ಬೆಂಗಳೂರು: ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ಹಣ ಲಭಿಸಿದ ವಿಚಾರವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕವು ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ಸಿಗರು ಒಂದೆಡೆ ಕತ್ತಲೆ ಭಾಗ್ಯ ನೀಡಿದ್ದಾರೆ. ಕತ್ತಲಲ್ಲಿ ಕಾಂಚಾಣದ ಮಾಯೆ ನಡೆಯುತ್ತಿದೆ ಎಂದು ನುಡಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ಪಂಚರಾಜ್ಯ ಚುನಾವಣೆಗೆ ಹಣ ಕೊಡುವುದಾಗಿ ಕೇಂದ್ರ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಧ್ಯಪ್ರದೇಶಕ್ಕೆ 600 ಕೋಟಿ, ರಾಜಸ್ಥಾನಕ್ಕೆ 200 ಕೋಟಿ, ಛತ್ತೀಸಗಡಕ್ಕೆ 200 ಕೋಟಿ, ತೆಲಂಗಾಣಕ್ಕೆ 600 ಕೋಟಿ ಮತ್ತು ಮಿಜೋರಾಂಗೆ 100 ಕೋಟಿ ರೂ. ಕೊಟ್ಟು ಸೋನಿಯಾ ಗಾಂಧಿಯವರ ಶಹಬ್ಬಾಸ್ಗಿರಿ ಪಡೆಯಲು ಕಾಂಗ್ರೆಸ್ ಸರಕಾರ ಮುಂದಾಗಿದೆ ಎಂದು ಹೇಳಿದರು.
ಇಲ್ಲಿಂದ ದುಡ್ಡು ಹೋಗುತ್ತಿದೆ ಎಂದು ಜನರೂ ಮಾತನಾಡುತ್ತಿದ್ದಾರೆ. 5 ರಾಜ್ಯಗಳ ಚುನಾವಣೆ ಘೋಷಣೆಗೆ ಮೊದಲು ಇದು ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರು. ಕಂಟ್ರಾಕ್ಟರ್ಗಳಿಗೆ ಬಾಕಿ ಇದ್ದ ಹಣವನ್ನು 5 ರಾಜ್ಯಗಳ ಚುನಾವಣೆ ಘೋಷಣೆಗೆ ಮೊದಲು ಯಾಕೆ ಬಿಡುಗಡೆ ಮಾಡಿಲ್ಲ ಎಂದೂ ಅವರು ಕೇಳಿದರು.
ಗುತ್ತಿಗೆದಾರರ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ, ವಿಷ ಕುಡಿಯುವ ಬೆದರಿಕೆಗೂ ಸರಕಾರ ಹೆದರಿ ಹಣ ನೀಡಿಲ್ಲ. 5 ರಾಜ್ಯಗಳ ಚುನಾವಣೆ ಬಂದ ತಕ್ಷಣ ಕಾಂಚಾಣ ಶುರುವಾಯ್ತು. ಎಷ್ಟು ಕಾಕತಾಳೀಯ ಎಂದು ಅವರು ವ್ಯಂಗ್ಯವಾಡಿದರು. ಇವರಿಗೆ ಬೇಕಾದವರಿಗೆ ಹಣ ನೀಡಿದ್ದಾಗಿ ಕೆಂಪಣ್ಣನೇ ಹೇಳಿದ್ದಾರೆ. ಅಂಬಿಕಾಪತಿ ಮನೆಯಲ್ಲಿ ಹಣ ಶೇಖರಿಸಿ ತೆಲಂಗಾಣಕ್ಕೆ ಕಳಿಸಲು ತಯಾರಿ ನಡೆದಿತ್ತೆಂದು ತೆಲಂಗಾಣದ ಹಣಕಾಸು ಸಚಿವರೂ ನೇರ ಆಪಾದನೆ ಮಾಡಿದ್ದಾರೆ ಎಂದು ವಿವರಿಸಿದರು.
ಹಣ ಬಿಜೆಪಿಯವರದಾಗಲು ನಮ್ಮ ಸರಕಾರ ಇದೆಯೇ ಎಂದು ಎಂ.ಬಿ.ಪಾಟೀಲರ ಆರೋಪಕ್ಕೆ ಪ್ರಶ್ನೆ ಮೂಲಕ ಉತ್ತರಿಸಿದ ಅವರು, ಬಿಡುಗಡೆ ಮಾಡಿದ್ದು ನಿಮ್ಮ ಸರಕಾರ; ಸಿಕ್ಕಿ ಹಾಕಿಕೊಂಡವರೂ ನಿಮ್ಮದೇ ಮಾಜಿ ಜನಪ್ರತಿನಿಧಿ ಎಂದು ವ್ಯಂಗ್ಯವಾಗಿ ಉತ್ತರ ಕೊಟ್ಟರು. ಬಿಜೆಪಿಯನ್ನು ದಿನನಿತ್ಯ ಬೈಯುತ್ತಿದ್ದವರು, ಸಿದ್ದರಾಮಯ್ಯರ ಮನೆಗೆ ಪದೇಪದೇ ಭೇಟಿ ಕೊಡುತ್ತಿದ್ದವರು ಈಗ ಸಿಕ್ಕಿ ಹಾಕಿಕೊಂಡವರು ಎಂದು ಸ್ಪಷ್ಟಪಡಿಸಿದರು.
ಕರ್ನಾಟಕವೇ ಬೆಚ್ಚಿಬೀಳುವಂಥ ಸುದ್ದಿ ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 5 ತಿಂಗಳಲ್ಲೇ ಸರಣಿ ಸರಣಿಯಾಗಿ ಭ್ರಷ್ಟಾಚಾರದ ಆರೋಪ ಕೇಳಿಸುತ್ತಿದೆ. ನಿನ್ನೆ ಐಟಿ ದಾಳಿಯಲ್ಲಿ ಅಂಬಿಕಾಪತಿ ಮನೆಯಲ್ಲಿ ಸುಮಾರು 42 ಕೋಟಿಗೂ ಹೆಚ್ಚು ಹಣ ಲಭಿಸಿದೆ. ಇನ್ನೂ ಚಿನ್ನಾಭರಣದ ಲೆಕ್ಕ ಗೊತ್ತಾಗಿಲ್ಲ ಎಂದು ವಿವರಿಸಿದರು.
ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರವು ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಅರ್ಥವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಟಿಎಂ ಸರಕಾರ ರಚನೆ ಆಗಲಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು ಎಚ್ಚರಿಸಿದ್ದರು. ಬಿಜೆಪಿಯ ನಾವೆಲ್ಲರೂ ‘ಎಟಿಎಂ ಸರಕಾರ’ ರಚನೆ ಆದೀತೆಂದು ಎಚ್ಚರಿಕೆ ನೀಡಿದ್ದೆವು ಎಂದು ತಿಳಿಸಿದರು.
ಈಗ ಅಂಬಿಕಾಪತಿ ಮೂಲಕ ಸಾಕ್ಷಿ ಸಿಕ್ಕಿದೆ. ಅಂಬಿಕಾಪತಿ ಪತ್ನಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಎಂದು ತಿಳಿಸಿದ ಅವರು, ಈ ಹಿಂದೆ ಕಾಂಗ್ರೆಸ್ ಚಿತಾವಣೆಯಿಂದ ಮತ್ತು ಕಾಂಗ್ರೆಸ್ ಏಜೆಂಟರಂತೆ ಕೆಂಪಣ್ಣ ಮತ್ತಿತರ ಗುತ್ತಿಗೆದಾರರು 40 ಶೇಕಡಾ ಸರಕಾರ ಎಂದು ಬಿಜೆಪಿ ಸರಕಾರದ ವಿರುದ್ಧ ಆರೋಪ ಹೊರಿಸಿದ್ದರು. ಅಂಥವರ ಮನೆಯಲ್ಲೇ ಹಣ ಲಭಿಸಿದೆ ಎಂದರೆ ಅದರ ಮೂಲ ಎಲ್ಲಿ ಎಂದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು. ಯಾರ ದುಡ್ಡಿದು ಎಂದು ಅಧಿಕಾರದಲ್ಲಿರುವ ಕಾಂಗ್ರೆಸ್ಗೆ ಕೇಳುತ್ತಿದ್ದಾರೆ ಎಂದು ಅವರು ತಿಳಿಸಿದರು. ಆದ್ದರಿಂದ ಸಿಬಿಐ ತನಿಖೆಗೆ ಇದನ್ನು ವಹಿಸಿ ಎಂದರು.
ರೈತ ಸಮುದಾಯದ ಒಕ್ಕಲಿಗರ ಬಗ್ಗೆ ತಲೆತಿರುಕ, ಮೆಂಟಲ್ ಗಿರಾಕಿ ಭಗವಾನ್ ಅವಹೇಳನಕಾರಿ ಮಾತನಾಡಿದ್ದಾರೆ. ಇದರ ಎಲ್ಲೆಡೆ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಇಡೀ ಜನಾಂಗಕ್ಕೆ ಅವಮಾನವಾಗಿದೆ. ಯಾರ ಇದರ ಹಿಂದಿದ್ದಾರೆ? ಭಗವಾನ್ ಕಾರ್ಯಕ್ರಮಕ್ಕೆ ಹೋಗುವವರೆಲ್ಲ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ ಎಂದು ಟೀಕಿಸಿದರು.
ಅವನಿಗೆ ರಕ್ಷಣೆ ಕೊಡುವವರು, ಬೆಂಬಲ ಕೊಡುವವರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಅವನ ಹೇಳಿಕೆಗೆ ಕಾಂಗ್ರೆಸ್ ಪಕ್ಷದವರು ಸರಿಯಾದ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.