ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅರ್ಹ ಚಿನ್ನದ ಕೆಲಸಗಾರರಿಗೆ ರೂ.1,25,000/- ಮೂಲ ಬಂಡವಾಳದಲ್ಲಿ ರೆಡಿಮೇಡ್ ಆಭರಣ ತಯಾರಿಕಾ ಘಟಕವನ್ನು ತೆರೆಯಲು ವಿಶ್ವಕರ್ಮ ಸಹಕಾರ ಬ್ಯಾಂಕ್ನಲ್ಲಿ ಸ್ವರ್ಣೋದ್ಯೋಗ ಚೇತನಾ ಯೋಜನೆಯನ್ನು ಜಾರಿಗೆ ತರಲಾಗುವುದೆಂದು ಬ್ಯಾಂಕ್ನ ಅಧ್ಯಕ್ಷರಾದ ಹರೀಶ್ ಆಚಾರ್ ಹೇಳಿದ್ದಾರೆ.
ಅವರು ಬ್ಯಾಂಕ್ 40ನೇ ವಾರ್ಷಿಕ ಸಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ದ.ಕ.ಜಿಲ್ಲಾ ಚಿನ್ನ ಕೆಲಸಗಾರರ ಸಂಘ ಮಂಗಳೂರು ಮತ್ತು ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಉಡುಪಿ ಇದರ ಸಹಯೋಗದೊಂದಿಗೆ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದೆಂದು ಈ ಸಂದರ್ಭದಲ್ಲಿ ಅವರು ವಿವರಿಸಿದರು.
ವಿಶ್ವಕರ್ಮ ಸಹಕಾರ ಬ್ಯಾಂಕ್ 2014-15ನೇ ಸಾಲಿನಲ್ಲಿ ರೂ.54.58 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ರೂ.400 ಕೋಟಿಗಿಂತ ಹೆಚ್ಚು ವಾರ್ಷಿಕ ವ್ಯವಹಾರ ನಡೆಸಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 43.90 ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇಕಡಾ 10.50 ದರದಲ್ಲಿ ಲಾಭಾಂಶವನ್ನು ಘೋಷಿಸಲಾಯಿತು. ಬ್ಯಾಂಕ್ ಸಂಪೂರ್ಣ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಸದಸ್ಯರಿಗೆ ಚೆಕ್ ಕ್ಲಿಯರಿಂಗ್ ಸೌಲಭ್ಯ, RTGS/NEFT, SMS ದೃಢೀಕರಣ ಸೇರಿದಂತೆ ಪ್ರಧಾನಮಂತ್ರಿ ಜನಧನ ಯೋಜನೆ, ಉಳಿತಾಯ ಖಾತೆಗಳಿಗೆ ಆಧಾರ್ ಸಂಯೋಜನೆ, E-Stamping, Pancard ಸೇರಿದಂತೆ ಇತರ ಮೌಲ್ಯವರ್ಧಿತ ಸೇವೆಗಳನ್ನು ಬ್ಯಾಂಕ್ ಸಮರ್ಥವಾಗಿ ನೀಡುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಡಿ. ಭಾಸ್ಕರ ಆಚಾರ್ಯ, ನಿರ್ದೇಶಕರುಗಳಾದ ಕೆ. ಲೋಕೇಶ್ ಆಚಾರ್ಯ, ಪಿ. ಜಗದೀಶ್ ಆಚಾರ್ಯ, ಸೀತಾರಾಮ ಆಚಾರ್ಯ, ರಾಜೇಶ್ ನೆತ್ತರ, ಜಗದೀಶ್ ಜೆ., ಜಯಶ್ರೀ ವಿ. ಆಚಾರ್ಯ, ಶಕುಂತಳಾ ಬಿ. ರಾವ್., ರಾಜೇಶ್, ಪ್ರಧಾನ ವ್ಯವಸ್ಥಾಪಕರಾದ ಜಯರಾಮ ಕೆ. ಮತ್ತು ಲೆಕ್ಕಪರಿಶೋಧಕರಾದ ಮೆ| ರಾವ್ ಹಾಗೂ ಬಾಸ್ರಿ, ಚಾರ್ಟರ್ಡ್ ಎಕೌಟೆಂಟ್ಸ್ ಇದರ ಪಾಲುದಾರರಾದ ಚಂದ್ರಕಾಂತರಾವ್ ಮಂಗಳೂರು ಉಪಸ್ಥಿತರಿದ್ದರು.
ಉಪಾಧ್ಯಕ್ಷರಾದ ಡಿ. ಭಾಸ್ಕರ ಆಚಾರ್ಯ ಸ್ವಾಗತಿಸಿದರು, ಪ್ರಧಾನ ಕಚೇರಿ ಶಾಖಾ ವ್ಯವಸ್ಥಾಪಕರಾದ ಎಂ. ಯಶೋದ ವಂದಿಸಿದರು. ಉಡುಪಿ ಶಾಖಾ ವ್ಯವಸ್ಥಾಪಕರಾದ ಸುರೇಶ್ ಕುಮಾರ್ ಬಿ. ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.