ಬೆಳ್ತಂಗಡಿ: ನೇತ್ರಾವತಿ ನದಿಯ ನೀರು ಬಳಕೆ ಬಗ್ಗೆ ಸಾಕಷ್ಟು ಚರ್ಚೆ, ವಿಮರ್ಶೆಗಳು ನಡೆಯುತ್ತಿವೆ. 2009 ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾದ ನೇತ್ರಾವತಿ ನದಿಯ ನೀರನ್ನು ಬೇರೆ ಜಿಲ್ಲೆಗಳಿಗೆ ಉಪಯೋಗಕ್ಕೆ ಬಳಸುವ ತೀರ್ಮಾನಕ್ಕೆ ಮೊದಲು ಸಾಕಷ್ಟು ಎಚ್ಚರಿಕೆ ಮತ್ತು ಅಧ್ಯಯನ ಅಗತ್ಯ ಎಂದು ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಈ ಯೋಜನೆ ಬಗ್ಗೆ ಸೂಕ್ತ ಮಾಹಿತಿಯ ಕೊರತೆ ಎದ್ದು ಕಾಣುತ್ತಿದೆ. ನೇತ್ರಾವತಿ ನದಿ ನೀರಿನ ಬಳಕೆ ಬಗ್ಗೆ ನಮ್ಮ ಜಿಲ್ಲೆ ಮತ್ತು ಬಯಲು ಸೀಮೆಯ ಜನರಿಗೆ ಸೂಕ್ತ ಮಾಹಿತಿ ಒದಗಿಸಿ ವೈಜ್ಞಾನಿಕ ಅಧ್ಯಯನ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ಆಗಿರುವುದು ಸೂಕ್ತವಾಗಿದೆ. ಇದು ಸ್ವಾಗತಾರ್ಹ. ಇಂತಹ ಚರ್ಚೆ, ಚಿಂತನ-ಮಂಥನಗಳಿಂದ ಸಮರ್ಪಕ ಹಾಗೂ ನಿಖರವಾದ ಮಾಹಿತಿ ದೊರಕಿ ಸರ್ಕಾರಕ್ಕೆ ಸೂಕ್ತ ತೀರ್ಮಾನವನ್ನು ಕೈಗೊಳ್ಳಲು ಅನುಕೂಲವಾಗಬಹುದು.
ಚಿಕ್ಕಬಳ್ಳಾಪುರ ಮತ್ತು ದೊಡ್ಡ ಬಳ್ಳಾಪುರ ಜಿಲ್ಲೆಗಳ ಪ್ರವಾಸದ ಸಂದರ್ಭ ಅಲ್ಲಿನ ಜನತೆ ಈ ವಿಷಯದಲ್ಲಿ ಸಹಕಾರ ಕೊಡುವಂತೆ ಕೋರಿದ್ದಾರೆ. ಆ ಸಂದರ್ಭದಲ್ಲಿ ಮೊದಲು ದ.ಕ. ಜಿಲ್ಲೆಯ ಜನತೆಗೆ ಯಾವುದೇ ರೀತಿಯಲ್ಲಿ ನದಿ ನೀರಿನ ಬಳಕೆಗೆ ತೊಂದರೆ ಆಗದಂತೆ ಎಚ್ಚರಿಕೆ ಇರಬೇಕು. ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಬಳಿಕ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿದರು.
ಇನ್ನು ಮುಂದೆಯೂ ಎರಡೂ ಪ್ರದೇಶಗಳ ರಾಜಕೀಯ ನೇತಾರರು, ವೈಜ್ಞಾನಿಕವಾಗಿ ಅಧ್ಯಯನ ಮಾಡುವ ತಜ್ಞರು ಮತ್ತು ಆಸಕ್ತ ಸಂಘಟನೆಗಳು ಜೊತೆಯಾಗಿ ಚರ್ಚಿಸಬೇಕು. ನಮ್ಮ ಜಿಲ್ಲೆಯ ಹಿತರಕ್ಷಣೆಗೆ ಆದ್ಯತೆ ಕೊಡುವುದು ನನ್ನ ಧೋರಣೆಯಾಗಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.