News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆಯಾಗುತ್ತಿದೆ: ನಳಿನ್

ಬೆಂಗಳೂರು: ಕಾಂಗ್ರೆಸ್ ಬಸ್ ಹೊರಟಿದೆ. ಹೋಗ್ತ ಹೋಗ್ತ ಬ್ರೇಕ್‍ಫೈಲ್ ಆಗುತ್ತಿದೆ. ಇನ್ನೊಂದು ಪಂಚರತ್ನ ಯಾತ್ರೆ ಆರಂಭವಾಗಿದೆ. ವಿಜಾಪುರ ತಲುಪುವಾಗ ಹಾಸನದಲ್ಲಿ ಪಂಕ್ಚರ್ ಹಾಕುವ ಪ್ರಯತ್ನಗಳು ಪ್ರಾರಂಭವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಕಾಂಗ್ರೆಸ್- ಜೆಡಿಎಸ್ ಮುಖಂಡರ ಮತ್ತು ಬೆಂಬಲಿಗರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಎರಡೂ ಯಾತ್ರೆಗಳು ಮುಂದಿನ ಚುನಾವಣೆವರೆಗೆ ಪೂರ್ತಿ ಆಗುವುದಿಲ್ಲ. ಆದರೆ, ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ ಎಂದು ನುಡಿದರು. ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದೇಗೆಲ್ಲಲಿದೆ ಎಂದು ವಿಶ್ವಾಸ ಸೂಚಿಸಿದರು.

ಈ ಬದಲಾವಣೆ ಕೇವಲ ವಾಸು ಅವರ ಮನೆಯಲ್ಲಿ ಆಗಿಲ್ಲ. ಒಬ್ಬ ಕಾಂಗ್ರೆಸ್ ಶಾಸಕನ ಮನೆಯಲ್ಲಿ ಅವರ ಮಗ ಬಿಜೆಪಿ ಸೇರಿದಂತೆ, ಮುಂದಿನ ದಿನದಲ್ಲಿ ಸಿದ್ರಾಮಣ್ಣನ ಮಗನೂ, ಡಿಕೆಶಿ ಮನೆಯಿಂದಲೂ ಬಿಜೆಪಿಗೆ ಬರುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಡಬಲ್ ಎಂಜಿನ್ ಸರಕಾರ ಅಭಿವೃದ್ಧಿಯ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಬಿಜೆಪಿ ಕೆಲಸವನ್ನು ನೋಡುತ್ತದೆ. ಮನೆತನದ, ಕುಟುಂಬದ ಹಿನ್ನೆಲೆ ನೋಡುವುದಿಲ್ಲ. ಬಿಜೆಪಿ ಸಮಾಜದ ಜೊತೆಗಿನ ಒಡನಾಟ, ಸಿದ್ಧಾಂತದ ಮೇಲಿನ ನಂಬಿಕೆ, ಕೆಲಸಗಳನ್ನು ಗುರುತಿಸಿ ಅವಕಾಶ ಕೊಡುತ್ತದೆ. ಇದಕ್ಕೆ ಚಹಾ ಮಾರಾಟ ಮಾಡುತ್ತಿದ್ದ ಹುಡುಗ ಪ್ರಧಾನಿ ಆದುದು, ಭಿತ್ತಿಪತ್ರ ಹಚ್ಚುವ ಹುಡುಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದುದು ಉದಾಹರಣೆ ಎಂದರು.

ಕೋವಿಡ್ ಲಸಿಕೆ ಸಂಶೋಧನೆ ಆದ ಬಳಿಕ ಪ್ರಧಾನಿಯವರು ತಾವು ಮತ್ತು ಪಕ್ಷದವರಿಗೆ ಮೊದಲ ಆದ್ಯತೆ ಕೊಡಲಿಲ್ಲ. ಬದಲಾಗಿ ಆರೋಗ್ಯ ಕ್ಷೇತ್ರ, ಪೂರಕವಾಗಿ ಕೆಲಸ ಮಾಡುವವರಿಗೆ ಆದ್ಯತೆ ನೀಡಿದರು. ಕಾಂಗ್ರೆಸ್ ಆಡಳಿತದಲ್ಲಿ ಇದ್ದರೆ ಸೋನಿಯಾ, ರಾಹುಲ್, ಪ್ರಿಯಾಂಕ ಅವರಿಗೆ ಮೊದಲು ಲಸಿಕೆ ಕೊಡುತ್ತಿದ್ದರು ಎಂದು ತಿಳಿಸಿದರು.

ಪ್ರಧಾನಿಯವರು ತಮ್ಮ ತಾಯಿ ನಿಧನರಾದಾಗ ದೆಹಲಿಯಿಂದ ಸಾಮಾನ್ಯ ಕಾರ್ಯಕರ್ತರಂತೆ ಬಂದು ಕೇವಲ ಮೂರು ಗಂಟೆಗಳಲ್ಲೇ ತಮ್ಮ ಕರ್ತವ್ಯಕ್ಕೆ ಹಿಂತಿರುಗಿದರು. ನರೇಂದ್ರ ಮೋದಿಯವರ ಈ ಆದರ್ಶವನ್ನು ಬಿಜೆಪಿ ಸದಾ ಪಾಲಿಸುತ್ತಿದೆ ಎಂದು ತಿಳಿಸಿದರು.

ಇಡೀ ದೇಶ ಮತ್ತು ರಾಜ್ಯದಲ್ಲಿ ಇಂದು ರಾಜಕೀಯ ಪರಿವರ್ತನೆ ಆಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದು, ರಾಜ್ಯದ ರಾಜಕೀಯ ತಿರುವನ್ನು ಪಡೆದಿದೆ. 5 ವರ್ಷಗಳ ಹಿಂದೆ ರಾಜ್ಯದ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿದ್ದರು. ಜನರು ಮತದಾನದ ಮೂಲಕ ಬಿಜೆಪಿಗೆ ಅತಿ ಹೆಚ್ಚಿನ ಗೌರವ ಕೊಟ್ಟಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಕುಟುಂಬವಾದ ಮತ್ತು ಪರಿವಾರವಾದ ಒಂದಾಗಿ ಅನೈತಿಕವಾಗಿ ಸರಕಾರ ರಚಿಸಿದ್ದರು ಎಂದು ಆಕ್ಷೇಪಿಸಿದರು.

ಸರಕಾರ ರಚಿಸಿ ಒಂದು ವರ್ಷ ಕಾಲ ಆ ರಥ ಹೊರಡಲೇ ಇಲ್ಲ; ಇದರಿಂದ ಬೇಸತ್ತು ರಾಜ್ಯದಲ್ಲಿ ಮೊದಲ ಬಾರಿಗೆ 17 ಶಾಸಕರು ರಾಜೀನಾಮೆ ಕೊಟ್ಟು ವಿರೋಧ ಪಕ್ಷಕ್ಕೆ ಬೆಂಬಲ ಕೊಟ್ಟರು. ಬಳಿಕ ರಾಜಕೀಯ ಪರಿವರ್ತನೆ ಆಗಿದೆ. ಇವತ್ತು ಯಡಿಯೂರಪ್ಪ ಅವರ ಮಾರ್ಗದರ್ಶನ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ, ಬಿಜೆಪಿಗೆ ಭವಿಷ್ಯತ್ತಿದೆ ಎಂದು ನಿರ್ಧರಿಸಿ ಹತ್ತಾರು ಜನರು ಬಿಜೆಪಿ ಸೇರಿದ್ದಾರೆ ಎಂದು ನುಡಿದರು. ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸುವುದಾಗಿ ತಿಳಿಸಿದರು.

ಇಂದು ಹಳೆ ಮೈಸೂರು ಭಾಗದ ಇತರ ಪಕ್ಷಗಳ ಹತ್ತಾರು ಪ್ರಮುಖರು ಬಿಜೆಪಿ ಸೇರಿದ್ದಾರೆ. ಪರಿವಾರ ವಾದ, ಕುಟುಂಬ ವಾದದಿಂದ ರಾಷ್ಟ್ರೀಯ ವಾದಕ್ಕೆ ಬಂದ ನಿಮಗೆಲ್ಲರಿಗೂ ಸ್ವಾಗತ ಎಂದು ತಿಳಿಸಿದರು. ದೇಶವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಸುವ ನರೇಂದ್ರ ಮೋದಿಯವರ ಚಿಂತನೆಗೆ ಅನುಗುಣವಾಗಿ ಕ್ಷೇತ್ರ, ಮತಗಟ್ಟೆಗಳಲ್ಲಿ ನೀವು ಕೆಲಸ ಮಾಡುತ್ತೀರೆಂದು ಆಶಿಸುವುದಾಗಿ ಹೇಳಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top