News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಳೆ ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯಕ್ಕೆ

ಬೆಂಗಳೂರು: ಕೇಂದ್ರ ಗೃಹ ಸಚಿವ ಹಾಗೂ ಪಕ್ಷದ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇದೇ ಜನವರಿ 28ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರು ಇದೇ ಜನವರಿ 27ರಂದು ರಾತ್ರಿ ಹುಬ್ಬಳ್ಳಿಗೆ ಆಗಮಿಸಿ ವಾಸ್ತವ್ಯ ಇರುತ್ತಾರೆ. 28ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಹುಬ್ಬಳ್ಳಿಗೆ ಬಂದಾಗ ಅಭೂತಪೂರ್ವ 8 ಕಿಮೀ ರೋಡ್ ಷೋ ನಡೆದುದನ್ನು ಅವರು ನೆನಪಿಸಿದರು. ಇದು ಅವರ ಜನಪ್ರಿಯತೆಗೆ ಸಾಕ್ಷಿ ಎಂದರು.

28ರಂದು ಬೆಳಿಗ್ಗೆ ಹುಬ್ಬಳ್ಳಿಯ ಕೆ.ಎಲ್.ಇ. ಸೊಸೈಟಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಒಳಾಂಗಣ ಸ್ಟೇಡಿಯಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಹುಬ್ಬಳ್ಳಿ ಬಿವಿಬಿ ಕಾಲೇಜಿನ ಮೈದಾನದಲ್ಲಿ ಕೆಎಲ್‍ಇ ಸೊಸೈಟಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಧಾರವಾಡದ ನ್ಯಾಷನಲ್ ಫಾರೆನ್ಸಿಕ್ ಸೈನ್ಸ್ ಸೆಂಟರ್‍ನ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿದೆ. ಇದೀಗ ವಿಜಯ ಸಂಕಲ್ಪ ಅಭಿಯಾನ ಉತ್ತಮ ರೀತಿಯಲ್ಲಿ ನಡೆದಿದೆ. ಇದರ ಅಂಗವಾಗಿ ಕುಂದಗೋಳದಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲೂ ಅವರು ಭಾಗವಹಿಸಲಿದ್ದಾರೆ ಎಂದರು.

ಕುಂದಗೋಳದಲ್ಲಿ 300 ವರ್ಷಗಳ ಹಿಂದೆ ನಿರ್ಮಿಸಿದ ಪುರಾತನ ಶಂಭುಲಿಂಗ ದೇವಸ್ಥಾನಕ್ಕೆ ಮಧ್ಯಾಹ್ನ ಭೇಟಿ ಕೊಟ್ಟು ಪೂಜೆ ಸಲ್ಲಿಸುವರು. ನಂತರ ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಕುಂದಗೋಳದ ವಾರ್ಡ್ ನಂಬರ್ 7ರ ಬೂತ್ ಸಂಖ್ಯೆ 50ರಲ್ಲಿ ವಾಲ್ ಪೇಂಟಿಂಗ್ ಮಾಡುವ ಮೂಲಕ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸುವರು. ಬಳಿಕ ಬಹುದೊಡ್ಡ ರೋಡ್ ಷೋದಲ್ಲಿ ಭಾಗವಹಿಸಲಿದ್ದಾರೆ. 1.5 ಕಿಮೀ ಉದ್ದದ ರೋಡ್ ಷೋ ಇದಾಗಲಿದೆ. ಒಂದೆರಡು ಮನೆಗಳಿಗೆ ಕರಪತ್ರ ವಿತರಣೆ, ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡುತ್ತಾರೆ ಎಂದರು.

ಕಾರ್ಯಕರ್ತರಿಗೆ ಅವರ ಭೇಟಿ ಬೂಸ್ಟರ್ ಡೋಸ್‍ನಂತೆ ಕಾರ್ಯ ನಿರ್ವಹಿಸಲಿದೆ. ಸಂಜೆ ಬೆಳಗಾವಿಯ ಕಿತ್ತೂರು ಕ್ಷೇತ್ರದ ವೀರ ಸೋಮೇಶ್ವರ ರಂಭಾಪುರಿ ಕಲ್ಯಾಣ ಮಂಟಪದ ಬಳಿಯ ಮೈದಾನದಲ್ಲಿ ಜನಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡುವರು. ಕಿತ್ತೂರು, ಖಾನಾಪುರ, ಬೈಲಹೊಂಗಲ ಕ್ಷೇತ್ರಗಳಿಗೆ ಚೈತನ್ಯ ತುಂಬುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಹಿರಿಯರ ಜೊತೆ ಸಂವಾದ ನಡೆಸುವರು. ಅಲ್ಲದೆ, ಸಂಘಟನಾತ್ಮಕ ಸಭೆಯಲ್ಲೂ ಭಾಗವಹಿಸುವರು. ಬಸವರಾಜ ಬೊಮ್ಮಾಯಿ, ನಳಿನ್‍ಕುಮಾರ್ ಕಟೀಲ್, ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತಿತರ ಮುಖಂಡರು ಪಕ್ಷದ ವಿವಿಧ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಆಯಾ ಜಿಲ್ಲೆಗಳಲ್ಲಿ ಚುನಾವಣೆಗೆ ಸಂಬಂಧಿಸಿ ಮುಂದಿನ ಕಾರ್ಯತಂತ್ರ ಸೇರಿ ವಿವಿಧ ಯೋಜನೆಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ಸೋಲಿನ ಭಯ ಆರಂಭವಾಗಿದೆ ಎಂದ ಅವರು, ನಮ್ಮ ಎಲ್ಲ ನಾಯಕರು ಪಕ್ಷದ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅವರು ಮಾತನಾಡಿ, ವಿಕಿಪೀಡಿಯ ಪ್ರಕಟಿಸಿದ ಭ್ರಷ್ಟರ ಪಟ್ಟಿಯ 10 ಜನರ ಪೈಕಿ 9 ಜನರು ಕಾಂಗ್ರೆಸ್ ಕುಟುಂಬಕ್ಕೆ ಸೇರಿದವರು ಎಂದು ಆರೋಪ ಮಾಡಿದರು.

ಭ್ರಷ್ಟಾಚಾರಕ್ಕೆ ಸಂಬಂಧಿಸಿ 136 ಆಯೋಗಗಳು ನೇಮಕವಾಗಿವೆ. ಸ್ವಾತಂತ್ರ್ಯದ ಬಳಿಕ 5.40 ಸಾವಿರ ಕೋಟಿ ಮೊತ್ತದ ಭ್ರಷ್ಟಾಚಾರ ಹಗರಣಗಳಾಗಿದ್ದವು. ಆರೋಪ ಸಾಬೀತಾದ ಶೇ 90ರಷ್ಟು ಹಗರಣಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿವೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಬಿಜೆಪಿಯದು ಎಂದು ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿಯಲ್ಲಿ ಮೂಲ- ವಲಸಿಗ ಎಂಬ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು. ಮೋದಿಜಿ ಅವರು ನಮ್ಮ ಪಕ್ಷಕ್ಕೆ ಆದರ್ಶಪ್ರಾಯರು ಎಂದು ನುಡಿದರು. ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್ಸಿನವರು ರಮೇಶ್‍ಕುಮಾರ್ ಅವರ ಮೂರು ತಲೆಮಾರಿಗೆ ಸಾಕಾಗುವಷ್ಟು ಹಣ ಮಾಡಿದ ಕುರಿತ ಹೇಳಿಕೆ ಸಂಬಂಧ ದೂರು ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಶಾರ್ಟ್ ಕಟ್‍ಗಳಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಆಮಿಷದ ಮೂಲಕ ಚುನಾವಣೆಗೆ ಹೋಗುತ್ತಿಲ್ಲ. ಅಭಿವೃದ್ಧಿ ಮತ್ತು ಸಾಧನೆ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಒಂದು ರಾಜಕೀಯ ಪಕ್ಷ ಒಂದು ಕುಟುಂಬದ ಕೈಯಲ್ಲಿ ಇರಬಾರದು ಎಂಬುದೇ ಪಕ್ಷದ ನಿಲುವು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಕರ್ನಾಟಕದಲ್ಲಿ 150 ಸೀಟು ಗೆಲ್ಲಿಸುವ ಗುರಿ ನಮ್ಮ ಎದುರಿದೆ. ಅದನ್ನು ಈಡೇರಿಸಲು ನಾವು ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top