ಪ್ರತಿಯೊಂದು ದೇಶಕ್ಕೂ ಬಾಹ್ಯ ಸಮಸ್ಯೆಗಳು ಒಂದೆಡೆಯಾದರೆ, ಆಂತರಿಕ ಸಮಸ್ಯೆಯ ಜೊತೆ ಪರಿಹರಿಸಬೇಕಾದ ಸವಾಲುಗಳು ಮತ್ತೊಂದೆಡೆ. ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೇರಿಕಾಗೂ ಹಲವು ಆಂತರಿಕ ಸವಾಲುಗಳಿವೆ. ಚೀನಾಗೂ, ಸಾಮಾಜಿಕ ಸ್ತರದಲ್ಲಿ ಜಪಾನಿಗೂ, ಮುದಿ ರಾಷ್ಟ್ರವೆಂಬ ಹಣೆಪಟ್ಟಿಯ ರಷ್ಯಾದಲ್ಲೂ ಸಮಸ್ಯೆಗಳು ಇಲ್ಲದಿಲ್ಲ. ಯೆಮೆನ್, ಸುಡಾನ್, ಇರಾಕ್, ಸಿರಿಯಾದ ಶೋಚನೀಯ ಸಮಸ್ಯೆಗಳಲ್ಲದಿದ್ದರೂ ಆಡಳಿತಕ್ಕೆ ಸವಾಲು ಎಂಬಂತೆ ಕಾಣುವ ಘಟನಾವಳಿಗಳು ನಡೆಯುತ್ತವೆ ಅಥವಾ ಉಧ್ಬವಿಸುತ್ತವೆ. ಸಮಸ್ಯೆಗಳೆ ಇಲ್ಲದವನಿಗೆ ಯಾವ ಸವಾಲು ಅಥವಾ ಯಾವ ಸಾಧನೆ?! ವಿಶ್ವಗುರು, ವಿಶ್ವದ 5 ನೇ ಆರ್ಥಿಕತೆಯೆಸಿರುವ ಭಾರತಕ್ಕೂ ಕೆಲ ಆಂತರಿಕ ಸವಾಲುಗಳಿವೆ. ಇದರಲ್ಲಿ ಆರ್ಥಿಕ ಸ್ತರದ್ದು ಒಂದೆಡೆಯಾದರೆ, ಸಾಮಾಜಿಕ ಸ್ತರದ್ದು ಮತ್ತೊಂದೆಡೆ. ಬದಲಾಗುತ್ತಿರುವ ಡೆಮಾಗ್ರಫಿಯೂ ರಾಜಕೀಯ ಶಾಸ್ತ್ರಜ್ಞರ, ಸಮಾಜ ವಿಜ್ಞಾನಿಗಳ ಪ್ರಕಾರ ಒಂದು ಸವಾಲೇ. ನಕ್ಸಲಿಸಂ, ಮಾವೋವಾದ ಇವೆರಡು ಇಂದಿಗೂ ದೇಶದ ಕೆಲ ರಾಜ್ಯಗಳಲ್ಲಿ ಸವಾಲಾಗೇ ಉಳಿದಿದೆ. ಇದರೊಂದಿಗೆ ಇಂದು ವಕ್ಕರಿಸಿಕೊಂಡಿರುವ ಮಗದೊಂದು ಸವಾಲು ಈಶಾನ್ಯ ರಾಜ್ಯ ಮಣಿಪುರದ್ದು- ಹಲವು ದಶಕಗಳ ಕಾಲ ಶಾಂತಿ ಸ್ಥಾನವಾಗಿರಬೇಕಿದ್ದ ಈಶಾನ್ಯ ಬಂಡುಕೋರರ ಸಮಸ್ಯೆಯಿಂದ ಬಳಲಿತ್ತು. ಇಂದು ಅಲ್ಲಿನ ಹಲವು ರಾಜ್ಯಗಳಲ್ಲಿದ್ದ ಬಂಡುಕೋರ ಗುಂಪುಗಳು ಶಸ್ತ್ರತ್ಯಾಗ ಮಾಡಿವೆ. ಮಾತುಕತೆಯ ಮೂಲಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಿವೆ. ಸಹಜತೆಗೆ ಮರಳಿವೆ. ಪೂರ್ವದಲ್ಲಿ ಬಂಡಾಯವೆದ್ದಿದ್ದ ಹಲವರು ಸಮಾಜದ ಮುಖ್ಯ ವಾಹಿನಿಗೆ ಮರಳಿದ್ದಾರೆ. ಆದರೆ…. ಕೆಲವೆಡೆ ಬಾಹ್ಯ ಮತ್ತು ಆಂತರಿಕ ವೈಷಮ್ಯದ ಫಲವಾಗಿ ಇನ್ನು ಮುಂದುವರಿದಿದೆ. ಕುಕಿಲ್ಯಾಂಡ್, ಬೋಡೋಲ್ಯಾಂಡ್ ಬೇಡಿಕೆಗಳು ಪ್ರಜಾಪ್ರಭುತ್ವದ ಮಾರ್ಗ ಮುಖೇನ ಒಪ್ಪುವುದಾದರೂ ಶಸ್ತ್ರ ಮುಖೇನದ ಬಂಡಾಯದ ಮಾರ್ಗ ಸಹ್ಯವಲ್ಲ.
ಮಣಿಪುರ-ಆ್ಯಕ್ಟ್ ಈಸ್ಟ್ ಪಾಲಿಸಿಯ ಬಹು ಮುಖ್ಯ ರಾಜ್ಯ. ಭಾರತ ಸ್ವಾತಂತ್ರ್ಯದ ಎರಡು ದಶಕಗಳ ಕಾಲ ನೆಫಾದ ಭಾಗವಾಗಿದ್ದ ಭೂಪ್ರದೇಶ. ಅಭಿವೃದ್ಧಿ, ಉತ್ತಮ ಆಡಳಿತದೊಂದಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿ, ಯುವ ಸಬಲೀಕರಣದತ್ತ ದೃಷ್ಠಿ ನೆಟ್ಟ ಈಶಾನ್ಯ ರಾಜ್ಯಗಳಲ್ಲೊಂದು. ವರ್ತಮಾನದಲ್ಲಿ ಗಲಭೆ, ದೊಂಬಿಯ ಜೊತೆಯಲ್ಲಿ ಇಷ್ಟು ದಿನ ಸುಶುಪ್ತಿ ಸ್ಥಿತಿಯಲ್ಲಿದ್ದ ಬಂಡುಕೋರರು ಮಗದೊಮ್ಮೆ ಶಸ್ತ್ರಗಳನ್ನು ಹಿಡಿದ ರಾಜ್ಯದಂತೆ ಭಾಸವಾಗತೊಡಗಿದೆ. 1947 ರ ಸುಮಾರಿಗೆ ಭಾರತದೊಂದಿಗೆ ವಿಲೀನಗೊಂಡ ಈ ಸಂಸ್ಥಾನ ನಂತರ 1970 ರ ಸುಮಾರಿಗೆ ನೆಫಾದಿಂದ ವಿಮುಕ್ತಿಗೊಂಡು ಭಾರತ ಗಣತಂತ್ರದಡಿ ಒಂದು ರಾಜ್ಯವೂ ಆಯಿತು. ಪ್ರಾಕೃತಿಕವಾಗಿ ಬಹಳ ಸುಂದರವಾಗಿರುವ ನಾಡಿದು. ಐರೋಂ ಶರ್ಮಿಳಾ ಎಂಬ ಹೆಸರು ಈ ಮಣ್ಣಿನಲ್ಲೇ ಸದ್ದು ಮಾಡಿದ್ದು ಇಂದಿಗೆ ಇತಿಹಾಸ.
ದೇಶಕ್ಕೆ ಹೆಮ್ಮೆಯೊಂದಿಗೆ ಗರಿಮೆ ತಂದ ವೇಟ್ ಲಿಫ್ಟರ್ ಮೀರಾಬಾಯಿ ಚಾನು, ಬಾಕ್ಸರ್ ಮೇರಿಕೊಂ ಇದೇ ರಾಜ್ಯದವರು! ಐರೋಂ ಶರ್ಮಿಳಾ ಮಣಿಪುರದಲ್ಲಿ ಹಲವು ದಶಕಗಳಿಂದಿದ್ದ ಅಫ್ಸ್ಪಾ ಎಂಬ ಸೇನೆಯ ವಿಶೇಷ ಅಧಿಕಾರ (ಅರ್ಮಿ ಸ್ಪೆಶಲ್ ಪವರ್ಸ್ ಆ್ಯಕ್ಟ್ ) ವಿರುದ್ಧ ಬಹು ಕಾಲ ದನಿ ಮೊಳಗಿಸಿದ್ದರು, ಪ್ರಜಾಪ್ರಭುತ್ವ ರಾಷ್ಟ್ರದ ಅಂದಿನ ಸರಕಾರಗಳಿಗೆ ಆಕೆಯ ಅಂದಿನ ದನಿ ಕೇಳಲಿಲ್ಲ. ಇದಕ್ಕೆ ಕಾರಣಗಳು ಹಲವಿದ್ದವು. ಆಗಿಂದಾಗ್ಗೆ ಹುಟ್ಟಿಕೊಳ್ಳುತ್ತಿದ್ದ ಬಂಡುಕೋರ ಗುಂಪುಗಳು, ಕಾಡಿನಂಚಿನಲ್ಲಿ, ಗುಡ್ಡಪ್ರದೇಶಗಳಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಸಮುದಾಯದ ಯುವಕರಿಗೆ ಮಯನ್ಮಾರ್ ಸಹಿತ ಚೀನಾ ನೀಡುತ್ತಿದ್ದ ಬಾಹ್ಯ ಬೆಂಬಲ, ಸಶಸ್ತ್ರ ಕ್ರಾಂತಿಯೆಂಬ ಭ್ರಮೆ ಹಾಗೆಯೇ ಶಸ್ತ್ರ ತರಬೇತಿ ಇಲ್ಲಿನ ಸಾಮಾನ್ಯ ನಾಗರಿಕರ ನಿದ್ದೆ ಗೆಡಿಸಿತ್ತು ಮಾತ್ರವಲ್ಲ ಕೇಂದ್ರ ಹೇರಿದ್ದ ವಿಶೇಷ ಕಾನೂನುಗಳು ರಾಜ್ಯ ಮತ್ತು ರಾಷ್ಟ್ರದ ಹಿತದೃಷ್ಠಿಯಿಂದ ಮುಂದುವರಿದವು. ಇತ್ತೀಚೆಗಷ್ಟೇ ಪ್ರಜಾಪ್ರಭುತ್ವದ ಹಾದಿಯ ಚುನಾವಣೆಗಳು ಯಾವುದೇ ಹಿಂಸಾತ್ಮಕ ಘಟನೆಗಳು ನಡೆಯದೆ ಚೊಕ್ಕವಾಗಿಯೇ ಪೂರ್ಣಗೊಂಡು ಬೀರೇನ್ ಸಿಂಗ್ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ್ದರು. ಕೇಂದ್ರ ಸರಕಾರದಿಂದ ಈಶಾನ್ಯ ಭಾರತದ ಗುಣಗಾನ ಆರಂಭವಾಗುತ್ತಿದ್ದಂತೆ, ಅಸ್ಸಾಂ, ನಾಗಾಲ್ಯಾಂಡ್ ನಲ್ಲಿನ ಬಂಡುಕೋರ ಸಮಸ್ಯೆಗಳು ಮಾತುಕತೆಯ ಮೂಲಕ ಪರಿಹಾರವಾಗುತ್ತಿದ್ದಂತೆ ಮಣಿಪುರದಲ್ಲಿ ಬಂಡುಕೋರ ಗುಂಪುಗಳು ಶಸ್ತ್ರವನ್ನು ಕೈಗೆತ್ತಿಕೊಂಡಂತೆ ಕಾಣುತ್ತಿದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ನಿನ್ನೆ ಮುಂಜಾನೆ 30 ಕುಕಿ ಬಂಡುಕೋರರ ಹತ್ಯೆಯಾಗಿದೆ ಎಂಬ ಮಾಹಿತಿಯೂ ಇದೆ. ಮಣಿಪುರದ ವಿದ್ಯಾರ್ಥಿ ಸಂಘಟನೆಗಳು ಕೈಗೆತ್ತಿಕೊಂಡಿದ್ದ ಪ್ರತಿಭಟನೆಯ ನಂತರ ಮಣಿಪುರದ ಜನಜೀವನ ಅಸ್ತವ್ಯಸ್ತವಾಗಿದೆ ಮಾತ್ರವಲ್ಲ ಹೊರರಾಜ್ಯದ ವಿದ್ಯಾರ್ಥಿಗಳು ತಂತಮ್ಮ ಮನೆಗಳಿಗೆ ತೆರಳಿದ್ದಾರೆ.
ಇಂಫಾಲ ಇಂದಲ್ಲ ಬಹಳ ಹಿಂದೆಯೇ ಅಂದರೆ 80 ರ ದಶಕದಿಂದಲೂ ಇಂಸರಜನ್ಸಿಗೆ ಕಾರಣವಾಗಿತ್ತು. ಭಾರತದ ಗಡಿಗಳನ್ನು ಕಾಯಬೇಕಿದ್ದ ಸೈನಿಕರು ಮಣಿಪುರದ ರಾಜಧಾನಿಯಲ್ಲೇ ಠಿಕಾಣಿ ಹೂಡಿದ್ದರು. ಇಂಫಾಲ ಎಂಬ ಹೆಸರು ನನ್ನ ಅಜ್ಜಿಗೂ ಚೆನ್ನಾಗಿ ಗೊತ್ತಿತ್ತು ಅವರ ಅಳಿಮಯ್ಯನೂ ಅಲ್ಲಿಯೇ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ್ದರು. ಸಮೀಪದ ಮಯನ್ಮಾರಿನಿಂದ ಬಂದೂಕು, ಮದ್ದು ಗುಂಡುಗಳು ಈ ಬಂಡುಕೋರರಿಗೆ ತಲುಪುತ್ತಿತ್ತು. ಚೀನಾದ ಕುಮ್ಮಕ್ಕಿನಿಂದ ಪಿ.ಎಲ್.ಎ ಎಂಬ ಉಗ್ರ ಸಂಘಟನೆಯೂ ಹುಟ್ಟಿಕೊಂಡಿತ್ತು. ಆದರೆ ಇಂದು ಮಣಿಪುರದ ಡೆಮಾಗ್ರಫಿ ಸಂಪೂರ್ಣ ಬದಲಾಗಿದೆ. ವರ್ತಮಾನದ ಗಲಭೆಗಳಿಗೆ ಇದು ಒಂದು ಕಾರಣವೂ ಹೌದಾಗಿರಬಹುದು. ಇಲ್ಲಿ ಮೀಟೈ ಮತ್ತು ಕುಕಿ ಬುಡಕಟ್ಟು ಜನಾಂಗದವರು ಸಹಿತ ನಾಗಾ ಬುಡಕಟ್ಟು ಮಂದಿಯೂ ಹೆಚ್ಚಾಗಿದ್ದಾರೆ. 1970 ರ ಸುಮಾರಿಗೆ 62% ಇದ್ದ ಹಿಂದೂಗಳ ಜನಸಂಖ್ಯೆ 2011 ರ ಸುಮಾರಿಗೆ 41% ತಲುಪಿದೆ. 19% ಇದ್ದ ಕ್ರೈಸ್ತರು ಇಂದು 40% ದಷ್ಟಿದ್ದಾರೆ. ಅಂಕಿ ಅಂಶಗಳ ಪ್ರಕಾರ ಹೆಚ್ಚಿನ ಬುಡಕಟ್ಟು ಮಂದಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ಬರ್ಮಾ, ಬಾಂಗ್ಲಾ, ಅಸ್ಸಾಂನಿಂದ ವಲಸೆ ಬಂದ ಮುಸಲ್ಮಾನರು ಜನಸಂಖ್ಯೆಯು ಹೆಚ್ಚಿದೆ. ಬಹಳ ಹಿಂದೆ ಅಹೋಂ ರಾಜವಂಶಜರ ಅಧೀನದಲ್ಲಿದ್ದ ಈ ಭೂಪ್ರದೇಶದಲ್ಲಿ ಮೀಟೈ ಮತ್ತು ಕುಕಿ ಜನಾಂಗದವರು ಹೆಚ್ಚು. ಕೃಷಿಯನ್ನೇ ಆಧರಿಸಿ ಜೀವನ ಸಾಗಿಸುವ ಬಹುತೇಕರಿಗೆ ಅದರಲ್ಲೂ ಕುಕಿ ಜನಾಂಗದವರಿಗೆ ಒಂದು ವಿಚಾರ ಕೆರಳುವಂತೆ ಮಾಡಿದೆ. ಇಂಫಾಲ ಕಣಿವೆ ಪ್ರದೇಶಗಳಲ್ಲಿರುವ ಹೆಚ್ಚಿನ ಮಂದಿ ವೈಷ್ಣವ ಸಂಪ್ರದಾಯಸ್ಥರಾಗಿದ್ದಾರೆ. ಮೀಟೈ ಬ್ರಿಟಿಷರ ಕಾಲಘಟ್ಟದಲ್ಲಿ ಟ್ರೈಬ್ ಎಂದೇ ಗುರುತಿಸಲ್ಪಟ್ಟಿತ್ತು. ಮಾತ್ರವಲ್ಲ ಅಂದು ಎಲ್ಲ ಸವಲತ್ತುಗಳೂ ಇವರಿಗೆ ಲಭ್ಯವಿತ್ತು. ಪ್ರಸ್ತುತ ರಾಜ್ಯದ 52% ಮಂದಿ ಮೀಟೈ ಜನಾಂಗಕ್ಕೆ ಸೇರಿದ್ದಾರೆ. ಇವರಿಗೆ ನೀಡಲ್ಪಡಬಹುದಾದ ಎಸ್ಟಿ ಮೀಸಲಾತಿ ಕುಕಿ ಸಮುದಾಯಸ್ಥರನ್ನು ಮೇಲ್ನೋಟಕ್ಕೆ ಕೆರಳಿಸಿದೆ. ವರದಿಯೊಂದರ ಪ್ರಕಾರ ರಾಜ್ಯ ಮರುವಿಂಗಡನೆಯ ಸಂದರ್ಭ ತಮಗೆ ಎಸ್ಟಿ ಮೀಸಲಾತಿ ಬೇಡ ಮಾತ್ರವಲ್ಲ ಇದು ನಮ್ಮ ಸಾಮಾಜಿಕ ಗೌರವವನ್ನು ಕಡಿಮೆ ಮಾಡುತ್ತದೆ ಎಂದ ದೇಶದ ಏಕೈಕ ಜನಾಂಗ ಮೀಟೈ ಅಂತೆ. ಇಂದು ಇದೇ ಸಮುದಾಯದ ಬೇಡಿಕೆಯನ್ನು ಈಡೇರಿಸುವತ್ತ ಸ್ಥಳೀಯ ಸರಕಾರ ಮತ್ತು ಕೇಂದ್ರ ಸರಕಾರ ಮುಂದಾಗಿರುವ ಸಂದರ್ಭ ಸಾಮಾಜಿಕ ಅಸ್ಥಿರತೆಯ ಜೊತೆ ಗಲಭೆಗಳು ಹೆಚ್ಚಾಗಿ ಕಾನೂನು ಮತ್ತು ನ್ಯಾಯ ವ್ಯವಸ್ಥೆಗೂ ಧಕ್ಕೆಯಾಗಿದೆ.
ಕೇಂದ್ರ ಸಚಿವ ಅಮಿತ್ ಶಾ ನಾಲ್ಕು ದಿನಗಳ ಇಂಫಾಲ ಭೇಟಿಯಲ್ಲಿದ್ದಾರೆ ಮಾತ್ರವಲ್ಲ ಖುದ್ದು ಈ ವಿಚಾರವನ್ನು ಶಾಸಕರು ಅಧಿಕಾರಗಳಿಂದ ತಿಳಿಯಲಿದ್ದು ಇದಕ್ಕೆ ಸಮರ್ಪಕ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಮಣಿಪುರ ದಕ್ಷಿಣ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಹೆಬ್ನಾಗಿಲು. ಬರ್ಮಾ ರಸ್ತೆಯೂ ಇಲ್ಲಿಂದಲೇ ಆರಂಭವಾಗುತ್ತದೆ. ಎರಡನೇ ಮಹಾಯುದ್ಧದ ಕಾಲಘಟ್ಟದಲ್ಲಿ ಈ ಪ್ರದೇಶಕ್ಕೆ ನುಗಿದ್ದ ಜಪಾನ್ ಪಡೆಗಳನ್ನು ಹಿಮ್ಮೆಟ್ಟಿಸಿದ ಕೀರ್ತಿಯೂ ಅಸ್ಸಾಂ ರೈಫಲ್ಸ್ ಗಿದೆ. ಇಂದು ಅಸ್ಸಾಂ ರೈಫಲ್ಸ್ ತುಕಡಿ ಇಂಫಾಲ ಸಹಿತ ರಾಜ್ಯದ ಹಲವು ಗಲಭೆಗ್ರಸ್ತ ಜಿಲ್ಲೆಗಳಲ್ಲಿ ಬೀಡುಬಿಟ್ಟಿದೆ. ಕಾಶ್ಮೀರದಲ್ಲಿ ವಿಶೇಷ ಎಂಬಂತಿದ್ದ ಕಾನೂನು 370 ರದ್ದು ಮಾಡಿದಂತೆ ಈಶಾನ್ಯದ ಕೆಲ ರಾಜ್ಯಗಳಲ್ಲಿರುವ ನಿರ್ದಿಷ್ಟ ವಿಧಿ 371…2….3….4 ಕಾನೂನುಗಳ ರದ್ದತಿ ಸಹಿತ ಅಫ್ಸ್ಪಾವನ್ನು ತೆಗೆಯುವ ಬಗ್ಗೆ ಚಿಂತಿಸುತ್ತಿದ್ದ ಸರಕಾರ ಮಗದೊಮ್ಮೆ ಯೋಚನೆ, ಚಿಂತನೆ, ಮಂಥನೆ ಮಾಡುವಲ್ಲಿಗೆ ತಲುಪಿದೆ. ಪೂರ್ವಾಶ್ರಮದಲ್ಲಿ ಓರ್ವ ಪುಟ್ಬಾಲರ್ , ಅಸ್ಸಾಂ ರೈಫಲ್ಸ್ ನಲ್ಲಿ ಶಿಸ್ತಿನ ಸಿಪಾಯಿಯಾಗಿ ಇಂತಹ ಬಹಳಷ್ಟು ದಂಗೆಗಳನ್ನು ಕಂಡಿದ್ದ ಸಿ.ಎಂ ಬೀರೇನ್ ಸಿಂಗ್ ಏನು ಮಾಡುತ್ತಾರೆ, ಅವರ ಸಲಹೆಗಳೇನು ಎಂದು ಕಾದು ನೋಡಬೇಕಿದೆ. ಇದರೊಂದಿಗೆ ಮಣಿಪುರದ ಗುಡ್ಡಗಾಡುಗಳಲ್ಲಿ, ಬರ್ಮಾಗೆ ತಾಗಿಕೊಂಡಿರುವ ಕಾಡು ಪ್ರದೇಶಗಳಲ್ಲಿ ಪೊಪ್ಪಿ ಆಫೀಮು ಬೆಳೆಸಿ ಶಸ್ತ್ರ, ದಂಗೆ, ಅಟ್ಟಹಾಸಕ್ಕೆ ಕಾರಣವಾಗಿರುವ ಬಂಡುಕೋರರನ್ನು ದಮನಿಸಬೇಕಿದೆ. ಇದು ಪರೋಕ್ಷವಾಗಿ ಬರ್ಮಾಗೂ ಉತ್ರವಾಗಬೇಕಿದೆ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.