ಕೋಲ್ಕತ್ತಾ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ 64 ರಹಸ್ಯ ದಾಖಲೆಗಳುಳ್ಳ ಕಡತಗಳನ್ನು ಪಶ್ಚಿಮಬಂಗಾಳ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಇದು ಸೋಮವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.
ಕೋಲ್ಕತ್ತ ಪೊಲೀಸ್ ಇಲಾಖೆ ಬಳಿಯಿದ್ದ 55 ಮತ್ತು ರಾಜ್ಯ ಪೊಲೀಸ್ ಇಲಾಖೆ ಬಳಿಯಿದ್ದ 9 ಸೇರಿದಂತೆ ಒಟ್ಟು 64 ರಹಸ್ಯ ಕಡತಗಳನ್ನು ಬಹಿರಂಗಪಡಿಸಲಾಗಿದೆ. ಇದೀಗ ಅದು ಕೋಲ್ಕತ್ತಾ ಪೊಲೀಸ್ ವಸ್ತು ಸಂಗ್ರಹಾಲಯದಲ್ಲಿದೆ.
ಸೋಮವಾರದಿಂದ ದಾಖಲೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ನೀಡಲಾಗುವುದು ಎಂದು ಈಗಾಗಲೇ ಕೋಲ್ಕತ್ತಾ ಪೊಲೀಸರು ಘೋಷಿಸಿದ್ದಾರೆ.
ಈ ದಾಖಲೆಗಳು ಯಾವೆಲ್ಲಾ ಅಂಶಗಳನ್ನು ಒಳಗೊಂಡಿರಬಹುದು, ಇದರಲ್ಲಿ ಯಾವ ಯಾವ ರಹಸ್ಯ ಮಾಹಿತಿಗಳು ಇರಬಹುದು ಎಂಬ ಕುತೂಹಲ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇದೆ. ಹೀಗಾಗಿ ಕಡತಗಳ ವೀಕ್ಷಣೆಗೆ ಎಲ್ಲರೂ ತಾ ಮುಂದು ತಾ ಮುಂದು ಎಂದು ದುಂಬಾಲು ಬೀಳುವ ಸಾಧ್ಯತೆ ಇದೆ.
1945ರ ಆಗಸ್ಟ್ 18ರಂದು ಜಪಾನ್ಗೆ ತೆರಳುತ್ತಿದ್ದಾಗ ತೈವಾನಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಬೋಸ್ ಮೃತಪಟ್ಟಿದ್ದರು ಎಂದು ಟೋಕಿಯೋ ರೇಡಿಯೊ ಘೋಷಿಸಿತ್ತು. ಆದರೆ ವಿಮಾನ ಅಪಘಾತದಲ್ಲಿ ನೇತಾಜಿ ಸತ್ತಿಲ್ಲ. 1945ರ ನಂತರವೂ ಬದುಕಿದ್ದರು ಎಂಬ ವಾದ ಕೇಳಿ ಬಂದಿತ್ತು.
ಆದರೆ ನೇತಾಜಿಯವರ ನಿಗೂಢ ಕಣ್ಮರೆಯ ಬಗೆಗಿನ ನಿಖರ ಮಾಹಿತಿಗಳು ಈ ಕಡತಗಳಲ್ಲಿ ಇರಲಿಕ್ಕಿಲ್ಲ, ಅದು ಕೇಂದ್ರದ ಬಳಿಯಿರಬಹುದು ಎಂದು ಊಹಿಸಲಾಗಿದೆ. ಹೀಗಾಗಿ ದಾಖಲೆಗಳ ಬಿಡುಗಡೆಗೆ ಕೇಂದ್ರದ ಮೇಲೆಯೂ ಒತ್ತಡಗಳು ಹೆಚ್ಚಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.