ಕಾಪು: ಬಕ್ರೀದ್ ಹಬ್ಬದ ಪ್ರಯುಕ್ತ ಕುರ್ಬಾನಿಗೆಂದು (ವಧೆ ನಡೆಸಿ ಹಂಚುವ ಉದ್ದೇಶದಿಂದ) ಗೋ ಹತ್ಯೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ಕಟಪಾಡಿ ಸಮೀಪದ ಮಣಿಪುರದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮಣಿಪುರ ಚರ್ಚ್ ಮುಂಭಾಗದಲ್ಲಿರುವ ಹಸನ್ ಶೇಖ್ ಎಂಬವರ ಮನೆಯ ಹಿಂಭಾಗದಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋ ಹತ್ಯೆ ನಡೆಯತ್ತಿರುವ ಬಗ್ಗೆ ಉಡುಪಿ ಪೊಲೀಸ್ ಕಂಟ್ರೋಲ್ ರೂಮ್ಗೆ ಅಪರಿಚಿತರು ದೂರವಾಣಿ ಮೂಲಕ ಮಾಹಿತಿ ರವಾನಿಸಿದ್ದರು.
ಕಂಟ್ರೋಲ್ ರೂಂ ನಿಂದ ಮಾಹಿತಿ : ಉಡುಪಿ ಎಸ್ಪಿ ಆಫೀಸ್ನ ಕಂಟ್ರೋಲ್ ರೂಮ್ನಿಂದ ಬಂದ ಮಾಹಿತಿಯ ಮೇರೆಗೆ ಉಡುಪಿ ಎಸ್ಪಿ ಅಣ್ಣಾಮಲೈ ಅವರ ಸೂಚನೆಯಂತೆ ಕಾರ್ಕಳ ಎಎಸ್ಪಿ ಸುಮನ್ ಪನೇಲ್ಕರ್, ಕಾಪು ಸಿಐ ಸುನೀಲ್ ನಾಯ್ಕ, ಕಾಪು ಎಸ್.ಐ. ಜಗದೀಶ್ ರೆಡ್ಡಿ ಸಹಿತ ಪೊಲೀಸರು ಜಂಟಿಯಾಗಿ ಧಾಳಿ ಸಂಘಟಿಸಿದ್ದರು.
ಗುಂಡಿಯೊಳಗೆ ಎತ್ತಿನ ಕೊಂಬು : ದಾಳಿಯ ಸಂದರ್ಭ ಘಟನಾ ಸ್ಥಳದಲ್ಲಿ ಗೋ ಹತ್ಯೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ವಧೆಯ ಬಳಿಕ ಕೊಳಚೆ ವಸ್ತುಗಳನ್ನು ಹಾಕಲು ನಿರ್ಮಿಸಿರುವ ತ್ಯಾಜ್ಯ ಸುರಿಯುವ ಗುಂಡಿಯೊಳಗೆ ಹಾಕಲಾಗಿದ್ದ ಎತ್ತುಗಳ ಕೊಂಬು ಇತ್ಯಾದಿ ಕಳೇಬರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೋ ಹತ್ಯಾ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲು : ಹಸನ್ ಶೇಖ್ ಮಣಿಪುರ ಅವರ ಮನೆಯ ಆವರಣದಲ್ಲಿ ಗೋ ಹತ್ಯೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಗೋ ಹತ್ಯೆ ಬಗ್ಗೆ ಇಬ್ಬರ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳದಿಂದ ದನದ ಕೊಂಬು-2, ಹತ್ಯೆ ಮತ್ತು ಮಾಂಸ ಮಾಡಲು ಬಳಸುತ್ತಿದ್ದ ಕತ್ತಿ, ಮಾಂಸ ಕೊಚ್ಚುವ ಮರದ ತುಂಡು, ದನದ ಮಾಂಸ ಸಹಿತವಾಗಿ ಕೆಲವು ತ್ಯಾಜ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ : ಮಣಿಪುರದಲ್ಲಿ ಕುರ್ಬಾನಿಗೆ ಗೋ ಹತ್ಯೆ ನಡೆದಿರುವ ಹತ್ಯಾ ಕೇಂದ್ರಕ್ಕೆ ಪೊಲೀಸ್ ಧಾಳಿ ನಡೆದ ಸುದ್ಧಿ ತಿಳಿಯುತ್ತಲೇ ನೂರಾರು ಮಂದಿ ಸ್ಥಳಕ್ಕೆ ಧಾವಿಸಿದ್ದು, ಪೊಲೀಸ್ ದಾಳಿಯನ್ನು ಖಂಡಿಸಿದರು. ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಕೆಲವೊಂದು ಸ್ಥಳೀಯ ಮುಸ್ಲಿಂ ಮುಖಂಡರು ಯುವಕರನ್ನು ಸಮಾಧಾನಪಡಿಸಿ ಪೊಲೀಸ್ ಕಾರ್ಯಾಚರಣೆಗೆ ಸಹಕಾರ ನೀಡಿದ್ದು, ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದರು.
ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ : ಘಟನಾ ಸ್ಥಳದಲ್ಲಿ ಕೆಎಸ್ಆರ್ಪಿ ತುಕಡಿ ಸಹಿತವಾಗಿ ಸುಮಾರು 75ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ಕರ್ತವ್ಯದಲ್ಲಿ ನಿಯೋಜಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಯಾವುದೇ ಅಹಿತಕರ ಘಟನೆಗೆ ಆಕ್ಷೇಪವಿಲ್ಲದಂತೆ ಪೊಲೀಸರು ಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ.ಘಟನಾ ಸ್ಥಳದಲ್ಲಿ ಸಂಗ್ರಹಿತ ಕಳೇಬರ ಸೊತ್ತುಗಳನ್ನು ಪಶು ವೈದ್ಯರ ಸಮ್ಮುಖದಲ್ಲಿ ಹಾಜರು ಪಡಿಸಲಾಗಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬಕ್ರೀದ್ ಪ್ರಯುಕ್ತ ಮಾಂಸ ಹಂಚಲು ಕುರ್ಬಾನಿ : ಬಕ್ರೀದ್ ಹಬ್ಬದ ಪ್ರಯುಕ್ತ ಕುರ್ಬಾನಿ ನೀಡಿ, ಬಳಿಕ ಇದರ ಮಾಂಸವನ್ನು ನೂರಾರು ಕಡೆಗಳಿಗೆ ಪ್ಯಾಕೆಟ್ ಮೂಲಕ ವಿಂಗಡಿಸಿ ಹಂಚಲೆಂದು ಎತ್ತುಗಳನ್ನು ಬಲಿ ನೀಡಲಾಗಿದ್ದು, ನಮಗಾಗದವರ ಕುಮ್ಮಕ್ಕಿನಿಂದ ಈ ರೀತಿ ನಡೆದಿದೆ. ನಮ್ಮದೇನೂ ಗೋ ಹತ್ಯಾಕೇಂದ್ರ ಅಲ್ಲವೆಂದು ಪೊಲೀಸ್ ದಾಳಿಗೊಳಗಾದ ಮನೆಯವರು ಸ್ಪಷ್ಟ ಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.