ಬೆಳ್ತಂಗಡಿ: ಜೀವನ ಪ್ರೀತಿಯನ್ನು ನಾವಿಂದು ಟಿ.ವಿಯಂತಹ ಮಾಧ್ಯಮಗಳಿಗೆ ಸೀಮಿತಗೊಳಿಸಿ ಪುಸ್ತಕ, ಸೇರಿದಂತೆ ಸಾಹಿತ್ಯದ ಇತರ ವಿಚಾರಗಳಲ್ಲಿ ಸಿಗುವ ಪ್ರೀತಿಯಿಂದ ವಂಚಿತರಾಗುತ್ತಿದ್ದು ಜೀವನದಲ್ಲಿ ಸೌಜನ್ಯತೆ ಮರೆಯಾಗುತ್ತಿದೆ ಎಂದು ಕಾಂತಾವರದ ಸಾಹಿತಿ ಡಾ| ನಾ ಮೊಗಸಾಲೆ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಶ್ರೀ ಧ.ಮಂ ಕಾಲೇಜು ಉಜಿರೆ ಇಲ್ಲಿ ಜರುಗಿದ ಎರಡು ದಿನದ ಡಾ| ಬೆಟಗೇರಿ ಕೃಷ್ಣಶರ್ಮರ ಕಾವ್ಯಾರ್ಥ ಚಿಂತನ ಕಾರ್ಯಕ್ರಮದ ಸಮಾರೋಪಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ಕವಿತೆಯನ್ನು ಬರೆದ ಹಾಗೆ ಬದುಕಿದವರು ಕಾಣಸಿಗುವುದು ಕಡಿಮೆ ಆದರೆ ಬೆಟಗೇರಿ ಕೃಷ್ಣಶರ್ಮರು ಕಾವ್ಯದಲ್ಲಿ ಬರೆದಂತೆ ಬದುಕಿದವರು ಎಂದ ಇವರು ಬೆಟಗೇರಿಯವರು ಪರದ ಬಗೆಗಿಂತ ಇಹದ ಬಗ್ಗೆ ಹೆಚ್ಚು ಆಸಕ್ತಿಯನ್ನು ತೆಳೆದಿದ್ದರು ಎಂದರು.
ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನದ ಅಧ್ಯಕ್ಷ ಡಾ|ರಾಘವೇಂದ್ರ ಪಾಟೀಲ್ ಅವರು, ಮಾನವನಿಂದು ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದಾನೆ ಆತನ ಮನಸ್ಥಿತಿಯಲ್ಲಿ ಅನೇಕ ರೀತಿಯ ಬದಲಾವಣೆಯಾಗುತ್ತಿದೆ. ಈ ಏರುಪೇರನ್ನು ಸಾಹಿತ್ಯದಿಂದ ಸರಿತೂಗಿಸಲು ಸಾಧ್ಯ ಎಂದರು.
ಶಿಬಿರದಲ್ಲಿ ಎರಡನೇ ದಿನ ವಿದ್ಯಾರ್ಥಿಗಳಿಂದ ವಿಮರ್ಶಾಲೇಖನಗಳ ಮಂಡನೆಗೆ ಅವಕಾಶ ಮಾಡಿಕೊಡಲಾಗಿತ್ತು, 120 ವಿದ್ಯಾರ್ಥಿಗಳು ಪ್ರತ್ಯೇಕ ಪ್ರತ್ಯೇಕವಾಗಿ ಬರೆದ ವಿಮರ್ಶಾ ಲೇಖನಗಳಲ್ಲಿ ಆಯ್ದ ಹತ್ತುಜನ ವಿದ್ಯಾರ್ಥಿಗಳಿಗೆ ಲೇಖನ ಮಂಡಿಸಲು ಅವಕಾಶ ನೀಡಲಾಗಿತ್ತು. ಅವುಗಳಲ್ಲಿ ಅತ್ಯುತ್ತಮ ಮೂರು ವಿಮರ್ಶಾ ಲೇಖನಗಳಿಗೆ ಪ್ರಥಮ 5,೦೦೦ರೂ ದ್ವಿತೀಯ ೩,೦೦೦ರೂ ತೃತೀಯ 2.೦೦೦ ರೂ ಬಹುಮಾನ ನೀಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷರು ಪ್ರಕಟಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಧ.ಮಂ ಕಾಲೇಜಿನ ಪ್ರಾಚಾರ್ಯ ಡಾ|ಬಿ ಯಶೋವರ್ಮ ಅವರು ಮಾತನಾಡುತ್ತಾ ಇಂತಹ ಶಿಬಿರಗಳಿಂದ, ಹಿರಿಯ ಸಾಹಿತಿಗಳ ಒಡನಾಟಗಳಿಂದ ಸಾಹಿತ್ಯದಲ್ಲಿ ಬೆಳೆಯಲು ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜು ಅವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಡಾ. ಬಿ. ಪಿ ಸಂಪತ್ ಕುಮಾರ್ ಅವರು ಸ್ವಾಗತಿಸಿ ವಂದಿಸಿದರೆ, ಪ್ರಶಾಂತ್ ದಿಡುಪೆ ಕಾರ್ಯಕ್ರಮ ನಿರೂಪಿಸಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.