ಬೆಂಗಳೂರು: ಗೌರವಾನ್ವಿತ ಉಪ ರಾಷ್ಟ್ರಪತಿಗಳಿಗೆ ಅವಮಾನ ಮಾಡಿದ ವಿಪಕ್ಷಗಳಿಗೆ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ದೆಹಲಿ ರಾಜ್ಯದ ಪ್ರಧಾನ ಕಾರ್ಯದರ್ಶಿ ಕುಲ್ಜೀತ್ ಸಿಂಗ್ ಚಾಹಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿರೋಧ ಪಕ್ಷಗಳ ಕ್ರಮವು ಎಲ್ಲ ರೈತ ಸಮುದಾಯ, ಒಬಿಸಿ ಸಮುದಾಯಕ್ಕೆ ಬೇಸರ ತಂದಿದೆ. ನಾನೂ ಒಬಿಸಿ ಸಮುದಾಯಕ್ಕೆ ಸೇರಿದವನು ಎಂದು ತಿಳಿಸಿದರು.
ಸಂಸದರು ತಮ್ಮ ಸ್ಥಾನಕ್ಕೆ ತಕ್ಕುದಾಗಿ ವರ್ತಿಸುತ್ತಿಲ್ಲ. ಅಧಿಕಾರ ಕಳಕೊಂಡಾಗ ಅವರು ಹತಾಶರಾಗಿ ವರ್ತಿಸುತ್ತಾರೆ. ರಾಹುಲ್ ಗಾಂಧಿಯವರು ಉಪ ರಾಷ್ಟ್ರಪತಿಗಳ ಅಣಕವನ್ನು ವಿಡಿಯೋ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಂತೆ, ಸಂಸದನಂತೆ ಅವರ ವರ್ತನೆ ಇಲ್ಲ ಎಂದು ಟೀಕಿಸಿದರು.
ರೈತ ಸಮುದಾಯ ಮತ್ತು ಒಬಿಸಿ ಸಮುದಾಯದ ನಾಯಕ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಹೀಗೆ ಸದನದ ಒಳಗೆ ಮತ್ತು ಹೊರಗೆ ಅವಮಾನಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ವಿಪಕ್ಷಗಳ ವರ್ತನೆ ಶೋಭೆ ತರುವಂತಿಲ್ಲ; ಅದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ದೆಹಲಿಯಲ್ಲಿ ಮುಂಗೇರಿಲಾಲ್ ಕಿ ಹಸೀನ್ ಸಪ್ನೇ ಎಂಬ ಮಾತಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಮಾಡುವ ಕನಸು ಕಾಣುವ ಮೊದಲು ಕಾಂಗ್ರೆಸ್ ಪಕ್ಷವು ಅಗತ್ಯ ಸಂಸದರ ಕುರಿತು ಚಿಂತಿಸಬೇಕಿದೆ. ಅದು ಈಗ ಅತ್ಯಂತ ಕಡಿಮೆ ಸಂಸದರನ್ನು ಹೊಂದಿದೆ. ಇದು ಕೇವಲ ಹಗಲುಗನಸಷ್ಟೇ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.
ಉತ್ತರದ ದೊಡ್ಡ 3 ರಾಜ್ಯಗಳ ಚುನಾವಣಾ ಫಲಿತಾಂಶವು ಮೋದಿ ಗ್ಯಾರಂಟಿಯ ಪರವಾಗಿದೆ. ಬಿಜೆಪಿ 2019ಕ್ಕಿಂತ ಹೆಚ್ಚು ಸ್ಥಾನಗಳೊಂದಿಗೆ 2024ರಲ್ಲಿ ಅಧಿಕಾರಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಪ್ ಪಕ್ಷದ ಮುಖಂಡರು ಕಡು ಭ್ರಷ್ಟಾಚಾರಿಗಳು ಎಂಬುದು ಸ್ಪಷ್ಟವಾಗಿದೆ. ಲಿಕ್ಕರ್ ಸ್ಕ್ಯಾಮ್ನಡಿ ದೆಹಲಿಯ ಕೇಜ್ರಿವಾಲ್ ಸಂಪುಟದ ಇಬ್ಬರು ಸಚಿವರು ಮತ್ತು ಒಬ್ಬ ಸಂಸದ ಈಗಾಗಲೇ ಜೈಲಿನಲ್ಲಿದ್ದು, ಅವರಿಗೆ ಜಾಮೀನೂ ಸಿಗುತ್ತಿಲ್ಲ. ಕೇಜ್ರಿವಾಲ್ ಸರದಿ ಬರಲಿದೆ ಎಂದೂ ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.