ಅಕ್ಕಿ ಅನ್ನವಾಗಿ ಹಸಿದವರಿಗೆ ಜೀವ ತುಂಬುವುದು ಸಹಜ. ಆದರೆ ಅಕ್ಕಿಗೆ ಜೀವ ತುಂಬಿದ ಒಬ್ಬ ವಿಶಿಷ್ಟ ಕಲಾವಿದ ಪರಮೇಶ್. ಕಣ್ಣಾಲಿಗಳಲ್ಲಿ ಚಂದದ ಬದುಕಿನ ಕನಸು ಕಟ್ಟಿಕೊಂಡು ಸುಮಾರು ಹತ್ತು ವರ್ಷಗಳ ಹಿಂದೆ ಕುಕ್ಕೆ ಸುಬ್ರಮಣ್ಯಕ್ಕೆ ಬಂದಿಳಿದ ಆ ಹುಡುಗ ಹವ್ಯಾಸಕ್ಕೆಂದು ಶುರು ಮಾಡಿದ ಅಕ್ಕಿ ಮೇಲೆ ಅಕ್ಷರ ಬರೆಯುವ ಕಲೆ ಇಂದು ನಾಡಗೀತೆಯನ್ನು ಕೇವಲ ಎಂಬತ್ತು ನಿಮಿಷಗಳಲ್ಲಿ ತುಂಬಿಸುವ ಮಟ್ಟಿಗೆ ಬೆಳೆದು ನಿಂತಿದೆ.
ಬಡತನ ಒಡೆತನ ಕಡೆತನಕುಳಿದಾವೇನ
ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
ಕಡೆಗೋಲು ಹಿಡಿಹುಟ್ಟ!
ಅಂಬಿಕಾತನಯದತ್ತರು ಹೇಳಿದಂತೆ ಬದುಕಿನ ಓಟದಲ್ಲಿ ತನ್ನತನವನ್ನು ತೊರೆಯದೇ, ಸಂಪಾದನೆಯೊಂದಿಗೆ ವಿಶಿಷ್ಟ ಕಲೆಯ ಆಧಾರವನ್ನು ತೊರೆಯದೇ ಪೊರೆದು ಇಂದು ಜನ ಗುರುತಿಸುವ ಹಂತ ಪರಮೇಶ್ ಅವರ ಸಾಧನೆ. ಮೂಲತಃ ಹಾವೇರಿಯ ಗುಡಿಸಲಕೊಪ್ಪದ ರೈತ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ಪರಮೇಶ್ ಶಂಕ್ರಪ್ಪ ಬಂಡಿ ಉದ್ಯೋಗ ಅರಿಸಿ ಬಂದಿದ್ದು ಶ್ರೀ ಕ್ಷೇತ್ರ ಸುಬ್ರಮಣ್ಯಕ್ಕೆ. ದೈವ ಸನ್ನಿಧಾನದಿಂದ ಕುತೂಹಲಕ್ಕೆ ಶುರುವಾದ ಅಕ್ಕಿಯ ಮೇಲೆ ಬರೆಯುವ ಕಲೆಗೆ ಆಪ್ತರಿಂದ ಮನಸ್ಪೂರ್ತಿ ಬೆಂಬಲ ದೊರೆಯಿತು. ಪರಮೇಶ್ ಅವರಿಗೆ ಅದೇ ಬೆಂಬಲ ಚಿಮ್ಮು ಹಲಗೆಯಾಗಿ ವಂದೇ ಮಾತರಂ ಗೀತೆಯನ್ನು ತೊಂಬತ್ತೆರಡು ಅಕ್ಕಿಗಳಲ್ಲಿ ರಚಿಸಿದ್ದರು. ನಂತರ ನಾಡ ಗೀತೆಯನ್ನು ಕೇವಲ ಎಂಬತ್ತು ನಿಮಿಷಗಳಲ್ಲಿ ಒಂದು ನೂರಾ ಮೂವತ್ತಾರು ಅಕ್ಕಿಗಳಲ್ಲಿ ತುಂಬಿಸಿದರು.
ಮೇಣ, ಸೀಮೆ ಸುಣ್ಣ, ಅಡಿಕೆ ಹೀಗೆ ಅನೇಕ ವಸ್ತುಗಳನ್ನು ಬಳಸಿ ಆಕೃತಿಗಳನ್ನು ಸೃಷ್ಟಿಸುವ ಅನೇಕ ಕಲಾವಿದರು ಇದ್ದಾರೆ. ಆದರೆ ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಯುವುದು ಕಷ್ಟ ಸಾಧ್ಯವಾದ ಕಲೆ. ತಿದ್ದಿ ತಿಡುವ ಗುರುವೇ ಇಲ್ಲದೆ ತಾನಾಗೇ ಬೆಳೆದ ಪ್ರತಿಭೆ ಮೈಕ್ರೋ ಆರ್ಟ್ ಪರಮೇಶ್. ಸಂಕಿರ್ಣ ಕಲೆಯಾದ ಈ ಬರವಣಿಗೆ ಕಲಾವಿದನ ಕಣ್ಣಿಗೆ ಅಪಾಯಕಾರಿ ಕೂಡ ಹೌದು. ಧೃಡ ಸಂಕಲ್ಪದ ಬೆನ್ನೇರಿದ ಪ್ರತಿಭಾ ಪ್ರವಾಹವನ್ನು ತಡೆವ ಅಪಾಯ ಇನ್ನು ಹುಟ್ಟಿಲ್ಲ ಅನ್ನಿಸುತ್ತದೆ. ನಾಡಗೀತೆಯ ರಚನೆ ಇಂದು ಸ್ವರ್ಣ ಬಣ್ಣದ ಚೌಕಟ್ಟಿನೊಂದಿಗೆ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ ಅವರ ಕಚೇರಿಯಲ್ಲಿದೆ. ತಮ್ಮ ಸಾಧನೆಗೆ ತೃಪ್ತಿಯ ಬೇಲಿ ಕಟ್ಟದ ಪರಮೇಶ್ ಇಂದು ಗಿನ್ನಿಸ್ ದಾಖಲೆಯ ಹೊಸ್ತಿಲಲ್ಲಿ ಇದ್ದಾರೆ ಎಂದರೆ ನಂಬಲೇಬೇಕು. ಹೌದು, ಕುವೆಂಪು ವಿರಚಿತ ನಾಡಗೀತೆಯನ್ನು ಪರಮೇಶ್ 136 ಅಕ್ಕಿಗಳಲ್ಲಿ ರಚಿಸಿದ್ದು ಈಗ ಗಿನ್ನಿಸ್ ದಾಖಲೆಗೆ ಅರ್ಹತೆ ಹೊಂದಿದೆ ಎನ್ನಲಾಗಿದ್ದು ಸಂಬಂಧಿತ ಕಛೇರಿಗಳಿಗೆ ಅಗತ್ಯ ಪತ್ರಗಳನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಜಿಯವರ ಅಪ್ಪಟ ಅಭಿಮಾನಿಯಾದ ಪರಮೇಶ್, ನರೇಂದ್ರ ಮೋದಿಯವರ ಜೀವನವನ್ನು ಅಕ್ಕಿಯ ಮೇಲೆ ಅಂದವಾಗಿ ಬರೆಯುವ ಅಭಿಲಾಷೆ ಹೊಂದಿದ್ದಾರೆ. ‘ಅತ್ಯಾಪ್ತ’ರಿಂದ ಮೈಕ್ರೋ ಪರ್ಮ್ಯ ಎಂದೇ ಕರೆಸಿಕೊಳ್ಳುವ ಪರಮೇಶ್ ರವರು ಈ ಸಂಕಿರ್ಣ ಕಲೆಗೆ ಅನ್ವರ್ಥವಾಗಿ ಬೆಳೆಯಲಿ ಎಂಬುದು ಆತ್ಮೀಯ ಗೆಳೆಯ ಬಿಮ್ಸ್ ಗೋಕುಲ್ ಅವರ ಮತ್ತು ಪರಮೇಶ್ ಅಭಿಮಾನಿಗಳ ಮತ್ತು ಕುಟುಂಬದ ಹಾರೈಕೆ. ಕಲೆ ಹೇಗಿರಬೇಕು ಎಂದರೆ ಅದು ಕಲಾವಿದನ ಆತ್ಮವನ್ನು ಜಾಗೃತಗೊಳಿಸಬೇಕು, ಕಲ್ಪನೆಯನ್ನು ಜೀಕಬೇಕು ಮತ್ತು ಅಸಂಖ್ಯಾತರಿಗೆ ಕನಸುಗಳ ಕಟ್ಟಿ ಕೊಡಬೇಕು ಎಂದು ಕೀತ್ ಹ್ಯಾರಿಂಗ್ ಒಮ್ಮೆ ಹೇಳಿದ್ದುಂಟು. ಅಂತಹ ಒಂದು ಕಲೆಯ ಆರಾಧಕ ಪರಮೇಶ್ ಮುಂದೊಮ್ಮೆ ಅನೇಕರಿಗೆ ಆದರ್ಶಪ್ರಾಯ ಆಗುವುದು ಅಂತೂ ಸತ್ಯ.
✍️ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.