧ್ಯೆಯ ಹೆಮ್ಮೆಯ, ಸಂತಸದ ಘಟನಾವಳಿಗೆ ಸಾಕ್ಷಿಯಾಗಲು ದೇಶ ಮಾತ್ರವಲ್ಲದೆ ಜಗತ್ತೇ ಸಂಭ್ರಮದಿಂದ ಇರುವ ಈ ಸಂದರ್ಭದಲ್ಲಿ ಯಾಕೆ ಸರಕಾರ ಚೆಲ್ಲಾಟ ಆಡುತ್ತಿದೆ ಎಂದು ಟೀಕಿಸಿದರು.
ತಾವು ಈ ರಾಜ್ಯವನ್ನು ಅಭಿವೃದ್ಧಿಯಿಂದ ಕುಂಠಿತ ಮಾಡಿದ್ದೀರಿ. ಯಾವ ಕ್ಷೇತ್ರ, ಯಾವ ಶಾಸಕರಿಗೂ ನಿಮಗೆ ಒಂದು ರೂಪಾಯಿ ಅನುದಾನ ಕೊಡಲು ಸಾಧ್ಯವಾಗಿಲ್ಲ. ಶಾಸಕರು ಕ್ಷೇತ್ರದಲ್ಲಿ ಪ್ರವಾಸ ಮಾಡಲು ಜನರು ಬಿಡುತ್ತಿಲ್ಲ. ಅದನ್ನು ಮುಚ್ಚಿಹಾಕಲು ಇಂಥ ತಂತ್ರಗಾರಿಕೆ ಮಾಡಿದರೆ ಇದು ಬುದ್ಧಿವಂತಿಕೆ ಅನಿಸುವುದಿಲ್ಲ ಎಂದು ತಿಳಿಸಿದರು.
ದೀಪ ಆರುವ ಸಂದರ್ಭದಲ್ಲಿ..
ಜನತೆಯ ಭಾವನೆಗಳ ಜೊತೆ ನೀವು ಈ ರೀತಿಯ ಹುಚ್ಚಾಟದ ತೀರ್ಮಾನ ತೆಗೆದುಕೊಳ್ಳದಿರಿ ಎಂದು ಪಿ.ರಾಜೀವ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ದೀಪ ಆರುವ ಸಂದರ್ಭದಲ್ಲಿ ಹೆಚ್ಚು ಉರಿಯುತ್ತದೆ. ನಿಮ್ಮ ನಡವಳಿಕೆ ನೋಡಿದಾಗ ಈ ಸರ್ಕಾರಿ ಸಂಸ್ಥೆಗಳನ್ನು, ಪೊಲೀಸ್ ಇಲಾಖೆಯನ್ನು ಜನತೆಯ ಮೇಲೆ ಛೂ ಬಿಟ್ಟು, ಜನರನ್ನು ಭಯದ ವಾತಾವರಣದಲ್ಲಿ ಇಡುವ ಪ್ರಯತ್ನ ಮಾಡುತ್ತಿದ್ದೀರಿ. ಕರ್ನಾಟಕದ ಜನತೆಗೆ ನೀವು ಕೊಡುವ ಸಂದೇಶವಾದರೂ ಏನು ಎಂದು ಕೇಳಿದರು.
ಹಿಂದೂಗಳ ಕೇಸು ರೀ ಓಪನ್ ಮಾಡುವುದು ಒಂದೆಡೆ, ಬಾಂಬ್ ಸ್ಫೋಟಿಸಿದವರನ್ನು ಬ್ರದರ್ಸ್ ಎನ್ನುವುದು ಇನ್ನೊಂದೆಡೆ, ಕರಸೇವಕರ ಮೇಲೆ ಕೇಸನ್ನು ರೀ ಓಪನ್ ಮಾಡುವುದು ಒಂದು ಕಡೆ, ದೇಶವಿರೋಧಿ ಚಟುವಟಿಕೆ ಮಾಡುವ ಪಿಎಫ್ಐ ಮೇಲಿನ ಕೇಸನ್ನು ವಾಪಸ್ ಪಡೆಯುವುದು ಮತ್ತೊಂದು ಕಡೆ ನಡೆದಿದೆ. ಹಾಗಿದ್ದರೆ ನಿಮ್ಮ ಧೋರಣೆ ಏನು? ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಜನತೆ ನಿಮ್ಮನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಶೀಘ್ರವೇ ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ- ತಕ್ಕ ಪಾಠ ಹಾಗೂ ತಕ್ಕ ಬುದ್ಧಿಯನ್ನು ಕಾಂಗ್ರೆಸ್ಸಿಗೆ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.