News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 2nd February 2023


×
Home About Us Advertise With s Contact Us

ಪ್ರಪಂಚ ಮೆಚ್ಚುವಂಥ ಆಡಳಿತವನ್ನು ಮೋದಿ ನೀಡುತ್ತಿದ್ದಾರೆ: ಸಿಎಂ

ತುಮಕೂರು: ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲೆಯ ಕುಣಿಗಲ್‍ನಲ್ಲಿ ಇಂದು ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದೆಲ್ಲೆಡೆ ಬಿಜೆಪಿ ಪರವಾಗಿ ಜನಬೆಂಬಲ ವ್ಯಕ್ತವಾಗುತ್ತಿದೆ. ಕೇಂದ್ರದ ನರೇಂದ್ರ ಮೋದಿಜಿ ಸರಕಾರ ಮತ್ತು ನಮ್ಮ ಸರಕಾರದ ಕಾರ್ಯಕ್ರಮಗಳಿಗೆ ಜನರು ಬೆಂಬಲ ಕೊಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಗಾಳಿ ಬೀಸುತ್ತಿದೆ. ಈ ಬಾರಿ ಎಲ್ಲ ಕ್ಷೇತ್ರಗಳನ್ನು ಬಿಜೆಪಿ ಅಭೂತಪೂರ್ವ ಅಂತರದಿಂದ ಗೆಲ್ಲಲಿದೆ ಎಂದರು.

ಅತಿ ಹೆಚ್ಚು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಮುಖಂಡರು ಅಧಿಕಾರ ಉಳಿಸಿಕೊಳ್ಳಲು ಜನರನ್ನು ಮರುಳು ಮಾಡಿದ್ದರು. ಕಾಂಗ್ರೆಸ್ಸಿಗರ ಜಾತಿ ಮತಗಳಲ್ಲಿ ದ್ವೇಷ ತುಂಬುವುದು, ಧರ್ಮ ಒಡೆಯುವ ಕಾರ್ಯವನ್ನು ಮಾಡಿದ್ದರು. ಇದನ್ನು ಜನರು ಮನಗಂಡಿದ್ದಾರೆ. ಸಾಮಾಜಿಕ ನ್ಯಾಯದ ಭಾಷಣ ಮಾಡಿದ ಕಾಂಗ್ರೆಸ್ ಪಕ್ಷದವರು ತಮ್ಮ ಆಡಳಿತದಲ್ಲಿ ತಾವಷ್ಟೇ ಮುಂದೆ ಹೋಗಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಆಡಳಿತದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿತ್ತು. ಸಿದ್ರಾಮಣ್ಣ ಆಡಳಿತ ಮಾಡುವಾಗ ಕೋವಿಡ್ ಇರದಿದ್ದರೂ 2 ಲಕ್ಷ ಕೋಟಿ ಸಾಲವನ್ನು ಜನರ ಮೇಲೆ ಹೇರಿದ್ದರು. ಇಷ್ಟು ಸಾಲ ತಂದರೂ ಅಭಿವೃದ್ಧಿ ಶೂನ್ಯವಾಗಿತ್ತು ಎಂದು ಆಕ್ಷೇಪಿಸಿದರು.

ಬಿಜೆಪಿ, 32 ಸಾವಿರ ಕೋಟಿ ಖರ್ಚು ಮಾಡಿ ನೀರಾವರಿ ಕಾರ್ಯ ಮಾಡಿದೆ. ಆದರೆ, ನೀರಾವರಿ ಹೆಸರಿನಲ್ಲಿ ಹಣವನ್ನು ಕಾಂಗ್ರೆಸ್ಸಿಗರು ಜೇಬಿಗೆ ಇಳಿಸಿದ್ದರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿಯಂತಿದೆ. ಅದು ಲೋಕಾಯುಕ್ತವನ್ನು ಮುಚ್ಚುವ ಕೆಲಸ ಮಾಡಿತ್ತು. ಸಿಎಂ ಮತ್ತಿತರರ ಮೇಲಿದ್ದ 50ಕ್ಕೂ ಹೆಚ್ಚು ಪ್ರಕರಣಗಳ ಮೇಲೆ ಬಿ ರಿಪೋರ್ಟ್ ಹಾಕಲಾಗಿತ್ತು. ಆ ಕೇಸುಗಳೇ ಕಾಂಗ್ರೆಸ್ಸಿನ ಭ್ರಷ್ಟಾಚಾರಕ್ಕೆ ಸಾಕ್ಷಿ ಎಂದು ಟೀಕಿಸಿದರು.

ರೀಡೂ ಪ್ರಕರಣ, ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿಂಬು, ಹಾಸಿಗೆಯಲ್ಲೂ ಭ್ರಷ್ಟಾಚಾರ ಮಾಡಿದ್ದರು. ಕೇಂದ್ರ ನೀಡುವ ಅಕ್ಕಿಗೆ ‘ಅನ್ನ ಭಾಗ್ಯ’ ಎಂದು ತಮ್ಮ ಫೋಟೋ ಹಾಕಿಕೊಂಡಿದ್ದರು. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಪಡಿತರ ಅಕ್ಕಿ ನೀಡಲಾಗುತ್ತಿತ್ತು. ಸಿದ್ದರಾಮಯ್ಯ ಸರಕಾರವು ಪಡಿತರ ಅಕ್ಕಿಯ ಪ್ರಮಾಣ ಕಡಿಮೆ ಮಾಡಿತ್ತು ಎಂದು ಆರೋಪಿಸಿದರು.

ಭ್ರಷ್ಟ ಕಾಂಗ್ರೆಸ್ ಬಗ್ಗೆ ಜನರಿಗೆ ತಿಳಿದಿದೆ. ಅದೊಂದು ದೌರ್ಭಾಗ್ಯ ಸರಕಾರ ಎಂದು 2018ರಲ್ಲಿ ಇವರನ್ನು ಕಿತ್ತೆಸೆದರು. ಕಾಂಗ್ರೆಸ್ಸಿಗರು ಜೆಡಿಎಸ್ ಬಗ್ಗೆ ಟೀಕಿಸುತ್ತಿದ್ದವರು. ಆದರೆ, ಕುಮಾರಸ್ವಾಮಿಯವರನ್ನು ಸಿಎಂ ಮಾಡಿ ಹಿಂಬಾಗಿಲಿನಿಂದ ಅಧಿಕಾರ ಪಡೆದರು ಎಂದು ವಿವರಿಸಿದರು.

ಮುಂದಿನ ದಿನಗಳಲ್ಲಿ ಕುಣಿಗಲ್ ತಾಲ್ಲೂಕಿನ ರೈತರಿಗೆ ಅನ್ನ ಕೊಡುವ 2 ಯೋಜನೆಗಳನ್ನು ಸರಕಾರ ಅನುಷ್ಠಾನಕ್ಕೆ ತರಲಿದೆ ಎಂದು ಪ್ರಕಟಿಸಿದರು. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಕಾರ್ಯವನ್ನು ನಮ್ಮ ಸರಕಾರ ಮಾಡಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಡುತ್ತಿದ್ದೇವೆ ಎಂದು ತಿಳಿಸಿದರು. 10 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಇದರಿಂದ ಪ್ರಯೋಜನವಾಗಿದೆ. ಕೂಲಿಕಾರರಿಗೂ, ಇತರ ಅರ್ಹರಿಗೂ ಇದರ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.

ದುಡಿಯುವ ವರ್ಗಕ್ಕೆ ‘ಕಾಯಕ ಯೋಜನೆ’ ಜಾರಿಗೊಳಿಸಲಾಗುತ್ತಿದೆ. ಸ್ತ್ರೀಸಾಮಥ್ರ್ಯ ಯೋಜನೆಯಿಂದ 5 ಲಕ್ಷ ಮಹಿಳೆಯರಿಗೆ ಪ್ರಯೋಜನವಾಗಲಿದೆ. ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಿಂದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ಲಭಿಸಲಿದೆ ಎಂದು ತಿಳಿಸಿದರು.

ದುಡಿಮೆಯೇ ದೊಡ್ಡಪ್ಪ ಎಂಬ ಕಾಲ ಈಗ ಇದೆ. ನೀರಾವರಿಗೆ ಆದ್ಯತೆ ಕೊಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಆದ್ಯತೆ ಕೊಟ್ಟಿದ್ದೇವೆ. ಪ್ರಧಾನಿ ನರೇಂದ್ರ ಮೋದಿಜಿ ಅವರು ಕಿಸಾನ್ ಸಮ್ಮಾನ್, ಮುದ್ರಾ, ಜನಜೀವನ್ ಮಿಷನ್ ಸೇರಿ ಹತ್ತು ಹಲವಾರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಜನರಿಗೆ ಆರೋಗ್ಯಕ್ಕೆ ಒತ್ತು ಕೊಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 8 ಸಾವಿರ ಶಾಲಾ ಕೊಠಡಿ ನಿರ್ಮಿಸುವ ಕಾರ್ಯ, 100 ಅಂಬೇಡ್ಕರ್ ಹಾಸ್ಟೆಲ್ ಸೇರಿ ವಿವಿಧ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ನಾವು ಜನರ ಆಶೀರ್ವಾದದೊಂದಿಗೆ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದ್ದೇವೆ ಎಂದು ನುಡಿದರು.

ತುಮಕೂರು ಜಿಲ್ಲೆ ರಾಜ್ಯದ ಅತ್ಯಂತ ಪ್ರಮುಖ ಜಿಲ್ಲೆಯಾಗಿ ಹೊರಹೊಮ್ಮಲಿದೆ. ತುಮಕೂರಿನ ಸರ್ವತೋಮುಖ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ ಎಂದು ಅವರು ತಿಳಿಸಿದರು. ಬಿಜೆಪಿಯನ್ನು ಕುಣಿಗಲ್ ಮಾತ್ರವಲ್ಲದೆ ಜಿಲ್ಲೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ನವರು ಯಾವುದೇ ದಾಖಲೆಗಳಿಲ್ಲದೆ ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಕಾಂಗ್ರೆಸ್‍ನ ಭ್ರಮೆಗೆ ತಕ್ಕ ಉತ್ತರ ಕೊಡಲು ನಾವು ಸಿದ್ಧರಾಗಬೇಕು. ಸರಕಾರದ ಉತ್ತಮ ಕಾರ್ಯಕ್ರಮಗಳ ಕುರಿತು ಜನರಿಗೆ ತಿಳಿಸಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕುಣಿಗಲ್‍ನಲ್ಲಿ ಬಿಜೆಪಿ ಗೆಲ್ಲುವಂತಾಗಬೇಕು. ಅಂಥ ಸಂಕಲ್ಪ ಜನರದಾಗಬೇಕು ಎಂದು ತಿಳಿಸಿದರು. ನೈಜ ಪ್ರೀತಿ ಇದ್ದರೆ ಮನೆಮನೆಗೆ ಹೋಗಿ ಕೆಲಸ ಮಾಡಬೇಕು ಎಂದು ತಿಳಿಸಿದರು. ಬಿಜೆಪಿ ಗೆಲ್ಲಿಸುವ ಸಂಕಲ್ಪ ಆಗಲಿ ಎಂದು ಕಿವಿಮಾತು ಹೇಳಿದರು.

ರಾಜ್ಯದ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಜನರಿಗೆ ಮೋಸ ಮಾಡಿದ ಪಕ್ಷ ಕಾಂಗ್ರೆಸ್. ಜಾತಿ ಜಾತಿ, ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಮತಬ್ಯಾಂಕ್ ರಾಜಕೀಯವನ್ನು ಕಾಂಗ್ರೆಸ್ ಮಾಡಿತ್ತು ಎಂದು ಆಕ್ಷೇಪಿಸಿದರು. ಪೌರಕಾರ್ಮಿಕರನ್ನು ಕಾಂಗ್ರೆಸ್ ನೆನಪಿಸಿಕೊಳ್ಳಲಿಲ್ಲ. ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಳಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಲಿಲ್ಲ ಎಂದು ಟೀಕಿಸಿದರು. ಕಾಂಗ್ರೆಸ್‍ನವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ ಎಂದು ಪ್ರಶ್ನಿಸಿದರು.

ಪ್ರಪಂಚ ಮೆಚ್ಚುವಂಥ ಆಡಳಿತವನ್ನು ನರೇಂದ್ರ ಮೋದಿಜಿ ಅವರು ನೀಡಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ನೆರವು ನೀಡುವ ಯೋಜನೆಗಳನ್ನು ಅವರು ಜಾರಿಗೊಳಿಸಿದ್ದಾರೆ ಎಂದು ತಿಳಿಸಿದರು. ಯಡಿಯೂರಪ್ಪ- ಬಸವರಾಜ ಬೊಮ್ಮಾಯಿಯವರ ಸರಕಾರಗಳ ಜನಪರ ಯೋಜನೆಗಳನ್ನು ಜನರು ಗಮನಿಸಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.

ಸಚಿವ ಅರಗ ಜ್ಞಾನೇಂದ್ರ ಅವರು ಮಾತನಾಡಿ, ನಾನು ತೀರ್ಥಹಳ್ಳಿಯಲ್ಲಿ 3 ಬಾರಿ ಸೋತಿದ್ದೆ. ಕೃಷ್ಣಕುಮಾರ್ ಅವರ ಸೋಲಿನ ಶನಿ ಈ ಬಾರಿ ತೊಲಗಲಿದೆ ಎಂಬುದು ಇಲ್ಲಿನ ಜನಸಮುದಾಯವನ್ನು ನೋಡಿದರೆ ಗೊತ್ತಾಗುತ್ತದೆ. ಇದು ಮುಂದಿನ ಚುನಾವಣೆಯ ಸ್ಪಷ್ಟ ಸಂದೇಶ ಎಂದರು.

ಕಿಸಾನ್ ಸಮ್ಮಾನ್, ಆಯುಷ್ಮಾನ್ ಯೋಜನೆ ಸೇರಿದಂತೆ ಸರಕಾರಗಳ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸಿ ಎಂದು ಅವರು ಮನವಿ ಮಾಡಿದರು. ಬಡವರ ಹೆಸರಿನಲ್ಲಿ ರಾಜಕಾರಣ ಮಾಡಿದ, ದಲಿತರನ್ನು ಅತ್ಯಂತ ಕೀಳಾಗಿ ನೋಡಿದ ಕಾಂಗ್ರೆಸ್ ಪಕ್ಷವನ್ನು ಜನರು ಮೂಲೆಗುಂಪು ಮಾಡಿದ್ದಾರೆ ಎಂದು ತಿಳಿಸಿದರು.

ನಾವು ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದೇವೆ. ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ ಬಿಜೆಪಿಯನ್ನು ಜನರು ಬೆಂಬಲಿಸುವ ಭರವಸೆ ನಮಗಿದೆ ಎಂದು ವಿಶ್ವಾಸದಿಂದ ತಿಳಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top