ಬೆಳ್ತಂಗಡಿ : ಗ್ರಾಮ ಪಂಚಾಯತ್ ಕೂಡ ಒಂದು ಸರಕಾರವಿದ್ದಂತೆ ಜನರ ಸಮಸ್ಯೆಗಳಿಗೆ ನೇರ ಸ್ಪಂದಿಸಲು ಅವಕಾಶವಿರುವುದು ಗ್ರಾ.ಪಂ. ಸದಸ್ಯರಿಗೆ ಮಾತ್ರ. ತಮ್ಮಲ್ಲಿ ಆತ್ಮಸ್ಥೈರ್ಯ ತುಂಬಿಕೊಳ್ಳುವ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಗ್ರಾಮದ ಅಭಿವೃದ್ಧಿಗೆ ಸರಕಾರ ನೀಡುವ ತರಬೇತಿಯ ಸದ್ಭಳಕೆ ಹಾಗೂ ಸುತ್ತೋಲೆಗಳ ಅರಿವನ್ನು ಸರಿಯಾಗಿ ಮಾಡಿಕೊಳ್ಳಬೇಕು ಎಂದು ವಿಧಾನ ಪರೀಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಭಾನುವಾರ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಆಶ್ರಯದಲ್ಲಿ ತಾಲೂಕಿನ ಬಿಲ್ಲವ ಸಮಾಜದ ಚುನಾಯಿತ ಗ್ರಾ. ಪಂ. ಸದಸ್ಯರಿಗೆ ಬೆಳ್ತಂಗಡಿ ಶ್ರೀ ನಾರಾಯಣಗುರು ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾಭವನದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಹಿಂದೆ ಗ್ರಾ. ಪಂ. ಚುನಾವಣೆಗೆ ಸ್ಪರ್ಧಿಸಬೇಕಾದರೆ ಶ್ರೀಮಂತ ವರ್ಗಕ್ಕೆ ಮಾತ್ರ ಸಾಧ್ಯವಾಗುತ್ತಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಸಿಗಬೇಕು ಎಂಬ ದೃಷ್ಠಿಯಿಂದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಂಡಿರುವುದರಿಂದ ಇದೀಗ ಹೆಚ್ಚಿನ ಅವಕಾಶಗಳು ಸಿಗುತ್ತಿದೆ. ಆದರೂ ಮಹಿಳೆಯರು ರಾಜಕೀಯದಲ್ಲಿ ಅವಕಾಶ ಪಡೆಯುತ್ತಿರುವುದು ಕಡಿಮೆಯಾಗುತ್ತಿದ್ದು ಪ್ರಸ್ತುತ ವಿಧಾನ ಸಭೆಯಲ್ಲಿ 224 ಶಾಸಕರ ಪೈಕಿ 4 ಮಹಿಳಾ ಶಾಸಕರಿದ್ದು 75 ವಿಧಾನ ಪರಿಷತ್ ಸದಸ್ಯರಲ್ಲಿ ೪ ಮಹಿಳಾ ವಿಧಾನ ಪರಿಷತ್ ಸದಸ್ಯರಿದ್ದಾರೆ. ಇದು ಮಾತ್ರ ವಿಷಾದನೀಯ. ಮುಂದೆ ಮೀಸಲಾತಿಯು ಸಂವಿಧಾನ ಬದ್ದವಾಗಿ ಜಾರಿಗೊಂಡರೆ ಮಾತ್ರ ಮಹಿಳೆಯರಿಗೂ ಅವಕಾಶ ಸಿಗಬಹುದು ಎಂದರು.
ಆಯ್ಕೆಯಾದ ಸದಸ್ಯರಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ಉತ್ತಮ ಚಿಂತನೆಗಳಿದ್ದರೂ ಪ್ರಜಾಪ್ರಭುತ್ವ ನೆಲೆಯಲ್ಲಿ ಆಡಳಿತ ಮಾಡಬೇಕಾಗಿರುವುದರಿಂದ ಎಲ್ಲಾ ಚಿಂತನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗದಿರುಬಹುದು. ಆದರೆ ಆಯ್ಕೆಯಾದ ನಂತರ ನಡೆಯುವ ದಾರಿ, ಕುಡಿಯುವ ನೀರು, ಸಾವು ಬದುಕಿನ ನಡುವೆ ಹೋರಾಡುವ ರೋಗಿಯ ವಿಚಾರಗಳಲ್ಲಿ ರಾಜಕೀಯ ಮಾಡದೆ ಅಭಿವೃದ್ಧಿಯತ್ತ ಗಮನ ಹರಿಸಿ ಎಂದರು.
ಶಾಸಕ ಕೆ. ವಸಂತ ಬಂಗೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಲ್ಲವ ಸಮಾಜ ಕೋಟಿ ಚೆನ್ನಯ ವಂಶದಿಂದ ಬಂದಿರುವುದರಿಂದ ಎಲ್ಲಾ ಕಷ್ಟಗಳನ್ನು ಧೈರ್ಯವಾಗಿ ಎದುರಿಸಬೇಕು. ರಾಜಕೀಯದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕತೆಯಿಂದ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದರು. ಗು. ನಾ. ಸ್ವಾ. ಸೇ. ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು. ತಾ. ಪಂ. ಅಧ್ಯಕ್ಷೆ ಜಯಂತಿ ಪಾಲೆದು, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿ. ಪಂ. ಸದಸ್ಯ ಕೆ. ಶೈಲೇಶ್ ಕುಮಾರ್, ಜಿ. ಪಂ. ಸದಸ್ಯೆ ತುಳಸಿ ಹಾರಬೆ, ತಾ. ಪಂ. ವ್ಯವಸ್ಥಾಪಕ ಗಣೇಶ್ ಪೂಜಾರಿ, ಗು. ನಾ. ಸ್ವಾ. ಸೇ. ಸಂಘದ ಉಪಾಧ್ಯಕ್ಷೆ ಸುಜಿತಾ ವಿ. ಬಂಗೇರ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಂತೋಷ್ ಕುಮಾರ್ ಕಾಪಿನಡ್ಕ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷ ವಿನೋದಿನಿ ರಾಮಪ್ಪ, ಆತ್ಮಶಕ್ತಿ ಕೋ-ಅಪರೇಟಿವ್ ಬ್ಯಾಂಕ್ ಮಂಗಳೂರು ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಉಪಸ್ಥಿತರಿದ್ದರು. ಎಲ್ಲಾ ಚುನಾಯಿತ ಗ್ರಾ. ಪಂ. ಸದಸ್ಯರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತ ಮನೋಹರ್ ಬಳಂಜರವರ ಪುತ್ರಿ ದಿತಿಯ ವೈದ್ಯಕೀಯ ಚಿಕಿತ್ಸೆಗೆ ಸಂಘದ ವತಿಯಿಂದ ನೀಡಲಾದ 30 ಸಾವಿರ ರೂ. ಚೆಕ್ನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು. ಸಂಘದ ವತಿಯಿಂದ ಕೋಟ ಹಾಗೂ ಚಿತ್ತರಂಜನ್ ಬೋಳಾರ್ ಇವರನ್ನು ಸನ್ಮಾನಿಸಲಾಯಿತು. ವಿಜೇತ ಸದಸ್ಯರುಗಳಿಗೆ ರಾಜಕೀಯದಲ್ಲಿ ಬಿಲ್ಲವರ ಪಾತ್ರ, ರಾಜಕೀಯದಲ್ಲಿ ಧರ್ಮ, ಅನುದಾನ ಬಳಕೆಯಲ್ಲಿ ಸದಸ್ಯರ ಜವಾಬ್ದಾರಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂಘದ ಕಾರ್ಯದರ್ಶಿ ಪದ್ಮನಾಭ ಸಾಲಿಯಾನ್ ಸ್ವಾಗತಿಸಿ ಜಯನಂದ ಲಾಲ, ಶಾಂತ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸುಜಿತಾ ವಿ. ಬಂಗೇರ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.