ಇದು ಚಂದ್ರನ್ದು, ಇದು ಸೂರ್ಯಂದು, ಇದು ಪವಿದು, ಇದು ನಮ್ಮನೆ ಕೆಂಪನ್ದು, ಇದು ಚುಕ್ಕಿದು, ಇದು ಗೌರಿದು, ಇದು ಕುಳ್ಳಿದು, ಇದು ಗುಂಡುದು ಮತ್ತಿದು ಪಿಳ್ಳೆದು.. ಏನಿದೆಲ್ಲ ಅಂದುಕೊಂಡ್ರಾ? ಚಿಕ್ಕವರಿದ್ದಾಗ ಅಮ್ಮ ಊಟದ ತುತ್ತಿಗೆ ಇಡುತ್ತಿದ್ದ ಹೆಸರುಗಳು. ಸೂರ್ಯ, ಚಂದ್ರ, ಗೆಳೆಯರ ಹೆಸರುಗಳು ಬಿಟ್ಟರೆ ಉಳಿದಿದ್ದು ಮನೆಯಲ್ಲಿರುವ ದನ ಕರು, ಬೆಕ್ಕು ನಾಯಿಗಳ ಹೆಸರುಗಳು. ಅವುಗಳನ್ನು ತುಂಬಾ ಪ್ರೀತಿಸೋ ಬಾಲ್ಯ ಅದು. ಅವುಗಳ ಹೆಸರು ಇಟ್ಟರೆ ಖಂಡಿತ ಊಟ ಅಂತೂ ಖಾಲಿ ಆಗುತ್ತದೆ ಎಂಬ ಅಮ್ಮನ ಲೆಕ್ಕಾಚಾರ. ಅದು ಯಾವಾಗಲು ಖಾಲಿಯಾಗಿದೆ ಎಂಬುದು ಅಷ್ಟೇ ಸತ್ಯ. ವಿಷಯ ಅದೇ ಮೊನ್ನೆ ಮೊನ್ನೆ ತಾಯಿ ಭಾರತಿಯಿಂದ ರಕ್ಷಾ ಬಂಧನ ಪಡೆದ ಚಂದಿರಮನ ಸುದ್ದಿ. ಚಂದ್ರನ ಮೇಲೆ ನಿಂತು ಒಬ್ಬಳು ತಾಯಿ ಇದು ಭೂಮಿದು, ಇದು ಸೂರ್ಯಂದು, ಇದು ನಮ್ಮ ಇಸ್ರೋದು ಅಂತ ಹೇಳುತ್ತಾ ಭೂಮಿ ಕಡೆ ಕೈ ತೋರಿ ಊಟ ಮಾಡಿಸುವ ದಿನಗಳು ಇನ್ನೇನು ಬಹಳ ದಿನ ಉಳಿದಿಲ್ಲ. ಅಹುದು ವಿಜ್ಞಾನ, ತಂತ್ರಜ್ಞಾನ ಮತ್ತು ಜೊತೆ ಕೊಡುವ ರಾಜಜ್ಞಾನ ಕಂಡರೆ ಆ ದಿನಗಳು ದೂರವಿಲ್ಲ. ಮತ್ತೇನೋ ಏಕೆ? ಇದೇ ಎರಡು ನೂರು ವರ್ಷಗಳ ಹಿಂದೆ ಸಹಸ್ರಾರು ಕಿ ಮೀ ದೂರದಲ್ಲಿರುವ ವ್ಯಕ್ತಿಗಳು ನೋಡುತ್ತಾ ಮಾತಾಡಬಹುದು ಎಂದಿದ್ದರೆ ಜನ ಆತನನ್ನು ಏನು ಮಾಡಿರಬಹುದು?! ಅಂದೆಲ್ಲಾ ತಾಂತ್ರಿಕತೆ ಒಮ್ಮೆಲೇ ಬೆಳೆದು ನಿಲ್ಲಲಿಲ್ಲ. ಆದರೆ ಈಗ ಹಾಗಲ್ಲ, ಜನ ಈ ಬದಲಾವಣೆಗಳಿಗೆ ಹೊಂದಿಸಿಕೊಳ್ಳುವ ಪರಿ ನೋಡಿದರೆ ಅದೊಂದು ಅನಂತ ಪ್ರಕ್ರಿಯೆ ಎಂಬುದು ಅಂತೂ ಸತ್ಯ.
ಮೊನ್ನೆ ಮೊನ್ನೆ ಚಂದ್ರಯಾನ ನಿರೀಕ್ಷಿತ ಯಶಸ್ಸು ಗಳಿಸಿ, ಜನಮಾನಸದಲ್ಲಿ ಇನ್ನು ಹಾಗೆ ಉಳಿದಿದೆ. ಆದರೆ ಈಗಲೂ ಅದರ ಗೆಲುವು ಹಲವೆಡೆ ಅಳಿಸಲಾಗದ ಉರಿ ಹಚ್ಚಿ ಹೋಗಿದೆ. ಈಗ ಅದರ ಕುರಿತ ಪ್ರತಿಕ್ರಿಯೆ ಮತ್ತು ಯಾನದಿಂದ ಆಗುವ ಉಪಯೋಗ ನೋಡಿದರೆ ಈ ವಿಷಯ ಗಂಭೀರತೆ ಅರ್ಥ ಆಗಬಹುದು ಎನ್ನಿಸುತ್ತದೆ.
ಚಂದ್ರನ ದಕ್ಷಿಣ ಧ್ರುವ ಈ ದಶಕದೊಳಗೆ ತಾವು ತಲುಪುತ್ತೇವೆ ಎಂದು ಚೀನಾ ಮತ್ತು ಅಮೇರಿಕಾ ಇದಾಗಲೇ ಹೇಳಿಯಾಗಿದೆ. ಹಾಗಾದರೆ ಯಾಕೆ ಇಷ್ಟು ಕಾತುರ ಚಂದ್ರನ ಆ ಭಾಗ ತಲುಪಲು? ಉತ್ತರ ಸರಳ ಚಂದ್ರನನ್ನು ಎರಡು ಭಾಗ ಎಂದುಕೊಂಡರೆ ಒಂದು ಭಾಗ ಎಂದೆಂದಿಗೂ ಬೆಳಕಿನಿಂದ ಕೂಡಿರುತ್ತದೆ ಮತ್ತು ಇನ್ನೊಂದು ಭಾಗ ಕತ್ತಲಿನಿಂದ ಕೂಡಿರಲಿದೆ. ಈಗ ಭಾರತ ತಲುಪಿರುವುದು ಅದೇ ಅಂಧಕಾರ ತುಂಬಿದ ಭಾಗವನ್ನು. ನಿಮಗಿದು ಗೊತ್ತಿರಲಿ, ಇಂತಹ ಸಾಹಸ ಮಾಡಿರುವುದು ರಷ್ಯಾ ಮತ್ತು ಭಾರತ ಮಾತ್ರ. ರಷ್ಯಾ ಇದರಲ್ಲಿ ವಿಫಲ ಹೊಂದಿದ್ದು ಇತಿಹಾಸ. ಇಲ್ಲಿಯ ತನಕ ಚಂದ್ರನ ತಲುಪಿರುವ ಅಷ್ಟು ನೌಕೆಗಳು ಚಂದ್ರನ ಹೊಳಪಾದ ಬದಿಗೆ ತಲುಪಿದ್ದು, ಇದು ಲ್ಯಾಂಡಿಂಗ್ ಸ್ನೇಹಿ ಎನ್ನಬಹುದು. ಆದರೆ ದಕ್ಷಿಣ ಧ್ರುವ ಅಂತ ಯಾವ ನಾಜೂಕುತನ ಇಲ್ಲದ ಕಠೋರ ತೀರ. ಸದಾ ಕತ್ತಲು, ಪ್ರತಿಕೂಲ ಹವಾಮಾನ, ದೊಡ್ಡ ಗುಂಡಿಗಳು, ಅಷ್ಟೇ ಉಬ್ಬುಗಳು ಇದೆಲ್ಲ ಅದರ ಗುಣವೈಶಿಷ್ಟಗಳು. ಬಹುಷಃ ಇದೇ ಕಾರಣ ಯಾರೂ ಈ ದುಸ್ಸಾಹಸಕ್ಕೆ ಕೈ ಹಾಕಿರಲಿಲ್ಲ. ಮತ್ತೆ ಹೇಳುವುದಾದರೆ ರಷ್ಯಾದ 1200 ಕೋಟಿ ರೂಪಾಯಿಗಳ ಯಾನ ಮುಳುಗಿದ್ದು ಇಲ್ಲಿಯೇ ಆಗಿತ್ತು.
ಹಾಗಾದರೆ ಚಂದ್ರನ ಈ ಭಾಗ ಇಷ್ಟೊಂದು ರೋಚಕ ಮತ್ತು ಪ್ರಯೋಜನಕಾರಿ ಅನ್ನಿಸಿಕೊಳ್ಳುವುದು ಏಕೆ? ಪ್ರಥಮ ಚಂದ್ರಯಾನ ಹಾಗೂ ದ್ವಿತೀಯ ಚಂದ್ರಯಾನದ ಫಲಿತಾಂಶವಾಗಿ ಅಲ್ಲಿ ಹಿಮದ ಅಂಶ ಇರುವ ಸೂಚನೆ ಸಿಕ್ಕಿತ್ತು. ಅದು ಬಾಹ್ಯಾಕಾಶ ಜೀವಿಯೇ ಸಿಕ್ಕಷ್ಟು ಸಂಭ್ರಮ ಪಡುವ ಸುದ್ದಿ ಯಾಕೆಂದರೆ ಈ ಹಿಮ ಮುಂದಿನ ದಿನಗಳಲ್ಲಿ ಪ್ರಾಣಜಲ, ಇಂಧನ ಮತ್ತು ಪ್ರಾಣವಾಯು ಕೂಡ ಆಗಬಹುದಾದ ವಸ್ತು. ಈ ಹಿಮವೇ ಆಧಾರವಾಗಿ ಮುಂದಿನ ಎಲ್ಲಾ ಬಾಹ್ಯಾಕಾಶ ಯಾತ್ರೆಗಳು ಚಂದ್ರನ ಒಡಲಿಂದ ಮೇಲೆದ್ದರೆ ಅದು ಅಂತಹ ಜೇಬುಸ್ನೇಹಿ ಕೂಡ ಆಗಿರಲಿದೆ. ಭೂಮಿಯ ಗುರುತ್ವಾಕರ್ಷಣೆ ತಪ್ಪಿಸುವ ಮತ್ತು ಇಲ್ಲಿಂದ ತೆರಳಲು ತಗಲುವ ವೆಚ್ಚದಲ್ಲಿ ದೊಡ್ಡ ಮಟ್ಟದಲ್ಲಿ ಉಳಿತಾಯ ಆಗಲಿದೆ.
ಎಲಾ ಭಾರತವೇ ನಮ್ಮ ಹತ್ತಿರವೇ ಪ್ರತಿ ವರ್ಷ ಧರ್ಮದ ದುಡ್ಡು ತೆಗೆದುಕೊಂಡು, ನೀವು ಚಂದ್ರಯಾನ ಮಾಡುತ್ತಿದ್ದೀರಾ ಅಂತ ಪ್ಯಾಟ್ರಿಕ್ ಕ್ರಿಷ್ಟಿ ಎಂಬಾತ ಊಳಿಟ್ಟಿದ್ದು ಇದಾಗಲೇ ವೈರಲ್ ಆಗಿದೆ. ಈತ ಗ್ರೇಟ್ ಬ್ರಿಟನ್ ಎಂಬ ಸುದ್ದಿ ಸಂಸ್ಥೆಗೆ ಸೇರಿದ ಪತ್ರಕರ್ತ. ಮೊದಲು ಆತನ ವರಾತ ಕೇಳಿ, ‘2016-21ರ ವರೆಗೆ ಭಾರತಕ್ಕೆ ಯುಕೆ ಕೊಟ್ಟಿರುವ ದುಡ್ಡು 2.3 ಬಿಲಿಯನ್ ಪೌಂಡ್ಸ್ ಹಾಗೂ ಮುಂದಿನ ವರ್ಷ ಕೊಡಲಿರುವ ಐವತ್ತೇಳು ಮಿಲಿಯನ್ ಪೌಂಡ್ಸ್ ಅನ್ನು ತಡೆಯಬೇಕು. ಭಾರತದ ಬಳಿ ರಾಕೆಟ್ ಹಾರಿಸಲು ದುಡ್ಡಿದೆ. ಬ್ರಿಟನ್ ಗೆ ತನ್ನ ತೆರಿಗೆದಾರರ ಹಣ ಪೋಲು ಮಾಡಿ ಭಾರತಕ್ಕೆ ನೀಡುವ ಅವಶ್ಯಕತೆ ಏನಿದೆ? ನೀವು ಬಾಹ್ಯಾಕಾಶ ಯಾನ ಮಾಡುತ್ತೀರಿ ಎಂದಾದರೆ ನಮ್ಮ ಬಳಿ ಕೈಯ್ಯೊಡ್ಡಲು ಯಾಕೆ ಬಂದಿರಿ?’ ಎಂಬುದು. ಅರ್ಧ ಭಾರತ ಬಡವರಿಂದ ತುಂಬಿದೆ, ಈಗ ಯಾಕೆ ಚಂದ್ರಯಾನ ಎನ್ನುವುದು ಅವರ ಮೊಂಡು ವಾದ. ನೈಜ ವಿಷಯ ಏನು ಎಂದರೆ, ಭಾರತ ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕತೆ. ಯುನೈಟೆಡ್ ಕಿಂಗ್ಡಮ್ ಎಂದು ಕರೆಸಿಕೊಳ್ಳುವ ದರೋಡೆಕೋರ ದೇಶಕ್ಕೆ ತನಗಿಂತ ಮೊದಲು ತಾನು ಎರಡು ನೂರು ವರ್ಷಗಳ ಕಾಲ ದೋಚಿದ ದೇಶ ಚಂದ್ರನ ತಲುಪಿದ್ದು ತಾಳಲು ಆಗಲೇ ಇಲ್ಲ. ಭಾರತ 2015 ರಿಂದಲೇ ಬ್ರಿಟನ್ ಒಂದು ಬಿಡಿಗಾಸು ಧರ್ಮಕ್ಕೆ ಪಡೆದಿಲ್ಲ. ಹಾಗಾದರೆ ಆತ ಹೇಳುವ ಬಿಲಿಯನ್ ಕಥೆ ಯಾವದಕ್ಕೆ ಸಂಬಂಧ ಪಟ್ಟಿದ್ದು ಎಂದರೆ, ICAI ಪ್ರಕಾರ ಇದು ಬಹುಪಕ್ಷೀಯ ಮೂಲಗಳ ಮೂಲಕ ಹೂಡಿಕೆ ಮತ್ತು ಆದಾಯ. ಇದು ಕೇವಲ ಭಾರತದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯುಕೆ ಖರ್ಚು ಮಾಡುತ್ತಿರುವ ಮೊತ್ತ. ಇನ್ನು ಸರಳವಾಗಿ ಹೇಳುವುದಾದರೆ, ದೊಡ್ಡ ಪ್ರಮಾಣದಲ್ಲಿ NGO ಗಳಿಗೆ ಹರಿದು ಬಂದ ಹಣ. ಇದರಿಂದ ಭಾರತಕ್ಕೆ ನಷ್ಟ ಆಗಿದೆಯೇ ಹೊರತು ಉಪಯೋಗವಂತು ಇಲ್ಲ. ಭಾರತದಲ್ಲಿ ಬ್ರಿಟಿಷ್ ಸಂಬಂಧೀ ಧನಾತ್ಮಕ ವಾತಾವರಣ ಬೆಳೆಸಲು, ದೇಶ ವಿರೋಧಿ ಚಟುವಟಿಕೆಗಳಿಗೆ ಬಲ ತುಂಬಲು ಬಳಕೆ ಆಗಿದ್ದೇ ಜಾಸ್ತಿ. ವಿಪರ್ಯಾಸವೆಂದರೆ, ಅದೇ ಕ್ರಿಷ್ಟಿಯ ದೇಶದಲ್ಲಿ ಭಾರತ ಎರಡನೇ ಅತೀ ದೊಡ್ಡ ವಿದೇಶೀ ಹೂಡಿಕೆದಾರವಾಗಿದೆ. ಅಂದರೆ, ಸರಿ ಸುಮಾರು 954 ಭಾರತೀಯ ಕಂಪನಿಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಮೊದಲೇ ಹೇಳಿದಂತೆ ಜಗತ್ತನ್ನೇ ಲೂಟಿ ಮಾಡಿದ ಬ್ರಿಟಿಷರು 1765 ರಿಂದ 1938 ರವರೆಗೆ ಭಾರತದಿಂದ ಕದ್ದಿದ್ದು ಸುಮಾರು ನಲವತ್ತೈದು ಟ್ರಿಲಿಯನ್ ಡಾಲರ್. ಇದು ಆ ದೇಶದ ಒಟ್ಟು ಜಿಡಿಪಿಯ 15 ಪಟ್ಟು ಎಂದರೆ ನೀವು ನಂಬಲೇಬೇಕು. ಅಂತಹ ಒಂದು ದೇಶದ ನಾಗರೀಕ ಭಾರತಕ್ಕೆ ಬುದ್ಧಿ ಹೇಳುವುದು ಮೂಢತನ ಅಲ್ಲದೇ ಮತ್ತೇನಿಲ್ಲ. ಬಡ ದೇಶ, ಶೌಚಾಲಯಗಳೇ ಇಲ್ಲದ ದೇಶ ಎಂದು ಅವರಿಂದ ಕರೆಸಿಕೊಳ್ಳುವ ಭಾರತ ಕಳೆದ ಮೂರು ವರ್ಷಗಳಲ್ಲಿ 80 ಕೋಟಿ ಜನರಿಗೆ ದಿನನಿತ್ಯದ ಆಹಾರ ಕೊಡುತ್ತಿದೆ. ಅಷ್ಟು ಆದಾಯ ಇಲ್ಲಿಯೇ ಇರುವ ಇಂದಿಗೂ ಅಲ್ಲಿಯ ದೊರೆಗೆ ಕಾಣಿಕೆ ಕೊಡುವ ದೇಶದ ಬಳಿ ಹೋಗಿ ಬೇಡುವ ದರ್ದು ಇದೆಯೇನು?! ಖಂಡಿತ ಇಲ್ಲ.
ಅಲ್ಲ ಕಣ್ರಿ ಇವ್ರೇ ಯಾರಿಗೆ ಬೇಕ್ರಿ ಈ ರಾಕೆಟ್ ಬಿಡೋದು, ನೂರಾರು ಕೋಟಿ ಖರ್ಚು… ದೇಶದ ತುಂಬಾ ಬಡತನ, ಅರ್ಧ ಜನರ ಹತ್ರ ಟಾಯ್ಲೆಟ್ ಇಲ್ವಂತೆ ಎನ್ನುವ ಇನ್ನೊಂದು ವರ್ಗ ಇದೆ. ಜಗತ್ತಿನ ದೊಡ್ಡ ಪ್ರತಿಮೆ ಕಟ್ಟಿದರೂ ಇದೇ ಗೋಳು, ಚಂದ್ರನ ಸೂರ್ಯನ ಮುಟ್ಟಿ ಬಂದರೂ ಇದೇ ಗೋಳು ಅದು ಬಿಡಿ ಭಾರತದ ಅಸ್ಮಿತೆ ಶ್ರೀರಾಮನ ಮಂದಿರವೂ ಇವರಿಗೆ ಬೇಡ. ಅದರಿಂದ ಬರುವ ಆದಾಯಗಳ ಇನ್ನೊಮ್ಮೆ ನೋಡೋಣ. ಈಗ ಇಸ್ರೋ ಬಗ್ಗೆ ಹೇಳುವುದಾದರೆ,
1970 ರಿಂದ ಇಲ್ಲಿಯ ತನಕ ಇಸ್ರೋ ಅಭಿವೃದ್ಧಿ ಪಡಿಸಿದ ನಾನೂರಕ್ಕೂ ಹೆಚ್ಚಿನ ತಂತ್ರಜ್ಞಾನ ಸಂಬಂಧೀ ವಿಷಯಗಳಿಂದ 235ಕ್ಕೂ ಹೆಚ್ಚಿನ ಉದ್ಯಮಗಳು ಅನುಕೂಲ ಪಡೆದಿವೆ.
ಈಗಾಗಲೇ ನೂರಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಇಸ್ರೋದೊಂದಿಗೆ ಒಪ್ಪಂದ ಮಾಡಿಕೊಂಡಿವೆ.
ಕೇವಲ ವಿದೇಶೀ ಉಪಗ್ರಹಗಳಿಗೆ ಜೊತೆಯಾಗುವ ಮೂಲಕ ಇಸ್ರೋ ಸರಿ ಸುಮಾರು 3300 ಕೋಟಿ ರೂಪಾಯಿಗಳ ಆದಾಯ ಗಳಿಸಿದೆ ಎಂದರೆ ನಂಬಲೇಬೇಕಾದ ವಿಷಯ.
ಪರೋಕ್ಷವಾಗಿ ದೇಶದ ಕುರಿತ ಗೌರವ ಹೆಚ್ಚಲಿದ್ದು, ಇದರಿಂದ ಹೆಚ್ಚಿನ ಬಂಡವಾಳ, ಉದ್ಯೋಗ ಸೃಷ್ಟಿ ತನ್ಮೂಲಕ ಅಭಿವೃದ್ಧಿ ಹೊಂದಲಿದೆ. ಇಷ್ಟೆಲ್ಲಾ ಆದಾಯ ಇಸ್ರೋ ಪಡೆದರೂ ಇದು ಕೇವಲ ಪ್ರತಿಶತ 2 ಎಂದರೆ ಒಟ್ಟು ಆದಾಯ ಎಷ್ಟು ಎನ್ನುವ ಅಂದಾಜು ಸಿಗುವುದು ಕಷ್ಟ.
ಆರ್ಥಿಕವಾಗಿ ಹಿಂದುಳಿದಿರುವುದು ಭಾರತದಲ್ಲಿ ಮಾತ್ರ ಅಲ್ಲ. ಅಮೇರಿಕಾದಲ್ಲಿ ಸರಿ ಸುಮಾರು ಒಟ್ಟು ಜನ ಸಂಖ್ಯೆಯ 12%, ರಷ್ಯಾದಲ್ಲಿ 12% ಅಷ್ಟೇ ಏಕೆ ಬ್ರಿಟನಿನಲ್ಲಿ 20% ಬಡವರಿದ್ದಾರೆ. ಹಾಗೆಂದು ದೇಶದ ಅಭಿವೃದ್ಧಿ ಎಂದಿಗೂ ನಿಲ್ಲಬಾರದು. ದೇಶ ಕಾಯುವ ಸೈನಿಕ, ದೇಶ ಪೊರೆವ ರೈತ ಹಾಗೆಯೇ ದೇಶದ ವಿಜ್ಞಾನಿ, ಅವರನ್ನು ಗೌರವ ಕೊಟ್ಟು ಕಾಯುವ ಹಾಗೂ ಅವರ ಸಾಧನೆಗಳ ಪ್ರೋತ್ಸಾಹಿಸುವ ಜವಾಬ್ದಾರಿ ಭಾರತೀಯರ ಮೇಲಿದೆ. ಆರ್ಥಿಕ ಜಗತ್ತಿನ ಮೂರನೇ ಸ್ಥಾನಕ್ಕೆ ದಾಪುಗಾಲು ಇಡುತ್ತಿರುವ ಈ ಹೊತ್ತಿನಲ್ಲಿ ಇಸ್ರೋದ ಕನಸು;ಭಾರತದ ಕನಸು, ಭಾರತದ ಕನಸು;ಭಾರತೀಯರ ಕನಸು. ಪ್ರಿಯಂ ಭಾರತಂ ತತ್ ಸದಾ ಪೂಜನೀಯಂ.
✍️ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.