ಬೆಂಗಳೂರು: ಸಿದ್ದರಾಮಯ್ಯರಿಂದ ದಲಿತರಿಗೆ ಮಹಾ ಮೋಸ ಆಗುತ್ತಿದೆ. ಕಾಂಗ್ರೆಸ್ ಪಕ್ಷವೇ ವಂಚಕರ ಸಂತೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಕಡೆ ವರ್ಗಾಯಿಸಲು ನೆರವಾಗುವ ಮೂಲಕ ದಲಿತರ ಸಂಹಾರದ ನೀಚ ಕೆಲಸಕ್ಕೆ ಮಹದೇವಪ್ಪ ಮತ್ತು ಪ್ರಿಯಾಂಕ್ ಖರ್ಗೆ ಸಹಕಾರ ಮಾಡಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ಬಿಸಾಡಿ ಹೊರಕ್ಕೆ ಬರಲಿ ಎಂದು ಸವಾಲು ಹಾಕಿದರು. ಇಲ್ಲವಾದರೆ ಕಾಂಗ್ರೆಸ್ ದಲಿತ ನಾಯಕರು ಧ್ವನಿರಹಿತರು ಮತ್ತು ಬೋನ್ಲೆಸ್ ಎಂದು ಕರೆಯಬೇಕಾದೀತು ಎಂದು ನುಡಿದರು.
ನಾನು ಕೆಲವು ದಿನಗಳ ಹಿಂದೆ ಮಾಡಿದ್ದ ಆಪಾದನೆ ಪ್ರಮುಖವಾಗಿ ಪ್ರಕಟವಾಗಿರಲಿಲ್ಲ. ಈಗ ಅದು ಮಾಧ್ಯಮಗಳಿಂದಾಗಿ ಪ್ರಚುರ ಪಡೆದಿದೆ. ಬಜೆಟ್ನ ಶೇ 24.1 ಹಣವನ್ನು ಎಸ್ಸಿ, ಎಸ್ಟಿ ಶ್ರೇಯೋಭಿವೃದ್ಧಿಗೆ ಬಳಸಲು ಸಿದ್ದರಾಮಯ್ಯನವರು ಒತ್ತಾಯಿಸಿದ್ದರು. ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ ಹಣವನ್ನು 2013ರಲ್ಲಿ 7 ಡಿ ನಿಯಮಾವಳಿ ಮೂಲಕ ಬೇರೆಡೆಗೆ ವರ್ಗಾಯಿಸುತ್ತಿದ್ದರು. ಬಸವರಾಜ ಬೊಮ್ಮಾಯಿಯವರು 7 ಡಿ ರದ್ದು ಮಾಡಲು ಮುಂದಾಗಿದ್ದರು. ಈಗ 7 ಡಿ ರದ್ದಾಗಿದೆಯೇ ಎಂದು ಅವರೇ ಹೇಳಲಿ ಎಂದು ಸಿದ್ದರಾಮಯ್ಯನವರಿಗೆ ಸವಾಲೆಸೆದರು.
ಬಿಜೆಪಿ ಶೇ 40 ಕಮಿಷನ್ ನಿಲ್ಲಿಸುವ ಮೂಲಕ ಗ್ಯಾರಂಟಿ ಯೋಜನೆ ಜಾರಿ, ಅಭಿವೃದ್ಧಿ ಮಾಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದರು. 3 ಲಕ್ಷ ಕೋಟಿ ಬಜೆಟ್ನಲ್ಲಿ ಶೇ 40 ಎಂದರೆ 1.20 ಲಕ್ಷ ಕೋಟಿ ಉಳಿಯಲಿಲ್ಲವೇ? ಗ್ಯಾರಂಟಿಗೆ 50 ಸಾವಿರ ಕೋಟಿ ಬಳಸಿದರೆ 70 ಸಾವಿರ ಕೋಟಿ ಉಳಿಯುವುದಿಲ್ಲವೇ? ಅದನ್ನು ಅವರು ಅಭಿವೃದ್ಧಿಗೆ ಬಳಸಬೇಕಲ್ಲವೇ ಎಂದು ಪ್ರಶ್ನಿಸಿದರು.
ಶೋಷಿತರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯದ ಸೌಕರ್ಯ, ಶೋಷಣೆರಹಿತ ಘನತೆಯ ಬದುಕು ಬೇಕು. ನಿಮ್ಮ ಬಿಟ್ಟಿ ಅಲ್ಲ. ಶೇ 24.1 ಎಂದು ಮೀಸಲಿಟ್ಟು, ಅದನ್ನೆಲ್ಲ ಬೇರೆ ಇಲಾಖೆಗೆ ಕೊಟ್ಟು ದಲಿತರಿಗೆ ಕೆಟ್ಟ ಹೆಸರನ್ನು ತರುತ್ತೀರಿ ಎಂದು ಟೀಕಿಸಿದರು.
ನಾವು ಪೌರಕಾರ್ಮಿಕರ ಖಾಯಂ ಮಾಡಿದ್ದೆವು. ನಾವು ದಲಿತರಿಗೆ ನ್ಯಾಯ ಕೊಟ್ಟಿದ್ದೇವೆ. ದಲಿತರ ಸಮಸ್ಯೆ ಮತ್ತು ವಿಚಾರ ಬಂದಾಗ ಹಕ್ಕು ಕೇಳುವ ಕೆಲಸ ಮಾಡಬೇಕು. ಇಲ್ಲವಾದರೆ ರಾಜೀನಾಮೆ ಕೊಟ್ಟು ಹೊರಕ್ಕೆ ಬನ್ನಿ ಎಂದು ಆಗ್ರಹಿಸಿದರು. ಆಪತ್ತು ಬಂದಾಗ ಕಾಂಗ್ರೆಸ್ ಪಕ್ಷ ದಲಿತರ ಕಾರ್ಡ್ ಬಳಸುತ್ತದೆ. 2006ರಲ್ಲಿ ಖರ್ಗೆಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಬಳಿಕ ಪರಮೇಶ್ವರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಅಧಿಕಾರ ಬಂದಾಗಲೂ ದಲಿತರನ್ನು ಸಿಎಂ ಮಾಡಲಿಲ್ಲ. ಬದಲಾಗಿ ಪಕ್ಷಕ್ಕೆ ವಲಸೆ ಬಂದ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ್ದರು ಎಂದು ಆಕ್ಷೇಪಿಸಿದರು.
ಎಐಸಿಸಿಯಲ್ಲಿ ಅಧ್ಯಕ್ಷರನ್ನಾಗಿ ಖರ್ಗೆಯವರನ್ನು ಮಾಡಿದ್ದು ಇದೇ ಕಾರಣಕ್ಕೆ ಎಂದು ತಿಳಿಸಿದರು. ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದವರು ಅಮಾಯಕರು ಎಂದು ಹೇಳಿದ್ದು, ದಲಿತ ವಿರೋಧಿಯಲ್ಲವೇ ಎಂದು ಪ್ರಶ್ನೆ ಕೇಳಿದರು. ಕೆಲವು ದಲಿತ ನಾಯಕರು ಮತ್ತು ಸಂಘಟನೆಗಳು ಪ್ಯಾಕೇಜ್ ಸಂಘಟನೆಗಳಂತಿವೆ. ದಲಿತರಿಗೆ ಅನ್ಯಾಯ ಕಂಡರೂ ಸುಮ್ಮನಿರುವ ಅವರ ಸ್ವರ ಎಲ್ಲಿ ಅಡಗಿದೆ ಎಂದು ಕೇಳಿದರು.
ಕಾಮಾಲೆ ಕಣ್ಣಿನಿಂದ ಪಕ್ಷಗಳನ್ನು ನೋಡದಿರಿ ಎಂದು ದಲಿತ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ ಅವರು, ಪ್ಯಾಕೇಜ್ ಬೆಂಬಲ ನೀಡದಿರಿ ಎಂದು ತಿಳಿಸಿದರು. ಕೆಲವು ದಲಿತ ಸಂಘಟನೆಗಳಿಗೆ ಕಾಂಗ್ರೆಸ್ನ ಸುಳ್ಳುಗಳೂ ಸತ್ಯ ಎನಿಸುತ್ತಿದೆ. ಕಾಂಗ್ರೆಸ್ ಸುಡುವ ಮನೆ, ದಲಿತರಿಗೆ ಭವಿಷ್ಯ ಇಲ್ಲ ಎಂದು ಡಾ. ಅಂಬೇಡ್ಕರರು ಹೇಳಿದ್ದರು. ಕೆಲವು ದಲಿತ ಸಂಘಟನೆಗಳ ಈಗಿನ ನಡೆ ಬಾಬಾಸಾಹೇಬ ಅಂಬೇಡ್ಕರರಿಗೆ ಮಾಡಿದ ಅಪಚಾರ ಎಂದು ತಿಳಿಸಿದರು.
ಇವತ್ತು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಸಭೆ ನಡೆದಿದೆ. ಬೆಲೆ ಏರಿಕೆ ಎಂದು ಬೊಮ್ಮಾಯಿ ಸರಕಾರ ಬಂದಾಗ ಬೊಬ್ಬಿಡುತ್ತಿದ್ದ ಕಾಂಗ್ರೆಸ್ಸಿಗರು ವಸ್ತುಗಳ ಬೆಲೆ ಗಗನದಿಂದ ಆಚೆಗೆ ಹೋದ ಬಗ್ಗೆ ಚರ್ಚಿಸಲಿ ಮತ್ತು ಕಾರಣ ತಿಳಿಸಲಿ ಎಂದು ಆಗ್ರಹಿಸಿದರು. ಹಾಲು, ವಿದ್ಯುತ್, ಹೋಟೆಲ್ ತಿಂಡಿ ತಿನಿಸು ಸೇರಿ ಎಲ್ಲ ಬೆಲೆ ಹೆಚ್ಚಾಗಿದೆ. ಕಾಂಗ್ರೆಸ್ ಬೆಲೆ ಮಾತ್ರ ಹೆಚ್ಚಾಗಿಲ್ಲ ಎಂದು ಟೀಕಿಸಿದರು.
ಈ ಸರಕಾರವು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಲೇ ಬಂತು. ವರ್ಗಾವಣೆ ದಂಧೆಯ ಪಾಲು ಕೇಳಲು ದೆಹಲಿ ಸಭೆ ನಡೆದಿದೆ. ಮುಂದಿನ ಚುನಾವಣೆಗೆ ಡಬ್ಬ ತುಂಬಿಸಲು ಸಭೆ ನಡೆಸಲಾಗುತ್ತಿದೆ. ವರ್ಗಾವಣೆ ದಂಧೆಯಲ್ಲಿ ಸರಕಾರ ಮುನ್ನಡೆದಿದೆ. ಎರಡೇ ತಿಂಗಳಲ್ಲಿ ಸಿದ್ದರಾಮಯ್ಯನವರ ಸರಕಾರ ಕೆಟ್ಟ ಸರಕಾರ ಎಂಬ ಹೆಸರು ಪಡೆದಿದೆ ಎಂದು ದೂರಿದರು. ರಾಜ್ಯ ಕಾರ್ಯದರ್ಶಿ ಜಗದೀಶ್, ಬೆಂಗಳೂರು ನಗರ ಜಿಲ್ಲೆ ಎಸ್ಸಿ ಮೋರ್ಚಾ ಅಧ್ಯಕ್ಷ ಎಚ್.ವಿ. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.