ಬೆಂಗಳೂರು: ಡಿ.ಜೆ.ಹಳ್ಳಿ- ಕೆ.ಜಿ.ಹಳ್ಳಿ ಘಟನೆಯಲ್ಲಿ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದ ಆರೋಪಿಗಳನ್ನು ಬಿಡುಗಡೆ ಮಾಡಲು ದಲಿತ ಗೃಹ ಸಚಿವರ ಮೇಲೆ ಒತ್ತಡ ತರಲಾಗಿದೆ. ಗೃಹ ಸಚಿವರು ತಪ್ಪಿತಸ್ಥರ ಬಿಡುಗಡೆಗೆ ಸೂಚಿಸಿದರೆ ಪಾಪ ಮಾಡಿದಂತಾಗುತ್ತದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ತನ್ವೀರ್ ಸೇಠ್ ಅವರು ಬರೆದ ಪತ್ರವನ್ನು ಸರಕಾರಕ್ಕೆ ಕಳಿಸಿದ್ದು, ಪತ್ರ ವಾಪಸ್ ಪಡೆಯಲು ಆಗ್ರಹಿಸಿದರು. ಇದರಲ್ಲಿ ನಿಮ್ಮನ್ನು ಸಿಲುಕಿಸುವ ಯತ್ನ ನಡೆದಿದೆ ಎಂದು ಡಾ.ಪರಮೇಶ್ವರರಿಗೆ ಕಿವಿಮಾತು ಹೇಳಿದರು.
ದಲಿತರ ಮನೆಗೆ ಬೆಂಕಿ ಹಾಕಿದ ಕಳಂಕವನ್ನು ಗೃಹ ಸಚಿವ ಪರಮೇಶ್ವರರಿಗೆ ಹಚ್ಚಲು ಕಾಂಗ್ರೆಸ್ ಪಿತೂರಿ ಮಾಡಿದೆ ಎಂದು ಟೀಕಿಸಿದರು. ಆಗ ಬಿಜೆಪಿ ಸರಕಾರವು ಅರವಿಂದ ಲಿಂಬಾವಳಿ, ಗುತ್ತೇದಾರ್, ಶಂಕರಪ್ಪ, ನಾನು ಮತ್ತು ಕೆಲವರಿದ್ದ ಸತ್ಯಶೋಧನಾ ಸಮಿತಿಯನ್ನು ಕಳಿಸಿತ್ತು. ನಾವು ಭಯಾನಕ ಘಟನೆ ಕುರಿತು ವರದಿ ಕೊಟ್ಟಿದ್ದೆವು. ಕಾಂಗ್ರೆಸ್ಸಿನ ಸತ್ಯಶೋಧನಾ ಸಮಿತಿಯ ಅಧ್ಯಕ್ಷತೆಯನ್ನು ಈಗಿನ ಗೃಹ ಸಚಿವ ಪರಮೇಶ್ವರರು ವಹಿಸಿದ್ದರು. ಸ್ಪಷ್ಟ ಪ್ರಾಥಮಿಕ ಮಾಹಿತಿ ಅವರಿಗೂ ಗೊತ್ತಿದೆ. ಆದರೆ, ಮರುಪರಿಶೀಲನೆಗೆ ಸೂಚಿಸುವ ಮೂಲಕ ದ್ರೋಹದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕೇಸನ್ನು ರಾಜ್ಯ ಸರಕಾರ ಹಿಂಪಡೆದರೆ ಕೇಂದ್ರ ಸರಕಾರವು ಸ್ವಯಂಪ್ರೇರಣೆಯಿಂದ ಈ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ನಮ್ಮ ಪಕ್ಷದಲ್ಲೂ ಕಾನೂನು ಘಟಕ ಇದೆ ಎಂದರಲ್ಲದೆ, ಸರಕಾರ ಇದನ್ನು ಮುಚ್ಚಿ ಹಾಕುವ ತಂತ್ರಗಾರಿಕೆಯಲ್ಲಿ ತೊಡಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವು ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಘಟನೆಯನ್ನು ಮರು ಪರಿಶೀಲಿಸಿ ಆರೋಪಿಗಳನ್ನು ಬಿಟ್ಟುಬಿಡಲು ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಅಲ್ಲಿನ ಘಟನೆಯಲ್ಲಿ ಕೇವಲ ಅಮಾಯಕರು ಇದ್ದರು ಎಂಬ ವಿಚಾರ ಪತ್ರದಲ್ಲಿದೆ ಎಂದು ತಿಳಿದಿರುವುದಾಗಿ ವಿವರಿಸಿದರು.
ಇದು ಓಲೈಕೆ, ಮತಬ್ಯಾಂಕಿನ ರಾಜಕಾರಣ ಎಂದು ಟೀಕಿಸಿದರು. ಇವತ್ತು ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, ತಾವು ಕೇಸುಗಳನ್ನು ಹಿಂಪಡೆಯುವುದಾಗಿ ಸಿಎಂ ತಿಳಿಸಿದ್ದಾರೆ. ಹಿಂದೆ ಪಿಎಫ್ಐ, ಎಸ್ಡಿಪಿಐ ಮೇಲಿದ್ದ 600-700 ಕೇಸುಗಳನ್ನು ಇದೇ ಮುಖ್ಯಮಂತ್ರಿಗಳು ವಾಪಸ್ ಪಡೆದಿದ್ದರು. ಈಗ ಪಿಎಫ್ಐ ಬ್ಯಾನ್ ಆಗಿದೆ. ಕೇಸು ಹಿಂಪಡೆದರೆ ಅವರಿಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ಎಚ್ಚರಿಸಿದರು. ಕೇಸು ಹಿಂಪಡೆದರೆ ಕಾನೂನು ಹೋರಾಟ ಮಾಡುತ್ತೇವೆ; ಇದರಿಂದ ಗೃಹ ಸಚಿವರ ಸ್ಥಾನಕ್ಕೂ ತೊಂದರೆ ಆದೀತು ಎಂದು ಎಚ್ಚರಿಕೆ ನೀಡಿದರು.
ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಘಟನೆ ಕೇವಲ ಕರ್ನಾಟಕಕ್ಕೆ ಮಾತ್ರ ಗೊತ್ತಿರುವುದಲ್ಲ. ಇಡೀ ರಾಷ್ಟ್ರ ಆ ದಿನಗಳಲ್ಲಿ ಅದನ್ನು ಗಮನಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಕೂಡ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಬಗ್ಗೆ ಪರಿಚಯ ಆಗಿದೆ ಎಂದರು. ಇದೇ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಆಗ ಬೆಂಕಿ ಹಾಕಿದ್ದರು ಎಂದು ನೆನಪಿಸಿದರು. ಆ ದಿನ ಅವರು ಮತ್ತು ಅವರ ಕುಟುಂಬ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿತ್ತು ಎಂದು ನುಡಿದರು.
ಅದರಲ್ಲಿ ಕಾಂಗ್ರೆಸ್ ನಾಯಕರೇ ಭಾಗವಹಿಸಿದ್ದರು. ಬಳಿಕ ಅವರ ಮೇಲೆ ಎಫ್ಐಆರ್ ಆಗಿತ್ತು. ಆ ಘಟನೆ ಕೇವಲ ಶಾಸಕರ ಮನೆಗೆ ಸೀಮಿತ ಆಗಿರಲಿಲ್ಲ. ಪೊಲೀಸ್ ಠಾಣೆಗೂ ಬೆಂಕಿ ಹಚ್ಚಲಾಗಿತ್ತು. ನಂತರ ಪೊಲೀಸ್ ವ್ಯಾನ್ಗಳು, 25- 30 ವಾಹನಗಳನ್ನು ಸುಟ್ಟು ಭಸ್ಮ ಮಾಡಲಾಗಿತ್ತು. ಅಂದಿನ ನಮ್ಮ ಸರಕಾರದ ಕ್ರಮದಿಂದ ಎಫ್ಐಆರ್ ಆಗಿ, ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಕರಣ ದಾಖಲಾಗಿತ್ತು. ಅನೇಕರು ಇದೀಗ ಜಾಮೀನಿನಡಿ ಹೊರಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಸುಮಾರು 200 ಜನರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಭಾಗವಹಿಸದೆ ಇರುವ ಅನೇಕರನ್ನು ಅವತ್ತೇ ಬಿಡುಗಡೆ ಮಾಡಲಾಗಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿತ್ತು ಎಂದ ಅವರು, ಈಗ ಗೃಹ ಸಚಿವ ಡಾ. ಪರಮೇಶ್ವರರ ಮೇಲೆ ಒತ್ತಡ ಇರುವುದು ಸ್ಪಷ್ಟ. ಈ ಒತ್ತಡಕ್ಕೆ ಅವರು ಮಣಿಯಬಾರದಿತ್ತು. ಬೆಂಕಿ ಹಾಕಿದವರು ಅಮಾಯಕರಾಗಿದ್ದರೆ ಇದು ಹಾಸ್ಯಾಸ್ಪದ ಎಂದರು. ಬೆಂಕಿ ಹಾಕಿದವರು ಅಮಾಯಕರಾಗಿದ್ದರೆ ಪತ್ರ ಬರೆದವರು ಅಮಾಯಕರೇ ಎಂದು ಪ್ರಶ್ನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.