ಬೆಂಗಳೂರು: ಹಿಂದೂಗಳ ಭಾವನೆ ಮತ್ತು ಶ್ರದ್ಧೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಹಾಗೂ ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಕು.ಶೋಭಾ ಕರಂದ್ಲಾಜೆ ಅವರು ಆಕ್ಷೇಪಿಸಿದರು.
ಮಹಾಲಕ್ಷ್ಮೀ ಲೇಔಟ್ನ ಶ್ರೀ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ಇಂದು ಪೂಜಾ ವಿಧಿವಿಧಾನ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬಜರಂಗವನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಇದರಿಂದ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸುರ್ಜೇವಾಲಾ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಆಂಜನೇಯನನ್ನು ಅಪಮಾನ ಮಾಡಿದ್ದಾರೆ ಎಂದು ತಿಳಿಸಿದರು.
ಆಂಜನೇಯನ ಜನ್ಮಸ್ಥಳ ಕಿಷ್ಕಿಂಧಾ ಎಂದು ನಾವು ನಂಬಿದ್ದೇವೆ. ಭಕ್ತರೂ ನಂಬಿಕೆ ಇಟ್ಟಿದ್ದಾರೆ. ಆಂಜನೇಯ ಕರ್ನಾಟಕದಲ್ಲಿ ಹುಟ್ಟಿದನೇ ಎಂಬ ಸಂಶಯವನ್ನು ಸುರ್ಜೇವಾಲಾ ವ್ಯಕ್ತಪಡಿಸಿದ್ದಾರೆ. ಆಂಜನೇಯನ ತಂದೆ ಸೂರ್ಯ, ತಾಯಿ ಆಂಜನೇಯ ಎಂದು ಹೇಳಿದ್ದಾರೆ. ಹಿಂದೂ ದೇವರಿಗೆ ಅವಮಾನ ಮಾಡುವ ಮತ್ತು ಅವರ ಕುರಿತು ಸಂಶಯ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಗೋಹತ್ಯಾ ನಿಷೇಧ ಕಾಯ್ದೆ ರದ್ದು, ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವುದಾಗಿ ಕಾಂಗ್ರೆಸ್ ಪಕ್ಷ ಹೇಳುತ್ತಿದೆ. ಬಹುಸಂಖ್ಯಾತರಿಗೆ ಅಪಮಾನ, ನಮ್ಮ ದೇವಸ್ಥಾನ, ಮಠ, ಮಂದಿರ, ವಿಚಾರÀಗಳಿಗೆ ಕಾಂಗ್ರೆಸ್ ಅವಹೇಳನ ಮಾಡುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಇದೆ. ಚುನಾವಣೆ, ರಾಜಕೀಯವೇ ಬೇರೆ. ನಮ್ಮ ಆಚಾರ- ವಿಚಾರಗಳನ್ನು ಉಳಿಸಲು ಹೋರಾಟ ಮಾಡಲಿದ್ದೇವೆ ಎಂದರು.
ಮೊನ್ನೆ ಹನುಮಾನ್ ಚಾಲೀಸ ಪಠಿಸಿದ್ದೇವೆ. ಇವತ್ತು ಭಕ್ತರೆಲ್ಲರು ಸೇರಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ಥಾನಗಳಲ್ಲಿ, ನಗರದ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸವನ್ನು ಪಠಣ ಮಾಡಿ, ಧರ್ಮದ ರಕ್ಷಣೆಗೆ ನಮಗೆ ಶಕ್ತಿ ಕೊಡು ಎಂದು ಆಂಜನೇಯನನ್ನು ಮತ್ತೆ ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಕರ್ನಾಟಕದ ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ನಡೆಯಬೇಕು ಎಂಬ ಆಶಯ ಬಿಜೆಪಿಯದು. ನಾವು ಡಬಲ್ ಎಂಜಿನ್ ಸರಕಾರದ ಸಾಧನೆ ಆಧಾರದಲ್ಲಿ ಚುನಾವಣಾ ಕಣಕ್ಕೆ ಇಳಿದು ಮತ ಕೇಳಿದ್ದೇವೆ ಎಂದು ತಿಳಿಸಿದರು.
ಸಚಿವ ಗೋಪಾಲಯ್ಯ, ಬಿಬಿಎಂಪಿ ಮಾಜಿ ಉಪಮೇಯರ್ ಎಸ್ ಹರೀಶ್, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.