‘ಚಾಪೇಕರ್’ ಸಹೋದರರ ಬಲಿದಾನವಾದಾಗ ಮಹಾರಾಷ್ಟ್ರದ ಒಂದು ಮನೆಯಲ್ಲಿ ಮಧ್ಯರಾತ್ರಿ 14 ವರ್ಷದ ಬಾಲಕನೊಬ್ಬ ದೇವರ ಕೋಣೆಯಲ್ಲಿ ಅಷ್ಟಭುಜಾಕೃತಿಯ ಭವಾನಿಯ ಮುಂದೆ ತಾಯಿ ಭಾರತೀಯ ವಿಮೋಚನೆಗಾಗಿ ಪ್ರತಿಜ್ಞೆ ಮಾಡಿದ, ಆ ಬಾಲಕನೇ- ‘ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್’. ಚಾಪೇಕರ್ ಅವರ ಬಲಿದಾನದ ಮಹತ್ವದ ಬಗ್ಗೆ ಬರೆದು ಕಳುಹಿಸಿದಾಗ , ತಿಲಕರು ‘ಕೇಸರಿ’ ಯಲ್ಲಿ ಅದನ್ನು ಪ್ರಕಟಿಸಿದರು.
ಸಾವರ್ಕರ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ‘ಮಿತ್ರಮೇಳ’ ಆರಂಭಿಸಿ ವಿವಿಧ ಕಾರ್ಯಕ್ರಮಗಳ ಮೂಲಕ ಜನರಿಗೆ ರಾಷ್ಟ್ರದ ಕುರಿತು ಜಾಗೃತಿ ಮಾಡಿದರು. ಆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಯ್ಕೆಗೊಂಡ ಯುವಕರಿಗೆ ‘ರಾಷ್ಟ್ರಭಕ್ತ ಸಮೂಹ’ ಎಂಬ ಗುಪ್ತ ಸಂಘಟನೆಯಲ್ಲಿ ಸೇರ್ಪಡೆ ಮಾಡುತ್ತಿದ್ದರು, ಶಿವಾಜಿ ಖಡ್ಗದ ಮುಂದೆ ಪ್ರತಿಜ್ಞೆ ಕೊಡಲಾಗುತ್ತಿತ್ತು. ಮುಂದೆ ಸಾವರ್ಕರ್ ಪುಣೆಯ ಫರ್ಗುಸ್ಸನ್ ಕಾಲೇಜು ಸೇರಿದಾಗ ಇದೇ ‘ಅಭಿನವ ಭಾರತ’ ವಾಗಿ ಪರಿವರ್ತನೆಯಾಯಿತು. 1904ರಲ್ಲಿ ‘ಅಭಿನವ ಭಾರತ’ ಬೈಠಕ್ ಸೇರಿಸಿದಾಗ ಸುಮಾರು 200 ಜನ ಪ್ರತಿಜ್ಞಿತರು ಇದ್ದರು. ಅಭಿನವ ಭಾರತದ ಚಟುವಟಿಕೆಗಳು ಮಹಾರಾಷ್ಟ್ರದ ಅನೇಕ ಕಡೆ ನಡೆಯುತ್ತಿತ್ತು ಮುಂದೆ ಇಂಗ್ಲೆಂಡಿಗೂ ವಿಸ್ತರಿಸಿತು.ಆಗ ಇನ್ನೂ ಕಾಂಗ್ರೆಸ್ಸಿನಲ್ಲಿ ‘ಸ್ವಾಯತ್ತತೆ’ ಕುರಿತು ಜಪ ಮಾಡುತ್ತಿದ್ದರೆ ಇಲ್ಲಿ ಪೂರ್ಣ ಸ್ವರಾಜ್ಯದ ಸಂಕಲ್ಪವನ್ನು ಸಾವಿರಾರು ಯುವಕರಿಗೆ ನೀಡಿಯಾಗಿತ್ತು.
1905ರಲ್ಲಿ ವಂಗ ಭಂಗ ಚಳುವಳಿ ಆರಂಭವಾದಾಗ ಪುಣೆಯಲ್ಲಿ ಸಾವರ್ಕರ್ ನೇತೃತ್ವದ ಯುವಕರು ‘ವಿದೇಶಿ ವಸ್ತುಗಳ’ ದಹನ ಮಾಡುವ ವಿನೂತನ ಕಾರ್ಯಕ್ರಮವನ್ನು ನಡೆಸಿದರು. ಅಲ್ಲಿ ಸಾವರ್ಕರ್ ಮಾಡಿದ ಭಾಷಣವನ್ನು ತಿಲಕರೂ ಮೆಚ್ಚಿದ್ದರು. ಈ ಸಾಧನೆಗಾಗಿ ಸಾವರ್ಕರ್ ಅವರಿಗೆ ಕಾಲೇಜಿನಲ್ಲಿ 10ರೂ ದಂಡ ಹಾಕಿ ಹಾಸ್ಟೆಲ್ಲಿನಿಂದ ಹೊರದೂಡಲಾಯಿತು, ದೇಶದ ಕೆಲಸ ಮಾಡಿದ ಕಾರಣ ಹಾಸ್ಟೆಲ್ಲಿನಿಂದ ಹೊರದೂಡಲ್ಪಟ್ಟ ಮೊದಲಿಗ ಸಾವರ್ಕರ್. 1902 ರಲ್ಲೇ ಸಾವರ್ಕರ್ ಬರೆದ ‘ಜಯೋಸ್ತುತೆ’ ಯುವಕರಿಗೆ ಸ್ಫೂರ್ತಿಯ ಗಾನವಾಗಿತ್ತು. ಶಿವಾಜಿಯ ಕುರಿತು ಸಾವರ್ಕರ್ ಬರೆದ ಹಾಡನ್ನು ಫುರ್ಗುಸ್ಸನ್ ಕಾಲೇಜಿನ ಕ್ಯಾಂಟೀನಿನ ಮೆಸ್ಸಿನಲ್ಲಿ ಪ್ರತಿ ಶುಕ್ರವಾರ ಆರತಿ ಸಮಯದಲ್ಲಿ ಹಾಡಲಾಗುತ್ತಿತ್ತು.
1906ರಲ್ಲಿ ಕಾನೂನು ವ್ಯಾಸಂಗ ನಿಮಿತ್ತ ಇಂಗ್ಲೆಂಡಿಗೆ ಹೋದ ಸಾವರ್ಕರ್ ಅವರ ಕಾರ್ಯ ಮತ್ತಷ್ಟು ಪ್ರಖರಗೊಂಡಿತು. ಮದನಲಾಲ್ ಧಿಂಗ್ರಾ, ವಿ ವಿ ಎಸ್ ಐಯ್ಯರ್ , ಲಾಲಾ ಹರದಯಾಳ ಮುಂತಾದ ಕ್ರಾಂತಿಕಾರರಿಗೆ ಸಾಗರದಾಚೆ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ-ಮಾರ್ಗದರ್ಶನ ನೀಡಿದವರು ಸಾವರ್ಕರ್. ಸಾವರಕರ್ ಬಗ್ಗೆ ಸದಾ ಗೂಢಚರ್ಯೆ ನಡೆಸುತ್ತಿದ್ದ ಬ್ರಿಟಿಷರಿಗೆ ಅವರು ಬರೆದ ‘1857 ಸ್ವಾತಂತ್ರ್ಯ ಸಂಗ್ರಾಮ’ ಪುಸ್ತಕ ಎಷ್ಟು ಬೆಚ್ಚಿ ಬೀಳಿಸಿತ್ತೆಂದರೆ ಪ್ರಕಟಣಾ ಪೂರ್ವವೇ 2 ದೇಶಗಳಲ್ಲಿ ನಿಷೇದಿಸಿದ್ದರು. ಕಡೆಗೂ 1909ರಲ್ಲಿ ಸಾವರ್ಕರ್ ಅವರನ್ನು ಬಂಧನ ಮಾಡುವಲ್ಲಿ ಬ್ರಿಟಿಷರು ಯಶಸ್ವಿಯಾದರು. ಆದರೆ, ಇಂಗ್ಲೆಂಡಿನಿಂದ ಭಾರತಕ್ಕೆ ಹಡಗಿನಲ್ಲಿ ಕರೆತರುವಾಗ ಸಾವರ್ಕರ್ ಸಮುದ್ರ ಹಾರಿದ ಸಾಹಸ ಪ್ರಸಂಗ ಬ್ರಿಟಿಷರಿಗೆ ಜಗತ್ತಿನಾದ್ಯಂತ ತೀವ್ರ ಮುಖಭಂಗ ಮಾಡಿತ್ತು.ಭಾರತದ ಸಾವರ್ಕರ್ ಕಾರಣಕ್ಕಾಗಿ ಫ್ರಾನ್ಸಿನ ಪ್ರಧಾನಿ ರಾಜೀನಾಮೆ ಕೊಡುವಂತಾಗಿದ್ದು ಜಗತ್ತಿನಲ್ಲಿ ಕಂಡು-ಕೇಳರಿಯದ ಸಾಧ್ಯತೆ. ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ವಿಚಾರಣೆಯಾದ ಜಗತ್ತಿನ ಮೊದಲ ರಾಜಕೀಯ ಕೈದಿ ‘ಸಾವರ್ಕರ್’.
ಮುಂದೆ ಭಾರತದಲ್ಲಿ ವಿಚಾರಣೆಯ ನಾಟಕ ನಡೆದು ಸಾವರ್ಕರ್ ಅವರಿಗೆ 2 ಜೀವಾವಧಿ ಶಿಕ್ಷೆ ನೀಡಿದಾಗ ಮತ್ತೊಂದು ದಾಖಲೆಯಾಯಿತು. ಕಾನೂನು ವ್ಯಾಸಂಗ ಮುಗಿಸಿದ್ದರೂ ‘ಬ್ಯಾರಿಸ್ಟರ್’ ಪದವಿ ನಿರಾಕರಣೆ ಮತ್ತು ಬಿಎ ಪದವಿ ಕಳಕೊಂಡ ಮೊದಲಿಗ ಸಾವರ್ಕರ್ . ಅಂಡಮಾನಿನ ಯಾವ ನರಕಸದೃಶ ಶಿಕ್ಷೆಗಳು , ಶಾರೀರಿಕ-ಮಾನಸಿಕ ಹಿಂಸೆಗಳೂ ಸಾವರ್ಕರ್ ಅವರ ರಾಷ್ಟ್ರನಿಷ್ಠೆಯನ್ನ ಅಲುಗಾಡಿಸಲು ಸಾಧ್ಯವಾಗಲಿಲ್ಲ. 1921ರಲ್ಲಿ ಯೆರವಾಡ-ರತ್ನಗಿರಿಯಲ್ಲಿನ ಸೆರೆವಾಸ ಮತ್ತು ಸ್ಥಾನಬದ್ಧತೆಗಳು ಮುಗಿದಾಗ 1937ನೆ ಇಸವಿ . ಯುವಕನಾಗಿ ಬಂಧನಕ್ಕೊಳಗಾದ ಸಾವರ್ಕರ್ ಹಿಂಡಿ ಹಿಪ್ಪೆ ಮಾಡಿದ ಮುದುಕನಾಗಿ ಹೊರಬಂದರು. ಬ್ರಿಟಿಷರಿಗೆ ನಿಜವಾಗಿ ಬೇಕಾಗಿದ್ದು ಇದೇ ಅಲ್ಲವೇ ? ಯಾವ ವ್ಯಕ್ತಿ ಬ್ರಿಟಿಷರ ಆಳ್ವಿಕೆಯನ್ನು ನಿಜವಾಗಿ ಬುಡಮೇಲು ಮಾಡಲು ತನ್ನ ಸಂಪೂರ್ಣ ಶಕ್ತಿಯನ್ನು ಸುರಿದು ಯಶಸ್ವಿಯಾಗಲು ಹೊರಟನೋ ಅಂತಹ ವ್ಯಕ್ತಿಯ ಬಗ್ಗೆ ಬ್ರಿಟಿಷರು ಸದಾ ಹೆದರುತ್ತಾ , ಎಚ್ಚರಿಕೆಯಿಂದ ಇದ್ದು ಅಂತಿಮವಾಗಿ ಭಾರತದಲ್ಲಿ ನಡೆಯುತ್ತಿದ್ದ ಮುಖ್ಯ ಸ್ವಾತಂತ್ರ್ಯ ಹೋರಾಟದಿಂದ ಆತನನ್ನು 27 ವರ್ಷಗಳ ಕಾಲ ದೂರ ಇಡುವಂತೆ ಮಾಡಿದರು.
ಸಾವರ್ಕರ್ ಅವರ ಬದುಕು-ಬರಹ-ಮಾತುಗಳು 1897ರಿಂದ ಒಂದು ಪೀಳಿಗೆಯ ಯುವ ಹೋರಾಟಗಾರರಿಗೆ ನೇರವಾಗಿ ಪ್ರಭಾವ ಬೀರಿದೆ. 1911 ರ ನಂತರ ಪರೋಕ್ಷವಾಗಿ ಇನ್ನೆರಡು ಪೀಳಿಗೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ನೀಡಿದೆ. ಹೀಗೆ 3 ಪೀಳಿಗೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದ ಸಾವರ್ಕರ್ ಅವರು ಸ್ವಾತಂತ್ರ್ಯ ಮಾರ್ಗವನ್ನು ಪ್ರಶಸ್ತಗೊಳಿಸಿದರು. ‘ಸಾವರ್ಕರ್’ ಎಂಬುದು ಒಬ್ಬ ಕೇವಲ ವ್ಯಕ್ತಿಯ ಬದುಕಾಗಿರದೆ ‘ಸ್ವರಾಜ್ಯ ಪರ್ವ’ದ ಒಂದು ಮಹತ್ವದ ಅಧ್ಯಾಯವಾಗಿದೆ.
✍️ಪ್ರಮೋದ.ನ.ಗೋ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.