ಮಂಗಳೂರು: ರಾಜ್ಯ ಕಾಂಗ್ರೆಸ್ಸಿನ ಆಡಳಿತದಲ್ಲಿ ಜನರ ಪರಿಸ್ಥಿಯು ಹೇಳತೀರದಾಗಿದ್ದು, ಈ ಬಗ್ಗೆ ಸರ್ಕಾರ ಗಮನವೇ ಹರಿಸುತ್ತಿಲ್ಲ. ಇದರಿಂದ ಸಾರ್ವಜನಿಕರ ದುಸ್ಥಿತಿ ಹೇಳತೀರದಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ ನೀತಿಯ ಫಲವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಅಟಲ್ ಸೇವಾ ಕೇಂದ್ರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.
ನಗರದ R.T. O, ಮಹಾನಗರ ಪಾಲಿಕೆ ಕಛೇರಿ, ಉಪ ನೋಂದಣಿ ಕಛೇರಿ, ರೇಷನ್ ಕಾರ್ಡ್ ತಿದ್ದುಪಡಿ ಹೀಗೆ ಅಗತ್ಯ ಕಾರ್ಯಗಳಿಗಾಗಿ ಸರ್ಕಾರಿ ಕಛೇರಿಗೆ ಬರುವ ಜನರಿಗೆ ಸರ್ವರ್ ಸಮಸ್ಯೆ ಎಂಬುದು ಸಾಮಾನ್ಯವಾಗಿಬಿಟ್ಟಿದೆ. ಜನಸಾಮಾನ್ಯರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಪ್ರತಿ ದಿನ ಸರ್ಕಾರಿ ಕಛೇರಿಗಳಿಗೆ ಅಲೆಯುವಂತಾಗಿದ್ದು ಸರ್ಕಾರದ ಅವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಇದರ ಜೊತೆಗೆ ಇ-ಖಾತಾ ಸಮಸ್ಯೆಯೂ ಸೃಷ್ಟಿಯಾಗಿದ್ದು ಒಂದು ಇ – ಖಾತಾ ಸಿಗಲು 3 ತಿಂಗಳವರೆಗೆ ಕಾಯಬೇಕಿತ್ತು. ನಿವೇಶನ, ಫ್ಲ್ಯಾಟ್ ನೋಂದಣಿಗಾಗಿ ಮಂಗಳೂರು ಮಿನಿ ವಿಧಾನಸೌಧದ ಉಪನೋಂದಣಿ ಕಚೇರಿಗೆ ಹೋಗಿ ಬಯೋಮೆಟ್ರಿಕ್ ನೀಡುತ್ತಿರುವ ಹಲವು ಜನರ ಬ್ಯಾಂಕ್ ಖಾತೆಗೆ ಸೈಬರ್ ವಂಚಕರು ಕನ್ನ ಹಾಕಿದ್ದು ಲಕ್ಷಾಂತರ ರೂಪಾಯಿ ವಂಚಿಸಿದ್ದರೂ ಜಿಲ್ಲಾಡಳಿತ ಹಾಗೂ ಸರ್ಕಾರ ಈ ವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಕೂಡಲೇ ಈ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬಿಟ್ಟು ಗಮನಹರಿಸಬೇಕು. ಮತ್ತು ಸರ್ಕಾರಿ ಕಛೇರಿಗೆ ಬಂದು ಸರ್ಕಾರದ ನಿಯಮಗಳನ್ನು ಪಾಲಿಸಿದ ಮೇಲೆಯೇ ಸಾರ್ವಜನಿಕರ ಮಾಹಿತಿ ಸೋರಿಕೆಯಾಗಿ ವಂಚನೆಗೊಳಗಾಗಿದ್ದರಿಂದ ಸಾರ್ವಜನಿಕರಿಗೆ ಉಂಟಾದ ನಷ್ಟವನ್ನು ಸರ್ಕಾರವೇ ಭರಿಸಿಕೊಡಬೇಕು ಎಂದರು.
ಉಚಿತ ಕರೆಂಟ್ ಕೊಡುತ್ತೇವೆ ಎಂದು ಹೇಳಿ ಕರೆಂಟ್ ಬಿಲ್ ಹೆಚ್ಚಳ ಮಾಡಿದ್ದಲ್ಲದೇ ಈಗ ಲೋಡ್ ಶೆಡ್ಡಿಂಗ್ ಆರಂಭಿಸಿ ಜನರನ್ನು ಕತ್ತಲೆಗೆ ದೂಡಲಾಗಿದೆ. ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಉಚಿತ ಗ್ಯಾರಂಟಿಗಳನ್ನು ಈಡೇರಿಸುವುದಕ್ಕಾಗಿ ಎಸ್ಸಿ.ಎಸ್ಟಿ ಸಮುದಾಯಕ್ಕೆ ನಿಗದಿ ಪಡಿಸಿದ್ದ 11,000 ಕೋಟಿ ರೂಪಾಯಿಗಳನ್ನು ಹಣ ದುರ್ಬಳಕೆ ಮಾಡಲಾಗುತ್ತಿದೆ. ವೃದ್ದರಿಗೆ, ಅಸಹಾಯಕರಿಗೆ ವರದಾನವಾಗಿದ್ದ ಸಂಧ್ಯಾ ಸುರಕ್ಷಾ, ಮನಸ್ವಿನಿ, ವಿಧವಾ ವೇತನಗಳ ಸಹಾಯಧನದಲ್ಲಿ ವ್ಯತ್ಯಯ ಉಂಟಾಗಿದ್ದು ಕ್ಷೇತ್ರದ ಜನ ಈ ಅವ್ಯವಸ್ಥೆ ಬಗ್ಗೆ ನನ್ನ ಗಮನಕ್ಕೂ ಬಂದಿದ್ದು, ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದರು. ಇದೇ ವೇಳೆ ಶಿವಮೊಗ್ಗದಲ್ಲಿ ಈದ್ ವಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣ ಎಂದರು. ತಮ್ಮ ಅಕ್ರಮಗಳನ್ನು ಯಾರೂ ಪ್ರಶ್ನಿಸದ ಹಾಗೆ ಮಾಡಲು ಮಾಹಿತಿ ಹಕ್ಕು ಹೋರಾಟಗಾರರ ವಿವರಗಳನ್ನು ಪಡೆಯಲು ಸರ್ಕಾರ ಯತ್ನಿಸಿದ್ದು ತೀವ್ರ ಜನಾಕ್ರೋಶ ಹಾಗೂ ವಿರೋಧ ಪಕ್ಷಗಳ ವಿರೋಧದಿಂದ ಸರ್ಕಾರ ಅನಿವಾರ್ಯವಾಗಿ ಹಿಂದೆ ಸರಿದಿದೆ. ಹೀಗೆ ಸಮಸ್ಯೆಗಳ ಪಟ್ಟಿಯ ಸರಮಾಲೆಯೇ ಇದ್ದು, ಸರ್ಕಾರ ಈ ಕೂಡಲೇ ಅಗತ್ಯ ಕ್ರಮ ಕೈಗೊಂಡು ಜನರ ಹಿತವನ್ನು ಕಾಪಾಡಬೇಕೆಂದು ಶಾಸಕರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.