ಬೆಂಗಳೂರು: ಚಿತ್ರದುರ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಮತ್ತು ಬಿಜೆಪಿಯ ಪ್ರಮುಖ ನಾಯಕ ಗೋವಿಂದ ಕಾರಜೋಳ ಅವರ ಜೊತೆ ಕಾಂಗ್ರೆಸ್ ಪ್ರೇರೇಪಿತ ಕಾರ್ಯಕರ್ತರು ನಿನ್ನೆ ಅತ್ಯಂತ ಕೆಟ್ಟದ್ದಾಗಿ ವರ್ತಿಸಿದ್ದಾರೆ; ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ನಿಲುವು-ನಿರ್ಧಾರಗಳು ಕಾಂಗ್ರೆಸ್ ಸರಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪ್ರಿಯವಾಗಿರಬಹುದು. ಆದರೆ, 11,144 ಕೋಟಿ ಹಣವನ್ನು ಎಸ್ಸಿ ಮತ್ತು ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿದ್ದು, ಅದನ್ನು ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ವಿಷಯ ಮಾತನಾಡಿದರೆ ಕಾಂಗ್ರೆಸ್ಸಿಗರಿಗೆ ಕೋಪ ಬರುತ್ತದೆ ಎಂದು ಟೀಕಿಸಿದರು.
ಸಿದ್ದರಾಮಯ್ಯನವರು 11,144 ಕೋಟಿ ಹಣವನ್ನು ಎಸ್ಸಿ ಮತ್ತು ಎಸ್ಟಿ ಸಮುದಾಯದ ಅಭಿವೃದ್ಧಿಗೆ ವಾಪಸ್ ಕೊಡಲಿ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಅಭಿವೃದ್ಧಿಗಾಗಿ ನೀಡಲು ಎಸ್ಸಿ, ಎಸ್ಟಿ ಮೀಸಲು ಹಣವೇ ಬೇಕಾಗಿತ್ತೇ ಎಂದು ಪ್ರಶ್ನಿಸಿದರು. ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಸರಕಾರ ಇತ್ತು; ಅಧಿವೇಶನ ನಡೆಯುತ್ತಿರುವಾಗಲೇ ಕೂಗಳತೆ ದೂರದಲ್ಲಿ ಒಬ್ಬ ಮಹಿಳೆಯನ್ನು ರಾತ್ರೋರಾತ್ರಿ ವಿವಸ್ತ್ರಗೊಳಿಸಿ, ಅವರನ್ನು ಮರಕ್ಕೆ ಕಟ್ಟಿ ಹೊಡೆಯುವುದಾದರೆ, ಈ ಸರಕಾರ ಜೀವಂತ ಇದೆಯೇ? ಎಂದು ರವಿಕುಮಾರ್ ಅವರು ಆಕ್ರೋಶದಿಂದ ಪ್ರಶ್ನಿಸಿದರು.
ಬೆಂಗಳೂರಿಗೆ ಸಮೀಪದ ಮಾಲೂರಿನ ಬಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಎಸ್ಸಿ, ಎಸ್ಟಿ ಮಕ್ಕಳನ್ನು ಶೌಚಾಲಯದ ಗುಂಡಿಗೆ (ಟಾಯ್ಲೆಟ್ ಪಿಟ್) ಇಳಿಸಿ ಸ್ವಚ್ಛ ಮಾಡಿಸಿದ್ದಾರೆ. ಒಂದು ಶಾಲೆಯಲ್ಲಿ ಹೀಗೆ ಮಾಡಿದರೆ ಹೇಗೆ? ಮಲವನ್ನು ಕೈಯಲ್ಲಿ ಮುಟ್ಟುವುದು; ಮಲ ಹೊರುವುದು ಕಾನೂನಿಗೆ ವಿರುದ್ಧವಾದುದು. ಸುಪ್ರೀಂ ಕೋರ್ಟಿನ ತೀರ್ಪಿದೆ. ಈ ತೀರ್ಪಿನನ್ವಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
ಎಸ್ಸಿ, ಎಸ್ಟಿ ಕಾಲೊನಿಗಳಲ್ಲೂ ಒಂದು ಕಿಮೀ ರಸ್ತೆ ಮಾಡಿಲ್ಲ. ಅಭಿವೃದ್ಧಿಯು ಸಂಪೂರ್ಣವಾಗಿ ಸ್ಥಗಿತವಾಗಿದೆ. ಗ್ಯಾರಂಟಿಗಳ ಅಮಲಿನಲ್ಲಿ ಈ ಸರಕಾರ ತೇಲಾಡುತ್ತಿದೆ; ಓಲಾಡುತ್ತಿದೆ ಎಂದು ಟೀಕಿಸಿದರು. ಈ ಸರಕಾರಕ್ಕೆ ಕಣ್ಮುಂದೆ ಅಭಿವೃದ್ಧಿ ಯೋಜನೆಗಳಿಲ್ಲ; ಕಾರ್ಯಕ್ರಮಗಳೂ ಇಲ್ಲ ಎಂದು ಆಕ್ಷೇಪಿಸಿದರು. ಈ ವಿಷಯವನ್ನು ಮುಂದಿಟ್ಟು ಬಿಜೆಪಿ ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸುತ್ತದೆ ಎಂದು ಪ್ರಕಟಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.