ನವದೆಹಲಿ: ಗುಜರಾತ್ನಲ್ಲಿ ನಡೆದ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಲುಕಿಸುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
‘ನ್ಯೂಸ್ 18 ರೈಸಿಂಗ್ ಇಂಡಿಯಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರವು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ಪ್ರಶ್ನೆಗೆ ಉತ್ತರವಾಗಿ ಶಾ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಮೋದಿ ಅವರನ್ನು ಸಿಲುಕಿಸುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು ಆದರೂ ಬಿಜೆಪಿ ಯಾವತ್ತೂ ಗದ್ದಲ ಎಬ್ಬಿಸಲಿಲ್ಲ ಎಂದಿದ್ದಾರೆ.
ಸೂರತ್ನ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಶಿಕ್ಷೆ ವಿಧಿಸಿದೆ, ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡವರಲ್ಲಿ ರಾಹುಲ್ ಗಾಂಧಿ ಒಬ್ಬರೇ ಅಲ್ಲ, ಹಿಂದೆಯೂ ಈ ರೀತಿಯ ಘಟನೆಗಳು ನಡೆದಿವೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರು ಉಚ್ಛ ನ್ಯಾಯಾಲಯದ ಮೊರೆ ಹೋಗುವ ಬದಲು ಅಳಲನ್ನು ತೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ತಮ್ಮ ಭವಿಷ್ಯವನ್ನು ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸುತ್ತಿದ್ದಾರೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಆರೋಪ ಹೊರಿಸುವ ಬದಲು ರಾಹುಲ್ ಗಾಂಧಿ ತಮ್ಮ ಪ್ರಕರಣದ ವಿರುದ್ಧ ಹೋರಾಡಲು ಉನ್ನತ ನ್ಯಾಯಾಲಯಕ್ಕೆ ಹೋಗಬೇಕು ಎಂದಿರುವ ಶಾ, ಕಾಂಗ್ರೆಸ್ ತಪ್ಪು ಕಲ್ಪನೆಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
“ಅವರು ತಮ್ಮ ಶಿಕ್ಷೆಗೆ ತಡೆ ನೀಡುವಂತೆ ಮನವಿ ಮಾಡಿಲ್ಲ. ಇದು ಯಾವ ರೀತಿಯ ದುರಹಂಕಾರ? ನಿಮಗೆ ಅನುಕೂಲ ಬೇಕು. ನೀವು ಸಂಸದರಾಗಿ ಮುಂದುವರಿಯಲು ಬಯಸುತ್ತೀರಿ ಮತ್ತು ನ್ಯಾಯಾಲಯದ ಮುಂದೆ ಹೋಗುವುದಿಲಲ್ಲ. ಇಂತಹ ದುರಹಂಕಾರ ಎಲ್ಲಿ ಹುಟ್ಟುತ್ತದೆ” ಎಂದು ಪ್ರಶ್ನಿಸಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ 2013 ರ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಲಾಲು ಪ್ರಸಾದ್, ಜೆ ಜಯಲಲಿತಾ ಮತ್ತು ರಶೀದ್ ಅಲ್ವಿ ಸೇರಿದಂತೆ 17 ಪ್ರಮುಖ ನಾಯಕರು ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ, ಚುನಾಯಿತ ಪ್ರತಿನಿಧಿಯು ಶಿಕ್ಷೆಯಾದ ತಕ್ಷಣ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾನೆ. ಆದರೆ, ಯಾರೂ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಿಲ್ಲ, ಏಕೆಂದರೆ ಇದು ದೇಶದ ಕಾನೂನು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.