News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೂತ್‌ ವಿಜಯ ಅಭಿಯಾನಕ್ಕೆ ಬೊಮ್ಮಾಯಿ ಚಾಲನೆ

ಬೆಂಗಳೂರು: ಸಂಘಟನೆ, ಕಾರ್ಯಕರ್ತರ ಶ್ರಮದಿಂದ ಶಿವಾಜಿನಗರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು, ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸೀಟು ಪಡೆಯುವುದು ಖಚಿತ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಬೆಂಗಳೂರಿನ ಶಿವಾಜಿನಗರದಲ್ಲಿ ಇಂದು ಬಿಜೆಪಿ ಬೂತ್ ವಿಜಯ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷವು ಬೂತ್ ಮಟ್ಟದ ವಿಜಯ ಸಾಧನೆಗೆ ಈ ಅಭಿಯಾನ ಆರಂಭಿಸಿದೆ. ಶಿವಾಜಿನಗರದಲ್ಲಿ ಬಿಜೆಪಿ ಜೈ ಆದಾಗ ಭಾರತ್ ಮಾತಾಕಿ ಜೈ ಆಗುತ್ತದೆ. ಶಿವಾಜಿನಗರದಲ್ಲಿ ನಾವು ಈ ಹಿಂದೆ ಗೆದ್ದಿದ್ದೆವು. ಅದನ್ನು ಪಕ್ಷದ ಕಾರ್ಯಕರ್ತರು ಮತ್ತೆ ಸಾಧಿಸಿ ತೋರಿಸಬೇಕು. ಸಂಘಟಿತ ಪ್ರಯತ್ನದಿಂದ ಇಲ್ಲಿ ಗೆಲುವು ಸಾಧನೆ ನೂರಕ್ಕೆ ನೂರು ಗ್ಯಾರಂಟಿ. ನಾನು ಈ ಕ್ಷೇತ್ರದ ವಿಜಯಕ್ಕಾಗಿ ಬಂದಿದ್ದೇನೆ ಎಂದು ತಿಳಿಸಿದರು.

ಮೆಟ್ರೋ 2 ನೇ ಹಂತ 2024ಕ್ಕೆ ಪೂರ್ಣವಾಗಲಿದೆ. ಮೂರನೇ ಹಂತಕ್ಕೆ ರೂ. 26 ಸಾವಿರ ಕೋಟಿ ಯೋಜನೆಗೆ ರಾಜ್ಯ ಕ್ಯಾಬಿನೆಟ್ ಅನುಮತಿ ಕೊಟ್ಟಿದೆ. ಸಬರ್ಬನ್ ರೈಲು ಆರಂಭಿಸಿದ್ದು, ಕಾವೇರಿ 5ನೇ ಹಂತದ ನೀರು ಕೊಡಲು ಮುಂದಾಗಿದ್ದು, ನೆನೆಗುದಿಗೆ ಬಿದ್ದ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಆದರೆ, ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವುದು, ಪುರಾವೆ ಇಲ್ಲದೆ ಆರೋಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ನಮ್ಮದು ದೇಶಭಕ್ತರ ಪಕ್ಷ. ನರೇಂದ್ರ ಮೋದಿಜಿ ಅವರ ರೂಪದಲ್ಲಿ ಸರ್ವಶ್ರೇಷ್ಠ ನಾಯಕತ್ವ ನಮ್ಮ ಪಕ್ಷಕ್ಕಿದೆ. ಆರ್ಥಿಕ- ಸಾಮಾಜಿಕ-ಶೈಕ್ಷಣಿಕ ಪ್ರಗತಿ ಜೊತೆ ವಿಶ್ವಮಾನ್ಯ ಭಾರತ ಮಾಡಿದ ನಾಯಕರು ನರೇಂದ್ರ ಮೋದಿಜಿ ಅವರು ಎಂದು ವಿವರಿಸಿದರು. ಸ್ಮಾರ್ಟ್ ಸಿಟಿ ಯೋಜನೆ ತಂದವರು ಮೋದಿಜಿ. ರೂ.500 ಕೋಟಿಯನ್ನು ಬೆಂಗಳೂರಿಗೆ ಅವರು ನೀಡಿದ್ದಾರೆ ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ ಕುರಿತ ಸತ್ಯವನ್ನು ಜನರಿಗೆ ತಿಳಿಹೇಳಬೇಕು. ಶಾಸಕರು ದಿಕ್ಕು ತಪ್ಪಿಸದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಶಿವಾಜಿನಗರ ಒಂದು ಸ್ಲಂ ಆಗಿತ್ತು. ಇವತ್ತು ಅದು ಅಭಿವೃದ್ಧಿ ಆಗಿದೆ. ಬೆಂಗಳೂರಿಗೆ ಅಭಿವೃದ್ಧಿಗಾಗಿ ರೂ. 8 ಸಾವಿರ ಕೋಟಿಯನ್ನು ನಮ್ಮ ಸರಕಾರ ಕೊಟ್ಟಿದೆ. ಆದರೆ, ಮಳೆ ಹೆಚ್ಚಾದ ಕಾರಣ ಅಲ್ಲಲ್ಲಿ ಹೊಂಡಗಳಾದುದನ್ನೇ ದೊಡ್ಡ ವಿಚಾರವಾಗಿ ವಿಪಕ್ಷಗಳು ಬಿಂಬಿಸಿದವು ಎಂದು ಟೀಕಿಸಿದರು.

ಬೂತ್ ಪ್ರಮುಖರ ಸಭೆ ಕರೆಯಬೇಕು. ವಾರ್ಡಿನ ಕೀ ಓಟರ್ಸ್ ಸಭೆ ಕರೆದು ಸಕ್ರಿಯವಾಗಿ ಕೆಲಸ ಮಾಡುವ 100 ಜನರ ಬೂತ್ ಕಮಿಟಿ ರಚಿಸಬೇಕು. ಪ್ರತಿ ಬೂತ್‍ನಲ್ಲಿ ಎಸ್‍ಸಿ, ಎಸ್‍ಟಿ, ಒಬಿಸಿ, ಮಹಿಳೆ, ಯುವಕರು ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿದರು.

ಪೇಜ್ ಕಮಿಟಿಯಲ್ಲಿ ಪೇಜ್ ಪ್ರಮುಖರಿದ್ದಾರೆ. ಕೀ ಓಟರ್ಸ್‍ಗಳನ್ನು ಸೇರಿಸಿ 20-25 ಜನರ ಸಮಿತಿ ಮಾಡಿ 3 ತಿಂಗಳು ಮನೆಮನೆಗೆ ತೆರಳಿ ಅಭಿಯಾನ ಮಾಡಬೇಕು. ಕನಿಷ್ಠ 4 ಬಾರಿ ಪ್ರತಿ ಮನೆಗೆ ತೆರಳಬೇಕು. ಬಿಜೆಪಿ ಕೇಂದ್ರ- ರಾಜ್ಯ ಸರಕಾರಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಗೂ ಕಾಂಗ್ರೆಸ್ ಜನವಿರೋಧಿ ನೀತಿಯನ್ನು ತಿಳಿಸಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಸ್ಥಳೀಯ ಸಮಸ್ಯೆ ಈಡೇರಿಸಲು ಬದ್ಧವಾಗಿದೆ. ಬೂತ್ ಸಂಘಟನೆ ಎಂದರೆ ಪಕ್ಷದ ಸಾಧನೆ ಹೇಳುವುದರ ಜೊತೆ ಸಮಸ್ಯೆಗಳನ್ನು ಆಲಿಸುವ ಕೆಲಸವೂ ಆಗಬೇಕು. ಜನರ ಸುತ್ತ ಅಭಿವೃದ್ಧಿ ಆಗಬೇಕೆಂಬ ಚಿಂತನೆ ನಮ್ಮದು ಎಂದು ತಿಳಿಸಿದರು. ಸರಕಾರ ಮತ್ತು ಜನರ ನಡುವೆ ಕೊಂಡಿಯಾಗಿ ನಮ್ಮ ಬೂತ್ ಸಮಿತಿಗಳು ಕಾರ್ಯ ನಿರ್ವಹಿಸಲಿ ಎಂದು ತಿಳಿಸಿದರು.

ಕಾಂಗ್ರೆಸ್ ಪವರ್ ಪಾಲಿಟಿಕ್ಸ್ ಮಾಡುತ್ತದೆ. ಜನರನ್ನು ಜಾತಿ- ಮತ- ಪಂಥದ ಮೂಲಕ ಒಡೆದು ಅಧಿಕಾರ ಪಡೆಯುವವರು ಕಾಂಗ್ರೆಸ್ಸಿಗರು ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ನಮ್ಮದು ಪೀಪಲ್ ಪಾಲಿಟಿಕ್ಸ್. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು; ಅದು ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದೆ. ಬಿಜೆಪಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ತಿಳಿಸಿದರು.

ಶಿವಾಜಿನಗರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಗಮನ ಕೊಡುತ್ತೇನೆ. ಇಲ್ಲಿ ಗೆಲುವಿಗೆ ಬೂತ್ ಸಶಕ್ತ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು. ಶಿರಹಟ್ಟಿಯ ಮಾದರಿಯಲ್ಲಿ ಇಲ್ಲಿಯೂ ಬೂತ್ ಸಶಕ್ತೀಕರಣ ಮತ್ತು ಗೆಲುವು ಆಗಲಿ ಎಂದು ಆಶಿಸಿದರು.

ಸಂಸದ ಪಿ.ಸಿ.ಮೋಹನ್ ಅವರು ಮಾತನಾಡಿ, ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ ಎಂಬ ಅಮಿತ್ ಶಾ ಅವರ ಮಾತನ್ನು ಉಲ್ಲೇಖಿಸಿದರು. ಸಂಘಟನೆ ನಿರಂತರ ಇರಬೇಕೆಂಬ ಪಕ್ಷದ ಹಿರಿಯರ ಆಶಯವನ್ನು ಪಕ್ಷವು ಸದಾ ಪಾಲಿಸುತ್ತ ಬಂದಿದೆ ಎಂದು ವಿವರಿಸಿದರು.
.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top