ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು ದುರದೃಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದರು.
ವಿಜಯಪುರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲವಿದ್ದರೂ ಐಷಾರಾಮಿ ವಿಮಾನದಲ್ಲಿ ಪ್ರಧಾನಿಯವರ ಭೇಟಿಗೆ ಸಿಎಂ ಅವರು ಜಮೀರ್ ಅಹ್ಮದ್ ತೆರಳಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಜಮೀರ್ ಅಹ್ಮದ್ ಹಂಚಿಕೊಂಡಿದ್ದಾರೆ. ಇದು ಅಸಹ್ಯ ತರುವಂತಿದೆ ಎಂದು ಟೀಕಿಸಿದರು. ಪರಿಹಾರವನ್ನೇ ನೀಡದ ಸರಕಾರದ ಸಚಿವರು ರೈತರಿಗೆ ಅವಮಾನ ಮಾಡುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿ ಸಭೆ ಮಾಡಿಲ್ಲ. ಕಂದಾಯ ಸಚಿವರು ಬೆಂಗಳೂರಿನಲ್ಲಿ ಎ.ಸಿ.ರೂಮಿನಲ್ಲಿ ಸಭೆ ಮಾಡಿದ್ದಾರೆ. ಕಾಟಾಚಾರಕ್ಕೆ ಅಲ್ಲಿ ಇಲ್ಲಿ ಭೇಟಿ ಕೊಟ್ಟಿದ್ದಾರೆ. ರೈತರಿಗೆ ಪರಿಹಾರ ಕೊಡದ ಸರಕಾರದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು. ನಿನ್ನೆ ದಿನ 1 ಸಾವಿರ ಕೋಟಿಯನ್ನು ಅಲ್ಪಸಂಖ್ಯಾತರ ಕಾಲೊನಿಗಳಿಗೆ ನೀಡಿ ಆದೇಶ ನೀಡಿದ್ದಾರೆ ಎಂದರು.
ಬಿಜೆಪಿ, ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರಿಗೆ ಹಣ ನೀಡಿದೆ. ಆದರೆ, ನಿಮ್ಮ ಥರ ಇಂಥ ಕಷ್ಟದ ಸಂದರ್ಭದಲ್ಲಿ ರೈತರನ್ನು ಕಡೆಗಣಿಸಿದ್ದು ಎಷ್ಟು ಸರಿ? ರೈತ ಸಮೂಹದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿ ಎಲ್ಲರೂ ಇದ್ದಾರೆ. ರಾಜ್ಯ ಸರಕಾರದ ಆದ್ಯತೆ ರೈತರಲ್ಲ; ಅಲ್ಪಸಂಖ್ಯಾತರು ಮಾತ್ರ ಎಂದು ಕಟುವಾಗಿ ಟೀಕಿಸಿದರು.
ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಸಮಸ್ಯೆ ಆಗಲಿದೆ. ನಿಮ್ಮ ನಡವಳಿಕೆಯನ್ನು ರಾಜ್ಯದ ಮತದಾರರು ಗಮನಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲೂ ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತುತ್ತಾರೆ. ಕಾಂಗ್ರೆಸ್ ಪರಿಸ್ಥಿತಿಯನ್ನು ಲೋಕಸಭಾ ಚುನಾವಣೆ ಬಳಿಕ ನೋಡಿ ಎಂದು ಬಿ.ವೈ.ವಿಜಯೇಂದ್ರ ಅವರು ವಿಶ್ವಾಸದಿಂದ ನುಡಿದರು.
ಭೀಕರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಬರಗಾಲಕ್ಕೆ ಸ್ಪಂದಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಒತ್ತಾಯಿಸಿದ್ದರೂ, ಕಬ್ಬು- ದ್ರಾಕ್ಷಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ನಾವೆಲ್ಲ ಕೋರಿದ್ದರೂ ಈ ಕಾಂಗ್ರೆಸ್ ಸರಕಾರವು ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ವರ್ತಿಸುತ್ತಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಕೇವಲ ಆರೇಳು ತಿಂಗಳಲ್ಲಿ ಜನರ ವಿಶ್ವಾಸ ಮತ್ತು ಜನಪ್ರಿಯತೆಯನ್ನು ಕಳಕೊಂಡ ದೇಶದ ಮೊದಲ ಸರಕಾರ ಇದೆಂದು ಟೀಕಿಸಿದರು.
ಪಕ್ಷದ ಹಿರಿಯರು, ಯುವಕರು ಮತ್ತು ಕಾರ್ಯಕರ್ತರು ಇವತ್ತು ಹೆಚ್ಚಿನ ಉತ್ಸಾಹದಿಂದ ಇವತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದನ್ನು ನೋಡಿದ್ದೀರಿ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡು 7 ತಿಂಗಳು ಕಳೆದಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳು ರಾಜ್ಯದ ಜನರಲ್ಲಿ ಸಾಕಷ್ಟು ವಿಶ್ವಾಸವನ್ನು ಮೂಡಿಸಿತ್ತು. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಪ್ರಚಂಡ ಬಹುಮತ ಸಿಕ್ಕಿತ್ತು ಎಂದರು.
ಹಲವು ಜಿಲ್ಲೆಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೊಠಡಿಗಳಿಲ್ಲ. ಸಮುದಾಯ ಭವನ ಮತ್ತಿತರ ಕಡೆ ಪಾಠ ಮಾಡುವಂತಾಗಿದೆ. ಇಷ್ಟಾದರೂ ಸರಕಾರವು ಸ್ಪಂದಿಸುತ್ತಿಲ್ಲ. ಮತ್ತೊಂದೆಡೆ ಅದು ರೈತರನ್ನು ಅವಮಾನ ಮಾಡುತ್ತಿದೆ ಎಂದು ಅವರು ಟೀಕಿಸಿದರು. ರಾಜ್ಯದ ಜವಾಬ್ದಾರಿಯುತ ಶಿಕ್ಷಣ ಸಚಿವರ ಚೆಕ್ ಬೌನ್ಸ್ ಆಗಿದೆ. 6.5 ಕೋಟಿಗೂ ಹೆಚ್ಚು ಹಣವನ್ನು ನೀಡಬೇಕಿತ್ತು. ಹಣ ನೀಡದೆ ಇದ್ದರೆ ಆರು ತಿಂಗಳು ಶಿಕ್ಷೆ ಅನುಭವಿಸುವಂತೆ ಕೋರ್ಟ್ ಸೂಚಿಸಿದೆ ಎಂದು ನುಡಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಸರಕಾರಿ ನೌಕರರಿಗೆ ವೇತನ ಕೊಡಲಾಗದ ದಾರುಣ ಪರಿಸ್ಥಿತಿ ಈಗಾಗಲೇ ಬಂದಿದೆ. 14 ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು ಈಗ ವಿಲವಿಲ ಒದ್ದಾಡುತ್ತಿದ್ದಾರೆ. ಚುನಾವಣೆ ಗೆಲ್ಲಲೇಬೇಕೆಂಬ ಹಪಾಹಪಿಯಲ್ಲಿ ಭರವಸೆ ನೀಡಿದ್ದ ಅವರು, ಜಾಹೀರಾತಿನೊಂದಿಗೆ ಕಾಲಹರಣ ಮಾಡುತ್ತಿದ್ದಾರೆ. ಯಾವನೇ ಶಾಸಕರಿಗೂ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಸಂಸದ ರಮೇಶ್ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.