ಆಹಾ! ಎಂತಹ ಸಂಭ್ರಮ, ಚುನಾವಣೆ ಬಂತೆಂದರೆ ಸಾಕು, ದೇಶಭಕ್ತ ಬಂಧುಗಳಿಗೆ, ಸಾಮಾಜಿಕ ಚಿಂತಕರಿಗೆ ಹಾಗೂ ಹೆಚ್ಚಾಗಿ ರಾಜಕಾರಣಿಗಳಿಗೆ ಎಲ್ಲಿಲ್ಲದ ಉತ್ಸಾಹ! ಕಳೆದ 2-3 ತಿಂಗಳುಗಳ ಎಲ್ಲಾ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಚುನಾವಣೆಗಳು ನಿಜಕ್ಕೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ಸವಗಳೇ ಎಂದು ಅರ್ಥವಾಗಿದೆ. ಅದರಲ್ಲೂ ಮೊದಲಬಾರಿಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರುವ ಸಾಮಾಜಿಕ ಕ್ಷೇತ್ರದಲ್ಲಿ ಆಸಕ್ತರಾಗಿರುವ ಯುವ ಮನಸ್ಸುಗಳಿಗೆ ಉಲ್ಲಾಸವೋ ಉಲ್ಲಾಸ. ರಾಜಕೀಯ ಅನ್ನೋದು ಎಷ್ಟು ಗಂಭೀರ, ದಿಟ್ಟತನದ ಕ್ಷೇತ್ರ ಎನ್ನೋದು ನಮಗೆ ಗೊತ್ತೇ ಇದೆ. ಆದಾಗ್ಯೂ ನಮ್ಮ ದೇಶದ ರಾಜಕೀಯ ಚಲನ-ವಲನಗಳಂತು ಎಂದಿಗೂ ಬೇಸರಿಸುವುದಿಲ್ಲ, ಏನಾದರೂ ಹಾಸ್ಯ-ಲಾಸ್ಯದ ಬೆಳವಣಿಗೆಗಳು ಇದ್ದೇ ಇರುತ್ತದೆ.
ನಿಮ್ಮ ಒಂದು ಓಟಿನ ಬೆಲೆ: ಓಹೋ ಚುನಾವಣೆ ಇನ್ನೇನೊ ಬಂದೇ ಬಿಟ್ಟಿತು. ನಿಮ್ಮ ಒಂದು ಓಟಿಗೆ ಎಷ್ಟು ಬೆಲೆಯನ್ನು ನಿಗದಿಪಡಿಸಿಕೊಂಡಿರಿ? ಒಂದು ಸಾವಿರ, ಎರಡು ಸಾವಿರ, ಐದು ಸಾವಿರ?? ಅಯ್ಯೋ ನಿಮ್ಮ ಓಟಿನ ಬೆಲೆ ಅಷ್ಟು ಕಡಿಮೆ ಅಲ್ಲ ಕಣ್ರೀ! ಹಾಗಾದರೆ ಎಷ್ಟು ತಿಳ್ಕೊಳೋಣ ಬನ್ನಿ. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಅಪಾಯ ಉಂಟಾಗಿ ನೀವು ಸಿಲುಕಿಕೊಂಡರೂ ಭಾರತ ಸರ್ಕಾರ ನಿಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿಸುತ್ತಿದೆ. ನಮ್ಮ ದೇಶದ ಅಸ್ಮಿತೆಗೆ ಧಕ್ಕೆ ತಂದಿದ್ದ, ಅಸಂಭವ ಪ್ರತೀತವಾಗಿದ್ದ ರಾಮಜನ್ಮಭೂಮಿ ವಿವಾದದ ಪರಿಹಾರ, ಆರ್ಟಿಕಲ್ 370 ರದ್ದತಿ, ಟ್ರಿಪಲ್ ತಲಾಖ್ ನಿಷೇಧ, ಕಪ್ಪು ಹಣದ ಕಡಿವಾಣಕ್ಕಾಗಿ ನೋಟ್ ಬ್ಯಾನ್ ಮುಂತಾದ ಸಾಹಸಿ ಮಿಷನ್ ಗಳನ್ನು ನಮ್ಮ ಸರ್ಕಾರ ಪೂರ್ಣಗೊಳಿಸುತ್ತಿದೆ. ಜಗತ್ತಿನ ದೇಶಗಳ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುತ್ತಾ, ವೈರಿ ದೇಶಗಳ ರಣಹದ್ದುಗಳನ್ನು ಸದೆ ಬಡಿಯುತ್ತಾ, ಪ್ರಪಂಚದ 5ನೇ ಆರ್ಥಿಕತೆಯಾಗಿ ಮುನ್ನುಗ್ಗುತ್ತಾ, ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸುದೀರ್ಘವಾದ ಸ್ಥಿರ ಸರ್ಕಾರವನ್ನು ಮುನ್ನಡೆಸುತ್ತಾ ನಮ್ಮ ದೇಶದ ತಾಕತ್ತು ಏನು ಎಂದು ಈ ಸರ್ಕಾರ ತೋರ್ಪಡಿಸುತ್ತಿದೆ. ಇದೆಲ್ಲಾ ಹೇಗೆ ಸಾಧ್ಯವಾಯಿತು? ಉತ್ತರ – ಮೋದಿ ಅವರಾ? ಅಲ್ಲ, ನೀವು ಅವರ ಮೇಲೆ ಭರವಸೆಯನ್ನಿಟ್ಟು ನೀಡಿದ ನಿಮ್ಮ ಅಮೂಲ್ಯ ಮತಗಳು! 2014ರಲ್ಲಿ ಅತ್ಯಂತ ಭ್ರಷ್ಟ, ದುರ್ಬಲ, ಸಂವೇದನಾ ರಹಿತ, ಜನವಿರೋಧಿ ಸರ್ಕಾರವನ್ನು ಸೋಲಿಸಿ ‘ನರೇಂದ್ರ ದಾಮೋದರದಾಸ್ ಮೋದಿ’ ಎಂಬ ನಮ್ಮ ಮಹಾರಾಜ ಹಿಂದೂಸ್ತಾನದ ಚಕ್ರವರ್ತಿಯಾಗಿ ಪಟ್ಟಾಭಿಷಕ್ತಗೊಳ್ಳಲು ಸಾಧ್ಯವಾಗಿದ್ದು ನಿಮ್ಮ ಅಮೂಲ್ಯವಾದ ಮತಗಳಿಂದಲೇ.
ಮೋದಿ ಮ್ಯಾಜಿಕ್: ಕಳೆದ 2 ವಾರಗಳ ಹಿಂದಷ್ಟೇ ಕಾಂಗ್ರೆಸ್-ಬಿಜೆಪಿ ಸಮಬಲ ಸಾಧಿಸುತ್ತವೆ ಎಂದು ಹೇಳುತ್ತಿದ್ದ ಚುನಾವಣಾ ಪೂರ್ವ ಸಮೀಕ್ಷೆಗಳು ರಾಜ್ಯಕ್ಕೆ ನಮೋ ಸುನಾಮಿ ಅಪ್ಪಳಿಸಿದ ನಂತರ ಬಿಜೆಪಿಯೇ ಹೆಚ್ಚು ಸ್ಥಾನ ಗಳಿಸಿ ಪ್ರಾಬಲ್ಯ ಸಾಧಿಸುವುದು ಎಂದು ಸಾರುತ್ತಿವೆ! ಮೋದಿಯವರ ಪ್ರತೀ ಹೆಜ್ಜೆಯಲ್ಲೂ ಆ ಪರಶಿವನ ಶ್ರೀರಕ್ಷೆ ಇದೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂದಿನ ಬಿಜೆಪಿಯ ರಾಜ್ಯ ಸರ್ಕಾರದ ವಿರುದ್ಧ ಯಾವುದೇ ಆಧಾರಗಳಿಲ್ಲದೆ ಭ್ರಷ್ಟಾಚಾರ ಆರೋಪ ಮಾಡುತ್ತಾ, ಆಡಳಿತ ವಿರೋಧಿ ಅಲೆಯ ಮೇಲೆ ತಮ್ಮ ಹಡಗನ್ನು ಮುನ್ನಡೆಸುತ್ತಾ ಮಿಂಚುತ್ತಿದ್ದ ಕಾಂಗ್ರೆಸ್ ‘ಲಿಂಗಾಯತ ಸಿಎಂ ಭ್ರಷ್ಟ’, ‘ಮೋದಿ ವಿಷ ಸರ್ಪ’ ಹಾಗೂ ‘ಹಿಂದುತ್ವದ ರಕ್ಷಣೆಗೆ ಕಟಿಬದ್ಧವಾಗಿರುವ ಭಜರಂಗದಳ ಬ್ಯಾನ್’ ಮುಂತಾದ ಎಡವಟ್ಟು ಹೇಳಿಕೆಗಳನ್ನು ನೀಡಿ ಬಿಜೆಪಿಗೆ ಬ್ರಹ್ಮಾಸ್ತ್ರಗಳನ್ನೇ ದಯಪಾಲಿಸಿದ್ದಾರೆ. ಈಗ ರಾಜ್ಯಕ್ಕೆ ಮೋದಿ ಅವರು ಆಗಮಿಸಿದ ಮೇಲೆ ಭಯಭೀತರಾಗಿ, ಒತ್ತಡದಿಂದ ಈ ಹೇಳಿಕೆಗಳನ್ನು ಕೊಟ್ಟರೊ ಅಥವಾ ಆ ಭಗವಂತನೇ ಮೋದಿ ಅವರ ಆಗಮನಕ್ಕೆ ಸರಿಯಾಗಿ ಈ ಹೇಳಿಕೆಗಳ ದಯಪಾಲಿಸಿದನೋ? ಒಟ್ಟಿನಲ್ಲಿ ಕಾಂಗ್ರೆಸ್ ಅನ್ನು ರೋಸ್ಟ್ ಮಾಡುವಲ್ಲಿ ಎಂದೆಂದಿಗೂ ಅಗ್ರಗಣ್ಯ ಸ್ಥಾನವನ್ನೇ ಕಾಪಾಡಿಕೊಂಡು ಬರುತ್ತಿರುವ ನಮ್ಮ ನೆಚ್ಚಿನ ಮೋದೀಜಿ ಈ ಬಾರಿಯೂ ತಮ್ಮ ಅಮೋಘ ವಾಕ್ಚಾತುರ್ಯದಿಂದ ಕಾಂಗ್ರೆಸ್ ನ ಬಾಣವನ್ನು ಅವರಿಗೇ ತಿರುಗುಬಾಣವನ್ನಾಗಿಸಿದ್ದಾರೆ. ಕೋಲು ಕೊಟ್ಟು ಹೊಡೆಸಿಕೊಳ್ಳೋದು ಅಂದ್ರೆ ಇದೇ ಅಲ್ವಾ!
ಬೆಳಗಿನ ಉಪಹಾರ ಸೇವಿಸುವಾಗಲೂ ಟಿವಿಯಲ್ಲಿ ಮೋದಿ, ಮಧ್ಯಾಹ್ನದ ಊಟ ಮಾಡುವಾಗಲೂ ಟಿವಿಯಲ್ಲಿ ಮೋದಿ, ಮತ್ತೆ ಸಾಯಂಕಾಲ ಚಹಾ ಸವಿಯುವಾಗಲೂ ಟಿವಿಯಲ್ಲಿ ಮೋದಿ. ಅಬ್ಬಬ್ಬಾ ಮೋದಿ ಭಕ್ತರಿಗಂತೂ ಹಬ್ಬವೋ ಹಬ್ಬ. ಟಿವಿಯಲ್ಲಿ ನೋಡುವವರಿಗೇನೆ ಇಷ್ಟೊಂದು ಸಂತೋಷ, ಇನ್ನು ನೈಜವಾಗಿ ನೋಡುವವರ ಕಥೆ, ಆಹಾ! AM(ಮಧ್ಯರಾತ್ರಿ ನಂತರವೂ) ವರೆಗೂ ಕೆಲಸ ಮಾಡುವ ನಮ್ಮ PM ಸಾಹೇಬ್ರು ‘ಜೈ ಭಜರಂಗ ಬಲಿ’ ಎಂದು ಭಾಷಣ ಪ್ರಾರಂಭಿಸಿ ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಭವಿಷ್ಯದ ರೋಡ್ ಮ್ಯಾಪ್, ಚುನಾವಣೆಯಲ್ಲಿ ಹೆಚ್ಚಾಗಬೇಕಾದ ಮತದಾನದ ಪ್ರಮಾಣ ಮುಂತಾದ ವಿಷಯಗಳ ಬಗ್ಗೆ ತಿಳಿಸಿ ಕೊನೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಗಳನ್ನು ರೋಸ್ಟ್ ಮಾಡುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬಂತಹ ಅನುಭವ! ಭಾಜಪಾದಂತಹ ಒಂದು ಸಧೃಡ ಪಕ್ಷಕ್ಕೆ ಬಹುಮತ ದೊರೆಯದೆ ಹಿಂದಿನಂತೆ ಕಾಂಗ್ರೆಸ್-ಜೆಡಿಎಸ್ ನ ಅಸ್ಥಿರ, ಅತಂತ್ರ, ಅಪವಿತ್ರ ಮೈತ್ರಿಯ ಸರ್ಕಾರ ಅಸ್ತಿತ್ವಕ್ಕೆ ಬಂದರೆ ರಾಜ್ಯದಲ್ಲಿ ವಿಕಾಸವಾಗದೆ, ಕೇವಲ ಲೂಟಿಯಾಗುವುದು. ದ್ವೇಷ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್ ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಹಕಾರ ನೀಡದೆ ರಾಜ್ಯವನ್ನು ವಿಕಾಸ ಪಥದಿಂದ ವಂಚಿತವಾಗಿಸುವ ಸಾಧ್ಯತೆಯಿರುವುದರಿಂದ ಭಾಜಪಾದ ಡಬಲ್ ಇಂಜಿನ್ ಸರ್ಕಾರವು ಮುಂದುವರಿಯುವುದು ಅತ್ಯಗತ್ಯ. ಮೋದಿ ಮ್ಯಾಜಿಕ್ ಕೇವಲ ಇಷ್ಟಕ್ಕೇ ನಿಂತಿಲ್ಲ. ಕಳೆದ ಕೆಲವು ಚುನಾವಣೆಗಳಿಂದ ಸ್ವತಃ ಮೋದಿಯವರೇ ತಮ್ಮ ಭಾಷಣದಲ್ಲಿ ‘ಸೈಲೆಂಟ್ ವೋಟರ್ಸ್’ ಎಂಬ ಪದವನ್ನು ಚಾಲ್ತಿಗೆ ತಂದಿದ್ದಾರೆ. ಎಷ್ಟೋ ಮಹಿಳೆಯರು ಬಹುಕಾಲದಿಂದ ವಂಶ ಪಾರಂಪರ್ಯವಾಗಿ ತಮ್ಮ ಪರಿವಾರವು ಕಾಂಗ್ರೆಸ್/ಇತರೆ ಪಕ್ಷಗಳಿಗೆ ಓಟ್ ಹಾಕುವ ಕಠಿಣ ನಿಯಮವನ್ನು ಮಾಡಿಕೊಂಡಿದ್ದರೂ, ಅದನ್ನು ಮುರಿದು ಮನೆ ಮಗನಂತೆ ತಾಯಂದಿರಿಗಾಗಿ ಹಗಲು-ರಾತ್ರಿ ದುಡಿಯುತ್ತಿರುವ ಮೋದಿಯನ್ನೇ ಗೆಲ್ಲಿಸಬೇಕೆಂದು ಭಾಜಪಾಗೆ ಓಟ್ ಹಾಕುತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆಯನ್ನು ಬಯಸಿ ಮಹಿಳೆಯರೇ ಮುಂದಾಗಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆಂದರೆ ಮಹಾ ಕ್ರಾಂತಿಯಾಗುವುದು ನಿಶ್ಚಿತ. ಇದು ಎಂತಹ ದಿಟ್ಟ ಹೆಜ್ಜೆ ಎಂಬುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಆ ದೈವೀ ಸ್ವರೂಪ ಮೋದೀಜಿ ವ್ಯಕ್ತಿತ್ವವೇ ಹಾಗಿದೆ, ಅವರನ್ನು ಗೆಲ್ಲಿಸದೆ ಬೇರೆ ದಾರಿಯೇ ಇಲ್ಲದಾಗಿದೆ ಮಾತಾ-ಸಹೋದರಿಯರಿಗೆ! ಆದರೆ ನಮ್ಮಣ್ಣ, ನಮ್ಮನ್ನು ಬೆಳೆಸಿದರೆಂಬ ಋಣ, ಬಂಧವನ್ನು ಮುರಿದುಕೊಳ್ಳಲು ಬಿಡದ ಅಘೋಷಿತ ಪ್ರಮಾಣ ಎಂಬ ತಮ್ಮ ಸ್ವಧರ್ಮದ ಕಟ್ಟುಪಾಡುಗಳಿಗೆ ಸಿಲುಕಿ ವಿವಶತೆಯಿಂದ ರಾಷ್ಟ್ರ ಧರ್ಮದ ವಿರುದ್ಧವೇ ನಿಂತಿರುವ ಈ ಕಾಲದ ಭೀಷ್ಮ, ದ್ರೋಣ, ಕರ್ಣರು ಈಗಲಾದರೂ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕಿದೆ. ಧರ್ಮವು ಪಾಂಡವರ ಪಕ್ಷದಲ್ಲಿದೆ ಎಂದು ತಿಳಿದಿದ್ದರೂ, ತಮ್ಮ ಸ್ವಧರ್ಮದ ಕಟ್ಟುಪಾಡುಗಳನ್ನು ಮೀರಲಾಗದೆ ಅಧರ್ಮದ ದುರ್ಯೋಧನನ ಪಕ್ಷದಲ್ಲಿ ನಿಂತು ಯುದ್ಧ ಮಾಡಿದ್ದರ ಪರಿಣಾಮ ಇವರು ಸ್ವತಃ ಏನು ತಪ್ಪು ಮಾಡದಿದ್ದರೂ, ತಪ್ಪು ಮಾಡಿರುವವರನ್ನು ಬೆಂಬಲಿಸಿದ್ದಕ್ಕೆ ಮೃತ್ಯು ದಂಡನೆಯನ್ನೇ ಅನುಭವಿಸಬೇಕಾಯ್ತು! ಆದ್ದರಿಂದ ನಮ್ಮ ರಾಷ್ಟ್ರದ ಮೇಲಾದ ವಿದೇಶಿ ಆಕ್ರಮಣದ ಕಷ್ಟಕೋಟಲೆಗಳೆಲ್ಲಾ ಕಳೆದ ನಂತರ ಆಗಮಿಸಿರುವ ಈ ಉತ್ತಮ ಸಮಯದಲ್ಲಿ, ನಮ್ಮ ಅಭ್ಯುದಯಕ್ಕಾಗಿಯೇ ಅವತಾರವೆತ್ತಿ ಬಂದಿರುವ ಧೀಮಂತ ನಾಯಕ ನರೇಂದ್ರ ಮೋದಿಯವರು ಸಮರದಲ್ಲಿರುವಾಗ ಅವರನ್ನು ಬೆಂಬಲಿಸಿದೆ, ಹಣದಾಹ- ಅಧಿಕಾರದಾಹಗಳಿಂದ ದೇಶಹಿತಕ್ಕೆ ಪ್ರಾಮುಖ್ಯ ನೀಡದೆ ಸ್ವಾರ್ಥ ರಾಜಕಾರಣ ಮಾಡುತ್ತಾ ಮೋದಿಯವರನ್ನು ಕೆಳಗಿಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿರುವವರನ್ನು ಸ್ವಧರ್ಮದ ಕಟ್ಟುಪಾಡುಗಳಿಗೆ ಬಿದ್ದು ಬೆಂಬಲಿಸುತ್ತಿರುವವರು ಎಚ್ಚೆತ್ತುಕೊಂಡು ದೇಶಹಿತಕ್ಕಾಗಿ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಿದೆ.
ಕಾಂಗ್ರೆಸ್ ಗೆದ್ರೆ ರಿವರ್ಸ್ ಗೇರ್ ಗ್ಯಾರಂಟಿ: ‘ನಾವು ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆಗಳನ್ನು ಕಿತ್ತೊಗಿತಿವಿ, ಈಗ ಜಾರಿಯಾಗಿರುವ ಮೀಸಲಾತಿ ಹೆಚ್ಚಳ, ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ರಿವರ್ಸ್ ಮಾಡ್ತಿವಿ’ ಎಂದೆಲ್ಲಾ ಕೆಂಡಕಾರುತ್ತಿರುವ ಕಾಂಗ್ರೆಸ್ ಒಂದು ವೇಳೆ ನಿಜವಾಗಲೂ ಅಧಿಕಾರಕ್ಕೆ ಬಂದರೆ ಹಿಂದೂ ವಿರೋಧಿ, ಮಾತೃ ಭಾಷಾ ಶಿಕ್ಷಣ ವಿರೋಧಿ ಸರ್ಕಾರ ರಚನೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಕಾಂಗ್ರೆಸ್ಸಿಗರು ಅದಾಗಲೇ ಉಚಿತ ಯೋಜನೆಯ ಆಮಿಷಗಳನ್ನು ಒಡ್ಡಿ ಗೆದ್ದುಕೊಂಡಿರುವ ರಾಜ್ಯದಲ್ಲೇ (ಹಿಮಾಚಲ ಪ್ರದೇಶ) ಅವುಗಳನ್ನು ಇನ್ನೂ ಜಾರಿಗೊಳಿಸಿಲ್ಲ, ಆದರೂ ಅದು ಯಾವ ಧೈರ್ಯದ ಮೇಲೆ ನಮ್ಮ ಈ ರಾಜ್ಯದ ಚುನಾವಣೆಯಲ್ಲೂ ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಮಕ್ಮಲ್ ಟೋಪಿ ಹಾಕಲು ಬರುತ್ತಿದ್ದಾರೋ ದೇವರೇ ಬಲ್ಲ! ಅದಾಗಲೇ ವೈಚಾರಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಈ ಉಚಿತ ಗ್ಯಾರಂಟಿಗಳ ಮೂಲಕ ದೇಶವನ್ನು ದಿವಾಳಿಯಾಗಿಸಬಹುದಾದ ಪ್ರಣಾಳಿಕೆಯನ್ನು ಹೊರ ತಂದಿದ್ದಾರೆ. ಚಾಲ್ತಿಯಲ್ಲಿರುವ ಸಾಂಸ್ಕೃತಿಕ ವಿಕಾಸಕ್ಕೆ, ಅಭಿವೃದ್ಧಿ ಕಾರ್ಯಗಳಿಗೆ, ಶೈಕ್ಷಣಿಕ ಪ್ರಗತಿಗೆ ರಿವರ್ಸ್ ಗೇರ್ ಹಾಕಲು ಹೊರಟಿರುವ ಕಾಂಗ್ರೆಸ್ ನ ಕೈಯನ್ನು ತಡೆಯಲೇಬೇಕಿದೆ. ಇಷ್ಟು ಮಾಡಿಕೊಂಡದ್ದು ಸಾಲದು ಎಂಬಂತೆ ಅಧಿಕಾರಕ್ಕೆ ಬಂದರೆ ಭಜರಂಗದಳವನ್ನು ಬ್ಯಾನ್ ಮಾಡ್ತೀವಿ ಎಂದು ಹೇಳಿ ತಾವೇ ಭಜರಂಗಿ ಭಕ್ತರಿಂದ ಬ್ಯಾನ್ ಗೆ ಒಳಗಾಗುವ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇನ್ನು ಜೆಡಿಎಸ್ ಕೂಡ ಕಾಂಗ್ರೆಸ್ ನದ್ದೇ ಮತ್ತೊಂದು ಅವತಾರ. ಕಾಂಗ್ರೆಸ್ ನಂತರ ಯಾವೆಲ್ಲಾ ಪಕ್ಷಗಳು ಸ್ಥಾಪಿತವಾದವೊ ಅದರಲ್ಲಿ ಬಿಜೆಪಿಯನ್ನು ಬಿಟ್ಟು ಹೆಚ್ಚು ಕಡಿಮೆ ಉಳಿದೆಲ್ಲಾ ಪಕ್ಷಗಳು ಕಾಂಗ್ರೆಸ್ ಅನ್ನೇ ಅನುಸರಿಸುತ್ತಿವೆ. ಅದು ಸಿದ್ಧಾಂತವನ್ನೊಳಗೊಂಡಂತೆ ಭ್ರಷ್ಟ ರಾಜಕಾರಣ ಮಾಡುವುದರಲ್ಲಿರಬಹುದು ಅಥವಾ ಕುಟುಂಬ ರಾಜಕಾರಣ ಮಾಡುವುದರಲ್ಲಿರಬಹುದು. ಜಗತ್ತಿನಲ್ಲಿ ಹಾಗೆಯೇ. ಸಿಹಿಯಾದ ಮಿಥ್ಯಗಳ ಹಿಂದೆ ಜನರು ಓಡುತ್ತಿರುತ್ತಾರೆ, ಕಹಿಯಾದ ಸತ್ಯವನ್ನು ಎದುರಿಸುವ ಧೈರ್ಯವಂತರು ತುಂಬಾ ಕಡಿಮೆ. ಸೆಕ್ಯುಲರಿಸಂ ಎಂಬ ಹೆಸರಿಗಷ್ಟೇ ಸಮಾನತೆ ಉಚ್ಛರಿಸುತ್ತಾ, ಬಹುಸಂಖ್ಯಾತರನ್ನು ಕಡೆಗಣಿಸಿ ಅಲ್ಪಸಂಖ್ಯಾತರನ್ನು ಓಲೈಸುವ ವಿಚಾರವನ್ನು ಕಾಂಗ್ರೆಸ್ ನಂತಹ ಪಕ್ಷಗಳು ಒಪ್ಪಿಕೊಂಡರೆ, ಹಿಂದುತ್ವ-ರಾಷ್ಟ್ರೀಯತೆಯಂತಹ ನಿಜಾರ್ಥದ ಸಮಾನತೆ ಸಾಧಿಸುವ ಆದರೆ ತಪಸ್ಸನ್ನು ಬಯಸುವ ಸಿದ್ಧಾಂತವನ್ನು ಬಿಜೆಪಿ ಒಪ್ಪಿಕೊಂಡಿದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಳ್ಳಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆ ಗ್ಯಾರಂಟಿ, ಗೋ ಹತ್ಯೆ ಗ್ಯಾರಂಟಿ, ಲವ್ ಜಿಹಾದ್ ಗ್ಯಾರಂಟಿ, ಮತಾಂತರ ಗ್ಯಾರಂಟಿ, ಹಿಂದೂ ಸಂಘಟನೆಗಳ ಮೇಲೆ ಅತ್ಯಾಚಾರ ಗ್ಯಾರಂಟಿ. ಜೊತೆಗೆ ಲೋಡ್ ಶೆಡ್ಡಿಂಗ್ ಗ್ಯಾರಂಟಿ, ಸ್ಟಾರ್ಟಪ್ ಗಳ ಸಂಖ್ಯೆ ಕಡಿಮೆಯಾಗುವುದು ಗ್ಯಾರಂಟಿ, ಕೇಂದ್ರದ ಯೋಜನೆಗಳನ್ನು ನಿರ್ಲಕ್ಷಿಸುವುದು ಗ್ಯಾರಂಟಿ.
ಕಾಂಗ್ರೆಸ್ ಬಗ್ಗೆ ಇಷ್ಟೆಲ್ಲಾ ಟೀಕೆ ಟಿಪ್ಪಣಿಗಳನ್ನು ಮಾಡಿದ ಮೇಲೆ ನಿಮ್ಮೆಲ್ಲರ ಮನಸ್ಸಿನಲ್ಲಿ ಮೂಡುವುದು ಒಂದೇ ಪ್ರಶ್ನೆ- ‘ಬಿಜೆಪಿಯವರೆಲ್ಲಾ ಮೋದಿಯವರಂತೆ ತಪಸ್ವಿ ರಾಜಕಾರಣಿಗಳಾ?’ ಎಂದು, ಖಂಡಿತವಾಗಿಯೂ ಇಲ್ಲ. ಇಂದಿಗೂ ಕೆಲವು ಯೋಗ್ಯತೆಯಿಲ್ಲದ, ಸೈದ್ಧಾಂತಿಕ ಬದ್ಧತೆಯಿಲ್ಲದ ರಾಜಕಾರಿಣಿಗಳು ಮೋದಿಯವರ ಹೆಸರಲ್ಲಿ ಗೆಲ್ಲುತ್ತಿರುವುದನ್ನು ನೋಡುತ್ತಿದ್ದೇವೆ. ಟಿಕೆಟ್ ಕೈ ತಪ್ಪಿದ ಮೇಲೆ ಒಂದು ಕ್ಷಣವೂ ಯೋಚಿಸದೆ, ಸ್ವಾಭಿಮಾನದಿಂದ ಪಕ್ಷೇತರ ಅಭ್ಯರ್ಥಿಯೂ ಆಗದೆ ಸಿದ್ಧಾಂತ-ಪಕ್ಷಗಳಿಗೆ ದ್ರೋಹವೆಸಗಿ ಕಾಂಗ್ರೆಸ್, ಜೆಡಿಎಸ್ ಸೇರಿದ ಬಿಜೆಪಿಯವರನ್ನು ನೋಡಿದರೆ ಇದು ಚೆನ್ನಾಗಿ ಅರ್ಥವಾಗುತ್ತದೆ. ಇತರೆ ಪಕ್ಷಗಳಲ್ಲೂ ಇದು ನಡೆದಿದೆ. ನಮಗೆಲ್ಲರಿಗೂ ತಿಳಿದೇ ಇರುವಂತೆ ರಾಜಕಾರಣ ಕ್ಷೇತ್ರವು ಮಹತ್ತರ ಸಾಮಾಜಿಕ ಕ್ಷೇತ್ರ. ಆದರೆ ಆರ್ಥಿಕತೆ, ನೆಪೊಟಿಸಂ, ತಪ್ಪು ಕಲ್ಪನೆಗಳು ಮುಂತಾದ ನೂರೆಂಟು ಕಾರಣಗಳಿಂದ ಸಾಮಾಜಿಕ ಕ್ಷೇತ್ರಾಸಕ್ತರು ಹೆಚ್ಚಿನ ಪ್ರಮಾಣದಲ್ಲಿ ಆ ಕ್ಷೇತ್ರವನ್ನು ಪ್ರವೇಶಿಸಲಾಗುತ್ತಿಲ್ಲ. ಇತ್ತೀಚೆಗೆ ಮೋದಿಯವರು ಪ್ರಧಾನಿಯಾದ ನಂತರ ಇಂತಹವರಲ್ಲಿ ಹೊಸ ಭರವಸೆಯಂತು ಮೂಡಿದೆ. ಈ ಎಲ್ಲಾ ಕಾರಣಗಳಿಂದ ರಾಜಕಾರಣವು ಶ್ರೀಮಂತರ ಹಾಗೂ ಕೆಲವು ನಿರ್ದಿಷ್ಟ ಕುಟುಂಬಗಳ ಅಡ್ಡವೆಂಬಂತೆ ಕಂಡು ಬರುತ್ತಿದೆ.
ಮೋದಿ ಅವರು ಒಬ್ಬ ಮನುಷ್ಯ ಇಷ್ಟೊಂದು ಕೆಲಸ ಮಾಡಬಹುದೆ ಎನ್ನುವಷ್ಟರ ಮಟ್ಟಿಗೆ ಅದ್ಭುತ ಕೆಲಸಗಳನ್ನು ಮಾಡುತ್ತಾ, ಇನ್ನಿತರ ಪಕ್ಷಗಳಿಗೆ ಹೋಲಿಸಿದರೆ ಕಡಿಮೆ ದೋಷಗಳನ್ನು ಹೊಂದಿರುವಂತೆ ತಮ್ಮ ಪಕ್ಷವನ್ನು ಶಿಸ್ತಿನಿಂದ ನಡೆಸುತ್ತಿರುವಾಗ ಬಿಜೆಪಿಗೆ ಮತ ನೀಡುವುದು ಒಳಿತು. ಇನ್ನು ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿದಿಲ್ಲ, ಸಮಾಜಕ್ಕೆ ದಿನೇ ದಿನೇ ಕಂಟಕವಾಗುತ್ತಿರುವ ಮಾನಸಿಕತೆಯಾಗಿ ಗೋಚರಿಸುತ್ತಿದೆ. ಬ್ರಿಟಿಷರು, ಮೊಘಲರು, ಪಠಾಣರು ಒಂದು ಕಾಲದಲ್ಲಿ ನಮ್ಮ ದೇಶದ ಮೇಲೆ ಅಧಿಕಾರ ನಡೆಸುತ್ತಿದ್ದರು. ಅವರ ವಿರುದ್ಧ ಹೋರಾಡಿ ನಮ್ಮ ಭೂಮಿಯನ್ನು, ಅಸ್ಮಿತೆಯನ್ನು ಕಾಪಾಡಿಕೊಂಡೆವು. ಹೀಗೆ ಅವರ ಆಡಳಿತವನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಮೇಲೆ ಮತ್ತೆ ಅವರು ಆಡಳಿತ ಮಾಡಲು ಸಾಧ್ಯವಾಗುತ್ತದೆಯೇ? ಇಲ್ಲ, ಅದಿನ್ನು ಭೂತಕಾಲವಷ್ಟೆ. ಹಾಗೆಯೇ ಕಾಂಗ್ರೆಸ್ ಕೂಡ. ಬಹುತೇಕ ಇತ್ತೀಚಿನ ಎಲ್ಲಾ ಚುನಾವಣೆಗಳಲ್ಲೂ ಸೋಲನ್ನು ಕಾಣುತ್ತಿರುವ ಕಾಂಗ್ರೆಸ್ ದೇಶದ ಪ್ರಜೆಗಳಿಂದ ತಿರಸ್ಕಾರಕ್ಕೆ ಒಳಗಾಗಿದೆ. ಆದ್ದರಿಂದ ಕಾಂಗ್ರೆಸ್ ತನ್ನ ಎಲ್ಲಾ ದೋಷಗಳಿಂದ ಮುಕ್ತವಾಗಿ ನವರೂಪದಲ್ಲಿ ದೇಶಹಿತಕಾರಿಯಾಗಿ ಹೊರಹೊಮ್ಮಲಿ, ದೇಶ ಹಿತಕ್ಕಾಗಿ ಎಲ್ಲಾ ಪಕ್ಷಗಳು ಆರೋಗ್ಯಕರ ರೀತಿಯಲ್ಲಿ ರಾಜಕಾರಣ ಮಾಡಲಿ.
✍️ಕಾವೇರಿ ಮಂಡ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.