ಬೆಂಗಳೂರು: ಹಿಂದೂ ಹೆಣ್ಮಕ್ಕಳ ಸುಮಂಗಲಿತನ ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಅವರು ಇಂದು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಮಹಿಳೆಯರ ಪರಿಸ್ಥಿತಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ತಾನು ಹೋದುದೇ ದಾರಿ ಎಂಬ ಉದ್ಧಟತನದ ಮುಖ್ಯಮಂತ್ರಿ ಮತ್ತು ರಾಜ್ಯ ಸರಕಾರವನ್ನು ನಾವು ಬೇರೆಲ್ಲೂ ಕಾಣಲಿಲ್ಲ. ಇದೊಂದು ರಾಕ್ಷಸ ಸರಕಾರ ಎಂದು ಹೇಳಿದರೂ ತಪ್ಪಾಗಲಾರದು ಎಂದು ಟೀಕಿಸಿದರು.
ಈ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಮಹಿಳಾ ಮೋರ್ಚಾವು ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದರು. ಕರ್ನಾಟಕದಲ್ಲಿ ಸಂವಿಧಾನವಿರೋಧಿ ಮತ್ತು ಮಹಿಳಾ ವಿರೋಧಿ ಕಾಂಗ್ರೆಸ್ ಸರಕಾರ ಆಡಳಿತ ಮಾಡುತ್ತಿದೆ. ಒಂದೆಡೆ ಮಹಿಳೆಯರ ತಾಳಿಸರ ತೆಗೆಯಲು ಹೇಳುತ್ತಾರೆ. ಇನ್ನೊಂದೆಡೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ತಾಳಿಸರ, ಮಾಂಗಲ್ಯ, ಬಳೆಯಿಂದ ಮೋಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಇದು ಹೆಣ್ಮಕ್ಕಳಿಗೆ ಧಾರ್ಮಿಕವಾಗಿ ಕೊಟ್ಟ ಹಕ್ಕು. ಮತದಾನ ಮಾಡುವಾಗ ಹಿಜಾಬ್, ಬುರ್ಖಾ ತೆಗೆಯಬೇಕು ಎಂಬ ಕಾನೂನಿದೆ. ಹಿಜಾಬ್ನಿಂದ ಒಬ್ಬರು ಮೋಸ ಮಾಡಲು ಸಾಧ್ಯವೇ ಅಥವಾ ತಾಳಿ, ಕಾಲುಂಗುರ, ಬಳೆಯಿಂದ ಮೋಸ ಮಾಡಲು ಸಾಧ್ಯವೇ ಎಂದು ಅವರು ಕೇಳಿದರು.
ಇಡೀ ಪ್ರಪಂಚವೇ ವಿಮಾನನಿಲ್ದಾಣಗಳಲ್ಲಿ ತಾಳಿಸರ, ಕಾಲುಂಗುರಗಳನ್ನು ಗೌರವಿಸುತ್ತದೆ. ತಾಳಿ ತೆಗೆಸುವ ಉದಾಹರಣೆ ಇಲ್ಲ. ನಮ್ಮ ಕರ್ನಾಟಕದಲ್ಲಿ ಈ ರೀತಿ ಮಾಡುವುದನ್ನು ನೋಡಿದರೆ ಬೇಸರ ಪಡೆಬೇಕೇ ಅಥವಾ ಅಸಹ್ಯ ಪಡಬೇಕೇ ಎಂದು ಗೊತ್ತಾಗಿಲ್ಲ ಎಂದು ತಿಳಿಸಿದರು.
ಕಲಬುರ್ಗಿಯಲ್ಲಿ ಇದು ನಡೆದಿದೆ. ಮಹಿಳೆಯರು ಮಂಚ ಹತ್ತಿದರೆ ಸರಕಾರಿ ನೌಕರಿ ಸಿಗುತ್ತದೆ ಎಂದು ಕಾಂಗ್ರೆಸ್ ಮಹಾನ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದರು ಎಂದು ಉಲ್ಲೇಖಿಸಿದ ಅವರು, ಮಹಿಳೆಯರನ್ನು ಸೌಂದರ್ಯದ ಮೇಲೆ ಅಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.
ಚುನಾವಣೆ ಎಂದರೆ ಸೌಂದರ್ಯ ಸ್ಪರ್ಧೆಯಲ್ಲ. ಅದು ಸಿದ್ಧಾಂತಗಳ, ಪ್ರಣಾಳಿಕೆಗಳ ನಡುವಿನ ಸ್ಪರ್ಧೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದರು. ಕಾಂಗ್ರೆಸ್ಸಿಗರು ಅತ್ಯಂತ ಉನ್ನತ ಸ್ಥಾನ ಪಡೆದ ಈಗಿನ ರಾಷ್ಟ್ರಪತಿಯವರನ್ನು ರಾಷ್ಟ್ರಪತ್ನಿ ಎಂದು ಲೇವಡಿ ಮಾಡಿದವರು. ಗ್ರಾಮೀಣ ಪ್ರದೇಶದ, ಹಿಂದುಳಿದ ಮಹಿಳೆಯನ್ನು ಟೀಕಿಸಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಹಿರಿಯ ನಾಯಕ ಸುಧಾಕರನ್ ಅವರು ಈ ಹಿಂದೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ್ದರು. ಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ ಅವಮಾನ ಮಾಡುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುತ್ತ ಬಂದಿದೆ ಎಂದು ತಿಳಿಸಿದರು.
ಈ ಸರಕಾರವು ಕರ್ನಾಟಕದ ಹಿಂದೂ ಮಹಿಳೆಯರಿಗೆ ದೊಡ್ಡ ನೋವು ಕೊಟ್ಟಿದೆ. ನಿಮ್ಮ ಮನೆಯಲ್ಲಿ ತಾಳಿಸರ, ಮಾಂಗಲ್ಯ ತೆಗೆಯಲು ಮಹಿಳೆಯರು ಒಪ್ಪುತ್ತಾರಾ ಎಂದು ಕಾಂಗ್ರೆಸ್ ಮುಖಂಡರಿಗೆ ಅವರು ಸವಾಲೆಸೆದರು. ಭಾಗ್ಯಗಳನ್ನು ಎಷ್ಟು ಕೊಟ್ಟಿದ್ದೀರಾ ಬಿಟ್ಟಿದ್ದೀರಾ ಎಂದು ನಿಮ್ಮ ಇತಿಹಾಸ ನೋಡಿದರೆ ತಿಳಿಯುತ್ತದೆ. ಭಾಗ್ಯಗಳನ್ನು ಶೇ 10- 20 ಕೊಡುವಷ್ಟರ ಮಟ್ಟಕ್ಕೂ ನೀವಿನ್ನೂ ಬಂದಿಲ್ಲ. ಆದರೆ ನಾವು ಎಲ್ಲ ಭಾಗ್ಯ ಕೊಟ್ಟ ಮಾತನಾಡುತ್ತೀರಿ. ಇನ್ನೊಂದೆಡೆ ಸುಮಂಗಲಿತನ ತೆಗೆಸುವ ಕೆಲಸ ನಡೆದಿದೆ ಎಂದು ಆಕ್ಷೇಪಿಸಿದರು.
ನಗ್ನಚಿತ್ರ ತೆಗೆದ ಪ್ರಕರಣ, ಶಿವಮೊಗ್ಗದಲ್ಲಿ ಮನೆಗೆ ಕಲ್ಲೆಸೆದು ಮನೆಗೆ ನುಗ್ಗಿ ಹೆಣ್ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆಯಲ್ಲಿ ಸರಕಾರದ ನಡವಳಿಕೆ ಅಸಹ್ಯ ಹುಟ್ಟಿಸುವಂತಿತ್ತು. ರಕ್ಷಕರ ಸ್ಥಾನದಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು ಹೆಣ್ಮಕ್ಕಳ ಪರವಾಗಿ ಯಾವುದೇ ಒಂದು ಹೇಳಿಕೆ ಕೊಟ್ಟಿಲ್ಲ. ಒಂದು ಕೋಮನ್ನು ಓಲೈಕೆ ಮಾಡುತ್ತ ಮತಬ್ಯಾಂಕ್ ರಾಜಕೀಯ ಮಾಡುವ ನಿಟ್ಟಿನಲ್ಲಿ ಈ ಸರಕಾರ ಇದೆ ಎಂದು ದೂರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.