ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮನವಿ ಮಾಡಿದರು.
ದೆಹಲಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸುವ ಸಂಪುಟದ ನಿರ್ಣಯದ ಜೊತೆಗೆ ಯಾವಾಗದಿಂದ ಅದು ಜಾರಿ ಆಗಲಿದೆ ಎಂದು ತಿಳಿಸಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದರು.
ಪ್ರಣಾಳಿಕೆಯಲ್ಲಿ ಮುದ್ರಿಸಿರುವಂತೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಉಚಿತ ಎಂದಿದ್ದೀರಿ. ಅದು ಪ್ರತಿ ಕುಟುಂಬಕ್ಕೆ ಅಲ್ಲ; ನಾವು ಕೊಟ್ಟ ಮಾತಿನಂತೆ ನಡೆಯುವವರು ಎಂದಿದ್ದೀರಿ. ಈಗ ನೀವು ಕುಟುಂಬಕ್ಕೆ 10 ಕೆಜಿ ಅನ್ನುತ್ತೀರಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ಜಮೀರ್ ಅಹ್ಮದ್ ಅವರು ಮನೆಮನೆ ಭೇಟಿ ವೇಳೆ ಮನೆಯಲ್ಲಿ 7 ಜನರಿದ್ದರೆ 70 ಕೆಜಿ ಅಕ್ಕಿ ಎಂದಿದ್ದ ವಿಡಿಯೋ ನೋಡಿದ್ದೇನೆ. ಈಗ ನೀವು ಪ್ರತಿ ಕುಟುಂಬಕ್ಕೆ 10 ಕೆಜಿ ಎಂದಿದ್ದೀರಿ. ಅದು ವ್ಯಕ್ತಿಗೋ ಕುಟುಂಬಕ್ಕೋ ಎಂದು ಸ್ಪಷ್ಟಪಡಿಸಿ ಎಂದು ಕೇಳಿದರು.
ವೆನಿಜುವೆಲ ಎಂಬ ರಾಷ್ಟ್ರ ಈ ರೀತಿ ಕೊಡುತ್ತ ಕೊಡುತ್ತ ದಿವಾಳಿ ಆಗಿ ಹೋಗಿದೆ. ಹಾಗೇ ನಮ್ಮ ರಾಜ್ಯ ಆಗದಿರಲಿ ಎಂದು ಆಶಿಸಿದ ಸಿ.ಟಿ. ಅವರು, ನೀವು ಬುದ್ಧಿವಂತರಿದ್ದೀರಿ. ಹಣ ಜೋಡಿಸುವ ಸಾಮಥ್ರ್ಯ ಇದೆ ಎಂದರಲ್ಲದೆ, ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ನಮ್ಮ ರಾಜ್ಯದ ಸಂಪನ್ಮೂಲ, ಸಾಲ, ಮೂಲಸೌಕರ್ಯದ ಮೇಲೆ ಹೂಡಿಕೆ ಎಷ್ಟು? ಸಾಲದ ಮೇಲೆ ಕಟ್ಟುವ ಬಡ್ಡಿ ಎಷ್ಟು? ಸಂಬಳ, ನಿವೃತ್ತಿ ವೇತನಕ್ಕೆ ಎಷ್ಟು ಹಣ ವಿನಿಯೋಗ ಆಗುತ್ತಿದೆ? ಎಂದು ಪ್ರಶ್ನಿಸಿದ ಅವರು, ಮೂಲ ಸೌಕರ್ಯದ ಮೇಲೆ ಹೂಡಿಕೆ ಮೂಲಕ ಆದಾಯ ಕ್ರೋಡೀಕರಣ ಸಾಧ್ಯವಿದೆ ಎಂದು ನೆನಪಿಸಿದರು. ಇಲ್ಲವಾದರೆ ಯೋಜನೆಗಳ ಅನುಷ್ಠಾನ ಸಾಧ್ಯವಿಲ್ಲ ಎಂದು ತಿಳಿಸಿದರು.
ಈಗಾಗಲೇ ಚಾಲ್ತಿಯಲ್ಲಿ ಇರುವ ರೈತರಿಗೆ 5 ಲಕ್ಷ ಬಡ್ಡಿರಹಿತ ಸಾಲ, ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ ಹಣದ ಜೊತೆ ರಾಜ್ಯದಿಂದ 4 ಸಾವಿರ ಕೊಡುತ್ತಿರುವುದು, ಹಾಲಿಗೆ ಪ್ರತಿ ಲೀಟರ್ಗೆ 5 ರೂ. ಸಬ್ಸಿಡಿ- ಹೀಗೆ ಹಲವು ಚಾಲ್ತಿಯಲ್ಲಿರುವ ಯೋಜನೆಗಳಿವೆ. ಅವನ್ನು ಮುಂದುವರಿಸುತ್ತೀರಾ? ಇಲ್ಲವೇ? ಎಂದು ಸ್ಪಷ್ಟಪಡಿಸಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಆರೋಗ್ಯ, ಶಿಕ್ಷಣದಂಥ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಲು ಸಾಧ್ಯವಿಲ್ಲ. ಇದೆಲ್ಲದಕ್ಕೂ ಅನುದಾನ ಮೀಸಲಿಡಲು ಎಷ್ಟು ಹಣ ಬೇಕು? ಅದನ್ನು ಕ್ರೋಡೀಕರಿಸುವುದು ಹೇಗೆ? ಯಾವ ಮೂಲದಿಂದ? ಇದಕ್ಕೆ ಸಂಬಂಧಿಸಿ ಶ್ವೇತಪತ್ರ ಹೊರಡಿಸಬೇಕು. ಆಗ ಮಾತ್ರ ಈ ಯೋಜನೆ ತಾತ್ಕಾಲಿಕವೇ? ನಿರಂತರವಾಗಿ ಕೊಡಲು ಸಾಧ್ಯವೇ? ಅಷ್ಟು ಹಣ ನಮ್ಮಲ್ಲಿದೆಯೇ? – ಇದೆಲ್ಲವನ್ನೂ ತಿಳಿಯಲು ಸಾಧ್ಯವಾಗಲಿದೆ ಎಂದರು.
ಈ ಶ್ವೇತಪತ್ರದಿಂದ ತೆರಿಗೆದಾರರಿಗೆ ಸ್ಪಷ್ಟತೆ ಲಭಿಸಲಿದೆ. ಭೀತಿ ದೂರವಾಗಲಿದೆ. ಸಾಲ ಮಾಡುವಿರಾ? ಹೊಸ ತೆರಿಗೆ ಹಾಕುವಿರಾ? ಖರ್ಚು ಉಳಿತಾಯ ಮಾಡಿ ಭರಿಸುವಿರಾ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಗ್ಯಾರಂಟಿಗಳ ಅನುಷ್ಠಾನದ ಹಂತದಲ್ಲಿ ಲೋಪದೋಷ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತದ ಮೇಲಿದೆ ಎಂದು ಎಚ್ಚರಿಸಿದರು. ಮೂಲಸೌಕರ್ಯದ ಹೂಡಿಕೆಯಲ್ಲಿ ಕೊರತೆ ಆದರೆ ಅದರ ಪರಿಣಾಮ ಉದ್ಯೋಗ ಸೃಷ್ಟಿಯ ಮೇಲೆ ಆಗಿ, ಆದಾಯ ಗಳಿಕೆಯೂ ಕಡಿಮೆ ಆಗಲಿದೆ. ಇದರ ಕಡೆಗೂ ಲಕ್ಷ್ಯ ಇರಲಿ ಎಂದು ಸಿ.ಟಿ.ರವಿ ಅವರು ತಿಳಿಸಿದರು.
ಸ್ವಾವಲಂಬಿ ಆಗುವ ಯೋಜನೆಗಳಿಗೆ ಒತ್ತು ಕೊಡದೆ ಇದ್ದರೆ ಮುಂದೊಂದು ದಿನ ನಮ್ಮನ್ನು ಅದು ವೆನಿಜುವೆಲ, ಶ್ರೀಲಂಕ, ಪಾಕಿಸ್ತಾನದಂಥ ಆರ್ಥಿಕ ಸಂಕಷ್ಟದ ಪರಿಸ್ಥಿತಿಗೆ ದೂಡಬಹುದು. ಹಾಗೆ ಆಗದೆ ಇರಲು ನಾವು ಏಕ್ ದಿನ್ ಕಾ ಸುಲ್ತಾನ್ ಆಗಬಾರದು ಎಂದು ಎಚ್ಚರಿಕೆ ನೀಡಿದರು.
ಸಂಸತ್ ಚುನಾವಣೆ ಆಗಿಬಿಡಲಿ ನೋಡೋಣ, ಕಾರ್ಪೊರೇಷನ್ ಇಲೆಕ್ಷನ್ ಆಗಲಿ ನೋಡೋಣ; ಜಿಲ್ಲಾ ಪಂಚಾಯಿತಿ ಚುನಾವಣೆ ಆಗಲಿ. ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ; ರಾಜ್ಯ ಹಾಳಾಗಲಿ ಎಂಬ ಮನಸ್ಥಿತಿಗೆ ಬರಬಾರದು. ಹಾಗಾಗದೆ ಇರಲು ಸಮಗ್ರ ಶ್ವೇತಪತ್ರವನ್ನು ಹೊರಡಿಸಲು ವಿನಂತಿ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.