News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಳಿನ್‍ 

ಬೆಂಗಳೂರು: ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ನಿರಂತರವಾಗಿ ರೈತಪರ ನಿಲುವನ್ನು ಹೊಂದಿದ್ದು, ವಿವಿಧ ರೈತೋಪಯೋಗಿ ಕಾರ್ಯ ಮಾಡಿವೆ. ರೈತರ ಒಳಿತಿಗಾಗಿ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್- ಯುಪಿಎ ಸರಕಾರಗಳು ರೈತರನ್ನು ಮತಬ್ಯಾಂಕಿಗೆ ಮತ್ತು ಘೋಷಣೆಗೆ ಸೀಮಿತಗೊಳಿಸಿದ್ದವು. ಬಿಜೆಪಿ ಸರಕಾರಗಳು ರೈತಪರ ನಿಲುವನ್ನು ತಳೆದು ರೈತರ ಏಳಿಗೆಗೆ ಶ್ರಮಿಸಿವೆ ಎಂದು ವಿವರಿಸಿದರು.

ಪ್ರಧಾನಿಯವರ ಕಲಬುರ್ಗಿ, ಹುಬ್ಬಳ್ಳಿ ಕಾರ್ಯಕ್ರಮಗಳಿಗೆ ನಿರೀಕ್ಷೆಗೆ ಮೀರಿ ಜನಸಾಗರ ಬಂದಿದೆ. ವಿವಿಧ ಸಮಾವೇಶಗಳಲ್ಲೂ ಗರಿಷ್ಠ ಜನರು ಸೇರುತ್ತಿದ್ದಾರೆ. ಸರ್ವ ಸ್ಪರ್ಶಿ, ಸರ್ವವ್ಯಾಪಿಯಾಗಿ ಜನರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ. ಮೀಸಲಾತಿ ಹೆಚ್ಚಳದ ಬಳಿಕ ಜನರು ಬಿಜೆಪಿಯತ್ತ ಹರಿದುಬರುತ್ತಿದ್ದಾರೆ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೆ ಬಿಜೆಪಿ ಸರಕಾರವನ್ನು ನಾವು ರಚಿಸುತ್ತೇವೆ. ಸನ್ಮಾನ್ಯ ಯಡಿಯೂರಪ್ಪ ಅವರ ಮಾರ್ಗದರ್ಶನ, ಬೊಮ್ಮಾಯಿಯವರ ನೇತೃತ್ವದಲ್ಲಿ ತಂಡವಾಗಿ ನಾವು ಚುನಾವಣೆ ಎದುರಿಸಲಿದ್ದೇವೆ ಎಂದು ನುಡಿದರು. ಈ ಬಿಜೆಪಿ ಪರ ವಾತಾವರಣವನ್ನು ಇನ್ನಷ್ಟು ಗಟ್ಟಿಮಾಡುವ ಕೆಲಸ ರೈತ ಮೋರ್ಚಾದಿಂದ ಆಗಬೇಕು ಎಂದು ಸೂಚಿಸಿದರು.

ಜನರು ಸ್ವಯಂಪ್ರೇರಣೆಯಿಂದ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುತ್ತಿದ್ದಾರೆ. ಸದಸ್ಯರಾಗಲು ಹೆಮ್ಮೆಯಿಂದ ಮುಂದೆ ಬರುತ್ತಿದ್ದಾರೆ. ಜನರು ಬಿಜೆಪಿಪರವಾಗಿದ್ದಾರೆ. ಈ ದೇಶವನ್ನು ಲೂಟಿ ಮಾಡಿದ, ಭಿಕ್ಷುಕರ ರಾಷ್ಟ್ರವಾಗಿ ಬಿಂಬಿಸಿದ ಪಕ್ಷ ಕಾಂಗ್ರೆಸ್ ಎಂದು ಜನರಿಗೆ ಗೊತ್ತಿದೆ. ರೈತರನ್ನು ಕಡೆಗಣಿಸಿದ್ದು ಕಾಂಗ್ರೆಸ್. ರೈತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್. ರೈತರ ಬದುಕು ಹಸನು ಮಾಡಿದ ಪಕ್ಷ ಬಿಜೆಪಿ, ಅಟಲ್ ಬಿಹಾರಿ ವಾಜಪೇಯಿಜಿ, ನರೇಂದ್ರ ಮೋದಿಜಿ ಮತ್ತು ಯಡಿಯೂರಪ್ಪ ಅವರು ಎಂದು ಜನರಿಗೆ ಗೊತ್ತಿದೆ ಎಂದು ವಿವರಿಸಿದರು.

ಮೋದಿಜಿ ಅವರ ಸರಕಾರವು ಕಿಸಾನ್ ಸಮ್ಮಾನ್ ಯೋಜನೆ ನೀಡಿದೆ. ಅಲ್ಲದೆ ರೈತರ ಫಸಲು ನಷ್ಟವಾದಾಗ ನಷ್ಟ ಭರಿಸುವ ವಿಮಾ ಯೋಜನೆ ಜಾರಿಗೊಳಿಸಿದೆ. ಯೂರಿಯಾಕ್ಕಾಗಿ ಹಿಂದೆ ರೈತರು ಅತಿ ಹೆಚ್ಚು ಕಷ್ಟ, ತೊಂದರೆ ಪಡುತ್ತಿದ್ದರು. ಈಗ ಬೇವುಲೇಪಿತ ಯೂರಿಯಾ ಮತ್ತು ಇತರ ರಸಗೊಬ್ಬರವು ಸಬ್ಸಿಡಿಯಲ್ಲಿ ಸುಲಭವಾಗಿ ಸಿಗುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕೃಷಿ ಬಜೆಟ್ ಮಂಡಿಸಿದ್ದರು. ಅಲ್ಲದೆ, ಹಾಲಿಗೆ ಪ್ರೋತ್ಸಾಹಧನ ನೀಡಿದ್ದರು. ಬಸವರಾಜ ಬೊಮ್ಮಾಯಿ ಅವರ ಸರಕಾರವು ಕೂಡ ರೈತ ವಿದ್ಯಾನಿಧಿ ಪ್ರಕಟಿಸಿದೆ. ರೈತರಿಗಾಗಿ ಹತ್ತಾರು ಯೋಜನೆಗಳನ್ನು ಬಿಜೆಪಿ ಸರಕಾರಗಳು ಅನುಷ್ಠಾನಕ್ಕೆ ತಂದು ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡಿವೆ ಎಂದು ಅವರು ವಿವರಿಸಿದರು.

ಬಿಜೆಪಿ ನೇತೃತ್ವದ ಡಬಲ್ ಎಂಜಿನ್ ಸರಕಾರಗಳು ಮಾಡಿದ ಸಾಧನೆ ಮತ್ತು ರೈತಪರವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಜನರು ಮತ್ತು ರೈತರಿಗೆ ತಿಳಿಸಬೇಕು ಎಂದು ಅವರು ಕಿವಿಮಾತು ಹೇಳಿದರು. ಕೇಂದ್ರ ಸರಕಾರವು ಅದ್ಭುತವಾಗಿ ಕೆಲಸ ಮಾಡುತ್ತಿದೆ. ಸಮಗ್ರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಡಬಲ್ ಎಂಜಿನ್ ಸರಕಾರವು ಶ್ರಮಿಸಿದೆ. ಕೇಂದ್ರ ಸರಕಾರದ ಕೃಷಿಕರ ಪರ ಅನುದಾನವು 8 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ಇನ್ನೊಂದು ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ ಎಂದರು.

ಈ ಚುನಾವಣೆಯಲ್ಲಿ ಬೇರೆಬೇರೆ ಪಾರ್ಟಿಯವರು ಶರ್ಟ್ ಹೊಲಿಸಿ ಕಾಯುತ್ತಿದ್ದಾರೆ. ಕೆಲವರು ಕೋಟ್ ಹೊಲಿಸಲು ಅಂಗಡಿಗೆ ಕೊಟ್ಟಿದ್ದಾರೆ. ಇನ್ನೂ ಕೆಲವರು ಹೊಸ ಪ್ಯಾಂಟ್ ಶರ್ಟ್ ಖರೀದಿಸಿದ್ದಾರೆ. ಇನ್ನೂ ಕೆಲವರು ಅವರೊಳಗೇ ಪ್ಯಾಂಟ್, ಶರ್ಟ್ ಹರಿಯಲು ಶುರು ಮಾಡಿದ್ದಾರೆ. ನೋಡಿ 3 ಪಾರ್ಟಿಯಲ್ಲಿ ಮೂರು ವಿಭಿನ್ನತೆ. ರಾಷ್ಟ್ರೀಯ ಪಾರ್ಟಿ ಇನ್ನೊಂದಿದೆ. ಅವರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ ಎಂದು ತಿಳಿಸಿದರು.

ಇನ್ನೊಂದು ಕುಟುಂಬದ ಪಕ್ಷವಿದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ದೇಹದೊಳಗೆ ಇರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ಶಾಂತವಾಗಿ ಸಭೆ ನಡೆಯುತ್ತದೆ ಎಂದು ತಿಳಿಸಿದರು.

ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿದ ನಮ್ಮ ಸರಕಾರವು ಕೃಷಿಕನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಪ್ರಕಟಿಸಿ, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದ ಅವರು, 100 ಕಿಸಾನ್ ಡ್ರೋನ್‍ಗಳಿಗೆ ಚಾಲನೆ ಕೊಟ್ಟ ಕುರಿತು ಮಾಹಿತಿ ನೀಡಿದರು. ಕಿಸಾನ್ ರೈಲು ಮೂಲಕ ಉತ್ಪನ್ನಗಳ ಸುಲಭ ಸಾಗಣೆಗೆ ನೆರವಾಗಿದೆ. ಜಾತಿ, ಮತ ಮತ್ತು ಪಂಥ ಮೀರಿದ ಮೋರ್ಚಾ ರೈತರದು. ಬೂತ್ ವಿಜಯ ಅಭಿಯಾನದಲ್ಲಿ ಶೇ 95ರಷ್ಟು ಸಾಧನೆ ಆಗಿದೆ ಎಂದು ತಿಳಿಸಿದರು.

21ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ರೈತ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಈರಣ್ಣ ಕಡಾಡಿಯವರ ಹುಟ್ಟೂರಲ್ಲಿ ನಡೆಯಲಿದೆ. ಅದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಫೆಬ್ರವರಿ ಕೊನೆಯ ವಾರದಲ್ಲಿ 10 ಲಕ್ಷ ರೈತರ ದೊಡ್ಡ ಸಮಾವೇಶ ನಡೆಸಬೇಕಿದೆ ಎಂದು ತಿಳಿಸಿದರು. ರೈತ ಮೋರ್ಚಾ ಗಟ್ಟಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕರ್ನಾಟಕದ ಪ್ರಕೋಷ್ಠಗಳೂ ಕ್ರಿಯಾಶೀಲವಾಗಿವೆ; ಇದರ ಪರೀಕ್ಷೆ ಚುನಾವಣೆ ವೇಳೆ ನಡೆಯಲಿದ್ದು, ಪಕ್ಷಕ್ಕೆ ಗರಿಷ್ಠ ಸ್ಥಾನ ಗೆಲ್ಲಿಸಿ ಕೊಡುವ ಮೂಲಕ ಅತಿ ಹೆಚ್ಚು ಅಂಕ ಗಳಿಸಿ ಎಂದು ಸಲಹೆ ನೀಡಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top